ಬೆಳ್ಳುಳ್ಳಿ ಕಬಾಬ್​ ಟ್ರೆಂಡ್​ ಬೆನ್ನಲ್ಲೇ ಬೆಳ್ಳುಳ್ಳಿ ಬೆಲೆ ಏರಿಕೆ: ಕೆಜಿಗೆ 350 ರೂ.

|

Updated on: Feb 12, 2024 | 10:40 AM

ರಾಜ್ಯಾದ್ಯಂತ ಬೆಳ್ಳುಳ್ಳಿ ಪೂರೈಕೆಯಲ್ಲಿ ಕುಸಿತ ಕಂಡಿದೆ. ಹೀಗಾಗಿ ಬೆಳ್ಳುಳ್ಳಿ ಬೆಲೆ ಏರಿಕೆಯಾಗಿದೆ. ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಯಾರ್ಡ್‌ನಲ್ಲಿ ಬೆಳ್ಳುಳ್ಳಿಯ ಪೂರೈಕೆ ಶೇ.50 ರಷ್ಟು ಕುಸಿದಿದೆ. ಇದರಿಂದ ಕೇಜಿ ಬೆಳ್ಳುಳ್ಳಿಗೆ 350 ರೂ. ಚಿಲ್ಲರೆ ಮಾರುಕಟ್ಟೆಯಲ್ಲಿ 400 ರೂ.ಗೆ ತಲುಪಿದೆ.

ಬೆಳ್ಳುಳ್ಳಿ ಕಬಾಬ್​ ಟ್ರೆಂಡ್​ ಬೆನ್ನಲ್ಲೇ ಬೆಳ್ಳುಳ್ಳಿ ಬೆಲೆ ಏರಿಕೆ: ಕೆಜಿಗೆ 350 ರೂ.
ಬೆಳ್ಳುಳ್ಳಿ
Follow us on

ಬೆಂಗಳೂರು, ಫೆಬ್ರವರಿ 12: ಅತ್ತ ಸಾಮಾಜಿಕ ಜಾಲತಾಣದಲ್ಲಿ ಬೆಳ್ಳುಳ್ಳಿ ಕಬಾಬ್ (Garlic Kabab)​ ಸಾಕಷ್ಟು ಟ್ರೆಂಡ್​​ ಆಗುತ್ತಿದ್ದರೆ ಇತ್ತ ಬೆಳ್ಳುಳ್ಳಿ ಬೆಲೆ (Garlic Price) ಗಗನಕ್ಕೆ ಏರಿದೆ. ಇದರಿಂದ ಬೆಳ್ಳುಳ್ಳಿಯಿಂದ ತಯಾರಿಸುವ ಪದಾರ್ಥಗಳ ಬೆಲೆಯೂ ಕೂಡ ಏರಿಕೆಯಾಗುವ ಸಾಧ್ಯತೆ ಇದೆ. ಹೀಗಾಗಿ ಬೆಳ್ಳುಳ್ಳಿ ಕಬಾಬ್​ ತಿನ್ನಬೇಕೆಂಬ ಆಸೆ ಇಟ್ಟುಕೊಂಡವರಿಗೆ ಬೆಲೆಯ ಬಿಸಿ ತಟ್ಟಲಿದೆ. ರಾಜ್ಯಾದ್ಯಂತ ಬೆಳ್ಳುಳ್ಳಿ ಪೂರೈಕೆಯಲ್ಲಿ ಕುಸಿತ ಕಂಡಿದೆ. ಹೀಗಾಗಿ ಬೆಳ್ಳುಳ್ಳಿ ಬೆಲೆ ಏರಿಕೆಯಾಗಿದೆ. ಯಶವಂತಪುರದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (APMC) ಯಾರ್ಡ್‌ನಲ್ಲಿ ಬೆಳ್ಳುಳ್ಳಿಯ ಪೂರೈಕೆ ಶೇ.50 ರಷ್ಟು ಕುಸಿದಿದೆ. ಇದರಿಂದ ಕೆಜಿ ಬೆಳ್ಳುಳ್ಳಿಗೆ 350 ರೂ. ಚಿಲ್ಲರೆ ಮಾರುಕಟ್ಟೆಯಲ್ಲಿ 400 ರೂ.ಗೆ ತಲುಪಿದೆ.

ಬೆಂಗಳೂರು ಸಗಟು ಬೆಳ್ಳುಳ್ಳಿ ವರ್ತಕರ ಸಂಘದ ಕಾರ್ಯದರ್ಶಿ ದೀಪಕ್ ಜೆ ಷಾ ಮಾತನಾಡಿ, ಬೆಂಗಳೂರಿಗೆ ಸಾಮಾನ್ಯವಾಗಿ ದಿನಕ್ಕೆ 40 ಕೆಜಿ ತೂಕವಿರುವ 3,000 ಬೆಳ್ಳುಳ್ಳಿ ಚೀಲ ಬರುತ್ತಿದ್ದವು. ಆದರೆ ಕಳೆದ ಕೆಲವು ದಿನಗಳಿಂದ ಪೂರೈಕೆಯು ಶೇಕಡಾ 50 ರಷ್ಟು ಕಡಿಮೆಯಾಗಿದೆ. ಹೀಗಾಗಿ ದರ ಏರಿಕೆಯಾಗಿದೆ. ಉತ್ತರ ಭಾರತದ ರಾಜ್ಯಗಳಲ್ಲಿ ಬರಗಾಲ ಆವರಿಸಿದ್ದರಿಂದ ಪೂರೈಕೆಗೆ ತೊಂದರೆಯಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ‘ಹೆಣ್ಮಕ್ಕಳು ಬಂದು ರಾವುಲ್ಲಾ ಅಲ್ಲಾಡ್ಸಪ್ಪ ಅಂತಾರೆ’: ಬೆಳ್ಳುಳ್ಳಿ ಕಬಾಬ್​ ಚಂದ್ರು ಬೇಸರದ ಮಾತು

ಹಾವೇರಿ ಜಿಲ್ಲೆಯ ರಾಣೆಬೆನ್ನೂರಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಬೆಳ್ಳುಳ್ಳಿ ಬೆಳೆಯಲಾಗುತ್ತಿದ್ದು, ಇಡೀ ಕರ್ನಾಟಕಕ್ಕೆ ಪೂರೈಸಲು ಇದು ಸಾಕಾಗುತ್ತಿಲ್ಲ. ರಾಜ್ಯವು ಸಾಮಾನ್ಯವಾಗಿ ಮಧ್ಯಪ್ರದೇಶ, ಗುಜರಾತ್ ಮತ್ತು ರಾಜಸ್ಥಾನದಂತಹ ರಾಜ್ಯಗಳಿಂದ ಬೆಳ್ಳುಳ್ಳಿಯನ್ನು ಆಮದು ಮಾಡಿಕೊಳ್ಳುತ್ತದೆ. ಆದರೆ ಈಗ, ನಾವು ಮಧ್ಯಪ್ರದೇಶದಿಂದ ಮಾತ್ರ ಆಮದು ಮಾಡಿಕೊಳ್ಳುತ್ತಿದ್ದೇವೆ. ಆದರೆ ತಿಂಗಳ ಅಂತ್ಯದ ವೇಳೆಗೆ, ಗುಜರಾತ್ ಮತ್ತು ರಾಜಸ್ಥಾನದಿಂದಲೂ ಪೂರೈಕೆ ಪುನರಾರಂಭವಾಗುತ್ತದೆ ಮತ್ತು ದರ ಕಡಿಮೆಯಾಗುವ ನಿರೀಕ್ಷೆಯಿದೆ ಎಂದು ತಿಳಿಸಿದರು.

ವಿವಿಧ ಜಿಲ್ಲೆಗಳಲ್ಲಿನ ಬೆಳ್ಳುಳ್ಳಿ ದರ
ಜಿಲ್ಲೆ ಬೆಳ್ಳುಳ್ಳಿ ದರ ಕೆಜಿಗೆ (ರೂ.)
ಬಾಗಲಕೋಟೆ 320 – 350
ವಿಜಯಪುರ ಜವಾರಿ 280 – 300
ಹೈಬ್ರಿಡ್ 150 – 180
ಚಿಕ್ಕಮಗಳೂರು 300 – 320
ಕೊಪ್ಪಳ ಜವಾರಿ 350
ಹೈಬ್ರೀಡ್ 200
ಚಾಮರಾಜನಗರ 310 – 330
ಕಲಬುರಗಿ 300 – 320
ಧಾರವಾಡ 300 – 320
ಬೀದರ್ 400 – 450
ಚಿತ್ರದುರ್ಗ 300 – 320
ರಾಯಚೂರು 300 – 320
ಬಳ್ಳಾರಿ 350 – 370
ಮಂಡ್ಯ 360 – 400
ಕೋಲಾರ 350 – 400
ತುಮಕೂರು 300 – 320
ಚಿಕ್ಕಬಳ್ಳಾಪುರ 350 – 400
ದಾವಣಗೆರೆ ಜವಾರಿ 280 – 300
ಹೈಬ್ರಿಡ್ 240 – 280

ಬೆಳ್ಳುಳ್ಳಿ ಬಳಸದೆ ಆಹಾರ ಪದಾರ್ಥ ತಯಾರಿಕೆ

ಬೆಲೆ ಏರಿಕೆ ಹಿನ್ನೆಲೆಯಲ್ಲಿ ಬೆಳ್ಳುಳ್ಳಿ ಬಳಸದೆ ಆಹಾರ ಪದಾರ್ಥ ತಯಾರಿಸಲು ಮೈಸೂರು ಹೋಟೆಲ್ ಮಾಲೀಕರು ನಿರ್ಧರಿಸಿದ್ದಾರೆ. ಬೆಳ್ಳುಳ್ಳಿ ಬೆಲೆ ದಿನೆ ದಿನೇ ಹೆಚ್ಚಾಗುತ್ತಿದೆ. ಆದ್ದರಿಂದ ಬೆಳ್ಳುಳ್ಳಿ ಬಳಸದೆ ಆಹಾರ ಪದಾರ್ಥಗಳನ್ನು ಮಾಡಲು ಎಲ್ಲ ಹೋಟೆಲ್, ರೆಸ್ಟೋರೆಂಟ್ ಮಾಲೀಕರಿಗೆ ತಿಳಿಸಲಾಗಿದೆ. ಬೆಳ್ಳುಳ್ಳಿ ಬಳಸದ ಕರಿಗಳಿಗೆ ಶೇ10% ರಷ್ಟು ರಿಯಾಯಿತಿ ನೀಡಲು ತೀರ್ಮಾನಿಸಲಾಗಿದೆ. ಪ್ರತಿ ನಿತ್ಯ ಒಂದಲ್ಲ ಒಂದು ಪದಾರ್ಥದ ಬೆಲೆ ಏರಿಕೆಯಾಗುತ್ತಿದೆ. ಇದರಿಂದ ಹೋಟೆಲ್ ನಡೆಸುವುದು ಕಷ್ಟವಾಗಿದೆ ಎಂದು ಮೈಸೂರು ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ ನಾರಾಯಣ ಗೌಡ ಹೇಳಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:35 am, Mon, 12 February 24