ಗದಗ: ಸರ್ಕಾರ ನೀಡುವ ವೃದ್ಧಪ್ಯ, ವಿಧವಾ ವೇತನಕ್ಕಾಗಿ ನಸುಕಿನ ಜಾವ 4 ಗಂಟೆಗೆ ಹಿರಿಯ ಜೀವಗಳು ಕ್ಯೂನಲ್ಲಿ ನಿಲ್ಲುವಂತ ದುಸ್ಥಿತಿ ಗದಗದಲ್ಲಿ ಕಂಡು ಬಂದಿದೆ. ಆದ್ರೆ ನಾಲ್ಕಾರು ದಿನಗಳು ನಿಂತ್ರೂ ಆ ಜೀವಗಳಿಗೆ ಹಣ ಮಾತ್ರ ಸಕಾಲಕ್ಕೆ ಸಿಗ್ತಾಯಿಲ್ಲ ಅಂತ ಕಿಡಿಕಾರಿದ್ದಾರೆ. ಸರ್ವರ್ ಸರಿಯಿಲ್ಲ ನಾಳೆ ಬನ್ನಿ, ನಾಡಿದ್ದು ಬನ್ನಿ ಅಂತ ಹೇಳಿ ಕಳಿಸುತ್ತಿದ್ದಾರಂತೆ. ಹೀಗಾಗಿ ಹಿರಿಯ ಜೀವಗಳು ಪೆನ್ಷನ್ ಹಣಕ್ಕಾಗಿ ನಿತ್ಯ ಗೋಳಾಡುತ್ತಿದ್ದಾರೆ.
ಗದಗ ನಗರದ ಮುಖ್ಯ ಅಂಚೆ ಕಚೇರಿ ಆವರಣದಲ್ಲಿ ವೃದ್ದಾಪ್ಯ, ವಿಧಾವಾ ವೇತನ, ವಿಕಲಚೇತನರ ಮಾಶಾಸನಕ್ಕಾಗಿ ಅಜ್ಜಿಯರು, ವಿಕಲಚೇತನರು ನಿತ್ಯವೂ ಪರದಾಡುತ್ತಿದ್ದಾರೆ. ಅಜ್ಜಿಯರ ಗೋಳಾಟ ನೋಡಿದ್ರೆ ಅಯ್ಯೋ ಪಾಪ ಎನ್ನುವಂತಿದೆ. ಮಕ್ಕಳು ಇಲ್ಲದ ಒಂಟಿ ಜೀವಗಳು ನಾಲ್ಕಾರು ಕಿಲೋ ಮೀಟರ್ ನಸುಕಿನಲ್ಲಿ ನಡೆದು ಬಂದು ಹಣಕ್ಕಾಗಿ ಕ್ಯೂ ನಿಂತಿದ್ದಾರೆ. ನೀರು, ಚಹಾ, ಉಪಹಾರವಿಲ್ಲದೇ ಹಣಕ್ಕಾಗಿ ಕಾಯುತ್ತಿದ್ದಾರೆ. ಆದ್ರೆ, ನಾಲ್ಕಾರು ದಿನಗಳು ಕಳೆದ್ರೂ ಹಣ ಸಿಗುತ್ತಿಲ್ಲ ಅಂತ ಅಜ್ಜಿಯರು ಕಿಡಿಕಾರಿದ್ದಾರೆ. ನಮ್ಮನ್ನು ನೋಡಿಕೊಳ್ಳೋಕೆ ಮಕ್ಕಳು ಇಲ್ಲ. ಗಂಡ ಸಾವನ್ನಪ್ಪಿದ್ದಾನೆ. ಹೀಗಾಗಿ ನಾನೇ ಬರ್ಬೇಕು. ನಾಲ್ಕು ದಿನಗಳಿಂದ ಬರ್ತಾಯಿದ್ದೀನಿ. ಇಂದೂ ನಸುಕಿನ 4ಗಂಟೆಗೆ ಬಂದ್ದೀನಿ ಇನ್ನೂ ಹಣ ಸಿಕ್ಕಿಲ್ಲ ಅಂತ ಅಜ್ಜಿ ಪಾರವ್ವ ಅಂಚೆ ಕಚೇರಿ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಇನ್ನೂ ಅಜ್ಜಿಯರ ಗೋಳಾಟ, ನರಳಾಟ, ಪರದಾಟ ನೋಡಿ ಇದು ಹಿರಿಯ ನಾಗರಿಕರಿಗೆ ಮಾಡುವ ಅಪಮಾನ ಅಂತ ಗದಗ ಜಿಲ್ಲೆಯ ಹೋರಾಟಗಾರ ಎಚ್ ಎಸ್ ಸೊಂಪುರ ಜನ್ರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಬೆಂಗಳೂರಿನಲ್ಲಿ ನಕಲಿ ಬ್ರ್ಯಾಂಡೆಡ್ ಬಟ್ಟೆ ಗೋದಾಮಿನ ಮೇಲೆ ಸಿಸಿಬಿ ದಾಳಿ; 4 ಲಕ್ಷ ರೂ. ಮೌಲ್ಯದ ಬಟ್ಟೆಗಳು ಸೀಜ್
ಮಳೆ, ಚಳಿ ಲೆಕ್ಕಿಸದೆ ನಸುಕಿನ ಜಾವದಲ್ಲೇ ಅಂಚೆ ಕಚೇರಿಗೆ ಆಗಮಿಸುವ ಹಿರಿಯರು
ಹಿರಿಯ ನಾಗರಿಕರಿಗೆ ಗೌರವ ನೀಡೋ ಸಂಸ್ಕೃತಿ ನಮ್ಮದು. ಆದ್ರೆ, ಇಲ್ಲಿ ಹಿರಿಯ ನಾಗರಿಕರ ಪರಿಸ್ಥಿತಿ ನೋಡಿದ್ರೆ ಅಯ್ಯೋ ಪಾಪ ಎನ್ನುವಂತಾಗಿದೆ. ಈ ಹಣ ಬಂದ್ರೆ ತುತ್ತಿನ ಚೀಲ ತುಂಬಿಕೊಳ್ಳುವ ಅದೆಷ್ಟೋ ಹಿರಿಯ ಜೀವಗಳು ಇವತ್ತು ಹಣವಿಲ್ಲದೇ ವಿಲವಿಲ ಅಂತ ಒದ್ದಾಡುವಂತಾಗಿದೆ. ಮಕ್ಕಳ ಆಸರೆ ಇಲ್ಲದಿದ್ರೂ ಉಪವಾಸ ನರಳಬಾರದು ಅಂತ ಸರ್ಕಾರ ವಿಧವಾ ವೇತನ, ವೃದ್ಧಾಪ್ಯ ವೇತ ನೀಡಯುತ್ತಿದೆ. ಆದ್ರೆ, ಸರ್ಕಾರ ವೇತನ ನೀಡ್ತಾಯಿದ್ರೂ ಈ ಹಿರಿಯ ನಾಗರಿಕರಿಗೆ ಸಕಾಲಕ್ಕೆ ತಲಪುತ್ತಿಲ್ಲ. ಮಳೆ, ಚಳಿಯಲ್ಲಿ ನಸುಕಿನ ಜಾವದಲ್ಲೇ ಅಂಚೆ ಕಚೇರಿಗೆ ಆಗಮಿಸಿ ಹಣ ಪಡೆಯುವ ದುಸ್ಥಿತಿ ಬಂದಿದೆ. ಆದ್ರೂ ಸರ್ವರ್ ಸಮಸ್ಯೆ ಅಂತ ಅಲೆದಾಡಿಸುತ್ತಿದ್ದಾರೆ ಅಂತ ಅಜ್ಜಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿತ್ಯವೂ ನೂರಾರು ಅಜ್ಜ, ಅಜ್ಜಿಯರು ಕ್ಯೂ ನಿಲ್ಲುವಂತಾಗಿದೆ. ಈ ಬಗ್ಗೆ ಅಂಚೆ ಕಚೇರಿ ಮುಖ್ಯ ಅಂಚೆ ಅಧೀಕ್ಷಕರನ್ನು ಕೇಳಿದ್ರೆ ಯಾವುದೇ ಸಮಸ್ಯೆ ಇಲ್ಲ. ಯಾರನ್ನು ವೇತನ ನೀಡುವ ವಿಷಯದಲ್ಲಿ ವಿಳಂಬವಾಗಿಲ್ಲ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 3ಗಂಟೆ ವರೆಗೂ ನೀಡಲಾಗುತ್ತಿದೆ. ಸರ್ವರ್ ಸಮಸ್ಯೆ ಇದ್ದಾಗ ಕೆಲ ಬಾರಿ ಸಮಸ್ಯೆ ಆಗಿದೆ ಅಷ್ಟೇ. ಯಾರನ್ನೂ ಕಾಯಿಸಿಲ್ಲ ಅಂತ ಗದಗ ಮುಖ್ಯ ಅಂಚೆ ಅಧೀಕ್ಷಕ ಗೂಳಪ್ಪ, ಚಕ್ರಸಾಲಿ ಹೇಳಿದ್ದಾರೆ. ಇದನ್ನೂ ಓದಿ: ಜಲ ಸಂಪನ್ಮೂಲ ಇಲಾಖೆ ನೇಮಕಾತಿ 2022 ಅಧಿಸೂಚನೆ ಪ್ರಕಟ
ಮೊದಲು ಪೋಸ್ಟ್ ಮ್ಯಾನ್ ಮನೆಗೆ ವೇತನ ತಲುಪಿಸುತ್ತಿದ್ರು. ಆದ್ರಲ್ಲೂ ಗೋಲ್ಮಾಲ್ ನಡೆದ ಕಾರಣ ರಾಜ್ಯ ಸರ್ಕಾರ ನೇರವಾಗಿ ಅಕೌಂಟ್ ಗೆ ಜಮಾ ಮಾಡುತ್ತಿದೆ. ಆದ್ರೆ ಆ ಹಣ ಪಡೆಯಲು ಹಿರಿಯ ಜೀವಗಳು ಅಂಚೆ ಕಚೇರಿಗೆ ಬಂದ್ರೆ ಇಲ್ಲೂ ಹಿರಿಯ ಜೀವಿಗಳ ಜೀವ ಹಿಂಡುತ್ತಿದ್ದಾರೆ. ಹೀಗಾಗಿ ಮೊದ್ಲೆ ಪತಿ ಕಳೆದುಕೊಂಡು, ಮಕ್ಕಳಿಂದ ದೂರವಾಗಿ ಒದ್ದಾಡುತ್ತಿರೋ ಜೀವಗಳಿಗೆ ಅಂಚೆ ಕಚೇರಿ ವ್ಯವಸ್ಥೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇನ್ನಾದ್ರೂ ಅಂಚೆ ಕಚೇರಿ ಅಧಿಕಾರಿಗಳು ಎಚ್ಚೆತ್ತುಕೊಂಡು ಹಿರಿಯ ನಾಗರಿಕರಿಗೆ ಆಗುವ ಹಿಂಸೆಯನ್ನು ತಡೆಯಬೇಕಾಗಿದೆ.
ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ
Published On - 3:20 pm, Tue, 28 June 22