ನಮ್ಮ ಮೆಟ್ರೋ ಕ್ಯೂಆರ್ ಕೋಡ್, ವಾಟ್ಸಪ್​ ಪೇಮೆಂಟ್​​​ ಸೌಲಭ್ಯಕ್ಕೆ ಪ್ರಯಾಣಿಕರು ಫಿದಾ: ಹೊಸ ದಾಖಲೆ

| Updated By: ಆಯೇಷಾ ಬಾನು

Updated on: Jan 23, 2024 | 10:35 AM

ಸಿಲಿಕಾನ್ ಸಿಟಿ ಮಂದಿ ಇದೀಗ ಮೆಟ್ರೋ ಜರ್ನಿಯನ್ನ ನೆಚ್ಚಿಕೊಂಡಿದ್ದಾರೆ‌. ತಮ್ಮ ಸ್ವಂತ ಗಾಡಿ ಬಿಟ್ಟು ಮೆಟ್ರೋ ಹತ್ತುತ್ತಿದ್ದಾರೆ. ಜನರ ಅನುಕೂಲಕ್ಕೆ ಬಿಎಂಆರ್​ಸಿಎಲ್ ಪರಿಚಯಿಸಿದ ಕ್ಯೂಆರ್ ಕೋಡ್ ಸಕ್ಸಸ್ ಆಗಿದೆ.‌ ಕ್ಯೂಆರ್ ಟಿಕೆಟ್ ಪರಿಚಯಿಸಿ ಒಂದು ವರ್ಷ ಕಂಪ್ಲಿಟ್ ಆಗ್ತಿದಂತೆ ಹೊಸ ದಾಖಲೆಯೂ ನಿರ್ಮಾಣವಾಗಿದೆ.

ನಮ್ಮ ಮೆಟ್ರೋ ಕ್ಯೂಆರ್ ಕೋಡ್, ವಾಟ್ಸಪ್​ ಪೇಮೆಂಟ್​​​ ಸೌಲಭ್ಯಕ್ಕೆ ಪ್ರಯಾಣಿಕರು ಫಿದಾ: ಹೊಸ ದಾಖಲೆ
ಸಾಂದರ್ಭಿಕ ಚಿತ್ರ
Follow us on

ಬೆಂಗಳೂರು, ಜ.23: ನಿನ್ನೆಯಷ್ಟೇ ನೈಜೀರಿಯಾದ ಲಾಗೋಸ್​​ನಲ್ಲಿ ವಿಶ್ವ ವೇದಿಕೆಯಲ್ಲಿ ಮಾತನಾಡುತ್ತಾ ಭಾರತದ ಯುಪಿಐ ಆರ್ಥಿಕ ಸೇವೆ ಬಹುತೇಕ ಶೇ, ನೂರರಷ್ಟು ತಲುಪಿದೆ. ಅಮೆರಿಕಾದಲ್ಲಿನ ಆರ್ಥಿಕ ವ್ಯವಹಾರಗಳ ಮೂರು ಪಟ್ಟು ಹೆಚ್ಚಾಗಿ ಭಾರತದಲ್ಲಿ ಯುಪಿಐ ಮೂಲಕ ನಡೆಯುತ್ತಿದೆ. ಇದು ಡಿಜಿಟಲ್ ಯುಗ ಎಂದು ಭಾರತದ ವಿದೇಶಾಂಗ ಸಚಿವ ಜೈಶಂಕರ್​ ಹೇಳಿದ್ದಾರೆ. ಅದಕ್ಕೆ ಇಂಬು ಕೊಡುವಂತೆ ನಮ್ಮ ಬೆಂಗಳೂರಿನ ಮೆಟ್ರೋ ಸಹ ಡಿಜಿಟಲ್​ ಪೇಮೆಂಟ್​​ ಸೌಲಭ್ಯ ಅಳವಡಿಸಿಕೊಂಡಿದ್ದು ಪ್ರಯಾಣಿಕರು ಅದರ ಗರಿಷ್ಠ ಪ್ರಯೋಜನ ಪಡೆಯುತ್ತಿದ್ದಾರೆ. ತನ್ಮೂಲಕ ತಾವು ಸಿಲಿಕಾನ್ ಸಿಟಿ ಜನ ಎಂಬುದನ್ನು ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ. ಅಂದಹಾಗೆ ಬಿಎಂಆರ್​​ಸಿಎಲ್ ವತಿಯಿಂದ ನಮ್ಮ ಮೆಟ್ರೋ ಪ್ರಯಾಣ​​ಕ್ಕೆ ಡಿಜಿಟಲ್​ ಪಾವತಿ ವ್ಯವಸ್ಥೆ ಜಾರಿಗೊಳಿಸಿದೆ.

ಟ್ರಾಫಿಕ್ ಸಾಗರದಿಂದ ಬಳಲಿರುವ ಸಿಲಿಕಾನ್ ಸಿಟಿ ಮಂದಿ ಇದೀಗ ಮೆಟ್ರೋ ಮೊರೆ ಹೋಗಿದ್ದಾರೆ. ದಿನದಿಂದ ದಿನಕ್ಕೆ ನಮ್ಮ ಮೆಟ್ರೋದಲ್ಲಿ (Namma Metro) ಪ್ರಯಾಣಿಸುವವರ ಸಂಖ್ಯೆ ಹೆಚ್ಚಾಗಿದೆ. ಬಿಎಂಆರ್​ಸಿಎಲ್ (BMRCL) ಕೂಡ ಸಿಟಿಯ ಅಷ್ಟ ದಿಕ್ಕುಗಳಿಗೂ ಮೆಟ್ರೋ ಸಂಪರ್ಕ ಕಲ್ಪಿಸುವ ಕೆಲಸ ಮಾಡ್ತಿದೆ. ಸದ್ಯ ಮೆಟ್ರೋದಲ್ಲಿ ಒಂದು ದಿನಕ್ಕೆ ಬರೊಬ್ಬರಿ 6.5 ಲಕ್ಷ ಜನ ಸಂಚರಿಸುತ್ತಿದ್ದಾರೆ. ವಿಸ್ತರಣೆ., NCMC ಕಾರ್ಡ್ ಟಿಕೆಟ್, ಫೀಡರ್‌ ಬಸ್ ಸಿಟಿ ಮಂದಿಯ ಅಚ್ಚುಮೆಚ್ಚಾಗ್ತಿದೆ. ಇದರ ನಡುವೆ ಟೋಕನ್‌‌ ಟಿಕೆಟ್ ಕಿರಿಕಿರಿ ತಪ್ಪಿಸಲು ಪರಿಚಯಿಸಿದ ಕ್ಯೂಆರ್ ಕೋಡ್ ಈಗ ಹೊಸ ದಾಖಲೆ‌ ನಿರ್ಮಾಣಕ್ಕೆ ಕಾರಣವಾಗಿದೆ.

ಬಿಎಂಆರ್​ಸಿಎಲ್ ನವೆಂಬರ್ 2022ರಲ್ಲಿ ಕ್ಯೂಆರ್ ಕೋಡ್ ಟಿಕೆಟ್ ಆರಂಭ ಮಾಡ್ತು.‌ ಶುರುವಿನಲ್ಲಿ 2.13 ಲಕ್ಷ ಜನ ಕ್ಯೂಆರ್ ಟಿಕೆಟ್ ಬಳಸುತ್ತಿದ್ದರು.‌ ಬಳಿಕ ಆ ಸಂಖ್ಯೆ ನಿಧಾನಕ್ಕೆ ಏರಿಕೆ ಆಗ್ತಾ ಬಂತು. 2023ರ ಜನವರಿಯಲ್ಲಿ ತಿಂಗಳ ಬಳಕೆದಾರ ಸಂಖ್ಯೆ 5 ಲಕ್ಷ ಗಡಿ ಮುಟ್ಟಿತ್ತು.‌ ಜೂನ್ 2023ರಲ್ಲಿ 10 ಲಕ್ಷ ಆಗುವ ಮೂಲಕ ಹೊಸ ದಾಖಲೆಗೆ ಕಾರಣವಾಗಿತ್ತು. ಆದರೀಗ ಡಿಸೆಂಬರ್ ತಿಂಗಳಿನಲ್ಲಿ 25.9 ಲಕ್ಷಕ್ಕೆ ಏರಿಕೆಯಾಗಿ ಎಲ್ಲಾ ರೆಕಾರ್ಟ್ ಬ್ರೇಕ್ ಆಗಿದೆ. ತಿಂಗಳ ಬಳಕೆದಾರರ ಸಂಖ್ಯೆ ಮೊದಲ ಬಾರಿಗೆ 25 ಲಕ್ಷವನ್ನು ತಲುಪಿದೆ. ಇದರಿಂದ ಟಿಕೆಟ್ ಕೌಂಟರ್ ಸಿಬ್ಬಂದಿ ಒತ್ತಡ ಕಮ್ಮಿಯಾಗಿದೆ ಎಂದು ಬಿಎಂಆರ್ ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: Karnataka Police: ದೀರ್ಘಕಾಲದ ಪ್ರಕರಣಗಳಡಿ ಕಳೆದ 6 ತಿಂಗಳಲ್ಲಿ 200 ಮಂದಿ ಬಂಧನ

ಯಾವ್ಯಾವ ತಿಂಗಳು ಎಷ್ಟು ಜನ ಕ್ಯೂಆರ್ ಕೋಡ್ ಬಳಸಿದ್ದಾರೆ?

ತಿಂಗಳು  ಎಷ್ಟು ಜನ
ನವೆಂಬರ್ 2022 2.13 ಲಕ್ಷ
ಡಿಸೆಂಬರ್ 2022  4.31 ಲಕ್ಷ
ಜನವರಿ 2೦23 ‌‌‌‌‌ 5.11 ಲಕ್ಷ
ಮಾರ್ಚ್ 2023 6.5 ಲಕ್ಷ
ಏಪ್ರಿಲ್ 2೦23 8.12 ಲಕ್ಷ
ಜೂನ್ 2023 10.77 ಲಕ್ಷ
ಜುಲೈ 2023 ‌‌‌‌‌‌‌ 12.77 ಲಕ್ಷ
ಅಕ್ಟೋಬರ್ 2023 16.9 ಲಕ್ಷ
ನವೆಂಬರ್ 2023 18.7 ಲಕ್ಷ
ಡಿಸೆಂಬರ್ 2023  25.9 ಲಕ್ಷ

BMRCLನ QR ಕೋಡ್ ಟಿಕೆಟ್ ಅನ್ನು ಪ್ರಯಾಣಿಕರು WhatsApp, Namma Metro ಮೊಬೈಲ್ ಅಪ್ಲಿಕೇಶನ್ ಹಾಗೂ Paytm ಮತ್ತು Amazon ಮೂಲಕ ಪಡೆಯಬಹುದು. ಜೊತೆಗೆ ಗ್ರೂಪ್ ಕ್ಯೂ ಆರ್ ಟಿಕೆಟ್ ಪಡೆಯಲು ಅವಕಾಶವಿದೆ. ದಿನ ಮೆಟ್ರೋದಲ್ಲಿ 6 ರಿಂದ 6.5 ಲಕ್ಷ ಜನ ಪ್ರಯಾಣಿಸುತ್ತಾರೆ. ಈ ಫೈಕಿ 80 ಸಾವಿರದಿಂದ 1 ಲಕ್ಷ ಜನ ಕ್ಯೂಆರ್ ಟಿಕೆಟ್ ಮೂಲಕ ಪ್ರಯಾಣಿಸುತ್ತಿದ್ದು, ಟಿಕೆಟ್ ಕೌಂಟರ್ ನ ಒತ್ತಡ ಕಡಿಮೆ ಆಗಲು ಕಾರಣವಾಗಿದೆ.‌ ಈ ಬಗ್ಗೆ ಸಂತೋಷ ವ್ಯಕ್ತಪಡಿಸಿದ ಪ್ರಯಾಣಿಕರು ಈ ಕ್ಯೂಆರ್ ಕೋಡ್ ಟಿಕೆಟ್ ನಿಂದ ಕ್ಯೂ ನಲ್ಲಿ ನಿಲ್ಲುವುದು ತಪ್ಪುತ್ತದೆ ಇದರಿಂದ ತುಂಬಾ ಸಹಾಯ ಆಗುತ್ತದೆ ಎಂದು ಮೆಟ್ರೋ ಪ್ರಯಾಣಿಕ ರಾಜು ಸಂತಸ ವ್ಯಕ್ತಪಡಿಸಿದರು.

ಅಲ್ಲದೆ ಬಿಎಂಆರ್ ಸಿಎಲ್ ಕ್ಯೂಆರ್ ಅನ್ನೂ ಕಳೆದ ತಿಂಗಳವರೆಗೂ ಬರೊಬ್ಬರಿ 1.39 ಕೋಟಿ ಜನ ಬಳಸಿದ್ದಾರೆ. ಈ ಸಂಖ್ಯೆ ಮುಂದಿನ ದಿನದಲ್ಲಿ ಇನ್ನೂ ಹೆಚ್ಚಳವಾಗುವ ನಿರೀಕ್ಷೆಯಿದೆ. ಒಟ್ಟಾರೆ‌ ನಮ್ಮ‌ ಮೆಟ್ರೋ ಪ್ರಯಾಣಿಕರ‌ ಅನುಕೂಲಕ್ಕಾಗಿ ಪರಿಚಯಿಸಿದ ಕ್ಯೂಆರ್ ಟಿಕೆಟ್ ಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕದೆ.

ಬೆಂಗಳೂರು ಸುದ್ದಿಗಳಿಗಾಗಿ ಇದರ ಮೇಲೆ ಕ್ಲಿಕ್ ಮಾಡಿ

Published On - 10:07 am, Tue, 23 January 24