‘ಟನಲ್ ರೋಡ್ ಬಿಡಿ ಸ್ವಾಮಿ, ಪಾಲಿಕೆ ಶಿಕ್ಷಕರಿಗೆ ಮೊದಲು ಸಂಬಳ ಕೊಡಿ’: ಡಿಕೆ ಶಿವಕುಮಾರ್ ಕಾಲೆಳೆದ ಆರ್ ಅಶೋಕ್‌

ಗ್ರೇಟರ್ ಬೆಂಗಳೂರು ಪ್ರಾಧಿಕಾರ ವ್ಯಾಪ್ತಿಯ ಶಾಲಾ ಕಾಲೇಜುಗಳ ಶಿಕ್ಷಕರು ನಾಲ್ಕು ತಿಂಗಳಿಂದ ಸಂಬಳವಿಲ್ಲದೆ ಪರದಾಡುತ್ತಿದ್ದಾರೆ. ಜಿಬಿಎ ತಾಂತ್ರಿಕ ಅಸಮರ್ಪಕತೆಯಿಂದ ವೇತನ ಬಿಡುಗಡೆ ಆಗದೆ ಶಿಕ್ಷಕರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಡಿಕೆ ಶಿವಕುಮಾರ್ ಅವರನ್ನು ಟೀಕಿಸಿ, "ಟನಲ್ ರೋಡ್ ಬಿಡಿ ಸ್ವಾಮಿ, ಶಿಕ್ಷಕರಿಗೆ ಮೊದಲು ಸಂಬಳ ಕೊಡಿ" ಎಂದು ಟ್ವೀಟ್ ಮಾಡಿದ್ದಾರೆ.

‘ಟನಲ್ ರೋಡ್ ಬಿಡಿ ಸ್ವಾಮಿ, ಪಾಲಿಕೆ ಶಿಕ್ಷಕರಿಗೆ ಮೊದಲು ಸಂಬಳ ಕೊಡಿ’: ಡಿಕೆ ಶಿವಕುಮಾರ್ ಕಾಲೆಳೆದ ಆರ್ ಅಶೋಕ್‌
ಪಾಲಿಕೆ ಶಿಕ್ಷಕರಿಗೆ 4 ತಿಂಗಳ ಸಂಬಳ ಬಾಕಿ; ಟ್ವಿಟರ್ನಲ್ಲಿ ಡಿಕೆ ಶಿವಕುಮಾರ್ ಕಾಲೆಳೆದ ಆರ್ ಅಶೋಕ್‌

Updated on: Oct 28, 2025 | 11:01 AM

ಬೆಂಗಳೂರು,ಅಕ್ಟೋಬರ್ 28: ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ವ್ಯಾಪ್ತಿಯ ಶಾಲಾ ಕಾಲೇಜುಗಳ ಶಿಕ್ಷಕರಿಗೆ ಕಳೆದ ನಾಲ್ಕು ತಿಂಗಳುಗಳಿಂದ ವೇತನ ನೀಡಿಲ್ಲ ಎಂಬುದು ಕೇಳಿಬಂದಿದೆ. ಈ ಕುರಿತು ಟ್ವೀಟ್ ಮಾಡಿರುವ ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್ ಅಶೋಕ್, ‘ಟನಲ್ ರೋಡ್ ಬಿಡಿ ಸ್ವಾಮಿ, ಪಾಲಿಕೆ ಶಿಕ್ಷಕರಿಗೆ ಮೊದಲು ಸಂಬಳ ಕೊಡಿ’ ಎಂದು ಡಿಕೆ ಶಿವಕುಮಾರ್​ಗೆ ಟಾಂಗ್ ಕೊಟ್ಟಿದ್ದಾರೆ.

ಆರ್ ಅಶೋಕ್ ಟ್ವೀಟ್​ನಲ್ಲೇನಿದೆ?

ಪಾಲಿಕೆ ಶಾಲೆಗಳಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಅಗತ್ಯ ಶಿಕ್ಷಕರ ವ್ಯವಸ್ಥೆ ಮಾಡುತ್ತೇವೆಂದೂ, ಅತಿಥಿ ಶಿಕ್ಷಕ/ಉಪನ್ಯಾಸಕರಿಗೆ ನಿಗದಿತ ವೇತನ ನೀಡುತ್ತೇವೆಂದೂ ಡಿಸಿಎಂ ಶಿವಕುಮಾರ್ ಭರವಸೆ ನೀಡಿದ್ದರು. ಈ ಭರವಸೆಗಳು ಕಾರ್ಯರೂಪಕ್ಕೆ ಬರದ ಕಾರಣ ಟ್ವೀಟ್ ಮಾಡಿರುವ ಆರ್ ಅಶೋಕ್, ‘ಟನಲ್ ರೋಡ್ ಬಿಡಿ ಸ್ವಾಮಿ, ಪಾಲಿಕೆ ಶಿಕ್ಷಕರಿಗೆ ಮೊದಲು ಸಂಬಳ ಕೊಡಿ. ಸುರಂಗ ರಸ್ತೆ ಮಾಡುತ್ತೇನೆ, ಸ್ಕೈ ಡೆಕ್ ಮಾಡುತ್ತೇನೆ, ಬ್ರ್ಯಾಂಡ್ ಬೆಂಗಳೂರು ಮಾಡುತ್ತೇನೆ, ಜಿಬಿಎ ಮಾಡುತ್ತೇನೆ ಎಂದು ಬರೀ ಓಳು ಬಿಟ್ಟು ಕನ್ನಡಿಗರಿಗೆ ಚೊಂಬು ಕೊಟ್ಟಿದ್ದೇ ನಿಮ್ಮ ಸಾಧನೆ. ನಿಮ್ಮ ಜಿಬಿಎ ಅವ್ಯವಸ್ಥೆಯಿಂದ ಪಾಲಿಕೆ ಶಿಕ್ಷಕರು ಕಳೆದ 4 ತಿಂಗಳಿಂದ ಸಂಬಳವಿಲ್ಲದೆ ಸಂಸಾರ ತೂಗಿಸಲು ಪರದಾಡುತ್ತಿದ್ದಾರೆ. ಮೊದಲು ಅವರಿಗೆ ಬಾಕಿ ವೇತನ ಬಿಡುಗಡೆ ಮಾಡಿ ಶಿಕ್ಷಕರ ಸಮಸ್ಯೆ ಬಗೆಹರಿಸಿ.’ ಎಂದು ಡಿಕೆ ಶಿವಕುಮಾರರನ್ನು ಟ್ಯಾಗ್ ಮಾಡಿ ವ್ಯಂಗ್ಯವಾಗಿ ಬರೆದುಕೊಂಡಿದ್ದಾರೆ.

ವೇತನ ಸಿಗದೇ ಶಿಕ್ಷಕರ ಪರದಾಟ

ಶಾಲೆಗಳು ಬಿಎಂಪಿ ಅಸ್ತಿತ್ವದಲ್ಲಿದ್ದಾಗ ಗುತ್ತಿಗೆ ಶಿಕ್ಷಕರಿಗೆ ಪ್ರತಿ ತಿಂಗಳೂ ಗೌರವಧನ ನೀಡಲಾಗುತ್ತಿತ್ತು. ಈಗ ಜಿಬಿಎ ಅಸ್ತಿತ್ವಕ್ಕೆ ಬಂದಿರುವುದರಿಂದ ಶಾಲೆ- ಕಾಲೇಜುಗಳನ್ನು ಆಯಾ ಕಾರ್ಪೋರೇಷನ್‌ಗಳ ಸುಪರ್ದಿಗೆ ವಹಿಸಿಲ್ಲ. ತಾಂತ್ರಿಕ ನೆಪವೊಡ್ಡಿ ಕಡತ ವಿಲೇ ಮಾಡದ ಕಾರಣ ಶಿಕ್ಷಕರಿಗೆ ವೇತನ ಬಿಡುಗಡೆ ಆಗುತ್ತಿಲ್ಲ ಎಂಬ ದೂರು ಕೇಳಿಬಂದಿದೆ. ಶಿಕ್ಷಕರಿಗೆ 5 ಲಕ್ಷ ರೂ. ಮೊತ್ತದ ಆರೋಗ್ಯ ವಿಮೆ ಸೌಲಭ್ಯ ಒದಗಿಸುವುದಾಗಿ ಡಿಸಿಎಂ ಶಿವಕುಮಾರ್ ಭರವಸೆ ನೀಡಿದ್ದರು. ಮಹಿಳಾ ಶಿಕ್ಷಕರಿಗೆ ಹೆರಿಗೆ ರಜೆ ಕೂಡ ಸಿಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 10:31 am, Tue, 28 October 25