ಸಿದ್ದರಾಮಯ್ಯ ಸಿಎಂ ಆಗ್ಲಿ ಎಂದು 1ಕ್ವಿಂಟಾಲ್ ಹೊತ್ತು ಅರ್ಧ ಕಿಲೋ ಮೀಟರ್ ದೀಡ್ ನಮಸ್ಕಾರ ಹಾಕಿದ ಅಭಿಮಾನಿ
ರಾಜ್ಯದಲ್ಲಿ ಸಿಎಂ ಸ್ಥಾನದ ಕುರಿತು ಸಾಕಷ್ಟು ಚರ್ಚೆ ಆಗುತ್ತಿದೆ. ಒಂದು ಕಡೆ ಲಿಂಗಾಯತರು ಸಿಎಂ ಆಗಬೇಕು, ಇನ್ನೊಂದೆಡೆ ಒಕ್ಕಲಿಗರು ಸಿಎಂ ಆಗಬೇಕು ಎನ್ನುವ ಮಾತುಗಳು ಕೇಳಿ ಬರುತ್ತಿದ್ದು, ಇದರ ನಡುವೆ ಮಾಜಿ ಸಿಎಂ ಸಿದ್ದರಾಮಯ್ಯನವರ ಅಭಿಮಾನಿಯೊರ್ವ, ಸಿದ್ದು ಸಿಎಂ ಆಗಬೇಕೆಂದು ಹರಕೆ ಹೊತ್ತಿದ್ದಾರೆ. ಬರೋಬ್ಬರಿ 101 ಕೆಜಿ ಭಾರ ಹೊತ್ತು, ಅರ್ಥ ಕಿಲೋಮೀಟರ್ ವರೆಗೆ ದೀಡ್ ನಮಸ್ಕಾರ ಹಾಕುವ ಮೂಲಕ ಅಭಿಮಾನ ಮೆರೆದಿದ್ದಾರೆ.
ಗದಗ: ಉತ್ತರ ಕರ್ನಾಟಕದಲ್ಲಿ ರಣ ಬಿಸಿಲು ತಾಂಡವಾಡುತ್ತಿದೆ. ಇದರ ಜೊತೆ ರಾಜ್ಯದಲ್ಲಿ ಚುನಾವಣೆ ಕಾವು ಕೂಡ ದಿನೆ ದಿನೆ ಹೆಚ್ಚಾಗುತ್ತಿದೆ. ಹಾಗೇ ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದರು ಎನ್ನುವ ಮಾತಿನಂತೆ, ಸಿಎಂ ಸ್ಥಾನಕ್ಕಾಗಿ ಭಾರಿ ಪೈಪೋಟಿ ನಡೆದಿದೆ. ಕುರುಬ, ಲಿಂಗಾಯತರು, ಒಕ್ಕಲಿಗರು ಸಿಎಂ ಆಗಬೇಕು ಎನ್ನುವ ಮಾತುಗಳು ರಾಜಕೀಯ ಪಡಸಾಲಿಯಲ್ಲಿ ಕೇಳಿ ಬರುತ್ತಿದೆ. ಇದರ ಬೆನ್ನಲ್ಲೆ ಇದೀಗ ಸಿದ್ದರಾಮಯ್ಯ(Siddaramaiah)ನವರ ಅಭಿಮಾನಿ ಹರಕೆ ಹೊತ್ತುಕೊಂಡು, ಮುಂದಿನ ಸಿಎಂ ಸಿದ್ದರಾಮಯ್ಯ ಅವರೇ ಆಗಬೇಕೆಂದು ದೇವರ ಮೊರೆ ಹೋಗಿದ್ದಾನೆ. ಹೌದು ಗದಗ ತಾಲೂಕಿನ ಲಕ್ಕುಂಡಿ ಗ್ರಾಮದ, ನಿವಾಸಿಯಾದ ಹನಮಂತಪ್ಪ ಜಟ್ಟಿ ಎನ್ನುವಾತ ಅಪ್ಪಟ ಸಿದ್ದರಾಮಯ್ಯವರ ಅಭಿಮಾನಿ, ಸಿದ್ದು ಸಿಎಂ ಆಗಬೇಕೆಂದು ಗ್ರಾಮದ ಶ್ರೀ ವೀರೂಪಾಕ್ಷೇಶ್ವರ ದೇವಸ್ಥಾನದಿಂದ ಶ್ರೀ ಮಾರುತೇಶ್ವರ ದೇವಸ್ಥಾನದವರೆಗೆ ವಿವಿಧ ವಾದ್ಯಗಳ ಅಬ್ಬರ ನಡುವೆ ಕ್ವಿಂಟಾಲ್ ಭಾರ ಹೊತ್ತು, ದೀಡ್ ನಮಸ್ಕಾರ ಹಾಕಿದ್ದಾನೆ.
ಇನ್ನು ಕುರಿಗಾಯಿಯಾದ ಈ ಹನುಮಂತಪ್ಪ ಜಟ್ಟಿ, ನಿತ್ಯ ಕುರಿ ಮೇಯಿಸಿಕೊಂಡು ಕಸರತ್ತು ಮಾಡುತ್ತಾನೆ. ಅಷ್ಟೇ ಅಲ್ಲ, ಸಿದ್ದರಾಮಯ್ಯನವರ ಅಪ್ಪಟ ಅಭಿಮಾನಿಯಾಗಿದ್ದಾನೆ. ಹಾಗಾಗಿ ಮಾಜಿ ಸಿಎಂ ಸಿದ್ದರಾಮಯ್ಯ ಮುಂದಿನ ಸಿಎಂ ಆಗಬೇಕೆಂದು 101 ಕೆಜಿ ಭಾರದ ಅಕ್ಕಿ ಚೀಲವನ್ನು ಹೊತ್ತುಕೊಂಡು, ದೇವರ ಮೊರೆ ಹೋಗಿದ್ದಾನೆ. ಉತ್ತರ ಕರ್ನಾಟಕದಲ್ಲಿ ಬಿಸಿಲಿನ ತಾಪ ಹೆಚ್ಚಾಗಿದ್ದು, ಮನೆಯಿಂದ ಹೊರಬರಲು ಜನರು ಹಿಂದೇಟು ಹಾಕುತ್ತಾರೆ. ಆದ್ರೆ, ಈ ಸಿದ್ದರಾಮಯ್ಯನವರ ಅಭಿಮಾನಿ ಸುಡುವ ಬಿಸಿಲಿನಲ್ಲಿ ಒಂದು ಕ್ವಿಂಟಲ್, ಒಂದು ಕೆ.ಜಿ ಭಾರದ ಅಕ್ಕಿ ತುಂಬಿದ ಚೀಲವನ್ನು ಹೊತ್ತುಕೊಂಡು ದೀಡ್ ನಮಸ್ಕಾರ ಹಾಕಿದ್ದಾನೆ. ಈ ಮೂಲಕ ನರಗುಂದ ಕ್ಷೇತ್ರದಿಂದ ಬಿ ಆರ್ ಯಾವಗಲ್ ಆಯ್ಕೆಯಾಗಬೇಕು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದು, ಮುಂದಿನ ಸಿಎಂ ಸಿದ್ದರಾಮಯ್ಯ ಆಗಬೇಕು ಎನ್ನುತ್ತಿದ್ದಾರೆ.
ಇದನ್ನೂ ಓದಿ:ನಿಮ್ಮಿಂದ ಸರ್ಟಿಫಿಕೇಟ್ ಪಡೆಯುವ ಅವಶ್ಯಕತೆಯಿಲ್ಲ: ಸಿದ್ದರಾಮಯ್ಯಗೆ ಸಿಎಂ ಬೊಮ್ಮಾಯಿ ತಿರುಗೇಟು
ಚುನಾವಣೆಯ ಮುನ್ನವೇ ರಾಜ್ಯದಲ್ಲಿ ಸಿಎಂ ಸ್ಥಾನಕ್ಕಾಗಿ ನಾ ಮುಂದೆ ತಾ ಮುಂದೆ ಎನ್ನುವ ಪೈಪೋಟಿ ನಡಿದಿದೆ. ಇದರ ನಡುವೆ ಸಿದ್ದು ಅಭಿಮಾನಿ, ಬಾಹುಬಲಿ ಹಾಗೇ 101 ಕೆ.ಜಿ ಭಾರವನ್ನ ಹೊರುವ ಮೂಲಕ ಹರಕೆ ಹೊತ್ತಿದ್ದಾನೆ. ಈ ಅಭಿಮಾನಿಯ ಆಸೆ ಈಡೆರುತ್ತಾ ಎನ್ನುವುದನ್ನ ಕಾಲವೇ ನಿರ್ಧಾರ ಮಾಡಲಿದೆ.
ವರದಿ: ಸಂಜೀವ ಪಾಂಡ್ರೆ, ಟಿವಿ9 ಗದಗ
ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ