ಗೂಗಲ್ ಕ್ಷಮೆ ಕೋರಿದ ಕಾರಣ ಪ್ರಕರಣವನ್ನು ಅಂತ್ಯಗೊಳಿಸಲಾಗಿದೆ: ಸಚಿವ ಅರವಿಂದ ಲಿಂಬಾವಳಿ
Ugliest language of India: ತಂತ್ರಜ್ಞಾನ ದೈತ್ಯ ಗೂಗಲ್‌ನಲ್ಲಿ Ugliest Language of India ಎಂದು ಸರ್ಚ್ ಮಾಡಿದರೆ ಕನ್ನಡ ಎಂದು ಪ್ರದರ್ಶಿಸುತ್ತಿದ್ದ ಬಗ್ಗೆ ಅಪಾರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಗೂಗಲ್ ಈ ಬಗ್ಗೆ ಕ್ಷಮೆ ಯಾಚಿಸಿದೆ.
ಬೆಂಗಳೂರು: ಕನ್ನಡ ಭಾಷೆಯನ್ನು ಗೂಗಲ್‌ನಲ್ಲಿ ಕೊಳಕು ಭಾಷೆಯೆಂದು ಬಿಂಬಿಸಿದ್ದ (Ugliest language of India )ಪ್ರಮಾದ ವಿಚಾರವಾಗಿ ತಕ್ಷಣ ಕಾನೂನು ಕ್ರಮ ಕೈಗೊಳ್ಳಲು ಸೂಚನೆ ಕೊಟ್ಟಿದ್ದೆ. ಆದರೆ ಇದೀಗ ಗೂಗಲ್‌ನವರು ಎಚ್ಚೆತ್ತುಕೊಂಡು ಕ್ಷಮೆ ಕೇಳಿದ್ದಾರೆ. ಹೀಗಾಗಿ ಪ್ರಕರಣವನ್ನು ಇಲ್ಲಿಗೆ ಅಂತ್ಯಗೊಳಿಸಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಅರವಿಂದ ಲಿಂಬಾವಳಿ ತಿಳಿಸಿದರು.
ತಂತ್ರಜ್ಞಾನ ದೈತ್ಯ ಗೂಗಲ್‌ನಲ್ಲಿ Ugliest Language of India ಎಂದು ಸರ್ಚ್ ಮಾಡಿದರೆ ಕನ್ನಡ ಎಂದು ಪ್ರದರ್ಶಿಸುತ್ತಿದ್ದ ಬಗ್ಗೆ ಅಪಾರ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ ಗೂಗಲ್ ಈ ಬಗ್ಗೆ ನಿನ್ನೆ ರಾತ್ರಿ (ಜೂನ್ 3) ಕ್ಷಮೆ ಯಾಚಿಸಿದೆ. ಈ ಕುರಿತು ಕನ್ನಡದಲ್ಲಿ ಟ್ವೀಟ್ ಮಾಡಿರುವ ಗೂಗಲ್, ತಪ್ಪು ಅರ್ಥ ಬಂದಿರುವುದಕ್ಕೆ ಮತ್ತು ಯಾವುದೇ ಭಾವನೆಗಳಿಗೆ ಧಕ್ಕೆಯಾಗಿದ್ದಕ್ಕೆ ನಾವು ಕ್ಷಮೆ ಯಾಚಿಸುತ್ತಿದ್ದೇವೆ ಎಂದು ಕನ್ನಡಿಗರ ಕ್ಷಮೆ ಯಾಚಿಸಿದೆ. ಕನ್ನಡಿಗರ ಆಗ್ರೋಶಕ್ಕೆ ಮಣಿದು ವೆಬ್ಸೈಟ್ ಗೋಚರವಾಗದಂತೆ ಮಾಡಿದ್ದ ಗೂಗಲ್ ಇದೀಗ ಕನ್ನಡಿಗರಲ್ಲಿ ಬೇಷರತ್ ಕ್ಷಮೆ ಯಾಚಿಸಿದೆ.
ಹುಡುಕುವುದು ಯಾವಾಗಲೂ ಪರಿಪೂರ್ಣವಾಗಿರುವುದಿಲ್ಲ. ಕೆಲವೊಮ್ಮೆ ಇಂಟರ್ನೆಟ್ನಲ್ಲಿ ನಿರ್ದಿಷ್ಟವಾದ ಹುಡುಕಾಟಗಳಿಗೆ ಬರುವ ಫಲಿತಾಂಶಗಳು ಆಶ್ಚರ್ಯವನ್ನುಂಟು ಮಾಡುತ್ತದೆ. ಇದು ಸೂಕ್ತವಲ್ಲ ಎಂಬುದು ನಮಗೆ ಗೊತ್ತು. ಆದರೆ ಯಾವುದೇ ಸಮಸ್ಯೆ ಎದುರಾದಾಗ ಮತ್ತು ನಮ್ಮ ಗಮನಕ್ಕೆ ಬಂದಾಗ ನಾವು ಕ್ಷಿಪ್ರವಾಗಿ ಕ್ರಮ ಕೈಗೊಳ್ಳುತ್ತೇವೆ. ಮತ್ತು ನಮ್ಮ ಅಲ್ಗೋರಿಧಂ ಅನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಸದಾ ಕ್ರಿಯಾಶೀಲರಾಗಿರುವುದನ್ನು ಮುಂದುವರೆಸುತ್ತೇವೆ. ತಪ್ಪು ಅರ್ಥ ಬಂದಿರುವುದಕ್ಕೆ ಮತ್ತು ಯಾವುದೇ ಭಾವನೆಗಳಿಗೆ ಧಕ್ಕೆಯಾಗಿದ್ದಕ್ಕೆ ನಾವು ಕ್ಷಮೆ ಯಾಚಿಸುತ್ತಿದ್ದೇವೆ ಎಂದು ಗೂಗಲ್ ಕ್ಷಮೆ ಕೇಳಿದೆ.
We apologize for the misunderstanding and hurting any sentiments. pic.twitter.com/nltsVezdLQ
— Google India (@GoogleIndia) June 3, 2021
ಭಾರತದ ಕೊಳಕು ಭಾಷೆ ಯಾವುದು ಎಂದು ನೆಟ್ಟಿಗರು ಗೂಗಲ್ ನಲ್ಲಿ ಪ್ರಶ್ನೆ ಮಾಡಿದರೆ ಕನ್ನಡ ಎಂಬ ಉತ್ತರ ಬರುತ್ತಿತ್ತು. ಈ ವಿಚಾರವನ್ನು ಸಚಿವ ಅರವಿಂದ ಲಿಂಬಾವಳಿ ಅವರ ಗಮನಕ್ಕೆ ತಂದಾಗ, ಅವರು ಇದು ಅತ್ಯಂತ ಖಂಡನೀಯ ಸಂಗತಿ. ಗೂಗಲ್ ಆಗಲಿ ,ಬೇರೆ ಯಾರೇ ಆಗಲಿ ಕನ್ನಡ ಭಾಷೆ ಬಗ್ಗೆ ಗೌರವವಿಲ್ಲದೆ ವರ್ತಿಸಿದರೆ ಅಥವಾ ಕನ್ನಡಕ್ಕೆ ಅಪಮಾನ ಎಸಗಿದರೆ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಅವರು ತಿಳಿಸಿದರು. ಕನ್ನಡ ಭಾಷೆ ಎರಡು ಸಾವಿರ ವರ್ಷಗಳಿಗೂ ಹೆಚ್ಚಿನ ಇತಿಹಾಸ ಹೊಂದಿದೆ ಭಾರತದ ಶಾಸ್ತ್ರೀಯ ಭಾಷೆ ಎಂಬ ಹೆಗ್ಗಳಿಕೆ ಪಡೆದಿರುವ ಭಾಷೆಯ ಬಗ್ಗೆ ಕೀಳಾಗಿ ಮಾತಾಡಿದರೂ ಅದನ್ನು ಸಹಿಸಲಾಗುವುದಿಲ್ಲ, ಸದ್ಯ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ಅವರಿಗೆ ಈ ಸಂಬಂಧ ಕಾನೂನು ಇಲಾಖೆಯ ಜೊತೆಗೂಡಿ ಚರ್ಚಿಸಿ ಕೂಡಲೇ ಗೂಗಲ್ ಗೆ ನೋಟಿಸ್ ನೀಡಲು ಸೂಚಿಸಿದ್ದೇನೆ ಎಂದು ಅವರು ತಿಳಿಸಿದ್ದರು.
Queen of all Languages ಎಂದು ಗೂಗಲ್ ಸರ್ಚ್ ಮಾಡಿದರೆ ಉತ್ತರವೇನು ಗೊತ್ತಾ?
(Google apologizes in Ugliest language of India case so case is closed says Karnataka Culture and Kannada Minister Arvind Limbavali)