AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭತ್ತದ ಕಣಜಕ್ಕೆ ಬರಲಿದೆ ಗೂಡ್ಸ್​ರೈಲು: ಈಡೇರಿತು ಹಲವು ವರ್ಷಗಳ ಕನಸು

ಗೂಡ್ಸ್ ರೈಲು ಸಂಚಾರ ಆರಂಭವಾಗೋದ್ರಿಂದ ಭತ್ತ ಮಾರಾಟಗಾರರಿಗೆ, ವ್ಯಾಪಾರಿಗಳಿಗೆ, ಕಾರ್ಖಾನೆಗಳಿಗೆ, ಮೆಕ್ಕೆಜೋಳ ಬೆಳೆಗಾರರಿಗೆ ಅನುಕೂಲವಾಗಲಿದೆ.

ಭತ್ತದ ಕಣಜಕ್ಕೆ ಬರಲಿದೆ ಗೂಡ್ಸ್​ರೈಲು: ಈಡೇರಿತು ಹಲವು ವರ್ಷಗಳ ಕನಸು
ಪ್ರಾತಿನಿಧಿಕ ಚಿತ್ರ
Ghanashyam D M | ಡಿ.ಎಂ.ಘನಶ್ಯಾಮ
| Updated By: ಆಯೇಷಾ ಬಾನು|

Updated on: Dec 09, 2020 | 6:31 AM

Share

ಕೊಪ್ಪಳ: ಭತ್ತದ ಕಣಜ ಎಂದೇ ಹೆಸರುವಾಸಿಯಾದ ಗಂಗಾವತಿಗೆ ಗೂಡ್ಸ್​ ರೈಲು ಸೌಲಭ್ಯ ಒದಗಿಸಲು ನೈರುತ್ಯ ರೈಲ್ವೆ ವಲಯ ಸಮ್ಮತಿಸಿದೆ. ಈ ವಿಷಯವನ್ನು ರೈಲ್ವೆ ಇಲಾಖೆ ಟ್ವೀಟ್ ಮಾಡಿ ಖಚಿತಪಡಿಸಿದೆ.

ಗೂಡ್ಸ್​ ರೈಲು ಸಂಚಾರ ಆರಂಭವಾಗುವುದು ವ್ಯಾಪಾರ ಮತ್ತು ವಹಿವಾಟು ದೃಷ್ಟಿಯಿಂದ ಅನುಕೂಲ ಎಂದು ರೈತರು, ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ. ಗಂಗಾವತಿ ರೈಲು ನಿಲ್ದಾಣದಲ್ಲಿ ಸರಕು ಸಾಗಣೆ ರೈಲಿಗೆ ಮೀಸಲಾದ ನಾಲ್ಕನೇ ಲೈನ್ ಪ್ಲಾಟ್​ಫಾರ್ಮ್ ಸಿದ್ಧವಾಗಿದೆ ಎಂದು ಹುಬ್ಬಳ್ಳಿಯ ನೈರುತ್ಯ ರೈಲ್ವೆ ವಿಭಾಗೀಯ ವ್ಯವಸ್ಥಾಪಕರು ಟ್ವಿಟರ್​ನಲ್ಲಿ ತಿಳಿಸಿದ್ದಾರೆ.

ಗೂಡ್ಸ್ ರೈಲು ಸಂಚಾರ ಆರಂಭವಾಗೋದ್ರಿಂದ ಭತ್ತ ಮಾರಾಟಗಾರರಿಗೆ, ವ್ಯಾಪಾರಿಗಳಿಗೆ, ಕಾರ್ಖಾನೆಗಳಿಗೆ, ಮೆಕ್ಕೆಜೋಳ ಬೆಳೆಗಾರರಿಗೆ ಅನುಕೂಲವಾಗಲಿದೆ. ಗೂಡ್ಸ್ ರೈಲಿನಲ್ಲಿ ಸಾಗಾಟ ಮಾಡುವುದರಿಂದ ವೆಚ್ಚವೂ ಕಡಿಮೆಯಾಗಲಿದೆ ಎನ್ನುವ ಆಶಾಭಾವ ರೈತರಲ್ಲಿ ಮೂಡಿದೆ.

ಈ ಭಾಗದಲ್ಲಿ ರೈತರು ಹೆಚ್ಚು ಭತ್ತ ಬೆಳೆಯುತ್ತಾರೆ. ಗೂಡ್ಸ್ ರೈಲು ಬೇಕು ಅನ್ನೋದು ಇಲ್ಲಿನ ರೈತರ ಒತ್ತಾಯವಾಗಿತ್ತು. ಹೀಗಾಗಿ ನಾನು ಗೂಡ್ಸ್ ರೈಲು ಆರಂಭಿಸಲು ಪತ್ರ ಬರೆದಿದ್ದೆ. ಇದೀಗ ಗೂಡ್ಸ್ ರೈಲು ಸಂಚಾರ ಆರಂಭಿಸೋದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇದು ಖುಷಿ ವಿಚಾರ ಎನ್ನುತ್ತಾರೆ ಸಂಸದ ಸಂಗಣ್ಣ ಕರಡಿ.

ಗೂಡ್ಸ್ ರೈಲು ಸಂಚಾರ ಆರಂಭವಾಗುತ್ತಿರುವುದು ರೈತರಿಗೆ ಖುಷಿತಂದಿದೆ. ಹುಬ್ಬಳ್ಳಿಗೆ ಭತ್ತ, ಮೆಕ್ಕೆಜೋಳ ಸಾಗಿಸಲು ಇದರಿಂದ ಅನುಕೂಲವಾಗಲಿದೆ. ಹಣದ ಖರ್ಚೂ ಕಡಿಮೆ. ಗೂಡ್ಸ್ ರೈಲು ನಮಗೆಲ್ಲಾ ತುಂಬಾ ಅನುಕೂಲ ಅಂತಾರೆ‌ ರೈತ ಮುಖಂಡ ಶರಣೇಗೌಡ.

ಗಿಣಗೇರಾ-ಮೆಹಬೂಬ್ ನಗರ ರೈಲ್ವೆ ಮಾರ್ಗದ ಕಾಮಗಾರಿ ಇದೀಗ ಚುರುಕಾಗಿ ನಡೆಯುತ್ತಿದೆ. 2107ರಲ್ಲಿ ಗಂಗಾವತಿ ತಾಲ್ಲೂಕಿನ ಚಿಕ್ಕಬೆಣಕಲ್​ವರೆಗೂ ರೈಲು ಸಂಚಾರ ಆರಂಭವಾಗಿತ್ತು. ಚಿಕ್ಕಬೆಣಕಲ್ ಗ್ರಾಮದಿಂದ 13 ಕಿಲೋ ಮೀಟರ್ ದೂರವಿರುವ ಗಂಗಾವತಿಗೆ 2019ರಲ್ಲಿ ರೈಲು ಬಂತು. ಗಂಗಾವತಿಯಿಂದ ಕಾರಟಗಿವರೆಗೆ ಸುಮಾರು 27 ಕಿ.ಮೀ. ರೈಲ್ವೆ ಕಾಮಗಾರಿ ಮುಗಿದಿದ್ದು, ರೈಲು ಸಂಚಾರ ಆರಂಭವಾಗಬೇಕಿದೆ.