ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗೆಗೆ ಮಾಧುಸ್ವಾಮಿ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚನೆ

| Updated By: ವಿವೇಕ ಬಿರಾದಾರ

Updated on: Dec 13, 2022 | 3:10 PM

ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿ ಸಂಬಂಧ ಸಚಿವ ಜೆ.ಸಿ.ಮಾಧುಸ್ವಾಮಿ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗೆಗೆ ಮಾಧುಸ್ವಾಮಿ ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚನೆ
ಸಚಿವ ಜೆ ಸಿ ಮಾಧುಸ್ವಾಮಿ
Image Credit source: The news minute
Follow us on

ಬೆಂಗಳೂರು: ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಸಂಬಂಧ ನ್ಯಾ.ಎ.ಜೆ.ಸದಾಶಿವ ಆಯೋಗ ವರದಿ ಜಾರಿ ಮಾಡುವಂತೆ ಆಗ್ರಹಿಸಿ ದಶಕಗಳಿಂದ ಹೋರಾಟ ನಡೆಯುತ್ತಿದೆ. ಈ ಹೋರಾಟ ಈಗ ತೀವ್ರ ಸ್ವಪರೂಪ ಪಡೆದುಕೊಂಡಿದ್ದು, ಮೊನ್ನೆ (ಡಿ.11) ರಂದು ಒಳ ಮೀಸಲಾತಿ ಹೋರಾಟ ಸಮೀತಿ ನಗರದ ಫ್ರೀಡಂ ಪಾರ್ಕ್​ನಲ್ಲಿ ಪ್ರತಿಭಟನೆ ಮಾಡಿತ್ತು. ಈ ವೇಳೆ ಮುಖಂಡರನ್ನು ಬಂಧಿಸಲಾಗಿತ್ತು ಮತ್ತು ಲಾಠಿ ಚಾರ್ಜ್​​ ಕೂಡ ನಡೆದಿತ್ತು. ಈ ಹಿನ್ನೆಲೆ ಒಳಮೀಸಲಾತಿ ವಿಚಾರವಾಗಿ ಸಚಿವ ಜೆ.ಸಿ.ಮಾಧುಸ್ವಾಮಿ (J C Madhuswamy) ನೇತೃತ್ವದಲ್ಲಿ ಸಂಪುಟ ಉಪ ಸಮಿತಿ ರಚಿಸುವಂತೆ ರಾಜ್ಯ ಸರ್ಕಾರ (Karnataka Government) ಆದೇಶ ಹೊರಡಿಸಿದೆ.

ಅತ್ಯಂತ ಶೋಷಿತರಾದ ಮಾದಿಗರಿಗೆ ‌ ಸಿಗಬೇಕಾದ ಹಕ್ಕು‌ನೀಡಿ

ದಾವಣಗೆರೆ: ಒಳಮೀಸಲಾತಿ ಎಂಬುದು ನಮ್ಮ ಹಕ್ಕು. ನಾವು ಬೇರೆಯವರ ತಟ್ಟೆಯಿಂದ ಕದಿಯುತ್ತಿಲ್ಲ. ‌ ಅತ್ಯಂತ ಶೋಷಿತರಾದ ಮಾದಿಗರಿಗೆ ‌ ಸಿಗಬೇಕಾದ ಹಕ್ಕು‌ನೀಡಿ ಎಂದು  ಆದಿಜಾಂಬವ ಗುರುಪೀಠದ ಷಡಕ್ಷರಿಮುನಿ ಸ್ವಾಮೀಜಿ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಪರಿಶಿಷ್ಟ ಜಾತಿಯಲ್ಲಿ ಮಾದಿಗರ ಸಂಖ್ಯೆ ಹೆಚ್ವಿದೆ. ಜೊತೆಗೆ ಅತಿ ಹೆಚ್ಚು ಶೋಷಣೆಗೆ ಒಳಗಾದ ಸಮಾಜ. ಇದೇ ಕಾರಣಕ್ಕೆ ನ್ಯಾಯಮೂರ್ತಿ ಎ.ಜೆ.ಸದಾಶಿವ ಅವರು ‌ತಮ್ಮ ವರದಿಯಲ್ಲಿ ಮೀಸಲಾತಿ ಹಂಚಿಕೆ‌ಮಾಡಿದ್ದು. ಈಗಾಗಲೇ ಪಾದಯಾತ್ರೆ ಮಾಡಲಾಗಿದೆ. ಜೊತೆಗೆ ಇದೇ 18 ರಂದು ಬೆಳಗಾವಿಯಲ್ಲಿ ಸುವರ್ಣ ಸೌಧದ ಮುಂದೆ ಪ್ರತಿಭಟನೆ ‌ನಡೆಸುತ್ತೇವೆ. ಸರ್ಕಾರ ಎಚ್ಚತ್ತು ಕೊಳ್ಳಬೇಕು ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಏನಿದು ನ್ಯಾ.ಎ.ಜೆ.ಸದಾಶಿವ ಆಯೋಗ ವರದಿ

ಪರಿಶಿಷ್ಟ ಜಾತಿ ಪಟ್ಟಿಯಲ್ಲೇ ಸಾಮಾಜಿಕವಾಗಿ ಅತ್ಯಂತ ಹಿಂದುಳಿದಿರುವ ಜಾತಿಗಳಿಗೆ ಆದ್ಯತೆ ನೀಡುವ ಸಲುವಾಗಿ ನ್ಯಾಯಮೂರ್ತಿ.ಎ.ಜೆ.ಸದಾಶಿವ ಅವರ ನೇತೃತ್ವದಲ್ಲಿ ರಚನೆ ಮಾಡಲಾದ ಆಯೋಗ. ಈ ಆಯೋಗವನ್ನು ರಾಜ್ಯದಲ್ಲಿರುವ ಪರಿಶಿಷ್ಟ ಜಾತಿಗಳ ಸ್ಥಿತಿಗತಿಯನ್ನು ಅಧ್ಯಯನ ಮಾಡಲು ರಚಿಸಲಾಯಿತು.

ಈ ಆಯೋಗ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಜಾತಿಗಳ ಸಾಮಾಜಿಕ ಪರಿಸ್ಥಿತಿ, ಆರ್ಥಿಕ ಪರಿಸ್ಥಿತಿ, ಉದ್ಯೋಗ, ವಸತಿ ಸೌಲಭ್ಯ, ಕೃಷಿ ಭೂಮಿ, ಮನೆ, ಶೌಚಾಲಯ ಮುಂತಾದ ಸೌಲಭ್ಯಗಳ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗಿದೆ.

ಇದನ್ನೂ ಓದಿ: ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಮುಖಂಡರ ಬಂಧನ: ಸಿದ್ದರಾಮಯ್ಯ ಖಂಡನೆ

ಪರಿಶಿಷ್ಟ ಪಟ್ಟಿಯಲ್ಲಿರುವ 101 ಜಾತಿಗಳನ್ನು ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಬೇಕು. ಪರಿಶಿಷ್ಟ ಜಾತಿಗೆ ಈಗ ಇರುವ ಶೇ 15ರಷ್ಟು ಮೀಸಲಾತಿಯಲ್ಲಿ ಮೊದಲ ಗುಂಪಿಗೆ ಶೇ 6, ಎರಡನೇ ಗುಂಪಿಗೆ ಶೇ 5, ಮೂರನೇ ಗುಂಪಿಗೆ ಶೇ 3 ಹಾಗೂ ನಾಲ್ಕನೇ ಗುಂಪಿಗೆ ಶೇ 1ರಷ್ಟು ಮೀಸಲಾತಿ ಒದಗಿಸಬೇಕು ಎಂದು ವರದಿಯಲ್ಲಿ ಹೇಳಲಾಗಿದೆ. ಇದನ್ನು ರಾಜ್ಯ ಸರ್ಕಾರ, ಕೇಂದ್ರ ಸರ್ಕಾರಕ್ಕೆ ಶಿಪಾರಸ್ಸು ಮಾಡಬೇಕು ಎಂದೂ ಹೇಳಿದೆ. ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿ 101 ಜಾತಿಗಳು ಇರುವುದನ್ನು ಆಯೋಗ ಗುರುತಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:59 pm, Tue, 13 December 22