ತುಂಗಭದ್ರೆಯಲ್ಲಿ ಶುರುವಾಗಲಿ ಗಂಗಾ ಆರತಿ ಮಾದರಿಯ ಉತ್ಸವ; ನದಿಯ ಸ್ವಚ್ಛತೆಗೆ ಮುಂದಾದ ಹರಿಹರದ ಜನತೆ

|

Updated on: Apr 20, 2021 | 2:27 PM

ಉತ್ತರ ಭಾರತದ ಗಂಗಾ ನದಿಯಲ್ಲಿ ನಡೆಯುವ ಗಂಗಾ ಆರತಿಯಂತೆಯೇ ತುಂಗಭದ್ರ ಆರತಿ ಎಂಬ ಐತಿಹಾಸಿಕ ಸಂಪ್ರದಾಯ ಜೀವ ಪಡೆದುಕೊಳ್ಳುತ್ತಿದೆ. ಇದಕ್ಕೆ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ನೇತೃತ್ವ ವಹಿಸಿಕೊಳ್ಳುತ್ತಿದ್ದಾರೆ.

ತುಂಗಭದ್ರೆಯಲ್ಲಿ ಶುರುವಾಗಲಿ ಗಂಗಾ ಆರತಿ ಮಾದರಿಯ ಉತ್ಸವ; ನದಿಯ ಸ್ವಚ್ಛತೆಗೆ ಮುಂದಾದ ಹರಿಹರದ ಜನತೆ
ತುಂಗಭದ್ರಾ ನದಿಯನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಮುಂದಾದ ವಚನಾನಂದ ಸ್ವಾಮೀಜಿ
Follow us on

ದಾವಣಗೆರೆ: ಭಾರತೀಯ ಸಂಸ್ಕೃತಿಯಲ್ಲಿ ನದಿಗಳಿಗೆ ಪೂಜನೀಯ ಸ್ಥಾನವಾಗಿದೆ. ಈ ಕಾರಣಕ್ಕಾಗಿಯೇ ಪುಣ್ಯಕ್ಷೇತ್ರಗಳಿಗೆ ತೆರಳಿದಾಗ ನದಿಯಲ್ಲಿ ಸ್ನಾನ ಮಾಡಿ ಪಾಪಗಳನ್ನು ತೊಳೆದುಕೊಳ್ಳಬೇಕು ಎಂಬ ನಂಬಿಕೆ ಭಾರತೀಯರ ಮನಸ್ಸಿನಲ್ಲಿ ಹಾಸುಹೊಕ್ಕಾಗಿದೆ. ನದಿಯ ಮಹತ್ವವನ್ನೇ ಸಾರುವ ಗಂಗಾಸ್ನಾನ, ತುಂಗಾಪಾನ ಎಂಬ ಮಾತು ಇಂದಿಗೂ ಜನಪ್ರಿಯ. ಗಂಗೆಯಂತೆಯೇ ಪವಿತ್ರಳೆಂಬ ಹೆಗ್ಗಳಿಕೆ ಹೊಂದಿರುವ ತುಂಗಭದ್ರಾ ನದಿ ಮಂತ್ರಾಲಯ ಮತ್ತು ಹರಿಹರ ಎಂಬ ಎರಡು ಪುಣ್ಯ ಕ್ಷೇತ್ರಗಳನ್ನು ಹಾದುಹೋಗುತ್ತದೆ. ಈ ಎರಡೂ ಭಾಗದಲ್ಲೂ ಸಾಕಷ್ಟು ಭಕ್ತರು ಆಗಮಿಸುವುದರಿಂದ ನದಿಯ ತಟದಲ್ಲಿ ಒಂದಷ್ಟು ತ್ಯಾಜ್ಯ ಉತ್ಪಾದನೆಯೂ ಆಗುತ್ತಿದೆ.  ಇದನ್ನು ಅರಿತ ಹರಿಹರದ ಜನ ನನ್ನ ಊರು ನನ್ನ ನದಿ ಎಂಬ ಹೆಸರಿನಲ್ಲಿ ಸಂಘಟನೆ ಶುರು ಮಾಡಿ ಕಳೆದ ನಾಲ್ಕು ವರ್ಷಗಳಿಂದ ಪ್ರತಿ ಭಾನುವಾರ ನದಿ ಸುತ್ತಮುತ್ತಲು ಸ್ವಚ್ಛತೆ ಶುರು ಮಾಡಿದ್ದಾರೆ. ಸರ್ಕಾರಿ ಉದ್ಯೋಗಿಗಳು ಹರಿಹರ ನಗರದ ನಿವಾಸಿಗಳು ನನ್ನ ಊರು ನನ್ನ ನದಿ ಹೆಸರಿನಲ್ಲಿ ಇಂತಹ ಮಹತ್ವದ ಕೆಲಸ ಮಾಡುತ್ತಲೇ ಇದ್ದಾರೆ. ಆದರೆ ಈಗ ನನ್ನ ಊರು ನನ್ನ ನದಿ ಕಾರ್ಯಕ್ಕೆ ಹೊಸ ರೀತಿಯ ಶಕ್ತಿ ಸಿಕ್ಕಿದೆ.

ಉತ್ತರ ಕರ್ನಾಟಕ ಹಾಗೂ ಮೈಸೂರು ಕರ್ನಾಟಕದ ಸಂಪರ್ಕ ಕೊಂಡಿಯಾದ ಪುಣ್ಯ ಕ್ಷೇತ್ರ  ಹರಿಹರ ನಗರದ ಪಕ್ಕದಲ್ಲಿ ಹರಿಯುವ ನದಿಯೇ ತುಂಗಭದ್ರಾ. ಇದು ಪುಣ್ಯ ಸ್ನಾನಕ್ಕೆ ಹೇಳಿ ಮಾಡಿದ ಸ್ಥಳ. ಆದರೆ ಇಂತಹ ಪವಿತ್ರ ಸ್ಥಳವನ್ನ ಜನರು ನದಿ ಎಂದು ನಂಬುವುದು ಕಷ್ಟ. ಏಕೆಂದರೆ ಈ ನದಿ ದೊಡ್ಡ ಗಾತ್ರದ ಚರಂಡಿಯಂತಾಗಿದೆ. ಹೀಗೆಂದು ಮೊದಲ ಸಲ ಇಲ್ಲಿ ಭೇಟಿ ನೀಡಿದವರು ಹೇಳುವಂತಾಗಿದೆ. ಹೀಗಾಗಿ  ಈ ನದಿಯನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಈ ಭಾಗದ ಜನ  ಇದೀಗ ಮುಂದಾಗಿದ್ದಾರೆ.

ಉತ್ತರ ಭಾರತದ ಗಂಗಾ ನದಿಯಲ್ಲಿ ನಡೆಯುವ ಗಂಗಾ ಆರತಿಯಂತೆಯೇ ತುಂಗಭದ್ರಾ ಆರತಿ ಎಂಬ ಸಂಪ್ರದಾಯ ಸಂಪ್ರದಾಯ ನಡೆಯಲಿ ಎಂದು ಈ ಸ್ವಚ್ಛತೆ ಕಾರ್ಯ ಶುರುವಾಗಿದ್ದು, ಇದಕ್ಕೆ ಪಂಚಮಸಾಲಿ ಗುರುಪೀಠದ ವಚನಾನಂದ ಸ್ವಾಮೀಜಿ ನೇತೃತ್ವ ವಹಿಸಿಕೊಳ್ಳುತ್ತಿದ್ದಾರೆ. ಸದ್ಯ ಇದಕ್ಕೆ ಬೇಕಾದ ನೀಲಿ ನಕ್ಷೆ ಸಿದ್ಧವಾಗಿದ್ದು, ಯೋಜನೆ ಪೂರ್ಣಗೊಂಡ ಬಳಿಕ ಪುಣ್ಯ ಕ್ಷೇತ್ರ ಹರಿಹರಕ್ಕೆ ಪ್ರಧಾನಿ ನರೇಂದ್ರ ಮೋದಿಯೇ ಬಂದು ತುಂಗ ಆರತಿ ಮಾಡುತ್ತಾರೆ ಎಂದು ಮೂಲಗಳು ತಿಳಿಸಿವೆ.

ನನ್ನ ಊರು ನನ್ನ ನದಿ ತಂಡದ ಮೂಲಕ ಸ್ವಚ್ಛತಾ ಕಾರ್ಯ

ಹರಿಹರದ ಹನಗವಾಡಿ ಬಳಿ ಇರುವ ಪಂಚಮಸಾಲಿ ಗುರುಪೀಠದ ಜಗದ್ಗುರುಗಳು ಹಾಗೂ ಖ್ಯಾತ ಯೋಗ ಗುರುಗಳು ಆದ ವಚನಾನಂದ ಸ್ವಾಮೀಜಿಯವರು ನನ್ನ ಊರು ನನ್ನ ನದಿ ಬಳಗಕ್ಕೆ ಸೇರಿದ್ದಾರೆ. ಕೇವಲ ನಾಲ್ಕು ಜನರಿಂದ ಶುರುವಾದ ಈ ಕಾರ್ಯಕ್ಕೆ ಸದ್ಯ ನೂರಾರು ಜನ ಕೈ ಜೋಡಿಸಿದ್ದಾರೆ. ಸ್ವತಃ ಸಂಸದ ಜಿ.ಎಂ.ಸಿದ್ದೇಶ್ವರ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಹನುಮಂತರಾಯ ಹೀಗೆ ಹತ್ತು ಹಲವಾರು ಜನರು ಪವಿತ್ರ ಸ್ಥಳದಲ್ಲಿ ತುಂಬಿಕೊಂಡಿರುವ ಮಲೀನತೆ ಹೊರ ಹಾಕುತ್ತಿದ್ದಾರೆ.

ನದಿಯ ನೀರನ್ನು ಸ್ವಚ್ಛಗೊಳಿಸುವ ಕಾರ್ಯದಲ್ಲಿ ನಿರತರಾದ ವಚನಾನಂದ ಸ್ವಾಮೀಜಿ

ದಾವಣಗೆರೆ ಜಿಲ್ಲೆಯ ಹರಿಹರ ನಗರಕ್ಕೆ ಹೊಂದಿಕೊಂಡು ಹರಿಯುತ್ತಿರುವ ತುಂಗಭದ್ರ ನದಿ ಇತ್ತೀಚಿಗೆ ಹೆಚ್ಚು ಕಲುಷಿತವಾಗುತ್ತಿದೆ. ನಗರಗಳ ಚರಂಡಿ ನೀರು ನದಿಗೆ ಸೇರುತ್ತಿದೆ. ಇದು ಕೂಡಾ ಗಂಗಾ ನದಿಯಂತೆ ಸಂಪೂರ್ಣವಾಗಿ ಮಲೀನ ಆಗಬಾರದು ಎಂಬ ಸಂಕಲ್ಪದಿಂದ ಸ್ವಚ್ಛತೆ ಕಾರ್ಯ ಶುರುವಾಗಿದೆ. ಮೇಲಾಗಿ ಈಗಾಗಲೇ ನದಿಯ ಎರಡು ಕಿಲೋ ಮೀಟರ್ ಪ್ರದೇಶದಲ್ಲಿ ಸ್ವಚ್ಛತೆ ಕಾರ್ಯ ಶುರುವಾಗಿದೆ.

ಈ ಸ್ವಚ್ಛತೆ ಕಾರ್ಯಕ್ಕೆ ಕೋಟಿ ವೆಚ್ಚದ ಯೋಜನೆ ಸಿದ್ಧವಾಗಿದೆ. ಕೆಲ ದಿನಗಳ ಹಿಂದೆ ಸ್ವತಃ ವಚನಾನಂದ ಸ್ವಾಮೀಜಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನ ಭೇಟಿ ಮಾಡಿ ತುಂಗಭದ್ರ ನದಿಯ ದಡದಲ್ಲಿ ಇಂತಹದೊಂದು ಕಾರ್ಯ ಮಾಡುವ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರು. ಜೊತೆಗೆ ಇತ್ತೀಚಿಗೆ ನಡೆದ ಪಂಚಮಸಾಲಿ ಗುರುಪೀಠದ ಹರಜಾತ್ರೆಗೆ ಆಗಮಿಸಿದ ಕೇಂದ್ರದ ಸಚಿವ ಪ್ರಲ್ಹಾದ ಜೋಶಿ ಅವರಿಗೆ ಈ ಬಗ್ಗೆ ಮನವಿಯೊಂದನ್ನ ಕೊಟ್ಟಿದ್ದರು.

ಇನ್ನು ಈ ಬಗ್ಗೆ ಮುಖ್ಯಮಂತ್ರಿ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದರು. ಇದರ ಪರಿಣಾಮ ಹರಿಹರದ ತುಂಗಭದ್ರ ಸೇತುವೆ ಬಳಿ ಇರುವ ರಾಘವೇಂದ್ರ ಮಠದ ಪಕ್ಕದಲ್ಲಿ ತುಂಗಭದ್ರ ಆರತಿಗೆ ವಿಶೇಷ ವ್ಯವಸ್ಥೆ ಮಾಡಲು ಯೋಜನೆ ರೂಪಿಸಲಾಗಿದೆ. ಕರ್ನಾಟಕ ರಾಜ್ಯದ ಹೃದಯ ಭಾಗ ಹರಿಹರ. ಈ ಕಾರಣಕ್ಕೆ ಪ್ರತಿ ಸಂಕ್ರಾಂತಿಗೆ ಸಾವಿರ ಸಂಖ್ಯೆಯಲ್ಲಿ ಜನ ಇಲ್ಲಿ ಪುಣ್ಯ ಸ್ನಾನಕ್ಕೆ ಬರುತ್ತಾರೆ. ಹೀಗಾಗಿ ಸ್ವಚ್ಛತೆಯ ಜೊತೆಗೆ ಈ ನದಿಯ ಪವಿತ್ರತೆಯನ್ನು ಕಾಪಾಡಲು ವಚನಾನಂದ ಸ್ವಾಮೀಜಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಇದನ್ನೂ ಓದಿ: ತಳಮುಟ್ಟಿದ ತ್ರಿವೇಣಿ ಕೂಡಲಸಂಗಮ; ನದಿ ನೀರಿನ ಅಭಾವದಿಂದ ಬಾಗಲಕೋಟೆ ಜನರ ಆತಂಕ

( Gangarathi Model ritual is to be observed on the bank of Thungabhadra river in Harihara )