ಗದಗ: ಜಿಮ್ಸ್ ಆಸ್ಪತ್ರೆಯಲ್ಲಿ ರೋಗಿಗಳೊಂದಿಗೆ ವೈದ್ಯನ ಗೂಂಡಾವರ್ತನೆ, ಡಾಕ್ಟರ್ ಹುಚ್ಚಾಟ ವಿಡಿಯೋ ವೈರಲ್
ಅದು ಬಡವರ ಪಾಲಿನ ಸಂಜೀವಿನಿ ಎಂದು ಕರೆಸಿಕೊಳ್ಳುವ ಜಿಮ್ಸ್ ಆಸ್ಪತ್ರೆ. ಈ ಆಸ್ಪತ್ರೆಗೆ ನಿತ್ಯ ನೂರಾರು ಸಂಖ್ಯೆಯಲ್ಲಿ ರೋಗಿಗಳು ಬರ್ತಾರೆ. ಹೀಗೆ ಬಂದ ರೋಗಿಗಳಿಗೆ ಸರಿಯಾಗಿ ಚಿಕಿತ್ಸೆ, ಸಲಹೆ ಸೂಚನೆ ನೀಡೋದು ವೈದ್ಯರ ಕರ್ತವ್ಯ. ಆದ್ರೆ, ಈ ವೈದ್ಯ ಮಾತ್ರ ಗೂಂಡಾವರ್ತನೆ ತೋರಿದ್ದಾರೆ. ಹೌದು, ರೋಗಿಯ ಸಂಬಂಧಿಕರಿಗೆ ಅವಾಜ್, ಹಾಕಿ ರೌಡಿಸಂ ಪ್ರದರ್ಶನ ಮಾಡಿದ್ದಾರೆ.
ಗದಗ, ಆ.27: ಶರ್ಟ್ ಗುಂಡಿ ಬಿಚ್ಚಿ ಜಿಮ್ಸ್ ವೈದ್ಯನ ಹುಚ್ಚಾಟ ಪ್ರದರ್ಶನ. ರೋಗಿಗಳ ಜೊತೆ ಬೇಕಾಬಿಟ್ಟಿ ವರ್ತನೆ ಮಾಡುತ್ತಿರುವ ಜಿಮ್ಸ್ ವೈದ್ಯ. ಹೌದು, ಚಿಕಿತ್ಸೆ ಕೊಡದಿದ್ರೆ ಸಚಿವರಿಗೆ ಫೋನ್ ಮಾಡುತ್ತೇನೆ ಅಂದಿದ್ದಕ್ಕೆ ಗರಂ ಆಗಿದ್ದ ಡಾಕ್ಟರ್, ಈ ರೀತಿ ವರ್ತನೆ ಮಾಡಿದ್ದಾರೆ. ಗದಗ ಜಿಮ್ಸ್ ಆಸ್ಪತ್ರೆಯ (Gadag Gims Hospital) ವೈದ್ಯ ಗೌತಮ್ ಪಾಟೀಲ್ ಎಂಬುವವರು ಜಿಮ್ಸ್ ಆಸ್ಪತ್ರೆಗೆ ಡೆಪ್ಟೇಷನ್ ಡಾಕ್ಟರ್ ಆಗಿ ಬಂದಿದ್ದಾರೆ. ಹೆರಿಗೆ ವಿಭಾಗದಲ್ಲಿದ್ದ ಇವರು ಇತ್ತೀಚೆಗೆ ಅತಿರೇಕದ ವರ್ತನೆ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ರೋಗಿಯೊಬ್ಬರಿಗೆ ಚಿಕಿತ್ಸೆ ಕೊಡಿ ಸರ್ ಅಂದಿದ್ದಕ್ಕೆ ‘ನಾನ್ ಇರುವುದು ಹೀಗೆ ಏನ್ ಮಾಡುತ್ತೀಯಾ ಮಾಡು ಎಂದು ಶರ್ಟ್ ಗುಂಡಿ ಬಿಚ್ಚಿ ಡಾಕ್ಟರ್ ಅತಿರೇಕದ ವರ್ತನೆ ಮಾಡಿದ್ದಾರೆ.
ಘಟನೆ ವಿವರ
ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮದ ಮುಸ್ತಾಕ್ ಅಲಿ ಎಂಬಾತ, ಕಳೆದ ಕೆಲ ದಿನದ ಹಿಂದೆ ಹೆಂಡತಿಯ ಹೆರಿಗೆಗಾಗಿ ಜಿಮ್ಸ್ ಆಸ್ಪತ್ರೆಗೆ ಆಗಮಿಸಿದ್ದರು. ನವಜಾತ ಶಿಶು, ಬಾಣಂತಿ ಹಾರೈಕೆ ಸರಿಯಾಗದಿದ್ರೆ ಸಚಿವರಿಗೆ ಫೋನ್ ಮಾಡಿ ದೂರು ಹೇಳೋದಾಗಿ ಹೇಳಿದ್ದರು. ಇಷ್ಟು ಅಂದಿದ್ದೇ ತಡ ವೈದ್ಯನ ಪಿತ್ತ ನೆತ್ತಿಗೇರಿದೆ. ರೋಗಿ ಸಂಬಂಧಿ ಜೊತೆಗೆ ಉದ್ಧಟತನ ತೋರಿದ್ದಾರೆ. ಯಾರಿಗೆ ಹೇಳ್ತಿಯಾ ಹೇಳು ಹೋಗು ಎಂದು ಅವಾಜ್ ಹಾಕಿದ್ದಾರೆ. ಇದೀಗ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಫುಲ್ ವೈರಲ್ ಆಗಿದ್ದು, ವೈದ್ಯನ ವರ್ತನೆಗೆ ಜಿಲ್ಲೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಇನ್ನು ಗೌತಮ್ ಪಾಟೀಲ್ ಜಿಮ್ಸ್ ಆಸ್ಪತ್ರೆಯಲ್ಲಿ ಆಗಾಗ ಹುಚ್ಚಾಟ ಮಾಡುತ್ತಾನೆ ಇರುತ್ತಾನಂತೆ. ಅಧಿಕಾರಿಗಳು ಈತನ ವರ್ತನೆಗೆ ಸಾಕಾಗಿದೆ ಎಂಬ ಮಾತು ಕೇಳಿಬಂದಿದೆ. ಇವಾಗ ರೋಗಿಯ ಸಂಬಂಧಿಕರ ಜೊತೆಗೆ ಗೂಂಡಾವರ್ತನೆ ಮಾಡಿದ್ದಾರೆ. ನವಜಾತ ಶಿಶುವಿಗೆ ಸರಿಯಾಗಿ ಚಿಕಿತ್ಸೆ ನೀಡುತ್ತಿಲ್ಲ ಎಂದಿದಕ್ಕೆ ಈ ರೀತಿ ವರ್ತನೆ ಮಾಡಿದ್ದಾರೆ. ಇದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
ಸೂಕ್ತ ಕ್ರಮ ಕೈಗೊಳ್ಳಲಾಗುವುದೆಂದು ಭರವಸೆ ನೀಡಿದ ವೈದ್ಯಕೀಯ ಸಚಿವ
ಇನ್ನು ಇಂದು(ಆ.27) ಜಿಮ್ಸ್ ಆಸ್ಪತ್ರೆಗೆ ವೈದ್ಯಕೀಯ ಶಿಕ್ಷಣ ಸಚಿವ ಶರಣಪ್ರಕಾಶ ಪಾಟೀಲ್ ಭೇಟಿ ಮಾಡಿದ್ರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ‘ಇದು ನನ್ನ ಗಮನಕ್ಕೆ ಬಂದಿಲ್ಲ, ವೈದ್ಯರು ರೋಗಿಗಳ ಜೊತೆಗೆ ಈ ರೀತಿ ವರ್ತನೆ ಮಾಡುವುದು ಸರಿಯಲ್ಲ. ಎಲ್ಲರಿಗೂ ಸೂಚನೆ ಕೋಡುತ್ತೇನೆ. ಸರ್ಕಾರಿ ಆಸ್ಪತ್ರೆಗೆ ಬಡವರು ಬರುತ್ತಾರೆ, ಅವರ ಜೊತೆಗೆ ಸರಿಯಾಗಿ ನಡೆದುಕೊಳ್ಳಬೇಕು. ಇಂತಹ ಘಟನೆ ನಡೆಯದಂತೆ ಸೂಚನೆ ನೀಡುತ್ತೇನೆ ಎಂದರು.
ಇದನ್ನೂ ಓದಿ:ಗುಜರಾತ್ನ ರಾಸಾಯನಿಕ ಕಾರ್ಖಾನೆಯಲ್ಲಿ ಅನಿಲ ಸೋರಿಕೆ, 28 ಮಂದಿ ಆಸ್ಪತ್ರೆಗೆ ದಾಖಲು
ಸರ್ಕಾರ ಬಡವರಿಗಾಗಿ ಕೋಟ್ಯಾಂತರ ರೂಪಾಯಿ ಅನುದಾನ ನೀಡುತ್ತದೆ. ಜನರಿಗೆ ಸರಿಯಾಗಿ ಚಿಕಿತ್ಸೆ ನೀಡಬೇಕು ಹಾಗೇ ರೋಗಿಗಳ ಜೊತೆಗೆ ಸರಿಯಾಗಿ ವರ್ತನೆ ಮಾಡಬೇಕು. ಆದ್ರೆ, ವೈದ್ಯರು ಹೀಗೆ ಹುಚ್ಚಾಟ ಮಾಡಿದ್ರೆ, ಹೇಗೆ ಎಂದು ಜನ ಪ್ರಶ್ನೇ ಮಾಡಿದ್ದಾರೆ. ಜಿಮ್ಸ್ ಆಡಳಿತ ಮಂಡಳಿ ಈ ಗೂಂಡಾ ವರ್ತನೆ ತೋರಿದ ಡಾಕ್ಟರ್ ಮೇಲೆ ಯಾವ ಕ್ರಮ ಕೈಗೊಳ್ಳುತ್ತಾ ಕಾದು ನೋಡಬೇಕು.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:43 pm, Sun, 27 August 23