ಗದಗ, (ಜನವರಿ 10): ಶಿರಹಟ್ಟಿ ಬಿಜೆಪಿ ಶಾಸಕ ಡಾ. ಚಂದ್ರು ಲಮಾಣಿ (Chandru Lamani) ಕಾರು ಚಾಲಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸುನಿಲ್ ಲಮಾಣಿ (25) ಆತ್ಮಹತ್ಯೆಗೆ ಶರಣಾದ ಚಾಲಕ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಮಲ್ಲಾಡ್ ಕಾಲೋನಿಯಲ್ಲಿ ನೇಣಿಗೆ ಶರಣಾಗಿದ್ದಾರೆ. ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಸುನೀಲ್ ಲಮಾಣಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಆದ್ರೆ, ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.
ಶಾಸಕ ಚಂದ್ರು ಲಮಾಣಿ ಅವರು ಇತ್ತೀಚೆಗೆ ಖರೀದಿಸಿದ್ದ ನಿವಾಸದಲ್ಲೇ ಸುನಿಲ್ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇನ್ಜು ಮೃತ ಸುನಿಲ್ ಅವರು ಶಾಸಕ ಚಂದ್ರು ಅವರ ಸಂಬಂಧಿ ಎಂದು ತಿಳಿದುಬಂದಿದೆ. ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ಯಾವುದೇ ಡೆತ್‌ನೋಟ್ ಸಹ ಸಿಕ್ಕಿಲ್ಲ. ಕೌಟುಂಬಿಕ ಕಲಹ ಹಿನ್ನಲೆಯಲ್ಲಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಮನೆ ಕಟ್ಟುವ ವಿಷಯದಲ್ಲಿ ಸಹೋದರರ ನಡುವೆ ಕಲಹವಾಗಿದ್ದು, ಈ ಸಂಬಂಧ ಆತ್ಮಹತ್ಯೆ ಮಾಡಿಕೊಂಡಿರಬಹುದು ಎನ್ನಲಾಗಿದೆ. ಇನ್ನು ವಿಷಯ ತಿಳಿದು ಸ್ಥಳಕ್ಕೆ ಲಕ್ಷ್ಮೇಶ್ವರ ಪೊಲೀಸರು ಭೇಟಿ ಪರಿಶೀಲನೆ ನಡೆಸುತ್ತಿದ್ದು, ಆತ್ಮಹತ್ಯೆ ಬಗ್ಗೆ ತನಿಖೆ ನಡೆಸಿದ್ದಾರೆ.
ಇನ್ನು ಸುನೀಲ್ ಲಮಾಣಿ ಆತ್ಮಹತ್ಯೆ ಬಗ್ಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದು, ಲಕ್ಷ್ಮೇಶ್ವರ ಪೊಲೀಸ್ ಠಾಣೆ ಎದುರು ಸಂಬಂಧಿಕರು ಜಮಾಯಿಸಿದ್ದಾರೆ. ಕುಟುಂಬಸ್ಥರು ಬರುವ ತನಕ ಪೊಲೀಸರು ಕಾಯಬೇಕಿತ್ತು. ಪೊಲೀಸರು ಅವಸರದಲ್ಲಿ ಶವ ತೆಗೆದಿದ್ದಾರೆ ಎಂದು ಆಕ್ರೋಶಗೊಂಡಿದ್ದಾರೆ. ಕತ್ತಿನಲ್ಲಿ ರಕ್ತ ಕಾಣಿಸಿದೆ. ಹೀಗಾಗಿ ಯಾರಾದರೂ ಕೊಲೆ ಮಾಡಿರುವ ಅನುಮಾನ ಇದೆ. ಆತ್ಮಹತ್ಯೆ ಮಾಡಿಕೊಂಡರೆ ನಾಲಿಗೆ ಹೊರ ಬರುತ್ತಿತ್ತು. ಊರುಲು ಹಾಕಿಕೊಂಡ ಬಗ್ಗೆ ಕತ್ತಿನಲ್ಲಿ ಹಗ್ಗದ ಗುರುತು ಇರ್ತಿತ್ತು. ಆದ್ರೆ ಕತ್ತಿನಲ್ಲಿ ರಕ್ತ ಕಂಡಿದೆ. ಹೀಗಾಗಿ ಸಾವಿನಲ್ಲಿ ಅನುಮಾನ ಇದೆ ಎಂದ ಕುಟುಂಬಸ್ಥರು ಹೇಳಿದ್ದಾರೆ.
ಈಗಾಗಲೇ ಅಧಿಕಾರಿಗಳು, ಗುತ್ತಿಗೆದಾರರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ಬಿಜೆಪಿ, ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಮುಗಿಬಿದ್ದಿದೆ. ಅದರಲ್ಲೂ ಬೀದರ್ ಯುವ ಗುತ್ತಿಗೆದಾರ ಸಚಿನ್ ಸಚಿವ ಪ್ರಿಯಾಂಕ್ ಖರ್ಗೆ ಆಪ್ತರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವುದು ರಾಜ್ಯ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಈ ಪ್ರಕರಣವನ್ನು ಅಸ್ತ್ರವನ್ನಾಗಿ ಮಾಡಿಕಂಡಿರುವ ಬಿಜೆಪಿ ಪ್ರಿಯಾಂಕ್ ಖರ್ಗೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದೆ.
ಇದರ ಬೆನ್ನಲ್ಲೇ ಇದೀಗ ಬಿಜೆಪಿ ಶಾಸಕ ಚಂದ್ರು ಲಮಾಣಿ ಕಾರು ಚಾಲಕ ಸುನೀಲ್ ನಿಗೂಢ ಸಾವು ಸಂಭವಿಸಿದ್ದು, ಈ ಪ್ರಕರಣ ರಾಜಕೀಯ ಸ್ವರೂಪ ಪಡೆದುಕೊಳ್ಳುವ ಸಾಧ್ಯತೆಗಳಿದ್ದು, ಇದನ್ನೇ ಇಟ್ಟುಕೊಂಡು ಕಾಂಗ್ರೆಸ್, ಬಿಜೆಪಿಗೆ ತಿರುಗೇಟು ನೀಡುವ ಸಾಧ್ಯತೆಗಳಿವೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:54 pm, Fri, 10 January 25