ಯತ್ನಾಳ್​-ರಾಜ್ಯ ಸರ್ಕಾರ ಗುದ್ದಾಟ: ಕಬ್ಬಿನ ರಸದಿಂದ ಎಥೆನಾಲ್​ ಉತ್ಪಾದನೆಗೆ ಕೇಂದ್ರ ಅನುಮತಿ

| Updated By: ವಿವೇಕ ಬಿರಾದಾರ

Updated on: Aug 30, 2024 | 2:59 PM

ಕಲಬುರಗಿಯ ಚಿಂಚೋಳಿಯಲ್ಲಿರುವ ಸಿದ್ಧಸಿರಿ ಸಕ್ಕರೆ ಹಾಗೂ ಎಥೆನಾಲ್ ಉತ್ಪಾದನಾ ಕಾರ್ಖಾನೆ ಪುನರಾರಂಭ ವಿಚಾರವಾಗಿ ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಮತ್ತು ರಾಜ್ಯ ಸರ್ಕಾರದ ನಡುವೆ ಗುದ್ದಾಟ ನಡೆಯುತ್ತಿದೆ. ಇದರ ಮಧ್ಯೆ ಕೇಂದ್ರ ಸರ್ಕಾರ ಕಬ್ಬಿನ ರಸದಿಂದ ಎಥೆನಾಲ್​​ ಉತ್ಪಾದನೆಗೆ ಅನುಮತಿ ನೀಡಿದೆ.

ಯತ್ನಾಳ್​-ರಾಜ್ಯ ಸರ್ಕಾರ ಗುದ್ದಾಟ: ಕಬ್ಬಿನ ರಸದಿಂದ ಎಥೆನಾಲ್​ ಉತ್ಪಾದನೆಗೆ ಕೇಂದ್ರ ಅನುಮತಿ
Follow us on

ನವದೆಹಲಿ/ಕಲಬುರಗಿ, ಆಗಸ್ಟ್​ 30: ವಿಜಯಪುರದ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್ (Basangouda Patil Yatnal)​ ಒಡೆತನದ ಸಿದ್ಧಸಿರಿ ಸಕ್ಕರೆ ಹಾಗೂ ಎಥೆನಾಲ್ ಉತ್ಪಾದನಾ ಕಾರ್ಖಾನೆಯನ್ನು (Siddhasiri Sugar and Ethanol Factory) ರಾಜ್ಯ ಸರ್ಕಾರ (Karnataka Government) ಮುಚ್ಚಿಸಿದ್ದು, ನ್ಯಾಯಾಲಯದ ಆದೇಶದ ನಂತರವೂ ಪುನರಾರಂಭಕ್ಕೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಈವರೆಗೂ ಅನುಮತಿ ನೀಡಿಲ್ಲ. ಈ ವಿಚಾರವಾಗಿ ಬಸನಗೌಡ ಪಾಟೀಲ್​ ಯತ್ನಾಳ್​ ಮತ್ತು ರಾಜ್ಯ ಸರ್ಕಾರದ ನಡುವೆ ಗುದ್ದಾಟ ನಡೆದಿದೆ. ಈ ನಡುವೆ ಕೇಂದ್ರ ಸರ್ಕಾರ ಮಹತ್ವದ ಆದೇಶ ಹೊರಡಿಸಿದ್ದು, ಬಸನಗೌಡ ಪಾಟೀಲ್​ ಯತ್ನಾಳ್​ ಅವರಿಗೆ ಬಂಪರ್​ ಗಿಫ್ಟ್​ ಸಿಕ್ಕಿದೆ.

ಕಬ್ಬಿನ ರಸದಿಂದ ಎಥೆನಾಲ್ ಉತ್ಪಾದನೆಗೆ ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಕಬ್ಬಿನ ರಸದಿಂದ ಸಕ್ಕರೆ ಕಾರ್ಖಾನೆ ಮಾಲೀಕರು ಕೇಂದ್ರ ಸರ್ಕಾರದ ಮುಂದೆ ಬೇಡಿಕೆ ಇಟ್ಟಿದ್ದರು ಆದರೆ, ಸಕ್ಕರೆ ಕೊರತೆಯಿಂದಾಗಿ ಎಥೆನಾಲ್ ಉತ್ಪಾದನೆಗೆ ತಡೆ ನೀಡಲಾಗಿತ್ತು. ಆದರೆ, ಇದೀಗ ಕಬ್ಬಿನ ರಸದಿಂದ ಎಥೆನಾಲ್​ ಉತ್ಪಾದನೆಗೆ ಕೇಂದ್ರ ಆಹಾರ ಸಚಿವಾಲಯ ಅನುಮತಿ ನೀಡಿದೆ. ಈ ಮೂಲಕ ಎಥನಾಲ್​ ಉತ್ಪಾದನೆಗೆ ಸಕ್ಕರೆ ಕಾರ್ಖಾನೆ ಮಾಲಿಕರಿಗೆ ಗ್ರೀನ್​ ಸಿಗ್ನಲ್​ ಸಿಕ್ಕಿದೆ. ಕೇಂದ್ರ ಸರ್ಕಾರ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಅವರಿಗೆ ಸಿಹಿ ಸುದ್ದಿ ನೀಡಿದೆ.

ಇದನ್ನೂ ಓದಿ: ಬಸನಗೌಡ ಪಾಟೀಲ್ ಯತ್ನಾಳ್​ಗೆ ಸಿಎಂ ಸಿದ್ದರಾಮಯ್ಯ ಕರೆ: ಪ್ರತಿಭಟನೆ ಕೈಬಿಡಲು ಮನವಿ

ರಾಜ್ಯ ಸರ್ಕಾರ-ಯತ್ನಾಳ್​ ಗುದ್ದಾಟ

ಕಲಬುರಗಿ ಜಿಲ್ಲೆಯ ಚಿಂಚೋಳಿಯಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​​ ಯತ್ನಾಳ್ ಒಡೆತನದ ಸಿದ್ಧಸಿರಿ ಸಕ್ಕರೆ ಹಾಗೂ ಎಥನಾಲ್​ ಉತ್ಪಾದನೆ ಕಾರ್ಖಾನೆ ಇದೆ. ಈ ಕಾರ್ಖಾನೆಯನ್ನು ನಾಲ್ಕು ತಿಂಗಳ ಹಿಂದೆ, ಪೂರ್ವಾನುಮತಿ ಇಲ್ಲದೆ ಕಾರ್ಖಾನೆ ಮತ್ತು ಲಕ್ಷಾಂತರ ಟನ್​ ಕಬ್ಬು ನುರಿಸಿ ಎಥನಾಲ್ ಉತ್ಪಾದಿಸಿರುವುದಲ್ಲದೇ ನದಿಗೆ ತ್ಯಾಜ್ಯ ಹರಿಯಬಿಟ್ಟಿರುವ ಆರೋಪ ಮಾಡಿ, ಜಲ ಕಾಯಿದೆ ಮತ್ತು ಪರಿಸರ ಸಂರಕ್ಷಣಾ ಕಾಯಿದೆ ಉಲ್ಲಂಘನೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಬಂದ್​ ಮಾಡಿಸಿದೆ.

ಮಂಡಳಿ ಬಂದ್​ ಮಾಡಿಸಿದ ಬಳಿಕ, ಬಸನಗೌಡ ಪಾಟೀಲ್​ ಯತ್ನಾಳ್​ ಅವರು ಹೈಕೋರ್ಟ್​ ಮೆಟ್ಟಿಲೇರಿದರು. ಹೈಕೋರ್ಟ್​​ ಸಿದ್ಧಸಿರಿ ಕಾರ್ಖಾನೆ ಪುನರಾರಂಭಕ್ಕೆ ಅನುಮತಿ ನೀಡುವಂತೆ ಸರ್ಕಾರಕ್ಕೆ ಸೂಚನೆ ನೀಡಿದತು. ಸೂಚನೆ ನೀಡಿದ ಬಳಿಕವೂ ಮಾಲಿನ್ಯ ನಿಯಂತ್ರಣ ಮಂಡಳಿ ಈವರೆಗೆ ಅನುಮತಿ ನೀಡಿಲ್ಲ. ಹೀಗಾಗಿ, ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​​ ಮಂಗಳವಾರ ರಾತ್ರಿವಿಡಿ ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿಯಲ್ಲಿ ಧರಣಿ ನಡೆಸಿದ್ದರು.

ಚಿಂಚೋಳಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ

ಸಿದ್ದಸಿರಿ ಕಾರ್ಖಾನೆಗೆ ಅನುಮತಿ ನೀಡದ ಸರ್ಕಾರದ ವಿರುದ್ಧ ರೈತ ಸಂಘಟನೆಗಳು ಹಾಗೂ ಬಿಜೆಪಿ ಚಿಂಚೋಳಿಯ ಅಂಬೇಡ್ಕರ್ ವೃತ್ತದಿಂದ ಬಸವವೇಶ್ವರ್ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದವು. ಮಾಲೀಕರು ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ಪ್ರತಿಭಟನೆಗೆ ಸಾಥ್ ನೀಡಿದರು. ಸಾವಿರಾರು ರೈತರು ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ