
ಕೊಪ್ಪಳ, ಅಕ್ಟೋಬರ್ 27: ಜಿಲ್ಲೆಯ ಗಂಗಾವತಿ ನಗರವನ್ನು ಬೆಚ್ಚಿಬೀಳಿಸಿದ ಬಿಜೆಪಿ (BJP) ಯುವ ಮೋರ್ಚಾ ಅಧ್ಯಕ್ಷ ವೆಂಕಟೇಶ್ ಕುರುಬರ ಹತ್ಯೆ ಪ್ರಕರಣದಲ್ಲಿ ಹೊಸ ತಿರುವು ಸಿಕ್ಕಿದೆ. ಮೃತರ ಸ್ನೇಹಿತ ರವಿಯೇ ಆರೊಪಿಯಿರಬಹುದು ಎಂಬ ಶಂಕೆ ಈ ಹಿಂದೆ ವ್ಯಕ್ತವಾಗಿತ್ತು. ಇದೀಗ 19 ದಿನಗಳ ನಂತರ ಆತನೇ ಕೊಲೆಗಾರನೆಂದು ದೃಢಪಟ್ಟಿದೆ. ಈ ಪ್ರಕರಣದ ಹಿನ್ನೆಲೆ ಪ್ರಮುಖ ಆರೋಪಿ ರವಿ ಸೇರಿದಂತೆ 10 ಆರೋಪಿಗಳನ್ನು ಬಂಧಿಸಲಾಗಿದೆ.
ಅಕ್ಟೋಬರ್ 8ರ ತಡರಾತ್ರಿ ಗಂಗಾವತಿಯ ರಸ್ತೆಯಲ್ಲಿ ದುಷ್ಕರ್ಮಿಗಳು ಕಾರಿನಲ್ಲಿ ಹಿಂಬಾಲಿಸಿ ವೆಂಕಟೇಶ್ ಅವರನ್ನು ಕೊಚ್ಚಿ ಕೊಲೆ ಮಾಡಿದ್ದರು. ಪ್ರಾಥಮಿಕ ತನಿಖೆಯಲ್ಲಿ ಹಳೆಯ ದ್ವೇಷವೇ ಹತ್ಯೆಗೆ ಕಾರಣ ಎಂದು ಶಂಕಿಸಲಾಗಿತ್ತು. ಈಗ ತನಿಖೆಯಿಂದ ಆರೋಪಿಗಳು ಬಳ್ಳಾರಿಯಲ್ಲಿ ಈ ಹತ್ಯೆಗೆ ಸಂಚು ಹಾಕಿದ್ದರು ಎಂಬ ಸ್ಪೋಟಕ ಸತ್ಯ ಹೊರಬಿದ್ದಿದೆ. ಪ್ರಮುಖ ಆರೋಪಿ ರವಿ, ಹಂತಕರಾದ ಗೌಳಿ ಗಂಗಾಧರ ಹಾಗೂ ಇತರರೊಂದಿಗೆ ಸಂಚು ರೂಪಿಸಿದ್ದು, ಅದರಂತೆಯೇ ಗಂಗಾವತಿಯಲ್ಲಿ ಕೊಲೆ ಮಾಡಿದ್ದಾರೆ.
ಕೊಲೆ ಬಳಿಕ ರವಿ ಮೊಬೈಲ್ ಇಲ್ಲದೆ ತಿರುಪತಿ ಸೇರಿದಂತೆ ನಾನಾ ಕಡೆಗಳಲ್ಲಿ ತಲೆಮರೆಸಿಕೊಂಡಿದ್ದ. ಮೊಬೈಲ್ ಫೋನ್ ಇಲ್ಲದೆ ಆತನ ಹಾದಿ ಪತ್ತೆ ಹಚ್ಚಲು ಪೊಲೀಸರು ಕಷ್ಟಪಟ್ಟಿದ್ದರು. ರವಿಯು ತನ್ನ ಪತ್ನಿ ಚೈತ್ರಾಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಆಕೆಯಿಂದ ಖರ್ಚಿಗೆ ಹಣ ಪಡೆಯುತ್ತಿದ್ದ ಕಾರಣ ಪೊಲೀಸರು ಚೈತ್ರಾಳನ್ನು ಬಂಧಿಸಿದ್ದರು. ಕೊನೆಗೂ ಆಕೆಯ ಬಂಧನದ ನಂತರ ಪೊಲೀಸರು ರವಿಯನ್ನು ಬಳ್ಳಾರಿ ಹೊರವಲಯದಲ್ಲಿ ಟ್ರ್ಯಾಪ್ ಮಾಡಿ ಅರೆಸ್ಟ್ ಮಾಡಿದ್ದಾರೆ. ಇಲ್ಲಿಯ ವರೆಗೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯ್, ಧನರಾಜ್, ಭರತ್ , ಸಲೀಂ, ಕಾರ್ತಿಕ್, ಮುಹಮ್ಮದ್ ಅಲ್ತಾಫ್, ದಾದಾಪೀರ, ರವಿ ಪತ್ನಿ ಚೈತ್ರಾ ಮತ್ತು ಇತ್ತೀಚಿನ ಬಂಧಿತರಾದ ರವಿ ಹಾಗೂ ಗಂಗಾಧರ ಸೇರಿ ಒಟ್ಟು 10 ಮಂದಿಯನ್ನು ಬಂಧಿಸಲಾಗಿದೆ.
ಇದನ್ನೂ ಓದಿ ಗಂಗಾವತಿ: ಬಿಜೆಪಿ ಯುವ ಮುಖಂಡ ವೆಂಕಟೇಶ್ ಬರ್ಬರ ಹತ್ಯೆ
ಈಗಾಗಲೇ ರವಿ ಮೇಲೆ ಕೊಲೆ, ಕೊಲೆ ಯತ್ನ ಮತ್ತು ದೋಂಬಿ ಗಲಾಟೆ ಸೇರಿ 15ಕ್ಕೂ ಹೆಚ್ಚು ಕೇಸ್‌ಗಳಿವೆ. ಗೌಳಿ ಗಂಗಾಧರ ಮೇಲೂ 8 ಕೇಸ್ ದಾಖಲಾಗಿವೆ. ಕೊಪ್ಪಳ ಎಸ್‌ಪಿ ಡಾ. ರಾಮ್ ಅರಸಿದ್ದಿ ಈ 10 ಮಂದಿಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಈ ಪ್ರಕರಣ ಪೊಲೀಸ್ ಇಲಾಖೆಗೆ ದೊಡ್ಡ ಸವಾಲಾಗಿತ್ತು . ರವಿ ಬಂಧನದೊಂದಿಗೆ ಪ್ರಕರಣದ ತನಿಖೆಗೆ ವೇಗ ಬಂದಿದೆ ಮತ್ತು ಶೀಘ್ರದಲ್ಲೇ ಆರೋಪಿಗಳ ವಿರುದ್ಧ ಚಾರ್ಜ್ ಶೀಟ್ ಸಲ್ಲಿಸುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.