
ಬೆಂಗಳೂರು, ಡಿಸೆಂಬರ್ 28: ನವ ವಿವಾಹಿತೆ ಗಾನವಿ ಆತ್ಮಹತ್ಯೆ ಪ್ರಕರಣಕ್ಕೆ ಮತ್ತೊಂದು ಬಿಗ್ ಟ್ವಿಸ್ಟ್ ಸಿಕ್ಕಿದೆ. ಮಗಳ ಸಾವಿಗೆ ಆಕೆಯ ಗಂಡನ ಕುಟುಂಬವೇ ಕಾರಣ. ಆತ ಗಂಡಸೇ ಅಲ್ಲ ಎಂದು ದೂರಿದ್ದ ಗಾನವಿ ಕುಟುಂಬದ ವಿರುದ್ಧವೇ ಈಗ ಎಫ್‌ಐಆರ್ ದಾಖಲಾಗಿದೆ. ತನ್ನ ಮೇಲೆ ವರದಕ್ಷಿಣೆ ಕಿರುಕುಳ ಆರೋಪ ಕೂಡ ಕೇಳಿಬಂದಿದ್ದ ಕಾರಣ ಮನನೊಂದಿದ್ದ ಗಾನವಿ ಪತಿ ಸೂರಜ್ ಕೂಡ ಮಹಾರಾಷ್ಟ್ರದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಮಗನ ಜೊತೆ ಆತನ ತಾಯಿ ಜಯಂತಿಯೂ ಸೂಸೈಡ್ ಯತ್ನ ಮಾಡಿದ್ದರು. ಇಷ್ಟೆಲ್ಲ ರಾದ್ಧಾಂತಕ್ಕೆ ಗಾನವಿ ಲವ್ ಸ್ಟೋರಿಯೇ ಕಾರಣ ಎಂಬ ಹೊಸ ಆರೋಪ ಈಗ ಕೇಳಿಬಂದಿದೆ.
ಹೌದು, ಮೃತ ಗಾನವಿ ಮೇಲೆಯೇ ಸೂರಜ್ ಕುಟುಂಬಸ್ಥರು ಈಗ ಹೊಸ ಆರೋಪ ಮಾಡಿದ್ದಾರೆ. ಗಾನವಿ ಈ ಹಿಂದೆ ಹರ್ಷಾ ಎಂಬಾತನನ್ನ ಪ್ರೀತಿ ಮಾಡುತ್ತಿದ್ದಳು. ಆತನನ್ನೆ ಮದುವೆಯಾಗ್ಬೇಕು ಎಂದು ನಿರ್ಧರಿಸಿದ್ದಳು. ಆದರೆ ಮನೆಯವರ ಒತ್ತಾಯಕ್ಕೆ ಗಾನವಿ ಸೂರಜ್ನ ಮದುವೆಯಾಗಿದ್ದಾಳೆ. ಶ್ರೀಲಂಕಾಗೆ ಹನಿಮೂನ್ಗೆ ಹೋದಾಗ ಪ್ರೀತಿ ವಿಚಾರವನ್ನು ಆಕೆಯೇ ಸೂರಜ್ಗೆ ತಿಳಿಸಿದ್ದಳು. ಈ ವಿಚಾರ ಕೇಳಿ ಆತ ಶಾಕ್ ಆಗಿದ್ದ. ಹೀಗಾಗಿಯೇ ಹನಿಮೂನ್ಗೆ ತೆರಳಿದ್ದ ಅವರು ಅರ್ಧಕ್ಕೇ ಬೆಂಗಳೂರಿಗೆ ಹಿಂದಿರುಗಿದ್ದರು. ನಂತರ ಗಾನವಿಯನ್ನ ತಮ್ಮ ಮನೆಗೆ ಅವರ ಕುಟುಂಬಸ್ಥರು ಕರೆದೊಯ್ದಿದ್ದು, ಡಿಸೆಂಬರ್ 24ರಂದು ಅಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಆ ಬಳಿಕ ಸೂರಜ್ ಮೇಲೆ ಆಕೆಯ ತಾಯಿ ರುಕ್ಮಿಣಿ ಕಿರುಕುಳ ಆರೋಪ ಹೊರಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಬೆಂಗಳೂರಿನ ನವವಿವಾಹಿತೆ ದುರಂತ ಸಾವು; ಹನಿಮೂನ್ನಲ್ಲಿ ಆಗಿದ್ದೇನು?
ಫ್ಯಾಮಿಲಿ ಮೇಲೆ ವಿದ್ಯಾರಣ್ಯಪುರ ಠಾಣೆಯಲ್ಲಿ ವರದಕ್ಷಿಣೆ ಕೇಸ್ ದಾಖಲಾದ ಬಳಿಕ ಮಹಾರಾಷ್ಟ್ರಕ್ಕೆ ಸೂರಜ್ ಮತ್ತು ಆತನ ತಾಯಿ ಜಯಂತಿ ತೆರಳಿದ್ದರು. ಆರೋಪದಿಂದ ನೊಂದಿದ್ದ ಸೂರಜ್ ಲಾಡ್ಜ್ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಬಗ್ಗೆ ಸೂರಜ್ ಭಾವ ರಾಜ್ಕುಮಾರ್ ವಿದ್ಯಾರಣ್ಯಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಗಾನವಿ ಪ್ರೀತಿ ವಿಚಾರ ಮುಚ್ಚಿಟ್ಟು ಸುಳ್ಳು ಅಪಪ್ರಚಾರ ಮಾಡಲಾಗ್ತಿದೆ. ಸೂರಜ್ ಸಾವಿಗೆ ಗಾನವಿ, ಆಕೆಯ ತಾಯಿ ರುಕ್ಮಿಣಿ, ರಾಧಾ, ಬಾಬುಗೌಡ, ಸತೀಶ್ ಕಾರಣ ಎಂದು ದೂರಿದ್ದಾರೆ.
ವರದಿ: ವಿಕಾಸ್, ಟಿವಿ9 ಬೆಂಗಳೂರು
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:05 pm, Sun, 28 December 25