ಗದಗದಲ್ಲಿ ಶೋಭಾಯಾತ್ರೆ ನಡೆಸದಂತೆ ಪೊಲೀಸರ ಕಟ್ಟಾಜ್ಞೆ; ಯಾರೇ ಬಂದರೂ ಶೋಭಾಯಾತ್ರೆ ನಿಲ್ಲಲ್ಲ ಎಂದ ಶ್ರೀರಾಮಸೇನೆ

ಅಯೋಧ್ಯೆ ರಾಮ ಮಂದಿರ ಲೋಕಾರ್ಪಣೆಯ ಸಂಭ್ರಮಾಚರಣೆಗೆ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಶ್ರೀರಾಮೋತ್ಸವ ಶೋಭಾಯಾತ್ರೆ ನಡೆಸಲು ಹಿಂದೂ ಪರ ಸಂಘಟನೆಗಳು ಮುಂದಾಗಿವೆ. ಆದರೆ, ಇದಕ್ಕೆ ಪೊಲೀಸ್ ಇಲಾಖೆ ಅನುಮತಿ ನಿರಾಕರಣೆ ಮಾಡುತ್ತಿದೆ. ಬೆಳಗಾವಿ, ಮೈಸೂರು ನಂತರ ಇದೀಗ ಗದಗದಲ್ಲೂ ಶ್ರೀರಾಮೋತ್ಸವಕ್ಕೆ ಪೊಲೀಸರು ಅನುಮತಿ ನಿರಾಕರಿಸಿದ್ದು, ರಾಜ್ಯ ಸರ್ಕಾರ ಮತ್ತು ಪೊಲೀಸ್ ಇಲಾಖೆ ವಿರುದ್ಧ ಶ್ರೀರಾಮಸೇನೆ ಆಕ್ರೋಶ ಹೊರಹಾಕಿದೆ.

ಗದಗದಲ್ಲಿ ಶೋಭಾಯಾತ್ರೆ ನಡೆಸದಂತೆ ಪೊಲೀಸರ ಕಟ್ಟಾಜ್ಞೆ; ಯಾರೇ ಬಂದರೂ ಶೋಭಾಯಾತ್ರೆ ನಿಲ್ಲಲ್ಲ ಎಂದ ಶ್ರೀರಾಮಸೇನೆ
ಗದಗದಲ್ಲಿ ಶೋಭಾಯಾತ್ರೆ ನಡೆಸದಂತೆ ಪೊಲೀಸರಿಂದ ಕಟ್ಟಾಜ್ಞೆ; ಯಾರೇ ಬಂದರೂ ಶೋಭಾಯಾತ್ರೆ ನಿಲ್ಲಲ್ಲ ಎಂದ ಶ್ರೀರಾಮಸೇನೆ (ಸಾಂದರ್ಭಿಕ ಚಿತ್ರ)
Follow us
| Updated By: Rakesh Nayak Manchi

Updated on: Jan 21, 2024 | 5:07 PM

ಗದಗ, ಜ.21: ಅಯೋಧ್ಯೆಯಲ್ಲಿ ಭಗವಾನ ಶ್ರೀರಾಮಚಂದ್ರನ ಭವ್ಯ ಮಂದಿರ (Ayodhya Ram Manidr) ನಿರ್ಮಾಣ ಉದ್ಘಾಟನೆಗೆ ಕ್ಷಣಗಣನೆ ಆರಂಭವಾಗಿದೆ. ಈ ಸುವರ್ಣ ಕ್ಷಣ ಸಂಭ್ರಮಕ್ಕೆ ದೇಶದ ಕೋಟ್ಯಂತರ ಹಿಂದೂಗಳು ಸಜ್ಜಾಗಿದ್ದಾರೆ. ಶ್ರೀರಾಮ ಮಂದಿರ ಉದ್ಘಾಟನೆ ದಿನ ಗದಗ (Gadag) ನಗರದಲ್ಲಿ ಶ್ರೀರಾಮಸೇನೆ ಶ್ರೀರಾಮ ಮೂರ್ತಿಯ ಬೃಹತ್ ಶೋಭಾಯಾತ್ರೆ ಹಮ್ಮಿಕೊಳ್ಳಲಾಗಿದೆ. ಆದರೆ, ಶೋಭಾಯಾತ್ರೆಗೆ ಪೊಲೀಸ್ ಇಲಾಖೆ ಅಡ್ಡಿಪಡಿಸುತ್ತಿದ್ದು, ಯಾವುದೇ ಕಾರಣಕ್ಕೂ ಶೋಭಾಯಾತ್ರೆ ಮಾಡುವಂತಿಲ್ಲ ಎಂದಿದೆ. ಪೊಲೀಸರ ವಿರುದ್ಧ ಆಕ್ರೋಶಗೊಂಡಿರುವ ಶ್ರೀರಾಮಸೇನೆ, ಯಾರೇ ಬಂದರೂ ಶೋಭಾಯಾತ್ರೆ ನಿಲ್ಲಲ್ಲ. ನಡೆಸಿಯೇ ತೀರುತ್ತೇವೆ ಅಂತ ಶ್ರೀರಾಮಸೇನೆ ಹೇಳಿದೆ.

ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ಸುವರ್ಣಗಳಿಗೆ ಇಡೀ ದೇಶದ ಜನರು ಕಾತುರದಿಂದ ಕಾಯುತ್ತಿದ್ದಾರೆ. ದೇಶದಲ್ಲಿ ಎಲ್ಲೆಲ್ಲೂ ಸಂಭ್ರಮ ಮನೆ ಮಾಡಿದೆ. ಈ ಸಂಭ್ರಮದ ಕ್ಷಣ ಆಚರಣೆಗೆ ಕೊಟ್ಯಾಂತರ ರಾಮಭಕ್ತರು ತುದಿಗಾಲಲ್ಲಿ ನಿಂತಿದ್ದಾರೆ. ಈ ನಿಟ್ಟಿನಲ್ಲಿ ಗದಗ ನಗರದಲ್ಲಿ ಜನವರಿ 22 ರಂದು ಗದಗ ನಗರದಲ್ಲಿ ಬೃಹತ್ ಶ್ರೀರಾಮ ಶೋಭಾಯತ್ರೆ ಹಮ್ಮಿಕೊಂಡಿದೆ. ಇದಕ್ಕೆ ಇಡೀ ಜಿಲ್ಲೆಯಲ್ಲಿ ಸಾಕಷ್ಟು ಜನಜಾಗೃತಿ ಕೂಡ ಮೂಡಿಸಿದೆ.

ಗಲ್ಲಿ ಗಲ್ಲಿಗಳಲ್ಲಿ ಮನೆಗಳಿಗೆ ತೆರಳಿ ಶ್ರೀರಾಮ ಶೋಭಾಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಕರಪತ್ರ ನೀಡಿ ಮನವಿ ಮಾಡಿದ್ದಾರೆ. ಸಕಲಿ ಸಿದ್ಧತೆ ಕೂಡ ಶ್ರೀರಾಮ ಸೇನೆ ಮಾಡಿಕೊಂಡಿದೆ. ಆದರೆ, ಈಗ ಗದಗ ಪೊಲೀಸ್ ಇಲಾಖೆ ಶ್ರೀರಾಮ ಶೋಭಾಯಾತ್ರೆ ಮಾಡದಂತೆ ಸೂಚಿಸಿದೆಯಂತೆ. ಹೀಗಾಗಿ ಶ್ರೀರಾಮಸೇನೆ ಮುಖಂಡರು ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ ವಿರುದ್ಧ ಕೆಂಡಕಾರಿದ್ದಾರೆ.

ಇದನ್ನೂ ಓದಿ: Ayodhya Ram Mandir: ಹೂಗಳಿಂದ ಶೃಂಗಾರಗೊಂಡ ಅಯೋಧ್ಯೆ ರಾಮಮಂದಿರ, ಫೋಟೋಗಳು ಇಲ್ಲಿವೆ

ಸರ್ಕಾರ ಪೊಲೀಸರು ಮೂಲಕ ಹಿಂದೂಗಳ ಸಂಭ್ರಮಕ್ಕೆ ಅಡ್ಡಿ ಮಾಡುತ್ತಿದೆ ಅಂತ ಕಿಡಿಕಾರಿದ್ದಾರೆ. ಇಡೀ ಸರ್ಕಾರ, ಪೊಲೀಸ್ ಇಲಾಖೆ ಬಂದರೂ ಶೋಭಾಯಾತ್ರೆ ನಿಲ್ಲಲ್ಲ ಅಂತ ಶ್ರೀರಾಮಸೇನೆ ರಾಜ್ಯ ಕಾರ್ಯದರ್ಶಿ ರಾಜು ಖಾನಪ್ಪನವರ ಹೇಳಿದ್ದಾರೆ.

ಈಗಾಗಲೇ‌ ಶ್ರೀರಾಮಸೇನೆ ಪೊಲೀಸ್ ಇಲಾಖೆಗೆ ಶೋಭಾಯಾತ್ರೆ ಹಾಗೂ ಶ್ರೀರಾಮ ಕೀರ್ತನೆಗೆ ಅನುಮತಿ ಕೋರಿ ಅರ್ಜಿ ಸಲ್ಲಿಸಿದೆ. ಪೊಲೀಸ್ ಇಲಾಖೆ ಕೂಡ ನಮ್ಮ ಅರ್ಜಿ ಸ್ವೀಕರಿಸಿದೆ. ಆದರೆ ಈಗ ಪೊಲೀಸ್ ಇಲಾಖೆ ಶೋಭಾಯಾತ್ರೆ ಬೇಡ ಅಂತಿದೆ. ಐಜಿ, ಡಿಜಿ ಮೆರವಣಿಗೆ ಬೇಡ ಎಂದಿದ್ದಾಗಿ ಪೊಲೀಸ್ ಇಲಾಖೆ ಅಧಿಕಾರಿಗಳು ಮೌಖಿಕವಾಗಿ ಹೇಳಿದ್ದಾರಂತೆ. ಇದು ಸರ್ಕಾರದ ಷಢ್ಯಂತರ. ಆದರೆ ನಾವು ಯಾವುದೇ ಕಾರಣಕ್ಕೂ ಶೋಭಾಯಾತ್ರೆ ನಿಲ್ಲಿಸಲ್ಲ ಅಂತ ಶ್ರೀರಾಮಸೇನೆ ಹೇಳಿದೆ.

ಜನವರಿ 22 ರಂದು ಬೆಳಗ್ಗೆ 11 ಗಂಟೆಗೆ ಶೋಭಾಯಾತ್ರೆ ಮಾಡುತ್ತೇವೆ. ಸುಮಾರು 20 ಸಾವಿರ ರಾಮಭಕ್ತರು ಶೋಭಾಯಾತ್ರೆಯಲ್ಲಿ ಭಾಗಿಯಾಗಲಿದ್ದಾರೆ. ಎಂಟು ಅಡಿ ಬೃಹತ್ ಶ್ರೀರಾಮ ಮೂರ್ತಿಯ ಭವ್ಯ ಮೆರವಣಿಗೆ‌ ಮಾಡುತ್ತೇವೆ. ಈ ನಿಟ್ಟಿನಲ್ಲಿ ಸಕಲ ತಯಾರಿ ಮಾಡಿಕೊಳ್ಳಲಾಗಿದೆ ಎಂದು ಶ್ರೀರಾಮಸೇನೆ ಹೇಳಿದೆ.

ಈ ಬಗ್ಗೆ ಮಾತನಾಡಿದ ಗದಗ ಎಸ್​ಪಿ ಬಿಎಸ್ ನೇಮಗೌಡ, ಯಾವುದೇ ಮೆರವಣಿಗೆಗಳಿಗೆ ಅವಕಾಶವಿಲ್ಲ. ಈಗಾಗಲೇ ಶ್ರೀರಾಮಸೇನೆ ಮುಖಂಡರಿಗೆ ತಿಳಿಸಲಾಗಿದೆ. ಇನ್ನೊಮ್ಮ ಕರೆದು ಮಾತುಕತೆ ಮಾಡಿ ಮನವೊಲಿಸುವುದಾಗಿ ಹೇಳಿದ್ದಾರೆ.

ದೇಶದಲ್ಲಿ ಶ್ರೀರಾಮಮಂದಿರ ಉದ್ಘಾಟನೆ ಸಂಭ್ರಮ ಜೋರಾಗಿದೆ. ಗದಗ ನಗರದಲ್ಲೂ ಅದ್ಧೂರಿ ಶ್ರೀರಾಮ ಮೂರ್ತಿ ಮೆರವಣಗೆಗೆ ಶ್ರೀರಾಮಸೇನೆ ಸಜ್ಜಾದರೆ, ಇತ್ತ ಪೊಲೀಸ್ ಇಲಾಖೆ ಮಾತ್ರ ಯಾವುದೇ ಕಾರಣಕ್ಕೂ ಅವಕಾಶವಿಲ್ಲ ಅಂತಿದೆ. ಮುಂದೆ ಯಾವ ಹಂತಕ್ಕೆ ತಲುಪುತ್ತೋ ಕಾದುನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ