ಬೆಳ್ಳುಳ್ಳಿ ಕಬಾಬ್ ಚಂದ್ರುಗೆ ಚಿತ್ರರಂಗದ ನಂಟು ಬಹಳ ಹಳೆಯದ್ದು
Bellulli Kabab: ಬೆಳ್ಳುಳ್ಳಿ ಕಬಾಬ್ ರೆಸಿಪಿ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿರುವ ಹೋಟೆಲ್ ಉದ್ಯಮಿ ಚಂದ್ರುಗೆ ಚಿತ್ರರಂಗದೊಟ್ಟಿಗೆ ಬಹಳ ಹಳೆಯ ನಂಟಿದೆ.
ಬೆಳ್ಳುಳ್ಳಿ ಕಬಾಬ್ (Bellulli Kabab) ಮೂಲಕ ರಾಜ್ಯದ ಜನರಿಗೆ ಚಿರಪರಿಚಿತರಾಗಿದ್ದಾರೆ ಹೊಟೆಲ್ ಉದ್ಯಮಿ ಚಂದ್ರು. ಅವರ ಅಡುಗೆ ಮಾಡುವ ಶೈಲಿ, ಮಾತಿನ ಶೈಲಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗಿದೆ. ಅವರು ಮಾತ್ರವೇ ಅಲ್ಲದೆ ಅವರ ಅಸಿಸ್ಟೆಂಟ್ ರಾಹುಲ್ಲ ಸಹ ಸಖತ್ ಜನಪ್ರಿಯತೆ ಗಳಿಸಿದ್ದಾನೆ. ಹೋಟೆಲ್ ಉದ್ಯಮಿಯಾಗಿರುವ ಚಂದ್ರು, ರಸ್ತೆ ಪಕ್ಕ ಹೋಟೆಲ್ ತಳ್ಳುಗಾಡಿಯಿಂದ ಈ ಹೋಟೆಲ್ ಕೆಲಸ ಆರಂಭಿಸಿದವರು. ಆದರೆ ಚಂದ್ರು ರಸ್ತೆ ಬದಿ ತಳ್ಳುಬಂಡಿ ಪ್ರಾರಂಭ ಮಾಡುವ ಮುಂಚಿನಿಂದಲೂ ಅವರಿಗೆ ಚಿತ್ರರಂಗದೊಡನೆ ನಂಟಿತ್ತು. ಹೋಟೆಲ್ ಉದ್ಯಮಿ ಆದ ಬಳಿಕವೂ ಆ ನಂಟು ಮುಂದುವರೆಯಿತು.
ಚಂದ್ರು ಅವರು ಖ್ಯಾತ ನಟಿ ಮಾಲಾಶ್ರೀ ಅವರಿಗೆ ಮೇಕಪ್ಮ್ಯಾನ್ ಆಗಿದ್ದರಂತೆ. ಮಾಲಾಶ್ರೀ ಅವರು ಪೀಕ್ನಲ್ಲಿದ್ದಾಗ ಅವರಿಗೆ ಮೇಕಪ್ ಮಾಡುತ್ತಿದ್ದಿದ್ದು ಚಂದ್ರು. ಮಾಲಾಶ್ರೀ ಅವರೊಟ್ಟಿಗೆ ಬರೋಬ್ಬರಿ 72 ಸಿನಿಮಾಗಳಲ್ಲಿ ಚಂದ್ರು ಅವರ ಮೇಕಪ್ಮ್ಯಾನ್ ಆಗಿ ಕೆಲಸ ಮಾಡಿದ್ದರಂತೆ. ಅದಾದ ಬಳಿಕ ಒಮ್ಮೆ ಮಾಲಾಶ್ರೀ ಅವರು ಆರೋಗ್ಯ ಸುಧಾರಣೆಗಾಗಿ ಜಿಂದಾಲ್ಗೆ ಸೇರಿದಾಗ ಚಂದ್ರು ಕೆಲಸ ಬಿಟ್ಟು ರಸ್ತೆ ಬದಿ ಹೋಟೆಲ್ ಆರಂಭ ಮಾಡಿದರಂತೆ. ಅಂದಹಾಗೆ ಚಂದ್ರು ಹೋಟೆಲ್ ಉದ್ಯಮಿ ಆಗಲು ಡಾ ರಾಜ್ಕುಮಾರ್ ಅವರು ಸಹ ಕಾರಣ.
ಇದನ್ನೂ ಓದಿ:ಸಂಜೆಯ ತಿಂಡಿಗೆ ಸೋಯಾ ಕಬಾಬ್ ಸೂಪರ್, ಇದು ಆರೋಗ್ಯಕ್ಕೂ ಉತ್ತಮ
ಕೆಸಿಎನ್ ಅವರ ಮನೆಯಲ್ಲಿ ಸಿನಿಮಾ ಶೂಟಿಂಗ್ ನಡೆಯುತ್ತಿತ್ತಂತೆ. ಆಗ ಚಂದ್ರು ಅವರು ಶೂಟಿಂಗ್ನಲ್ಲಿದ್ದ ಕೆಲವರನ್ನು ತಮ್ಮ ಮನೆಗೆ ಊಟಕ್ಕೆ ಕರೆದುಕೊಂಡು ಹೋಗಿದ್ದರಂತೆ. ಊಟ ಮುಗಿಸಿಕೊಂಡು ವಾಪಸ್ ಬಂದ ಮೇಲೆ ರಾಜ್ಕುಮಾರ್ ಅವರು ಎಲ್ಲ ಎಲ್ಲಿ ಹೋಗಿದ್ದಿರಿ ಎಂದು ಕೇಳಿದ್ದಾರೆ. ಆಗ ಅಲ್ಲಿದ್ದವರು, ಚಂದ್ರು ತಮ್ಮ ಮನೆಗೆ ಊಟಕ್ಕೆ ಕರೆದುಕೊಂಡು ಹೋಗಿದ್ದ ಬಹಳ ಚೆನ್ನಾಗಿ ಅಡುಗೆ ಮಾಡಿದ್ದ ಎಂದರಂತೆ. ಆಗ ಅಣ್ಣಾವ್ರು, ಬಾಲಣ್ಣನಿಗೆ ಬೋಟಿ ಅಂದರೆ ಬಹಳ ಇಷ್ಟ ಮಾಡಿಕೊಂಡು ಬಾ ಅಂದರಂತೆ. ಅದರಂತೆ ಚಂದ್ರು ಬೋಟಿ ಮಾಡಿಕೊಂಡು ಹೋಗಿದ್ದರಂತೆ ಅದನ್ನು ಸವಿದ ಬಾಲಣ್ಣ ಹಾಗೂ ಅಣ್ಣಾವ್ರು ಇಬ್ಬರೂ ಬಹಳ ಮೆಚ್ಚಿದರಂತೆ. ಆಗಲೇ ಅಂತೆ ಚಂದ್ರುಗೆ ಅನಿಸಿದ್ದು ನಾನು ಚೆನ್ನಾಗಿ ಅಡುಗೆ ಮಾಡಬಲ್ಲೆ ಎಂದು.
ಚಂದ್ರು ಅವರಿಗೆ ನಲವತ್ತು ವರ್ಷಗಳಿಂದಲೂ ದೊಡ್ಮನೆಯೊಟ್ಟಿಗೆ ನಂಟು ಇದೆ. ಪುನೀತ್ ರಾಜ್ಕುಮಾರ್ ಅವರೊಟ್ಟಿಗೆ ಆಪ್ತ ಬಂಧವೇ ಚಂದ್ರುಗೆ ಇತ್ತು. ಪುನೀತ್ ಅವರು ಆಗಾಗ್ಗೆ ಚಂದ್ರುಗೆ ಕಾಲ್ ಮಾಡಿ ರೆಸಿಪಿಗಳನ್ನು ಕೇಳುತ್ತಿದ್ದರು. ಚಂದ್ರು, ಅಪ್ಪು ಅವರಿಗೆ ತಮ್ಮ ಅಡುಗೆ ವಿಡಿಯೋಗಳನ್ನು ಕಳಿಸುತ್ತಿದ್ದರಂತೆ. ಪುನೀತ್ ಅವರು ಕಾಶ್ಮೀರದಿಂದ ಚಂದ್ರುಗೆ ಕರೆ ಮಾಡಿ ರೆಸಿಪಿ ಕೇಳಿ ಪಡೆದಿದ್ದ ಆಡಿಯೋ ಒಂದು ಸಹ ಈ ಹಿಂದೆ ವೈರಲ್ ಆಗಿತ್ತು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ