ಮಂಜಿನ ನಗರಿಯಲ್ಲಿ ತಲೆ ಎತ್ತಲಿದೆ ವಾರ್ ಮ್ಯೂಸಿಯಂ, ನನಸಾಗ್ತಿದೆ 15 ವರ್ಷಗಳ ಕನಸು..
ಅದು ಯೋಧರ ನಾಡು ಎಂದು ಹೆಸರು ಪಡೆದುಕೊಂಡಿರುವ ಜಿಲ್ಲೆ. ಅಲ್ಲಿ ಒಂದು ವಾರ್ ಮ್ಯೂಸಿಯಂ ಆಗಬೇಕು ಅಂತಾ ಕಳೆದ 15 ವರ್ಷಗಳಿಂದ ಸೇನಾಧಿಕಾರಿಗಳು ಕನಸು ಕಂಡಿದ್ದರು. ಇದೀಗ ಆ ಕನಸು ನನಸಾಗುವ ಕಾಲ ಸನ್ನಿಹಿತವಾಗಿದೆ. ಆ ವಾರ್ ಮ್ಯೂಸಿಯಂ ಒಳ ಒಕ್ಕಿದ್ರೆ ರೋಮಾಂಚನಕಾರಿ ದೃಶ್ಯಗಳು ಕಾಣಸಿಗುತ್ತೆ.
ಮಡಿಕೇರಿ: ಇಂಡೋ-ಪಾಕ್ ವಾರ್‌ನಲ್ಲಿ ಭಾಗವಹಿಸಿದ್ದ ಬೃಹತ್ ಟ್ಯಾಂಕರ್.. ಎಲ್ಲರ ಗಮನ ಸೆಳೆಯುತ್ತಿರುವ ಮಿಗ್ ಯುದ್ಧ ವಿಮಾನ. ವಾರ್ ಮೆಮೋರಿಯಲ್ ಜೊತೆಗೆ ಹಲವು ಬಗೆಯ ಮಿಲಿಟರಿ ಗನ್ಗಳು. ವೀರ ಯೋಧರ ಫೋಟೋಗಳು.. ಈ ರೋಮಾಂಚನಕಾರಿಯಾದ ದೃಶ್ಯಕ್ಕೆ ಸಾಕ್ಷಿಯಾಗಿರೋದು ಮಂಜಿನ ನಗರಿ ಮಡಿಕೇರಿಯಲ್ಲಿ.
ರಾಜ್ಯ ಸರ್ಕಾರ ವೀರ ಯೋಧ ತಿಮ್ಮಯ್ಯ ಅವರ ಮನೆಯನ್ನು ಮ್ಯೂಸಿಯಂ ಮಾಡುವುದಾಗಿ ಘೋಷಣೆ ಮಾಡಿತ್ತು. ಅದರ ಫಲವಾಗಿ ಹಾಗೂ ಜನರಲ್ ತಿಮ್ಮಯ್ಯ ಹಾಗೂ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಫೋರಂ ಸಮಿತಿಯ ಪ್ರಯತ್ನದಿಂದ ಈ ವಾರ್ ಮ್ಯೂಸಿಯಂ ಲೋಕಾರ್ಪಣೆಗೆ ಸಜ್ಜಾಗಿದ್ದು, ಮಾರ್ಚ್ ಒಳಗಾಗಿ ಉದ್ಘಾಟನೆಗೊಳ್ಳಲಿದೆ.
ಮ್ಯೂಸಿಯಂನಲ್ಲಿ ಮಿಗ್ ಯುದ್ಧ ವಿಮಾನ: ಸುಮಾರು ಎರಡೂವರೆ ಎಕರೆ ಪ್ರದೇಶದಲ್ಲಿ ಈ ವಾರ್ ಮ್ಯೂಸಿಯಂ ತಲೆ ಎತ್ತಿದ್ದು, 1971 ರ ಇಂಡೋ-ಪಾಕ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಬೃಹತ್ ಟ್ಯಾಂಕರ್ ಇಲ್ಲಿ ರಾರಾಜಿಸುತ್ತಿದೆ. ಜೊತೆಗೆ 1965 ಹಾಗೂ 1971 ಯುದ್ಧದಲ್ಲಿ ಪಾಲ್ಗೊಂಡಿದ್ದ ಮಿಗ್ ಯುದ್ಧ ವಿಮಾನ ಎಲ್ಲರ ಗಮನ ಸೆಳೆಯುತ್ತಿದೆ. ಮನೆಯೊಳಗೆ ಹೋದ್ರೆ ಅಲ್ಲಿ ಜನರಲ್ ತಿಮ್ಮಯ್ಯ ಅವ್ರ ಹಳೆಯ ಫೋಟೋಗಳು, ಅವರು ಬಟ್ಟೆಗಳು, ಯುದ್ಧದಲ್ಲಿ ಬಳಕೆ ಮಾಡುತ್ತಿದ್ದ ಹಲವು ಬಂದೂಕು ಹೀಗೆ ಹತ್ತು ಹಲವು ಯುದ್ಧ ಪರಿಕರಗಳನ್ನು ಕಾಣಬಹುದು.
ಒಟ್ಟಿನಲ್ಲಿ ಜನರಲ್ ತಿಮ್ಮಯ್ಯ ಅವರಿಗೆ ಸಂಬಂಧಿಸಿದಂತೆ ಹಾಗೂ ಭಾರತ ದೇಶದ ಮಿಲಿಟರಿಗೆ ಸಂಬಂಧಿಸಿದಂತೆ ಹಲವು ಮಾಹಿತಿಗಳು ಇಲ್ಲಿ ಯುವಕರಿಗೆ ಲಭ್ಯವಾಗಲಿದೆ. ಭವಿಷ್ಯದಲ್ಲಿ ಮತ್ತಷ್ಟು ಯುವಕರು ಸೇನೆಗೆ ಸೇರಬೇಕೆಂಬ ಕನಸಿನಿಂದ ಈ ವಾರ್ ಮ್ಯೂಸಿಯಂ ಸ್ಥಾಪನೆಯಾಗಿರುವುದು ಯೋಧರ ನಾಡಿನ ಗೌರವನ್ನು ಮತ್ತಷ್ಟು ಹೆಚ್ಚಿಸಿದೆ. -ಸುರೇಶ್