Video: ಮರದ ಡಬ್ಬಿಯಲ್ಲಿ ಅಳುತ್ತಿದ್ದ ಹಸುಗೂಸಿನ ಜೀವ ಉಳಿಸಿದ ಗದಗ ಪೊಲೀಸರು, ಶಹಬ್ಬಾಸ್ ಎಂದ ಜನ
ಪೊಲೀಸರಿಗೆ ಮಾಹಿತಿ ನೀಡಿದ ಯುವಕ ಆಕಾಶ್ ಮತ್ತು ತುರ್ತಾಗಿ ಸ್ಪಂದಿಸಿದ ಗದಗ ಬಡಾವಣೆ ಪೊಲೀಸ್ ಠಾಣೆಯ ಸಿಬ್ಬಂದಿಯ ಬಗ್ಗೆ ಜನರು ಮೆಚ್ಚುಗೆಯಿಂದ ಮಾತನಾಡುತ್ತಿದ್ದಾರೆ.
ಗದಗ: ರಟ್ಟಿನ ಡಬ್ಬದಲ್ಲಿ 3 ದಿನಗಳ ಹಸುಳೆ ಪತ್ತೆಯಾದ ಅಮಾನವೀಯ ಘಟನೆ ನಗರದಲ್ಲಿ ಸೋಮವಾರ ನಸುಕಿನಲ್ಲಿ ಬೆಳಕಿಗೆ ಬಂದಿದೆ. ಗದಗ ಎಪಿಎಂಸಿ ಆವರಣದ ನಿರ್ಜನ ಪ್ರದೇಶದಲ್ಲಿ ಬೇವಿನ ಸೊಪ್ಪು, ಕೊಂಬೆಗಳನ್ನು ಪೇರಿಸಿ ಅದರ ಅಡಿಯಲ್ಲಿ ರಟ್ಟಿನ ಡಬ್ಬವೊಂದರಲ್ಲಿ ಮಗುವನ್ನು ಮುಚ್ಚಿಡಲಾಗಿತ್ತು. ಮಗು ಅಳುವುದು ಕೇಳಿಸಿಕೊಂಡ ಆಕಾಶ್ ಎಂಬ ಯುವಕ ತಕ್ಷಣ ಪೊಲೀಸ್ ಠಾಣೆಗೆ ಕರೆ ಮಾಡಿದರು. ಬಡಾವಣೆಯ ಪೊಲೀಸ್ ಕಾನಸ್ಟೇಬಲ್ಗಳಾದ ಪರಶುರಾಮ ದೊಡ್ಡಮನಿ, ಅಶೋಕ್ ತಕ್ಷಣ ಸ್ಥಳಕ್ಕೆ ಧಾವಿಸಿ ಮಗುವನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿದರು. ಆಸ್ಪತ್ರೆಯ ಸಮೀಪ ಬರುತ್ತಿದ್ದಂತೆ ಮಗುವಿನ ಆಕ್ರಂದನ ಹೆಚ್ಚಾಯಿತು.
ಖಾಸಗಿ ಆಸ್ಪತ್ರೆಯ ಸಣ್ಣಮಕ್ಕಳ ತುರ್ತು ನಿಗಾ ಘಟಕದಲ್ಲಿ (ಎನ್ಐಸಿಯು) ಮಗುವಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಯಿತು. ಸ್ವಲ್ಪ ವಿಳಂಬವಾಗಿದ್ದರೂ ಮಗು ನಾಯಿ, ಹಂದಿಗಳ ಪಾಲಾಗುತ್ತಿತ್ತು ಎಂದು ಸ್ಥಳದಲ್ಲಿದ್ದವರು ಭೀತಿ ವ್ಯಕ್ತಪಡಿಸಿದರು. ಮಗುವಿನ ಪೋಷಕರನ್ನು ಪತ್ತೆ ಮಾಡಲು ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಹಸುಗೂಸನ್ನು ರಟ್ಟಿನ ಡಬ್ಬಿಯಲ್ಲಿ ಎಸೆದು ಹೋದ ಪಾಪಿಗಳ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಪೊಲೀಸರಿಗೆ ಮಾಹಿತಿ ನೀಡಿದ ಯುವಕ ಆಕಾಶ್ ಮತ್ತು ತುರ್ತಾಗಿ ಸ್ಪಂದಿಸಿದ ಗದಗ ಬಡಾವಣೆ ಪೊಲೀಸ್ ಠಾಣೆಯ ಸಿಬ್ಬಂದಿಯ ಬಗ್ಗೆ ಜನರು ಮೆಚ್ಚುಗೆಯಿಂದ ಮಾತನಾಡುತ್ತಿದ್ದಾರೆ.
ಮಗುವನ್ನು ಆಸ್ಪತ್ರೆಗೆ ಸೇರಿಸಿದ ವಿಷಯ ತಿಳಿದ ತಕ್ಷಣ ಖಾಸಗಿ ಆಸ್ಪತ್ರೆಗೆ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ದೌಡಾಯಿಸಿ, ಮಗುವಿನ ಆರೋಗ್ಯದ ಮಾಹಿತಿ ಪಡೆದರು. ಮಗು ಆರೋಗ್ಯವಾಗಿದೆ, ಪ್ರಾಣಾಪಾಯದಿಂದ ಪಾರಾಗಿದೆ ಎಂಬ ವೈದ್ಯರ ಹೇಳಿಕೆಯನ್ನು ಅವರು ಪುನರುಚ್ಚರಿಸಿದರು. ಮಗುವನ್ನು ನಂತರ ಮಕ್ಕಳ ರಕ್ಷಣಾ ಘಟಕಕ್ಕೆ ಪೊಲೀಸರು ಒಪ್ಪಿಸಿದರು. ಹಸುಗೂಸನ್ನು ಹೆಚ್ಚಿನ ಚಿಕಿತ್ಸೆಗೆ ಗದಗ ಜಿಮ್ಸ್ ಆಸ್ಪತ್ರೆಗೆ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಕೊಂಡೊಯ್ದರು.
ಮಗುವನ್ನು ರಕ್ಷಿಸಿದ ಕುರಿತು ಪ್ರತಿಕ್ರಿಯಿಸಿದ ಪಿಎಸ್ಐ ಉಮಾ ವಗ್ಗರ್, ‘ಕ್ರಿಕೆಟ್ ಆಡುತ್ತಿದ್ದ ಹುಡುಗರು ವಿಷಯ ತಿಳಿದು ಠಾಣೆಗೆ ತಿಳಿಸಿದರು. ನಮ್ಮ ಸಿಬ್ಬಂದಿ ಹತ್ತಿರದ ಆಸ್ಪತ್ರೆಗೆ ಸೇರಿಸಿದೆವು. ಮಗು ಚೆನ್ನಾಗಿದೆ. ಗಂಡು ಮಗು ಅದು. ಪೋಷಕರ ಪತ್ತೆಗಾಗಿ ಮುಂದಿನ ಕಾರ್ಯಾಚರಣೆ ಮಾಡ್ತೀವಿ. ಮಕ್ಕಳ ರಕ್ಷಣಾ ಘಟಕಕ್ಕೆ ಕೊಟ್ಟಿದ್ದೇವೆ. ರಟ್ಟಿನ ಬಾಕ್ಸ್ನಲ್ಲಿ ಹಾಕಿದ್ದರು. ಟೀಶರ್ಟ್ ಇತ್ತು, ಅಳ್ತಾ ಇತ್ತು. ಕಸದ ಜಾಗದಲ್ಲಿ ಹಾಕಿದ್ದರು. ನೋಡಿ ನಮಗೇ ಮನಸ್ಸು ಕಲಕಿತು’ ಎಂದು ಹೇಳಿದರು.
‘ನಾಳೆ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರುಪಡಿಸುತ್ತೇವೆ. 21 ದಿನಗಳು ಆದ ಮೇಲೆ ದತ್ತು ಕೊಡ್ತೀವಿ. ಮಗುವಿನ ಪೋಷಕರ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಜಿಲ್ಲಾಸ್ಪತ್ರೆಯಲ್ಲಿ ಮಗುವಿನ ಆರೋಗ್ಯ ಪರೀಕ್ಷೆ ಮಾಡಬೇಕಾಗುತ್ತದೆ’ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ ಲಲಿತಾ ಕುಂಬಾರ್ ಹೇಳಿದರು.
Published On - 8:34 am, Mon, 28 November 22