ರಾಜ್ಯದಲ್ಲಿ 325 ನೂತನ ಬಸ್ ಖರೀದಿಗೆ ಸದ್ಯದಲ್ಲೇ ಟೆಂಡರ್; ಸಾರಿಗೆ ಸಚಿವ ರಾಮಲಿಂಗರೆಡ್ಡಿ
ಗದಗ ನಗರದ ಹೊಸ ಬಸ್ ನಿಲ್ದಾಣದಲ್ಲಿ ನೂತನ 50 ಬಸ್ ಗಳ ಲೋಕಾರ್ಪಣೆ ಹಾಗೂ ಅಪಘಾತ ರಹಿತ ಸೇವೆ ಸಲ್ಲಿಸಿದ ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗರೆಡ್ಡಿ ‘ರಾಜ್ಯದಲ್ಲಿ 325 ನೂತನ ಬಸ್ ಖರೀದಿಗೆ ಸದ್ಯದಲ್ಲೇ ಟೆಂಡರ್ ಜರುಗಿಸಿ ಬಸ್ ಖರೀದಿಸಲಾಗುವುದು. ಒಟ್ಟಾರೆ 5000 ಬಸ್ ಖರೀದಿ ಮಾಡಿ ಮಾರ್ಚ್ ಅಂತ್ಯಕ್ಕೆ ಪೂರೈಕೆ ಮಾಡಲಾಗುವುದು ಎಂದರು.
ಗದಗ, ಫೆ.03: ರಾಜ್ಯದಲ್ಲಿ 325 ನೂತನ ಬಸ್ ಖರೀದಿಗೆ ಸದ್ಯದಲ್ಲೇ ಟೆಂಡರ್ ಜರುಗಿಸಿ ಬಸ್ ಖರೀದಿಸಲಾಗುವುದು. ಒಟ್ಟಾರೆ 5000 ಬಸ್ ಖರೀದಿ ಮಾಡಿ ಮಾರ್ಚ್ ಅಂತ್ಯಕ್ಕೆ ಪೂರೈಕೆ ಮಾಡಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗರೆಡ್ಡಿ (Ramalinga Reddy) ಹೇಳಿದ್ದಾರೆ. ಗದಗ ನಗರದ ಹೊಸ ಬಸ್ ನಿಲ್ದಾಣದಲ್ಲಿ ನೂತನ 50 ಬಸ್ ಗಳ ಲೋಕಾರ್ಪಣೆ ಹಾಗೂ ಅಪಘಾತ ರಹಿತ ಸೇವೆ ಸಲ್ಲಿಸಿದ ಚಾಲಕರಿಗೆ ಬೆಳ್ಳಿ ಪದಕ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ‘ಕಳೆದ 7 ವರ್ಷಗಳಿಂದ ನೇಮಕಾತಿ ನಡೆದಿಲ್ಲ. ಸರ್ಕಾರ 9 ಸಾವಿರ ಹುದ್ದೆ ನೇಮಕಾತಿಗೆ ಅನುಮತಿ ನೀಡಿದ್ದು, ಆಯಾ ವಿಭಾಗೀಯ ಸಂಸ್ಥೆಗಳಿಗೆ ನೇಮಕಾತಿ ಜವಾಬ್ದಾರಿ ನೀಡಲಾಗಿದೆ ಎಂದರು.
ಇನ್ನು ನಗರದಲ್ಲಿ ಜಾಗ ನೀಡಿದರೆ ಟ್ರಕ್ ಟರ್ಮಿನಲ್ ಮಂಜೂರು ಮಾಡುತ್ತೇವೆ. ಮುಂಬರುವ ಬಜೆಟ್ನಲ್ಲಿ ಈ ವಿಷಯ ಅಳವಡಿಸಲಾಗುವುದು. ಎಲ್ಲ ಜಿಲ್ಲೆಗಳಲ್ಲಿ ಚಾಲನೆ ಲೈಸೆನ್ಸ್ ನೀಡುವ ಕ್ಯಾಂಪ್ ಮಾಡಲು ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಲಾಗುವುದು ಎಂದು ಹೇಳಿದರು.
ಇದನ್ನೂ ಓದಿ:ಕೆಎಸ್‌ಆರ್‌ಟಿಸಿಯ ನೂತನ ಪಲ್ಲಕ್ಕಿ ಬಸ್ಗಳ ವಿಶೇಷತೆಗಳೇನು? ಎಲ್ಲೆಲ್ಲಿ ಸಂಚರಿಸಲಿವೆ? ಇಲ್ಲಿದೆ ವಿವರ
ನಗದು ರಹಿತ ಬಸ್ ಸೇವೆಗೆ ಚಾಲನೆ ನೀಡಿ ಮಾತನಾಡಿದ ಸಚಿವ ಎಚ್.ಕೆ. ಪಾಟೀಲ್, ‘ನಗರದ ಹೊಸ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರಿಗೆ ಪುಸ್ತಕ ವ್ಯವಸ್ಥೆ, ರೈಲ್ವೆ ಟಿಕೆಟ್ ಬುಕ್ಕಿಂಗ್ ವ್ಯವಸ್ಥೆ ಸೇರಿದಂತೆ ಅಗತ್ಯ ವಸ್ತುಗಳು ಇಲ್ಲೇ ಸಿಗುವಂತಾಗಬೇಕು. ವಿಮಾನ ನಿಲ್ದಾಣದಲ್ಲಿ ಸಿಗುವ ಎಲ್ಲ ವ್ಯವಸ್ಥೆಯಂತೆ ಬಸ್ ನಿಲ್ದಾಣದಲ್ಲಿ ಸಿಗುವಂತಾಗಬೇಕು. 25 ಲಕ್ಷ ರೂ. ವೆಚ್ಚ ಮಾಡಿದ್ದಲ್ಲಿ ಈ ನಿಲ್ದಾಣವು ಭವ್ಯವಾಗಲಿದೆ ಎಂದರು.
ಸಾರಿಗೆ ಇಲಾಖೆಯಿಂದ ಗದಗ ನಗರಕ್ಕೆ ಕಡಿಮೆ ಕೆಲಸ ಆಗಿದೆ. ನಗರದಲ್ಲಿ ಟ್ರಕ್ ಟರ್ಮಿನಲ್ ಆಗಬೇಕಿತ್ತು. ಭೂಸ್ವಾಧಿನ ಪ್ರಕ್ರಿಯೆ ಹಲವು ಕಾರಣಗಳಿಂದ ನಿಂತಿದೆ. ಟ್ರಕ್ ಟರ್ಮಿನಲ್ ಅನ್ನು ಆದಷ್ಟು ಬೇಗ ಮಂಜೂರು ಮಾಡಬೇಕು ಎಂದು ಸಚಿವ ರಾಮಲಿಂಗ ರೆಡ್ಡಿ ಅವರಿಗೆ ಸಚಿವ ಎಚ್.ಕೆ. ಪಾಟೀಲ್ ಮನವಿ ಮಾಡಿದರು. ಗದಗ ನಗರದಲ್ಲಿ ಕೆಲವಡೆ ಮಿನಿ ಬಸ್ ನಿಲ್ದಾಣಗಳನ್ನು ಮಂಜೂರು, ವಿಭಾಗೀಯ ಚಾಲಕ ತರಬೇತಿ ಕೇಂದ್ರ, ಅಶ್ವಮೇಧ ಬಸ್ ವ್ಯವಸ್ಥೆ, ಇನ್ನೂ ಹೆಚ್ಚಿನ ಬಸ್ ವ್ಯವಸ್ಥೆ ಮಂಜೂರು, ಲೈಸೆನ್ಸ್ ನೀಡುವ ಪ್ರಕ್ರಿಯೆ ಅತ್ಯಾಧುನಿಕರಣ ಸೇರಿದಂತೆ ಹಲವು ಮನವಿಗಳನ್ನು ಎಚ್.ಕೆ. ಪಾಟೀಲ್ ಮಾಡಿದರು.
ಇದನ್ನೂ ಓದಿ:ಹಳೆ KSRTC ಬಸ್‌ಗಳಿಗೆ ಹೊಸ ಕಳೆ: ಶೀಘ್ರವೇ ರಸ್ತೆಗಿಳಿಯಲಿವೆ ವಿನೂತನ ಮಾದರಿಯ ಬಸ್, ವಿಶೇಷತೆ ಏನು ಗೊತ್ತಾ?
ವಾ.ಕ.ರ.ಸಾ.ಸಂಸ್ಥೆ ವ್ಯವಸ್ಥಾಪಕ ನಿರ್ದೇಶಕ ಭರತ್ ಎಸ್ ಮಾತನಾಡಿ, ಶಕ್ತಿ ಯೋಜನೆ ಯಶಸ್ವಿಯಾಗಿದೆ. ಹುಬ್ಬಳ್ಳಿ ವಿಭಾಗದ 6 ಜಿಲ್ಲೆಯಲ್ಲಿ 34 ಕೋಟಿ ಜನ ಸಂಚರಿಸಿದ್ದಾರೆ. ರಾಜ್ಯದಲ್ಲಿ ಹೊಸ ಬಸ್ ಖರೀದಿಗೆ ಸರ್ಕಾರ 500 ಕೋಟಿ ಮೀಸಲಿಟ್ಟಿದೆ. ಅದರಲ್ಲಿ ವಾಕರಸಾಸಂಸ್ಥೆಗೆ 150 ಕೋಟಿ ಕೊಟ್ಟಿದೆ. ಅದರಲ್ಲಿ ಮೊದಲ ಹಂತದ 20 ಕೋಟಿ ವೆಚ್ಚದಲ್ಲಿ 50 ಬಸ್ ಖರೀದಿಸಲಾಗಿದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಈ ಕಾರ್ಯಕ್ರಮ ನಡೆದಿದೆ. ಸರ್ಕಾರ 20 ಸಾವಿರ ಹುದ್ದೆಗಳನ್ನು ಬರ್ತಿ ಮಾಡಿಕೊಳ್ಳಲು ಅನುಮತಿ ನೀಡಿದೆ. ಅಪಘಾತ ರಹಿತ ಸೇವೆ ನಮ್ಮ ಸಂಸ್ಥೆಯ ಉದ್ದೇಶ ಆಗಿದೆ. ಅಪಘಾತ ರಹಿತ ಸೇವೆ ಸಲ್ಲಿಸಿದ 48 ಜನರಿಗೆ ಇಂದು ಬೆಳ್ಳಿ ಪದಕ ನೀಡಿ ಗೌರವಿಸಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ