ಯತ್ನಾಳ್​ ಬೆಂಬಲಕ್ಕೆ ನಿಂತ ವಿಜಯೇಂದ್ರ, ಹೈಕಮಾಂಡ್​ ಹೇಳಿದಂತೆ ರಾಜೀಗೆ ಮುಂದಾದ್ರಾ ರಾಜ್ಯಾಧ್ಯಕ್ಷ?

ಕರ್ನಾಟಕ ರಾಜ್ಯ ಬಿಜೆಪಿಯ ಬಣ ರಾಜಕೀಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಒಂದು ಕಡೆ ವಿಜಯೇಂದ್ರ ಬಣ ಮತ್ತೊಂದೆಡೆ ಸಮಾನ ಮನಸ್ಕರರು ಎನ್ನುವ ಬಣ ನಡುವೆ ಶೀತಲ ಸಮರ ನಡೆಯುತ್ತಲೇ ಇದೆ. ಅದರಲ್ಲೂ ಬಸನಗೌಡ ಪಾಟೀಲ್ ಯತ್ನಾಳ್​ ಮತ್ತು ಯಡಿಯೂರಪ್ಪ ಕುಟುಂಬದ ಹಾವು ಮುಂಗುಸಿ ಇದ್ದಂತೆ. ಹೋದ ಕಡೆಗಳಲ್ಲಿ ಯಡಿಯೂರಪ್ಪ ಕುಟುಂಬದ ವಿರುದ್ಧ ಯತ್ನಾಲ್ ಬಹಿರಂಗವಾಗಿಯೇ ಮಾತನಾಡುತ್ತಾರೆ. ಹೀಗಿರುವಾಗ ಖುದ್ದು ವಿಜಯೇಂದ್ರ ಅವರೇ ಯತ್ನಾಳ್​ ಪರ ಧ್ವನಿ ಎತ್ತಿದ್ದಾರೆ. ಇದು ಅಚ್ಚರಿಗೆ ಕಾರಣವಾಗಿದೆ. ಇದು ಬೇರೆ ರೀತಿಯ ಚರ್ಚೆಗೆ ಗ್ರಾಸವಾಗಿದೆ.

ಯತ್ನಾಳ್​ ಬೆಂಬಲಕ್ಕೆ ನಿಂತ ವಿಜಯೇಂದ್ರ, ಹೈಕಮಾಂಡ್​ ಹೇಳಿದಂತೆ ರಾಜೀಗೆ ಮುಂದಾದ್ರಾ ರಾಜ್ಯಾಧ್ಯಕ್ಷ?
ಯತ್ನಾಳ್, ವಿಜಯೇಂದ್ರ
Follow us
ರಮೇಶ್ ಬಿ. ಜವಳಗೇರಾ
|

Updated on: Aug 28, 2024 | 5:54 PM

ಬೆಂಗಳೂರು, (ಆಗಸ್ಟ್ 28): ಸಕ್ಕರೆ ಕಾರ್ಖಾನೆ ಆರಂಭಿಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡದ್ದಕ್ಕೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್​ ಯತ್ನಾಳ್​ ಪ್ರತಿಭಟನೆ ನಡೆಸಿದ್ದಾರೆ. ಇದಕ್ಕೆ ಅಚ್ಚರಿ ಎಂಬಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ವಿಜಯೇಂದ್ರ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸುತ್ತಿರುವ ಕ್ರಮ ನ್ಯಾಯೋಚಿತ. ಸರ್ಕಾರ ಕ್ರಮ ಕೈಗೊಳ್ಳದಿದ್ರೆ ಕಾರ್ಖಾನೆ ವಿಷಯದಲ್ಲೂ ದ್ವೇಷದ ರಾಜಕಾರಣ ಎಂಬ ನಿರ್ಧಾರಕ್ಕೆ ಬರಬೇಕಾಗುತ್ತೆ ಎಂದು ಟ್ವೀಟ್ ಮಾಡಿದ್ದಾರೆ. ಈ ಮೂಲಕ ವಿಜಯೇಂದ್ರ ಯತ್ನಾಳ್​ ಬೆಂಬಲಕ್ಕೆ ನಿಂತಿರುವುದು ಅಚ್ಚರಿ ಮೂಡಿಸಿದೆ. ಹಾಗಾದ್ರೆ, ಹೈಕಮಾಂಡ್ ಸಲಹೆಯಂತೆ ವಿಜಯೇಂದ್ರ ರಾಜೀ ಆಗಿದ್ದಾರೆ ಎನ್ನುವ ಚರ್ಚೆ ಶುರುವಾಗಿದೆ.

ನ್ಯಾಯಾಲಯದ ಆದೇಶದ ನಂತರವೂ ಸಕ್ಕರೆ ಕಾರ್ಖಾನೆಯನ್ನು ಪುನಾರಂಭಿಸಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅನುಮತಿ ನೀಡದೇ ಇರುವುದರ ವಿರುದ್ಧ ಯತ್ನಾಳ್ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾ ಸ್ಥಳಕ್ಕೆ ಪ್ರತಿಪಕ್ಷ ನಾಯಕ ಆರ್​ ಅಶೋಕ್ ಕೂಡ ಭೇಟಿ ನೀಡಿ ಬೆಂಬಲ ನೀಡಿದ್ದರು. ಈಗ ರಾಜ್ಯಾಧ್ಯಕ್ಷ ವಿಜಯೇಂದ್ರ ಸಹ ಟ್ವೀಟ್​ ಮೂಲಕ ಯತ್ನಾಳ್​ ಪರ ನಿಂತಿದ್ದು ಅಚ್ಚರಿಗೆ ಕಾರಣವಾಗಿದೆ. ಯಾಕಂದ್ರೆ ಯತ್ನಾಳ್, ಬಿಎಸ್​ವೈ ಕುಟುಂಬ ಒಂದು ರೀತಿ ಹಾವು ಮುಂಗುಸಿ ಇದ್ದಂತೆ,  ಯತ್ನಾಳ್​ ಹೋದ ಕಡೆಗಳಲ್ಲಿ ಬಿಎಸ್​ವೈ ಕುಟುಂಬವನ್ನು ಬಹಿರಂಗವಾಗಿಯೇ ಟೀಕಿಸಿಕೊಂಡು ಬಂದಿದ್ದಾರೆ.

ಇದನ್ನೂ ಓದಿ: ಬಸನಗೌಡ ಪಾಟೀಲ್ ಯತ್ನಾಳ್​ಗೆ ಸಿಎಂ ಸಿದ್ದರಾಮಯ್ಯ ಕರೆ: ಪ್ರತಿಭಟನೆ ಕೈಬಿಡಲು ಮನವಿ

ಅದರಲ್ಲೂ ಬಿಎಸ್​ವೈ ಪುತ್ರ ಬಿವೈ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಮಾಡಿದ್ದಕ್ಕಂತೂ ಯತ್ನಾಳ್ ಇನ್ನಷ್ಟು ಸಿಡಿದೆದ್ದು, ವಿಜಯೇಂದ್ರ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ. ಹೀಗಿರುವಾಗ ಇದೀಗ ವಿಜಯೇಂದ್ರ ಏಕಾಏಕಿ ಯತ್ನಾಳ್​ ಪರ ನಿಂತಿರುವುದು ಚರ್ಚೆಗೆ ಗ್ರಾಸವಾಗಿದೆ.

ಯತ್ನಾಳ್​ ಪರ ವಿಜಯೇಂದ್ರ ಮಾಡಿರುವ ಟ್ವೀಟ್​ನಲ್ಲೇನಿದೆ?

ನ್ಯಾಯಾಲಯದ ಆದೇಶವಿದ್ದರೂ ಸಕ್ಕರೆ ಕಾರ್ಖಾನೆ ತೆರೆಯಲು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಅನುವು ಮಾಡಿಕೊಡದೆ ಉಪಟಳ ನೀಡುತ್ತಿರುವುದನ್ನು ಖಂಡಿಸಿ ಕಾರ್ಖಾನೆಯ ಅಧ್ಯಕ್ಷರು ಹಾಗೂ ಪಕ್ಷದ ಹಿರಿಯ ಶಾಸಕರೂ ಆದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಪ್ರಶ್ನಿಸುತ್ತಿರುವ ಕ್ರಮ ನ್ಯಾಯೋಚಿತವಾಗಿದ್ದು, ಸರ್ಕಾರ ಈ ಕೂಡಲೇ ಮಧ್ಯಪ್ರವೇಶಿಸಿ ಕಾರ್ಖಾನೆ ಆರಂಭಕ್ಕೆ ತೊಂದರೆ ಉಂಟಾಗದಂತೆ ಕ್ರಮವಹಿಸಲಿ.

ಸಾವಿರಾರು ರೈತರು, ನೂರಾರು ಕಾರ್ಮಿಕರ ಬದುಕಿನ ಪ್ರಶ್ನೆಯಾಗಿರುವ ಹಾಗೂ ಉತ್ಪನ್ನ ಕ್ಷೇತ್ರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಸರ್ಕಾರ ಕೂಡಲೇ ಜರೂರು ಕ್ರಮ ಕೈಗೊಳ್ಳದೇ ಹೋದರೆ ಕಾರ್ಖಾನೆಯ ವಿಷಯದಲ್ಲೂ ದ್ವೇಷದ ರಾಜಕಾರಣ ಮಾಡುತ್ತಿದೆ ಎಂಬ ನಿರ್ಧಾರಕ್ಕೆ ಬರಬೇಕಾಗುತ್ತದೆ. ನ್ಯಾಯಾಲಯದ ಆದೇಶ ಪಾಲಿಸದ ಮಾಲಿನ್ಯ ನಿಯಂತ್ರಣ ಮಂಡಳಿಯ ನಡೆಯನ್ನು ಖಂಡಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಹೈಕಮಾಂಡ್​ ಸಲಹೆಯಂತೆ ರಾಜಿಯಾದರೇ ವಿಜಯೇಂದ್ರ?

ಯಡಿಯೂರಪ್ಪ ಮತ್ತು ಅವರ ವಿರುದ್ಧದ ಬಣಗಳಿಂದ ಹೈಕಮಾಂಡ್​ ಬಳಿ ದೂರುಗಳು ಹೋಗಿವೆ. ಅದರಲ್ಲೂ ಪ್ರಮುಖವಾಗಿ ಯತ್ನಾಳ್​ ಬಹಿರಂಗ ಹೇಳಿಕೆ ಕಡಿವಾಣ ಹಾಕುಬೇಕೆಂದು ಹೈಕಮಾಂಡ್​ಗೆ ಹಲವು ರಾಜ್ಯ ನಾಯಕರು ದೂರು ನೀಡಿದ್ದಾರೆ. ಆದರೂ ಸಹ ಹೈಕಮಾಂಡ್ ಯತ್ನಾಳ್ ವಿರುದ್ಧ ಯಾವುದೇ ಕ್ರಮಕೈಗೊಂಡಿಲ್ಲ. ಇನ್ನು ಈ ವಿಚಾರವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರು ಒಂದು ಬಾರಿ ವಿಜಯೇಂದ್ರ ಅವರನ್ನು ಕರೆದು ಯತ್ನಾಳ್ ಅವರೊಂದಿಗೆ ರಾಜಿ ಮಾಡಿಕೊಂಡು ಹೋಗಿ ಎನ್ನುವ ಸಲಹೆಗಳನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ. ಇದರ ಮಧ್ಯ ಇದೀಗ ಸಕ್ಕರೆ ಕಾರ್ಖಾನೆ ವಿಚಾರವಾಗಿ ಬಸನಗೌಡ ಪಾಟೀಲ್​ ಯತ್ನಾಳ್​ ಪರವಾಗಿ ವಿಜಯೇಂದ್ರ ಧ್ವನಿ ಎತ್ತಿರುವುದು ಇದಕ್ಕೆ ಪುಷ್ಠಿ ನೀಡಿದಂತಿದೆ.

ಯತ್ನಾಳ್​ ಜತೆ ರಾಜಿಗೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದ ನಡ್ಡಾ?

ಕರ್ನಾಟಕ ರಾಜ್ಯ ಬಿಜೆಪಿಯ ಬಣ ರಾಜಕೀಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ನಡುವೆಯೇ ನಡ್ಡಾ ಆಡಿದ ಮಾತು ವಿಜಯೇಂದ್ರ ಅವರ ತಲೆನೋವಿಗೆ ಕಾರಣವಾಗಿದೆಯಂತೆ. ಅದೆಂದರೆ ಬಸವನಗೌಡ ಪಾಟೀಲ್ ಯತ್ನಾಳ್ ಜತೆ ರಾಜಿಗೆ ಸಿದ್ಧರಾಗಿ ಎಂಬುದು. ಕೆಲ ದಿನಗಳ ಹಿಂದೆ ದಿಲ್ಲಿಗೆ ಹೋಗಿದ್ದ ವಿಜಯೇಂದ್ರ, ತಮ್ಮ ವಿರುದ್ಧ ಆರೋಪ ಮಾಡುತ್ತಿರುವ ಯತ್ನಾಳ್ ವಿರುದ್ಧ ದೂರು ಕೊಟ್ಟಿದ್ದರು. ಪದೇ ಪದೇ ನಮ್ಮ ವಿರುದ್ಧ ಆರೋಪ ಮಾಡುತ್ತಿರುವ ಯತ್ನಾಳ್ ಅವರಿಂದ ಮುಜುಗರ ಅನುಭವಿಸಬೇಕಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅಧ್ಯಕ್ಷನಾಗಿ ಕೆಲಸ ಮಾಡುವುದು ಹೇಗೆ? ಹೀಗಾಗಿ ಯತ್ನಾಳ್ ಅವರನ್ನು ಮೊದಲು ಸಸ್ಪೆಂಡ್ ಮಾಡಿ ಎಂದು ನಡ್ಡಾ ಅವರನ್ನು ಒತ್ತಾಯಿಸಿದ್ದರು. ಆಗ ವಿಜಯೇಂದ್ರ ಅವರನ್ನು ಸಮಾಧಾನಿಸಿದ ನಡ್ಡಾ, ಆಗಸ್ಟ್ ಅಂತ್ಯದವರೆಗೆ ನೋಡೋಣ.ಆಮೇಲೆ ಸಸ್ಪೆಂಡ್ ಮಾಡೋಣ ಎಂದು ಭರವಸೆ ನೀಡಿದ್ದರು. ಯಾವಾಗ ಅವರು ಈ ಭರವಸೆ ನೀಡಿದರೋ? ಆಗ ಖುಷಿಯಿಂದ ರಾಜ್ಯಕ್ಕೆ ಮರಳಿದ್ದ ವಿಜಯೇಂದ್ರ ತಮ್ಮ ಬೆಂಬಲಿಗರ ಪಡೆಗೂ ಇದನ್ನೇ ಹೇಳಿದ್ದರು ಎಂದು ತಿಳಿದುಬಂದಿದೆ.

ಈ ಯತ್ನಾಳ್ ಅವರದು ಜಾಸ್ತಿ ಆಯ್ತು ಸಾರ್. ಒಂದು ಪ್ರೆಸ್‌ ಮೀಟ್ ಮಾಡಿ ಜಾಡಿಸಿ ಬಿಡುತ್ತೇವೆ ಎಂದು ಕೆಲ ಬೆಂಬಲಿಗರು ತಮ್ಮ ಬಳಿ ಬಂದಾಗ,ನೋ,ನೋ ಅದರಿಂದ ಉಪಯೋಗವಿಲ್ಲ.ಹೀಗಾಗಿ ಸುಮ್ಮನಿರಿ.ಆಗಸ್ಟ್ ಅಂತ್ಯದ ವೇಳೆಗೆ ಯತ್ನಾಳ್ ಸಸ್ಪೆಂಡ್ ಆಗ್ತಾರೆ ಅಂತ ವಿಜಯೇಂದ್ರ ಮತ್ತು ಯಡಿಯೂರಪ್ಪ ಹೇಳಿದ್ದರು. ಆದರೆ ಮೊನ್ನೆ ಇದ್ದಕ್ಕಿದ್ದಂತೆ ಫೋನು ಮಾಡಿದ ನಡ್ಡಾ ಅವರು ಒಂದು ಸಲ ದಿಲ್ಲಿಗೆ ಬನ್ನಿ.ಯತ್ನಾಳ್ ಮತ್ತು ನಿಮ್ಮ ಮಧ್ಯೆ ರಾಜಿ ಮಾಡಿಸುತ್ತೇವೆ. ಯಾಕೆಂದರೆ ಇವತ್ತಿನ ಸಂದರ್ಭದಲ್ಲಿ ಎಲ್ಲರೂ ಒಗ್ಗೂಡಿ ಹೋಗುವುದು ಮುಖ್ಯ ಎಂದರಂತೆ.

ಆದರೆ ನಡ್ಡಾ ಅವರ ಮಾತನ್ನು ಕೇಳಿದ ವಿಜಯೇಂದ್ರ, ಅದ್ಹೇಗೆ ಸಾರ್ ರಾಜಿ ಮಾಡಿಕೊಳ್ಳುವುದು? ನಮ್ಮ ವಿರುದ್ದ ಭ್ರಷ್ಟಾಚಾರದ ಆರೋಪ ಮಾಡಿ, ಪದೇ ಪದೇ ನಮ್ಮನ್ನು ಮುಜುಗರಕ್ಕೆ ಸಿಲುಕಿಸಿದವರ ಜತೆ ಹೇಗೆ ರಾಜಿ ಮಾಡಿಕೊಳ್ಳಬೇಕು?ನೋ ಸಾರ್,ಯಾವ ಕಾರಣಕ್ಕೂ ಅವರ ಜತೆ ರಾಜಿ ಬೇಡ ಎಂದಿದ್ದಾರಂತೆ. ಆದ್ರೆ, ಇದೀಗ ಯತ್ನಾಳ್​ ಪರ ಧ್ವನಿ ಎತ್ತಿರುವುದು ನೋಡಿದರೆ ವಿಜಯೇಂದ್ರ, ಹೈಕಮಾಂಡ್ ಹೇಳಿದಂತೆ ರಾಜೀ ಸಂಧಾನಕ್ಕೆ ಮುಂದಾಗಿದ್ದಾರಾ ಎನ್ನು ಪ್ರಶ್ನೆಗಳು ಉದ್ಭವಿಸಿವೆ.

ಒಟ್ಟಿನಲ್ಲಿ ಸದ್ಯ ವಿಜಯೇಂದ್ರ ಯತ್ನಾಳ್​ಗೆ ಬೆಂಬಲ ಸೂಚಿಸಿರುವುದು ಪಕ್ಷದಲ್ಲಿ ಮಾತ್ರವಲ್ಲ ರಾಜ್ಯ ರಾಜಕಾರಣದಲ್ಲೂ ಸಂಚಲಕ್ಕೆ ಕಾರಣವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ