ತುಮಕೂರು: ಜ್ವರವೆಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ 5 ವರ್ಷದ ಹೆಣ್ಣು ಮಗು ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದ ಪೋಷಕರು

ಅನಾರೋಗ್ಯದ ಸಂಬಂಧ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ 5 ವರ್ಷದ ಹೆಣ್ಣು ಮಗು ಸೂಕ್ತ ಚಿಕಿತ್ಸೆ ಸಿಗದೇ ಸಾವನ್ನಪ್ಪಿದ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ವೆಂಕಟೇಗೌಡನ ಪಾಳ್ಯದಲ್ಲಿ ನಡೆದಿದೆ. 24 ಗಂಟೆಗಳ ಕಾಲ ವೈದ್ಯಕೀಯ ಸೇವೆ ನೀಡುವ C.S.ಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಡಾಕ್ಟರ್​ ಇರದ ಕಾರಣಕ್ಕೆ ಮಗು ಸಾವನ್ನಪ್ಪಿದೆ ಎಂದು ಪೊಲೀಸ್​ ಠಾಣೆಗೆ ಪೋಷಕರು ದೂರು ನೀಡಿದ್ದಾರೆ.

ತುಮಕೂರು: ಜ್ವರವೆಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ 5 ವರ್ಷದ ಹೆಣ್ಣು ಮಗು ಸಾವು; ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದ ಪೋಷಕರು
ಮೃತ ಬಾಲಕಿ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Aug 23, 2023 | 3:18 PM

ತುಮಕೂರು, ಆ.23: ಜ್ವರವೆಂದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದ 5 ವರ್ಷದ ಹೆಣ್ಣು ಮಗು ಸಾವನ್ನಪ್ಪಿದ್ದ ಘಟನೆ ತುಮಕೂರು ಜಿಲ್ಲೆಯ ಗುಬ್ಬಿ(Gubbi) ತಾಲೂಕಿನ ವೆಂಕಟೇಗೌಡನ ಪಾಳ್ಯದಲ್ಲಿ ನಡೆದಿದೆ. ಸತೀಶ್ ಹಾಗೂ ಶಿಲ್ಪಾ ದಂಪತಿ ಪುತ್ರಿಯಾದ ತನು(5) ಮೃತ ಬಾಲಕಿ. ನಿನ್ನೆ(ಆ.22) ರಾತ್ರಿ ಮಗುವಿಗೆ ಇದ್ದಕ್ಕಿದ್ದಂತೆ ಜ್ವರ ಕಾಣಿಸಿಕೊಂಡ ಹಿನ್ನೆಲೆ ಪೋಷಕರು ಮಗುವನ್ನು C.S.ಪುರ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದರು. ಈ ವೇಳೆ ಆಸ್ಪತ್ರೆಯಲ್ಲಿ ವೈದ್ಯರಿಲ್ಲದೇ ಮಗು ನರಳಾಟ ನಡೆಸಿದ್ದು, ಹಲವು ಗಂಟೆಗಳ ಕಾಲ ಕಾದರೂ ವೈದ್ಯರು ಆಸ್ಪತ್ರೆಗೆ ಬಂದಿಲ್ಲ.

ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದ ಪೋಷಕರು

ಬಳಿಕ ಪೋಷಕರು ಮಗುವನ್ನು ಗುಬ್ಬಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಅಷ್ಟರಲ್ಲಾಗಲೇ ತೀವ್ರ ಜ್ವರದಿಂದ ಸುಸ್ತಾಗಿದ್ದ ಮಗುವನ್ನು ಬೆಂಗಳೂರಿಗೆ ಕರೆದೊಯ್ಯುವಂತೆ ವೈದ್ಯರು ತಿಳಿಸಿದ್ದಾರೆ. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನೆ ಮಾಡಲಾಗಿತ್ತು. ಆದರೆ, ಬೆಂಗಳೂರಿಗೆ ಕರೆದೊಯ್ಯುವಾಗ ಮಾರ್ಗ ಮಧ್ಯೆಯೇ ಮಗು ಕೊನೆಯುಸಿರೆಳೆದಿದೆ. ಸಿ.ಎಸ್ ಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರು ಇದ್ದಿದ್ದರೆ, ನಮ್ಮ ಮಗು ಸಾವನ್ನಪ್ಪುತ್ತಿರಲಿಲ್ಲ. ಹೀಗಾಗಿ ಮಗು ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣವೆಂದು ಆರೋಪಿಸಿದ್ದಾರೆ. ಜೊತೆಗೆ ಘಟನೆ ಸಂಬಂಧ ಸಿ.ಎಸ್ ಪುರ ಪೊಲೀಸ್ ಠಾಣೆಯಲ್ಲಿ ಪೋಷಕರು ದೂರು ನೀಡಿದ್ದಾರೆ.

ಇದನ್ನೂ ಓದಿ:ಚಿತ್ರದುರ್ಗದಲ್ಲಿ ಕಲುಷಿತ ನೀರು ಸೇವಿಸಿ ಐವರ ಸಾವು ಪ್ರಕರಣ; ಗಂಜಿ ಕೇಂದ್ರದ ಆಹಾರದಲ್ಲೂ ಜಿರಳೆ ಪತ್ತೆ

ಇನ್ನು ಇದು ತುಮಕೂರು ಜಿಲ್ಲೆಯೊಂದರ ಸಮಸ್ಯೆ ಮಾತ್ರವಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಕೆಲ ಆಸ್ಪತ್ರೆಗಳ ವೈದ್ಯರ ವಿರುದ್ಧ ಕೂಡ ನಿರ್ಲಕ್ಷ್ಯ ಧೋರಣೆಯ ಆರೋಪ ಕೇಳಿ ಬಂದಿದೆ. ಹೌದು, ಜಿಲ್ಲೆಯ ಕೆಲ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸರಿಯಾದ ಸಮಯಕ್ಕೆ ಸರಿಯಾದ ಚಿಕಿತ್ಸೆ ಸಿಗದೆ ರೋಗಿಗಳು ಮೃತಪಟ್ಟಿರುವ ಆರೋಪಗಳು ಕೇಳಿ ಬಂದಿವೆ. ಕಳೆದ ಮೂರು ತಿಂಗಳ ಅವಧಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಪುತ್ತೂರು, ಬೆಳ್ತಂಗಡಿಯಲ್ಲಿ ಇಂತಹ ನಾಲ್ಕು ಪ್ರಕರಣ ವರದಿಯಾಗಿದೆ.

ಹೌದು, ಮೇ 14ರಂದು ಹೊಟ್ಟೆ ನೋವಿನಿಂದ ಮಂಗಳೂರಿನ ಸರಕಾರಿ ವೆನ್‌ಲಾಕ್ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ನಿತೀನ್ ಪೂಜಾರಿ ಎಂಬ ಯುವಕನಿಗೆ ಸೂಕ್ತ ಚಿಕಿತ್ಸೆ ಸಿಗದೆ ಸಾವನ್ನಪ್ಪಿದ್ದ. ನಂತರ ಜುಲೈ 25ರಂದು ಮಂಗಳೂರಿನ ಖಾಸಗಿ ಎ.ಜೆ ಆಸ್ಪತ್ರೆಗೆ ದಾಖಲಾಗಿದ್ದ ಬಾಣಂತಿಗೆ ವೈದ್ಯರಿಂದ ಸೂಕ್ತ ಚಿಕಿತ್ಸೆ ಸಿಗದೆ ಕೊನೆಯುಸಿರೆಳೆದ ಆರೋಪ ಕೇಳಿಬಂದಿತ್ತು. ಆಗಸ್ಟ್ 8ರಂದು ಬೆಳ್ತಂಗಡಿ ತಾಲೂಕು ಸರಕಾರಿ ಆಸ್ಪತ್ರೆಯ ನಿರ್ಲಕ್ಷ್ಯಕ್ಕೆ ಒಂದೂವರೆ ತಿಂಗಳ ಹಸುಗೂಸು ಸಾವನ್ನಪ್ಪಿದೆ ಎಂದು ಆರೋಪಿಸಲಾಗಿತ್ತು. ಹಾಗೂ ಆಗಸ್ಟ್ 13ರಂದು ಹೊಟ್ಟೆ ನೋವಿನ ಕಾರಣಕ್ಕೆ ಪುತ್ತೂರಿನ ಚೇತನಾ ಖಾಸಗಿ ಆಸ್ಪತ್ರೆಗೆ ಸೇರಿದ್ದ ಯುವಕ ಮೃತನಾಗಿದ್ದ. ಹೀಗೆ ಈ ಎಲ್ಲಾ ಸಾವುಗಳು ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದಲೇ ಸಂಭವಿಸಿವೆ ಎಂಬ ಆರೋಪಗಳು ಕೇಳಿ ಬಂದಿದೆ.

ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ