ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಒತ್ತಾಯ: ತಾತ್ಕಾಲಿಕವಾಗಿ ತಡೆ ಹಿಡಿದ ಎಐಸಿಸಿ ಅಧ್ಯಕ್ಷ
ರಾಜ್ಯ ಕಾಂಗ್ರೆಸ್ನಲ್ಲಿ ಸೆಪ್ಟೆಂಬರ್ ಕ್ರಾಂತಿ ವಿಚಾರ ಭಾರಿ ಕಾವು ಪಡೆದಿತ್ತು. ಈ ಕ್ರಾಂತಿಗೆ ತಾಲೀಮು ನಡೆಯುತ್ತಿದೆಯಾ ಎಂಬ ಅನುಮಾನ ಶುರುವಾಗಿದೆ. ಏಕೆಂದರೆ ದೆಹಲಿಯಲ್ಲಿ ಸಿದ್ದರಾಮಯ್ಯ ಐದು ವರ್ಷ ನಾನೇ ಸಿಎಂ ಎಂದು ಸಂದೇಶ ರವಾನಿಸಿದ್ದರು. ಈ ಮೂಲಕ ಪವರ್ ಶೇರಿಂಗ್ಗೆ ಬ್ರೇಕ್ ಹಾಕಿದ್ದರು. ಇದರ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆಗೆ ಸಚಿವರು ಹಕ್ಕೊತ್ತಾಯ ಮಂಡಿಸಿದ್ದಾರೆ.

ಬೆಂಗಳೂರು, ಜುಲೈ 12: ರಾಜ್ಯ ಕಾಂಗ್ರೆಸ್ (Congress) ಪಾಳಯದಲ್ಲಿ ರಾಜಕೀಯದ ಚೆಸ್ ಗೇಮ್ ಭರ್ಜರಿಯಾಗಿ ನಡೆಯುತ್ತಿದೆ. ಸಿಎಂ ಸಿದ್ದರಾಮಯ್ಯ (Siddaramaiah) ದೆಹಲಿಯಲ್ಲೇ ಕೂತು ನಾನೇ ಐದು ವರ್ಷ ಸಿಎಂ ಎಂಬ ಸಂದೇಶ ಸಾರಿದರು. ಇದರ ಬೆನ್ನಲ್ಲೇ ಕೆಪಿಸಿಸಿ (KPCC) ಅಧ್ಯಕ್ಷ ಸ್ಥಾನದ ಬದಲಾವಣೆಗೆ ಸಚಿವರು ಪಟ್ಟು ಹಿಡಿದಿದ್ದಾರೆ. ಇದನ್ನೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಅವರ ಮುಂದೆ ಹೇಳಿದ್ದಾರೆ. ಒಬ್ಬರಿಗೆ ಒಂದೇ ಹುದ್ದೆ ನಿಯಮ ಇದ್ದು ಅದನ್ನು ಅನುಷ್ಠಾನಕ್ಕೆ ತನ್ನಿ ಎಂದು ಸಚಿವರು ಆಗ್ರಹಿಸಿದ್ದಾರೆ ಎಂದು ಮೂಲಗಳಿಂದ ಮಾಹಿತಿ ದೊರೆತಿದೆ.
ಸಚಿವರ ಒತ್ತಡಕ್ಕೆ ಎಐಸಿಸಿ ಮಲ್ಲಿಕಾರ್ಜುನ್ ಖರ್ಗೆ ಅವರು ಸ್ಪಷ್ಟ ಉತ್ತರ ನೀಡಿದ್ದಾರೆ. ಲೋಕಸಭಾ ಚುನಾವಣೆ ಮುಗಿದ ತಕ್ಷಣ ಇದನ್ನು ಮಂಡಿಸಬೇಕಿತ್ತು. ಸದ್ಯ ಬೇರೆ ರಾಜ್ಯಗಳ ಚುನಾವಣೆ ಇದ್ದ ಹಿನ್ನೆಲೆಯಲ್ಲಿ ಬದಲಾವಣೆ ಕಷ್ಟವಾಗುತ್ತದೆ. ಹೀಗಾಗಿ ನವೆಂಬರ್ ತನಕ ಯಾವುದೇ ಬದಲಾವಣೆಗಳು ಬೇಡ ಅಂತ ಹೇಳಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮಾಜಿ ಸಂಸದ ಡಿ.ಕೆ.ಸುರೇಶ್, ಡಿಕೆ ಶಿವಕುಮಾರ್ ಅವರಿಗೆ ಬಲಾಬಲ ಪ್ರದರ್ಶಿಸುವ ಅಗತ್ಯ ಇಲ್ಲ. ಪ್ರಾಮಾಣಿಕವಾಗಿ ಪಕ್ಷವನ್ನ ಮುನ್ನಡೆಸುತ್ತಿದ್ದಾರೆ. ಯಾವುದೇ ಶಾಸಕರ ಬೆಂಬಲ ಕೇಳುವ ಸಮಯ ಅಲ್ಲ ಅಂತ ಹೇಳಿದ್ದಾರೆ.
ಮೈಸೂರಿನಲ್ಲಿ ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಯಾವ ಕ್ಷಣದಲ್ಲಿ ಏನು ಬೇಕಾದರೂ ಆಗಬಹುದು ಅಧಿಕಾರ ಯಾರಿಗೂ ಶಾಶ್ವತ ಅಲ್ಲ ಅಂತ ಹೇಳಿದ್ದಾರೆ.
ಬಿಜೆಪಿ ನಾಯಕರಿಂದ ವ್ಯಂಗ್ಯ
ರಾಜ್ಯ ಕಾಂಗ್ರೆಸ್ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಕಂಡು ಬಿಜೆಪಿ ನಾಯಕರು ವ್ಯಂಗ್ಯವಾಡುತ್ತಿದ್ದಾರೆ. ನಾನೇ ಸಿಎಂ ಎಂದು ಹಳ್ಳಿಯಿಂದ ದಿಲ್ಲಿಯವರೆಗೆ ಹಾದಿ ಬೀದಿಯಲ್ಲಿ ಸಿಎಂ ಬೊಬ್ಬೆ ಹೊಡೆಯುತ್ತಿದ್ದಾರೆ. ಐದು ದಿನಗಳಿಂದ ನಡೆಯುತ್ತಿರುವ ಪಾಲಿಕೆ ಸಿಬ್ಬಂದಿಯ ಪ್ರತಿಭಟನೆ ಇವರಿಗೆ ಕಾಣಿಸುತ್ತಿಲ್ಲ ಅಂತ ಸಾಮಾಜಿಕ ಜಾಲತಾಣದಲ್ಲಿ ಹರಿಹಾಯ್ದಿದ್ದಾರೆ.
ಇದನ್ನೂ ಓದಿ: ರಾಹುಲ್ ಗಾಂಧಿ ಜತೆ ಮಾತುಕತೆಗೂ ಮುನ್ನ ತಾವೇ 5 ವರ್ಷ ಸಿಎಂ ಎಂದ ಸಿದ್ದರಾಮಯ್ಯ
ರಾಜೀನಾಮೆ ಕೊಟ್ಟು ಹೊರಡಿ: ಅಶೋಕ್
“ಐದು ವರ್ಷ ನಾನೇ ಸಿಎಂ ಎಂದು ಹಳ್ಳಿಯಿಂದ ದಿಲ್ಲಿಯವರೆಗೆ ಹಾದಿ ಬೀದಿಯಲ್ಲಿ ಬೊಬ್ಬೆ ಹೊಡೆಯುವ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯಾದ್ಯಂತ 10 ಪಾಲಿಕೆಗಳ 25,000ಕ್ಕೂ ಹೆಚ್ಚು ಸಿಬ್ಬಂದಿ, ಐದು ದಿನಗಳಿಂದ ಮಾಡುತ್ತಿರುವ ಮುಷ್ಕರ ಕಣ್ಣಿಗೆ ಕಾಣುತ್ತಿಲ್ಲ, ಕಿವಿಗೆ ಬೀಳುತ್ತಿಲ್ಲ. ಕುರ್ಚಿ ಕಿತ್ತಾಟದಲ್ಲಿ, ಬಣ ಬಡಿದಾಟದಲ್ಲಿ ಸಂಪೂರ್ಣವಾಗಿ ಮೈಮರೆತಿರುವ ಕಾಂಗ್ರೆಸ್ ಸರ್ಕಾರದ ಯಾವ ಮಂತ್ರಿಗಳೂ ಇದುವರೆಗೂ ಪ್ರತಿಭಟನಾ ನಿರತ ಪಾಲಿಕೆ ಸಿಬ್ಬಂದಿಯನ್ನು ಭೇಟಿ ಮಾಡುವ ಗೋಜಿಗೇ ಹೋಗಿಲ್ಲ. ಸಿಎಂ ಸಿದ್ದರಾಮಯ್ಯ ಅವರೇ ಊಟಕ್ಕಿಲ್ಲದ ಉಪ್ಪಿನಕಾಯಿ ಎಂಬಂತೆ ಅಧಿಕಾರವಿಲ್ಲದ ಕುರ್ಚಿಯಲ್ಲಿ ಎಷ್ಟು ದಿನ ಅಂಟಿಕೊಂಡು ಕೂರುತ್ತೀರಿ ಸ್ವಾಮಿ? ರಾಜೀನಾಮೆ ಕೊಟ್ಟು ಹೊರಡಿ, ಒಂದು ಸುಭದ್ರ, ಸುಸ್ಥಿರ, ಜನಪರ ಆಡಳಿತ ಕೊಡಬಲ್ಲ ಬಲಿಷ್ಠ ಮುಖ್ಯಮಂತ್ರಿಗಾಗಿ ಕನ್ನಡಿಗರು ಕಾಯುತ್ತಿದ್ದಾರೆ, ರಾಜೀನಾಮೆ ಕೊಟ್ಟು ಕನ್ನಡಿಗರ ಆಶಯ ಈಡೇರಿಸಿ ಎಂದು ವಿಪಕ್ಷ ನಾಯಕ ಆರ್. ಅಶೋಕ್ ವಾಗ್ದಾಳಿ ಮಾಡಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:08 pm, Sat, 12 July 25








