ದಾವಣಗೆರೆ: ಮೂರೇ ತಿಂಗಳಲ್ಲಿ 50 ಲಕ್ಷ ರೂ. ತೆರಿಗೆ ಸಂಗ್ರಹಿಸಿದ ಮಹಿಳೆಯರು! ಇದು ಕರ್ನಾಟಕದಲ್ಲೇ ಮೊದಲು
ದಾವಣಗೆರೆ ಮಹಾನಗರ ಪಾಲಿಕೆಯಲ್ಲಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಕೇವಲ ಮೂರು ತಿಂಗಳಲ್ಲಿ 50 ಲಕ್ಷ ರೂಪಾಯಿಗಳನ್ನು ತೆರಿಗೆಯಾಗಿ ಸಂಗ್ರಹಿಸಿ ರಾಜ್ಯದಲ್ಲೇ ಅಪೂರ್ವ ಸಾಧನೆ ಮಾಡಿದ್ದಾರೆ. ಇದರಿಂದ ಅವರಿಗೆ 5 ಲಕ್ಷ ರೂಪಾಯಿಗಳ ಪ್ರೋತ್ಸಾಹಧನ ದೊರೆಯಲಿದೆ. ಇದರೊಂದಿಗೆ, ರಾಜ್ಯ ಸರ್ಕಾರ ಕೈಗೊಂಡ ಮಹತ್ವದ ನಿರ್ಧಾರವನ್ನು ಅನುಷ್ಠಾನಗೊಳಿಸಿ ಯಶಸ್ವಿಯಾದ ಮೊದಲ ಪಾಲಿಕೆ ಎಂಬ ಹೆಗ್ಗಳಿಗೆ ದಾವಣಗೆರೆಯದ್ದಾಗಿದೆ.

ದಾವಣಗೆರೆ, ಜುಲೈ 10: ದಾವಣಗೆರೆ (Davanagere) ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಮಹಿಳಾ ಸ್ವಸಹಾಯ ಸಂಘಗಳ (Women’s Self-Help Group) ಸದಸ್ಯೆಯರು ಕರ್ನಾಟಕದಲ್ಲೇ (Karnataka) ಮೊದಲ ಬಾರಿಗೆ ವಿನೂತನ ಸಾಧನೆ ಮಾಡಿ ಇತರೆ ಜಿಲ್ಲೆಗಳ ಸ್ತ್ರೀಯರ ಹುಬ್ಬೇರಿಸುವಂತೆ ಮಾಡಿದ್ದಾರೆ. ಅಂದಹಾಗೆ, ದಾವಣಗೆರೆಯ 14 ಮಂದಿಯ ಸ್ತ್ರೀ ಶಕ್ತಿ ಪಡೆ ಕೇವಲ 3 ತಿಂಗಳ ಅವಧಿಯಲ್ಲಿ 50 ಲಕ್ಷ ರೂ. ತೆರಿಗೆ ಸಂಗ್ರಹ ಮಾಡಿ ಪಾಲಿಕೆಗೆ ಕೊಟ್ಟಿದ್ದು, 5 ಲಕ್ಷ ರೂ. ಪ್ರೋತ್ಸಾಹಧನ ಪಡೆದಿದೆ.
ಮಹಿಳೆಯರಿಂದ ತೆರಿಗೆ ವಸೂಲಿ ಯಾಕೆ?
2024 ರ ಜೂನ್ನಲ್ಲಿ ನಡೆದಿದ್ದ ಸಚಿವ ಸಂಪುಟ ಸಭೆಯಲ್ಲಿ, ಸ್ಥಳೀಯ ಸಂಸ್ಥೆಗಳಲ್ಲಿ ತೆರಿಗೆ ಸಂಗ್ರಹದ ಕಳಪೆ ಸಾಧನೆ ಬಗ್ಗೆ ಭಾರಿ ಚರ್ಚೆಯಾಗಿತ್ತು. ಅಲ್ಲದೆ, ಈ ಸಮಸ್ಯೆ ನಿವಾರಣೆಗಾಗಿ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ತೆರಿಗೆ ಸಂಗ್ರಹಕ್ಕೆ ಸ್ತ್ರೀ ಶಕ್ತಿ ಬಳಕೆಗೆ ನಿರ್ಧಾರ ಕೈಗೊಂಡು ಅನುಮೋದನೆ ನೀಡಲಾಗಿತ್ತು. ಇದರಂತೆ, ಮಹಿಳಾ ಸ್ವಸಹಾಯ ಸಂಘಗಳ ಸದಸ್ಯೆಯರನ್ನು ಬಳಸಿಕೊಂಡು ತೆರಿಗೆ ಸಂಗ್ರಹ ಮಾಡಲಾಗುತ್ತದೆ. ಸಂಘಗಳ ಸದಸ್ಯೆಯರು ಮನೆ ಮನೆಗೆ ತೆರಳಿ ತೆರಿಗೆ ಸಂಗ್ರಹ ಮಾಡಲಿದ್ದಾರೆ. ಅವರಿಗೆ, ಒಟ್ಟು ತೆರಿಗೆ ಸಂಗ್ರಹ ಮಾಡಿಕೊಟ್ಟಿದ್ದರ ಶೇ 5 ರಷ್ಟು ಪ್ರೋತ್ಸಾಹ ಧನ ಕೊಡಲು ನಿರ್ಧರಿಸಲಾಗಿತ್ತು.
ದಾವಣಗೆರೆ ಪಾಲಿಕೆಯಲ್ಲಿ ರಾಜ್ಯದಲ್ಲೇ ಮೊದಲ ಪ್ರಯೋಗ
ಸಚಿವ ಸಂಪುಟದ ನಿರ್ಧಾರವನ್ನು ದಾವಣಗೆರೆ ಮಹಾನಗರ ಪಾಲಿಕೆ ಮೊದಲ ಬಾರಿಗೆ ಅನುಷ್ಠಾನಗೊಳಿಸಿದೆ. ಅದರಂತೆ, ಮಹಿಳಾ ಸ್ವಸಹಾಯ ಸಂಘಗಳ 14 ಮಂದಿ ಸದಸ್ಯರು ಕಳೆದ ಮೂರು ತಿಂಗಳ ಅವಧಿಯಲ್ಲಿ 50 ಲಕ್ಷ ರೂ. ತೆರಿಗೆ ಸಂಗ್ರಹ ಮಾಡಿದ್ದಾರೆ. ತೆರಿಗೆ ಸಂಗ್ರಹದ ಮೊತ್ತದ ಶೇ ಐದರಷ್ಟನ್ನು ಮಹಿಳೆಯರಿಗೆ ಪ್ರೊತ್ಸಾಹ ಧನವಾಗಿ ನೀಡಬೇಕಿದ್ದು, ಅದರಂತೆ 5 ಲಕ್ಷ ರೂ. ಮಹಿಳೆಯರ ಪಾಲಾಗಿದೆ.
ಇದನ್ನೂ ಓದಿ: ಬೆಣ್ಣೆ ನಗರಿ ದಾವಣಗೆರೆಯಲ್ಲೂ ಹೃದಯಾಘಾತ ಆತಂಕ: ಆಸ್ಪತ್ರೆಗಳಲ್ಲಿ ಜನಜಂಗುಳಿ
ಬಹುತೇಕ ನಗರ ಸ್ಥಳೀಯ ಸಂಸ್ಥೆಗಳ ತೆರಿಗೆ ವಸೂಲಿಯಲ್ಲಿ ಕಳಪೆ ಸಾಧನೆ ಮನಗಂಡು ಸ್ತ್ರೀ ಶಕ್ತಿ ಬಳಕೆಗೆ ಸರ್ಕಾರ ಮುಂದಾಗಿದೆ. ಸದ್ಯ 14 ಜನ ಮಹಿಳೆಯರು 50 ಲಕ್ಷ ರೂ. ತೆರಿಗೆ ಸಂಗ್ರಹ ಮಾಡಿದ್ದಾರೆ. ಪ್ರತಿ ವಾರ್ಡಗೆ ಸ್ವಸಹಾಯ ಸಂಘದ ಮಹಿಳೆಯ ನೇಮಕಕ್ಕೆ ಚಿಂತನೆ ಮಾಡಲಾಗುತ್ತಿದೆ. ಇಷ್ಟರಲ್ಲಿಯೇ ಪ್ರಕ್ರಿಯ ಆರಂಭಿಸಲಾಗುವುದು ಎಂದು ದಾವಣಗೆರೆ ಮಹಾನಗರ ಪಾಲಿಕೆ ಆಯುಕ್ತೆ ರೇಣುಕಾ ‘ಟಿವಿ9’ಗೆ ತಿಳಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:26 am, Thu, 10 July 25







