ಕರ್ನಾಟಕದ ಶಾಲೆಗಳಲ್ಲಿ U ಶೇಪ್ನಲ್ಲಿ ಕುಳಿತುಕೊಳ್ಳುವ ವ್ಯವಸ್ಥೆಗೆ ಒತ್ತಾಯ: ಸಚಿವ ಮಧು ಬಂಗಾರಪ್ಪಗೆ ಪತ್ರ
ಕೇರಳದ ಶಾಲೆಗಳಲ್ಲಿ ಯಶಸ್ವಿಯಾಗಿ ಜಾರಿಯಾಗಿರುವ U ಆಕಾರದಲ್ಲಿ ಕುಳಿತುಕೊಳ್ಳುವ ವಿಧಾನವನ್ನು ಸದ್ಯ ಕರ್ನಾಟಕದ ಶಾಲೆಗಳಲ್ಲಿ ತರುವಂತೆ ಮಾತು ಕೇಳಿಬರುತ್ತಿದೆ. ಮಕ್ಕಳ ಹಕ್ಕುಗಳ ಹೋರಾಟಗಾರರು ಕರ್ನಾಟಕದ ಶಾಲೆಗಳಲ್ಲೂ ಈ ವಿಧಾನ ಜಾರಿಗೆ ಒತ್ತಾಯಿಸಿದ್ದಾರೆ. ಮಕ್ಕಳ ಹಕ್ಕುಗಳ ಆಯೋಗ ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಪತ್ರ ಬರೆಯುವ ಮೂಲಕ ಮನವಿ ಮಾಡಿದೆ.

ಬೆಂಗಳೂರು, ಜುಲೈ 16: ಇನ್ಮುಂದೆ ಶಾಲೆಗಳಲ್ಲಿ ಲಾಸ್ಟ್ ಬೆಂಚ್, ಫಸ್ಟ್ ಬೆಂಚ್ ವಿದ್ಯಾರ್ಥಿಗಳು ಎಂಬ ವಿಧಾನಕ್ಕೆ ಬ್ರೇಕ್ ಬೀಳುವ ಸಾಧ್ಯತೆ ಇದೆ. ಸಿನಿಮಾ ಒಂದರ ಪ್ರೇರಣೆ ಪಡೆದು ಈಗಾಗಲೇ ಕೇರಳದಲ್ಲಿನ ಶಾಲೆಗಳಲ್ಲಿ ಅರ್ಧವೃತ್ತಾಕಾರದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆಯನ್ನು (U-shaped seating arrangement) ಜಾರಿಗೆ ತರಲಾಗಿದೆ. ಇದೀಗ ಇದೇ ಮಾದರಿಯನ್ನು ಕರ್ನಾಟಕದ (Karnataka) ಶಾಲೆಗಳಲ್ಲಿಯೂ ಜಾರಿ ಮಾಡುವಂತೆ ಒತ್ತಾಯ ಕೇಳಿ ಬರುತ್ತಿದೆ. ಈ ಕುರಿತಾಗಿ ಮಕ್ಕಳ ಹಕ್ಕುಗಳ ಹೋರಾಟಗಾರರು ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಕೇರಳದಲ್ಲಿನ ಶಾಲೆಗಳಲ್ಲಿ ಲಾಸ್ಟ್ ಬೆಂಚ್ ಹಾಗೂ ಫಸ್ಟ್ ಬೆಂಚ್ ಎಂಬ ಆಸನದ ವ್ಯವಸ್ಥೆಗೆ ಬದಲಾವಣೆ ತರಲಾಗಿದೆ. ಇದೇ ಮಾದರಿಯನ್ನ ನಮ್ಮ ಶಾಲೆಗಳಲ್ಲಿಯೂ ಜಾರಿ ಮಾಡುವಂತೆ ಮಕ್ಕಳ ಹಕ್ಕುಗಳ ಆಯೋಗ ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಪತ್ರ ಬರೆದಿದ್ದು, ರಾಜ್ಯದ ಪ್ರತಿ ಶಾಲೆಯಲ್ಲೂ ವಿದ್ಯಾರ್ಥಿಗಳು ಅರ್ಧ ವೃತ್ತಕಾರದಲ್ಲಿ ಕುಳಿತು ಶಿಕ್ಷಣ ಪಡೆಯುವುದನ್ನು ಜಾರಿ ಮಾಡಲು ಮನವಿ ಮಾಡಿದೆ.
ಶಾಲೆಗಳಲ್ಲಿ ಅರ್ಧವೃತ್ತಾಕಾರದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ
ಕೇರಳದ ಶಾಲೆಗಳಲ್ಲಿ ಅರ್ಧವೃತ್ತಾಕಾರದ ಕುಳಿತುಕೊಳ್ಳುವ ವ್ಯವಸ್ಥೆಯನ್ನು ಪ್ರೋತ್ಸಾಹಿಸಲಾಗುತ್ತಿದೆ. ಈ ಮಾದರಿ ಕಲಿಕೆಯ ಪರಿಣಾಮಕಾರಿತ್ವ ಹೆಚ್ಚಿಸಿದೆ. ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಂವಾದವನ್ನು ಸುಧಾರಿಸುವಲ್ಲಿ ಕ್ರಾಂತಿಕಾರಿ ಬದಲಾವಣೆಯಾಗಿದೆ. ಅರ್ಧವೃತ್ತಾಕಾರದ ವಿಧಾನದಲ್ಲಿ ಎಲ್ಲ ವಿದ್ಯಾರ್ಥಿಗಳೂ ಶಿಕ್ಷಕರಿಗೆ ಒಂದೇ ದೃಷ್ಟಿಯಲ್ಲಿ ಕಾಣಿಸುತ್ತಾರೆ. ಇದು ಸಮಾನತೆಯ ಭಾವನೆಯನ್ನು ಮೂಡಿಸುತ್ತದೆ ಮತ್ತು ಎಲ್ಲರಿಗೂ ಸಮಾನವಾಗಿ ಭಾಗವಹಿಸುವ ಅವಕಾಶವನ್ನು ಒದಗಿಸುತ್ತದೆ. ಹೀಗಾಗಿ ರಾಜ್ಯದ ಶಾಲೆಗಳಲ್ಲಿ ಈ ನಿಯಮ ಜಾರಿಗೆ ಒತ್ತಾಯ ಕೇಳಿ ಬಂದಿದೆ.
ಇದನ್ನೂ ಓದಿ: ನೋ ಮೋರ್ ಬ್ಯಾಕ್ ಬೆಂಚರ್ಸ್; ಸಿನಿಮಾದಿಂದ ಪ್ರೇರಣೆ ಪಡೆದು ಹೊಸ ಆಸನ ವ್ಯವಸ್ಥೆಯನ್ನು ಅಳವಡಿಸಿಕೊಂಡ ಕೇರಳದ ಶಾಲೆಗಳು
ಅರ್ಧವೃತ್ತಾಕಾರದಲ್ಲಿ ಕುಳಿತುಕೊಳ್ಳುವ ವ್ಯವಸ್ಥೆ ಶಾಲೆಗಳಲ್ಲಿ ಕಲಿಕೆಯ ಪರಿಣಾಮಕಾರಿತ್ವವನ್ನು ಹೆಚ್ಚಿಸಲು ತುಂಬಾ ಪರಿಣಾಮಕಾರಿಯಾಗಿದೆ. ಶಿಕ್ಷಣ ವಿಧಾನಗಳಷ್ಟೇ ಅಲ್ಲ, ತರಗತಿಯ ವಾತಾವರಣ ಮತ್ತು ಕುಳಿತುಕೊಳ್ಳುವ ವಿಧಾನವೂ ಮಹತ್ವದ ಪಾತ್ರ ವಹಿಸುತ್ತದೆ. ವಿದ್ಯಾರ್ಥಿಗಳ ಕಲಿಕೆಯ ಗುಣಮಟ್ಟ, ಸಾಮಾಜಿಕ ಕೌಶಲ್ಯಗಳು ಮತ್ತು ಶಿಕ್ಷಕ-ವಿದ್ಯಾರ್ಥಿ ಸಂವಾದವನ್ನು ಸುಧಾರಿಸುವಲ್ಲಿ ಈ ವಿಧಾನ ಕ್ರಾಂತಿಕಾರಿ ಬದಲಾವಣೆ ತರುವ ಸಾಧ್ಯತೆ ಇದೆ.
ಮಕ್ಕಳ ಹಕ್ಕುಗಳ ಹೋರಾಟಗಾರ ನಾಗಸಿಂಹ ಹೇಳಿದ್ದಿಷ್ಟು
ಸದ್ಯ ಸಾಂಪ್ರದಾಯಿಕ ತರಗತಿಗಳಲ್ಲಿ ವಿದ್ಯಾರ್ಥಿಗಳು ಸಾಲು-ಸಾಲಾಗಿ ಕುಳಿತು ಕೊಳ್ಳುತ್ತಾರೆ. ಇದರಿಂದ ಶಿಕ್ಷಕರ ಗಮನ ಮುಂಭಾಗದ ವಿದ್ಯಾರ್ಥಿಗಳ ಮೇಲೆ ಕೇಂದ್ರೀಕೃತವಾಗಿರುತ್ತದೆ. ಆದರೆ, ಅರ್ಧವೃತ್ತಾಕಾರದ ವಿಧಾನದಲ್ಲಿ ಎಲ್ಲ ವಿದ್ಯಾರ್ಥಿಗಳೂ ಶಿಕ್ಷಕರಿಗೆ ಒಂದೇ ದೂರದಲ್ಲಿ ಕಾಣಿಸುತ್ತಾರೆ. ಈ ವಿಧಾನದಲ್ಲಿ ಶಿಕ್ಷಕರು ಪ್ರತಿಯೊಬ್ಬ ವಿದ್ಯಾರ್ಥಿಯೊಂದಿನೆ ನೇರವಾಗಿ ಸಂವಾದ ಮಾಡಬಹುದು. ಇದರಿಂದ ವಿದ್ಯಾರ್ಥಿಗಳ ಮುಖಭಾವ, ಆಸಕ್ತಿ ಮತ್ತು ತೊಡಗಿಸಿಕೊಳ್ಳುವಿಕೆಯನ್ನು ಗಮನಿಸಲು ಸಾಧ್ಯವಾಗುತ್ತದೆ ಎಂದು ಮಕ್ಕಳ ಹಕ್ಕುಗಳ ಹೋರಾಟಗಾರರಾದ ನಾಗಸಿಂಹ ಹೇಳುತ್ತಾರೆ.
ಶಿಕ್ಷಕರಿಗೆ ಪ್ರತಿಯೊಬ್ಬರೊಂದಿಗೆ ವೈಯಕ್ತಿಕವಾಗಿ ಈ ವಿಧಾನ ಸಂವಾದ ನಡೆಸಲು ಅನುಕೂಲವಾಗುತ್ತದೆ. ಅರ್ಧವೃತ್ತಾಕಾರದ ವಿಧಾನವು ವಿದ್ಯಾರ್ಥಿಗಳ ನಡುವೆ ಸಂವಾದಾತ್ಮಕ ಚರ್ಚೆ, ಗುಂಪು ಚಟುವಟಿಕೆಗಳು ಮತ್ತು ಸಹಕಾರಿ ಕಲಿಕೆಗೆ ಉತ್ತೇಜನ ನೀಡುತ್ತದೆ. ಈ ವಿಧಾನದಲ್ಲಿ ವಿದ್ಯಾರ್ಥಿಗಳು ಒಬ್ಬರಿಗೊಬ್ಬರು ಎದುರಾಗಿ ಕುಳಿತಿರುವುದರಿಂದ, ಅವರ ನಡುವೆ ಕೂಡ ಸಂವಾದವು ಸುಗಮವಾಗುತ್ತದೆ. ಸಾಂಪ್ರದಾಯಿಕ ವಿಧಾನದಲ್ಲಿ, ಕೆಲವು ವಿದ್ಯಾರ್ಥಿಗಳು ತರಗತಿಯ ಹಿಂಭಾಗದಲ್ಲಿ ಕುಳಿತು ಗಮನ ಕಡಿಮೆ ಮಾಡಬಹುದು. ಆದರೆ, ಅರ್ಧವೃತ್ತಾಕಾರದ ವಿಧಾನವು ಎಲ್ಲರನ್ನೂ ಕೇಂದ್ರೀಕೃತವಾಗಿರಿಸುತ್ತದೆ ಇದರಿಂದ ಕಲಿಕೆಯ ಆಕರ್ಷಣೆ ಮತ್ತು ತೊಡಗಿಸಿಕೊಳ್ಳುವಿಕೆ ಹೆಚ್ಚುತ್ತದೆ.
ಇದನ್ನೂ ಓದಿ: ವಿದ್ಯಾರ್ಥಿ, ಪೋಷಕರು ಗಮನಕ್ಕೆ: SSLC ಪರೀಕ್ಷಾ ನಿಯಮದಲ್ಲಿ ಮಹತ್ವದ ಬದಲಾವಣೆ
ಈ ವಿಧಾನವು ಚರ್ಚೆ, ಗುಂಪು ಕೆಲಸ, ಪ್ರಾತ್ಯಕ್ಷಿಕೆ, ದೃಶ್ಯ-ಶ್ರವಣ ಸಾಧನಗಳ ಬಳಕೆ ಮುಂತಾದ ವಿವಿಧ ಕಲಿಕಾ ಶೈಲಿಗಳಿಗೆ ಸೂಕ್ತವಾಗಿದೆ. ಶಿಕ್ಷಕರಿಗೆ ತಮ್ಮ ಬೋಧನಾ ವಿಧಾನವನ್ನು ವೈವಿಧ್ಯಗೊಳಿಸಲು ಇದು ಅವಕಾಶ ನೀಡುತ್ತದೆ. ಕೇರಳದ ಶಾಲೆಗಳಲ್ಲಿ ಈ ವಿಧಾನವನ್ನು ಅಳವಡಿಸಿಕೊಂಡ ನಂತರ, ವಿದ್ಯಾರ್ಥಿಗಳ ಕಲಿಕೆಯ ಫಲಿತಾಂಶಗಳು, ಸಾಮಾಜಿಕ ಕೌಶಲ್ಯಗಳು ಮತ್ತು ತರಗತಿಯ ವಾತಾವರಣದಲ್ಲಿ ಗಮನಾರ್ಹ ಸುಧಾರಣೆ ಕಂಡುಬಂದಿದೆ.
ಮೂಲಭೂತ ಸೌಕರ್ಯಗಳ ಅಗತ್ಯತೆವಿದೆ: ಶಿಕ್ಷಕ ದಿವಾಕರ್
ವಿದ್ಯಾರ್ಥಿಗಳು ಹೆಚ್ಚು ಆತ್ಮವಿಶ್ವಾಸದಿಂದ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ ಮತ್ತು ಶಿಕ್ಷಕರೊಂದಿಗಿನ ಸಂವಾದವು ಹೆಚ್ಚು ಪರಿಣಾಮಕಾರಿಯಾಗಿದೆ. ಇದೇ ರೀತಿಯಾಗಿ, ಕರ್ನಾಟಕದ ಶಾಲೆಗಳಲ್ಲೂ ಈ ವಿಧಾನವನ್ನು ಅಳವಡಿಸಿಕೊಂಡರೆ, ಶಿಕ್ಷಣದ ಗುಣಮಟ್ಟವನ್ನು ಗಣನೀಯವಾಗಿ ಉನ್ನತೀಕರಿಸಬಹುದು ಆದರೆ ಇದಕ್ಕೆ ಶಾಲೆಗಳಿಗೆ ಕೆಲವು ಮೂಲಭೂತ ಸೌಕರ್ಯಗಳ ಅಗತ್ಯತೆವಿದೆ ಎಂದು ಸರ್ಕಾರಿ ಶಾಲಾ ಶಿಕ್ಷಕ ದಿವಾಕರ್ ಹೇಳುತ್ತಾರೆ.
ಒಟ್ಟಿನಲ್ಲಿ ಶಾಲೆಗಳಲ್ಲಿ ತರಗತಿಗಳನ್ನು ಅರ್ಧವೃತ್ತಾಕಾರದ ವಿಧಾನಕ್ಕೆ ಸರಿಹೊಂದುವಂತೆ ಮರುವಿನ್ಯಾಸಗೊಳಿಸುವುದು ಸರ್ಕಾರಿ ಶಾಲೆಗಳಲ್ಲಿ ಸವಾಲಾಗಿದ್ದು, ಈ ಬಗ್ಗೆ ಶಿಕ್ಷಣ ಇಲಾಖೆ ಮುಂದಿನ ದಿನಗಳಲ್ಲಿ ಯಾವ ನಿರ್ಧಾರಕ್ಕೆ ಬರುತ್ತೆ ಅಂತಾ ಕಾದು ನೋಡಬೇಕಿದೆ.
ಕರ್ನಾಟಕ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.