
ಬೆಂಗಳೂರು, (ಜುಲೈ 15): ಬಿಜೆಪಿ ರಾಷ್ಟ್ರೀಯ ಬಿಜೆಪಿ ಅಧ್ಯಕ್ಷರ ನೇಮಕ ಸಂಬಂಧ ರಾಜ್ಯಾಧ್ಯಕ್ಷರ ನೇಮಕಾತಿ ನಡೆಯುತ್ತಿದೆ. ಈಗಾಗಲೇ ಹಲವು ರಾಜ್ಯಗಳಿಗೆ ಬಿಜೆಪಿ ರಾಜಾಧ್ಯಕ್ಷರ ನೇಮಕವಾಗಿದೆ. ಆದ್ರೆ, ಕರ್ನಾಟಕದ ಕುರಿತಾಗಿ ನಿರ್ಧಾರ ಕೈಗೊಳ್ಳಲು ಹೈಕಮಾಂಡ್ ಹಿಂದೇಟು ಹಾಕುತ್ತಿದ್ದಾರೆ ಎಂಬುವುದೇ ಸಾಕಷ್ಟು ಕುತೂಹಲಕ್ಕೆ ಕಾರಣವಾಗುತ್ತಿದೆ. ಬಿವೈ ವಿಜಯೇಂದ್ರ ಅವರನ್ನು ಮುಂದುವರಿಸಬೇಕೋ ಬೇಡವೋ ಎಂಬುವುದು ನಿಗೂಢವಾಗಿದೆ. ಇದರ ನಡುವೆ ಇದೀಗ ಉಚ್ಛಾಟಿತ ಶಾಸಕ ಯತ್ನಾಳ್, ಶೀಘ್ರದಲ್ಲಿ ಕರ್ನಾಟಕದ ಜನತೆಗೆ ಶುಭಸುದ್ದಿ ಎಂದು ಫೇಸ್ ಬುಕ್ ನಲ್ಲಿ ಪೋಸ್ಟ್ ಮಾಡಿದ್ದು, ಈ ಪೋಸ್ಟ್ ಸಿಕ್ಕಾಪಟ್ಟೆ ವೈರಲ್ ಆಗಿದೆ, ಆದ್ರೆ ಇದನ್ನು ಫ್ಯಾಕ್ಟ್ ಚೆಕ್ ಮಾಡಿ ನೋಡಿದಾಗ ಯತ್ನಾಳ್ ಅವರ ಅಧಿಕೃತ ಖಾತೆ ಅಲ್ಲ. ಅವರ ಹೆಸರಿನಲ್ಲಿ ಬೇರೊಂದು fb ಖಾತೆಯಿಂದ ಪೋಸ್ಟ್ ಮಾಡಲಾಗಿದೆ.
ಬಸಮಗೌಡ ಪಾಟೀಲ್ ಯತ್ನಾಳ್ ಹೆಸರಿನ ಫೇಸ್ಬುಕ್ ಖಾತೆ 90 ಸಾವಿರ ಫಾಲೋವರ್ಸ್ ಹೊಂದಿದ್ದು, ಯತ್ನಾಳ್ ಅವರ ಪ್ರತಿಯೊಂದು ಕಾರ್ಯಚಟುವಟಿಕೆಗಳನ್ನು ಈ ಖಾತೆಯಲ್ಲಿ ಪೋಸ್ಟ್ ಆಗುತ್ತಿದೆ. ಯತ್ನಾಳ್ ಪ್ರತಿ ದಿನ ಯಾವೆಲ್ಲಾ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೋ ಅದರ ಅಪ್ಟೇಟ್ ನನ್ನು ಫೇಸ್ಬುಕ್ನಲ್ಲಿ ಹಂಚಿಕೊಳ್ಳುತ್ತದೆ.
ಬಿಜೆಪಿಯಿಂದ ಉಚ್ಚಾಟಿತರಾದ ಬಸವನಗೌಡ ಪಾಟೀಲ್ ಯತ್ನಾಳ್, ಪಕ್ಷದ ಶಿಸ್ತು ಉಲ್ಲಂಘನೆ ನಾಡುವುದಿಲ್ಲ ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದರು. ಈ ಮೂಲಕ ಪಕ್ಷದಿಂದ ಉಚ್ಚಾಟಿತರಾದ ಯತ್ನಾಳ್ ಅವರು ಮರಳಿ ಬಿಜೆಪಿ ಪಾಳಯಕ್ಕೆ ಮರಳಲು ಉತ್ಸುಕರಾಗಿದ್ದಾರೆ. ಆದರೆ ಯಡಿಯೂರಪ್ಪ ಗ್ಯಾಂಗನ್ನು ಕಂಡರೆ ಕುದಿಯುವ,ಎಗಾದಿಗಾ ಮಾತನಾಡುವ ಯತ್ನಾಳ್ ಇದ್ದಕ್ಕಿದ್ದಂತೆ ಧ್ವನಿ ಬದಲಿಸಿದ್ದಾರೆ. ಆದ್ರೆ, ವಿಜಯೇಂದ್ರ ಬದಲಾವಣೆಗೆ ಪಟ್ಟು ಹಿಡಿದಿದ್ದಾರೆ. ಯತ್ನಾಳ್ ಉಚ್ಛಾಟನೆವಾದರೂ ಸಹ ಅವರ ತಂಡದ ಇತರೆ ನಾಯಕರು ಸಹ ಸುಮ್ಮನೇ ಕುಳಿತಿಲ್ಲ. ರಾಜ್ಯಾಧ್ಯಕ್ಷ ಬದಲಾವಣೆ ಬಗ್ಗೆ ನಿರಂತರ ಹೋರಾಟ ನಡೆಸಿದ್ದು, ಕೆಲ ದಿನಗಳಿಂದ ಕರ್ನಾಟಕ ಬಿಜೆಪಿಯಲ್ಲಿನ ಕೆಲ ರಾಜಕೀಯ ಚಟುವಟಿಕೆಗಳು ಭಾರೀ ಸಂಚಲನಕ್ಕೆ ಕಾರಣವಾಗಿತ್ತು.
ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಆಯ್ಕೆ ಗೊಂದಲ ಜಟಿಲವಾಗುತ್ತಲೇ ಇದೆ. ಇತರ ರಾಜ್ಯಗಳ ಅಧ್ಯಕ್ಷರನ್ನು ವರಿಷ್ಠರು ಘೋಷಣೆ ಮಾಡುತ್ತಿದ್ದರು ಕರ್ನಾಟಕದಲ್ಲಿ ಯಾರಿಗೆ ಪಟ್ಟ ಎಂಬ ಕುರಿತಾಗಿ ಅವರಿಗೆ ಗಟ್ಟಿ ನಿರ್ಧಾರವನ್ನು ಕೈಗೊಳ್ಳಲು ಈ ಕ್ಷಣದ ವರೆಗೆ ಸಾಧ್ಯವಾಗುತ್ತಿಲ್ಲ. ಶೀಘ್ರದಲ್ಲೇ ಎಲ್ಲ ಗೊಂದಲಕ್ಕೆ ಪೂರ್ಣ ವಿರಾಮ ಬೀಳಲಿದೆ ಎಂಬ ನಿರೀಕ್ಷೆಯನ್ನು ಪಕ್ಷದ ಕೆಲವು ಮುಖಂಡರು ಹೊಂದಿದ್ದರು ಅದಕ್ಕೆ ಕಾಲ ಕೂಡಿ ಬರುತ್ತಿಲ್ಲ. ಅಧ್ಯಕ್ಷ ಸ್ಥಾನ ಯಾರಿಗೆ ಎಂಬುವುದು ಇಂದು, ನಾಳೆ ಘೋಷಣೆ ಆಗಲಿದೆ ಎಂಬ ಮಾತುಗಳಿಗೆ ಸೀಮಿತವಾಗಿದೆ.
ರಾಜ್ಯ ಬಿಜೆಪಿಯಲ್ಲಿ ಭಿನ್ನಮತೀಯ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿಲ್ಲ. ಯತ್ನಾಳ್ ಅವರನ್ನು ಉಚ್ಚಾಟನೆ ಮಾಡಿದರೂ ರೆಬೆಲ್ ನಾಯಕರು ಬಿಎಸ್ ಯಡಿಯೂರಪ್ಪ ಕುಟುಂಬದ ವಿರುದ್ಧ ತಮ್ಮ ಅಸಮಾಧಾನವನ್ನು ನಿರಂತರವಾಗಿ ಹೊರಹಾಕುತ್ತಲೇ ಇದ್ದು, ಸಮಯ ಸಿಕ್ಕಾಗೆಲ್ಲಾ ದೆಹಲಿಗೆ ತೆರಳಿ ಹೈಕಮಾಂಡ್ ನಾಯಕರ ಜೊತೆ ಚರ್ಚಿಸುತ್ತಿದ್ದಾರೆ. ಮತ್ತೊಂದೆಡೆ ವಿರೋಧಿ ಬಣದ ಆ್ಯಕ್ಟೀವ್ ಆಗುತ್ತಿದ್ದಂತೆಯೇ ಮಗನನ್ನು ಉಳಿಸಿಕೊಳ್ಳಲು ಬಿಎಸ್ ಯಡಿಯೂರಪ್ಪ ಅಖಾಡಕ್ಕೆ ಇಳಿದಿದ್ದಾರೆ. ನಿರಂತರವಾಗಿ ಅವರು ಬಿಜೆಪಿ ಕಚೇರಿಗೆ ಆಗಮಿಸುತ್ತಿದ್ದು, ಪಕ್ಷದ ಚಟುವಟಿಕೆಗಳನ್ನೂ ಸಕ್ರಿಯವಾಗತೊಡಗಿದ್ದಾರೆ.
ಕೆಲ ದಿನಗಳ ಹಿಂದಷ್ಟೇ ವಿಪಕ್ಷ ನಾಯಕ ಆರ್ ಅಶೋಕ್, ಹೈಕಮಾಂಡ್ ನಾಯಕರ ಭೇಟಿ ದೆಹಲಿಗೆ ತೆರಳಿದ್ದರು. ಬಳಿಕ ವಿಜಯೇಂದ್ರ ಸಹ ದಿಲ್ಲಿಗೆ ತೆರಳಿ ಹೈಕಮಾಂಡ್ ನಾಯಕರ ಜೊತೆ ಮಾತುಕತೆ ಮಾಡಿ ಬಂದಿದ್ದರು. ಇದಾದ ಬಳಿಕ ಬೆಂಗಳೂರಿನಲ್ಲಿ ರೆಬೆಲ್ ನಾಯಕರ ಜೊತೆ ಪ್ರಹ್ಲಾದ್ ಜೋಶಿ ಹಾಗೂ ಮಾಜಿ ಸಿಎಂ ಡಿವಿ ಸದಾನಂದಗೌಡ ಅವರು ಸಭೆ ಮಾಡಿದ್ದರು. ಅದರಲ್ಲೂ ಪ್ರಮುಖವಾಗಿ ಅಶ್ವತ್ಥ್ ನಾರಾಯಣ ನಿವಾಸದಲ್ಲಿ ನಡೆದಿದ್ದ ಸಭೆಯಲ್ಲಿ ರೆಬೆಲ್ ನಾಯಕ ಅರವಿಂದ ಲಿಂಬಾವಳಿ, ರಾಜ್ಯಾಧ್ಯಕ್ಷ ವಿಜಯೇಂದ್ರ ಭಾಗಿಯಾಗಿದ್ದು ಅಚ್ಚರಿಗೆ ಕಾರಣವಾಗಿತ್ತು. ಈ ಮೂಲಕ ರೆಬೆಲ್ ಲೀಡರ್ಸ್ ಹಾಗೂ ವಿಜಯೇಂದ್ರ ನಡುವೆ ರಾಜೀ ಸಂಧಾನಕ್ಕೆ ಜೋಶಿ, ಸದಾನಂದಗೌಡ್ರು ಮಧ್ಯಸ್ಥಿತಿಕೆ ವಹಿಸಿದ್ದಾರೆ ಎನ್ನಲಾಗಿದೆ.
Published On - 11:00 pm, Tue, 15 July 25