ಒಳಮೀಸಲಾತಿ ಜಾರಿ ಹೋರಾಟ ಸಮಿತಿ ಮುಖಂಡರ ಬಂಧನ: ಸಿದ್ದರಾಮಯ್ಯ ಖಂಡನೆ
ನ್ಯಾ.ಎ.ಜೆ.ಸದಾಶಿವ ಆಯೋಗ ವರದಿ ಜಾರಿ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದವರ ಮೇಲೆ ಹಲ್ಲೆ ಮಾಡಿದ್ದನ್ನು ಖಂಡಿಸುತ್ತೇನೆ ಎಂದು ವಿಕ್ಷನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದರು.
ನವದೆಹಲಿ: ನ್ಯಾ.ಎ.ಜೆ.ಸದಾಶಿವ ಆಯೋಗ ವರದಿ ಜಾರಿ ಆಗ್ರಹಿಸಿ ನಿನ್ನೆ (ಡಿ.11) ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ದಲಿತ ಸಂಘರ್ಷ ಸಮಿತಿ, ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಸಮತಿ ಪ್ರತಿಭಟನೆ ನಡೆಸಿತ್ತು. ಸಂಜೆಯಾದರು ಪ್ರತಿಭಟನಾ ಸ್ಥಳಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಬಾರದ ಹಿನ್ನೆಲೆ ಪ್ರತಿಭಟನಾಕಾರರು ಸಿಎಂ ಮನೆಗೆ ಮುತ್ತಿಗೆಹಾಕಲು ಹೊರಟರು. ಈ ವೇಳೆ ಪೊಲೀಸರು ತಡೆದು ಪರಿಶಿಷ್ಟ ಜಾತಿಗಳ ಒಳ ಮೀಸಲಾತಿ ಸಮತಿ ಮುಖಂಡರನ್ನು ಬಂಧಿಸಿದರು. ಜೊತೆಗೆ ಕಾರ್ಯಕರ್ತರ ಮೇಲೆ ಲಾಠಿ ಚಾರ್ಜ್ ಮಾಡಿ ಗುಂಪು ಚದುರಿಸಿದರು. ಈ ವಿಚಾರವಾಗಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಿದ್ದನ್ನು ಖಂಡಿಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಎಲ್ಲ ರಾಜ್ಯದ ಕಾಂಗ್ರೆಸ್ ನಾಯಕರ ಸಭೆ ಕರೆದಿದ್ದು, ಕರ್ನಾಟಕದಿಂದ ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ಭಾಗಿಯಾಗಿದ್ದಾರೆ.
ಈ ವೇಳೆ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸಿಎಂ ಬೊಮ್ಮಾಯಿ ಕರೆದು ಮಾತನಾಡಬೇಕಿತ್ತು. ಇಲ್ಲ ಅಲ್ಲಿಗೆ ತೆರಳಿ ಮನವಿ ಪಡೆಯಬೇಕಿತ್ತು. ನಾವು ಅಧಿಕಾರಕ್ಕೆ ಬಂದರೆ ಸದಾಶಿವ ಆಯೋಗ ಶಿಫಾರಸು ಮಾಡುತ್ತೇವೆ ಅಂತ ಬಿಜೆಪಿ ನಾಯಕರೇ ಭರವಸೆ ನೀಡಿದ್ದರು. ಸರ್ಕಾರ ಸ್ಪಂದಿಸದ ಹಿನ್ನಲೆ ಹೋರಾಟ ತೀವ್ರಗೊಂಡಿದೆ. ಪ್ರತಿಭಟನಾಕಾರರ ಮೇಲೆ ಹಲ್ಲೆ ನಡೆಸಿದ್ದನ್ನು ಖಂಡಿಸುತ್ತೇನೆ ಎಂದು ಹೇಳಿದರು.
ಮಲ್ಲಿಕಾರ್ಜುನ ಖರ್ಗೆ ನಾಯಕತ್ವದಲ್ಲಿ ನಾವೆಲ್ಲ ಕೆಲಸ ಮಾಡುತ್ತಿದ್ದೇವೆ: ಡಿಕೆ ಶಿವಕುಮಾರ್
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಮಾತನಾಡಿ ಮಲ್ಲಿಕಾರ್ಜುನ ಖರ್ಗೆ ನಾಯಕತ್ವದಲ್ಲಿ ನಾವೆಲ್ಲ ಕೆಲಸ ಮಾಡುತ್ತಿದ್ದೇವೆ. ಇಂದಿನ ಸಭೆಗೆ ರಾಜ್ಯದ 15 ನಾಯಕರನ್ನು ಖರ್ಗೆ ಕರೆದಿದ್ದಾರೆ. ಸಭೆಯಲ್ಲಿ ಖರ್ಗೆ ಅವರು ನೀಡುವ ಸಲಹೆಯಂತೆ ಕೆಲಸ ಮಾಡುತ್ತೇವೆ. ಭಾರತ್ ಜೋಡೋ ಮಾದರಿ ನಾಯಕರೆಲ್ಲರೂ ಪ್ರವಾಸ ಮಾಡುತ್ತೇವೆ. ಗ್ರಾಮ ಪಂಚಾಯಿತಿ, ಬೂತ್ ಮಟ್ಟದಲ್ಲಿ ನಾಯಕರು ಪ್ರವಾಸ ಮಾಡಬೇಕು. ರಾಜ್ಯ ಪ್ರವಾಸ ಬಗ್ಗೆಯೂ ಇಂದಿನ ಸಭೆಯಲ್ಲಿ ಚರ್ಚೆ ಮಾಡುತ್ತೇವೆ ಎಂದು ಮಾತನಾಡಿದರು.
ಮುಂದೆ ಸರ್ಪ್ರೈಸ್ ಕೊಡುತ್ತೇನೆ ನೋಡುತ್ತಿರಿ
ಕಾಂಗ್ರೆಸ್ಸಿಗರು ಬಿಜೆಪಿ ಸೇರ್ತಾರೆ ಎಂದು ಆರ್. ಅಶೋಕ್ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು ಅಶೋಕ್ ಲೇಟ್ ಮಾಡಬಾರದು, ಇವತ್ತೋ, ನಾಳೆಯೋ ಮುಗಿಸಲಿ. ಅವನು ಖಾಲಿಯಾದರೆ ಇವನು ಕಾಂಗ್ರೆಸ್ ಪಕ್ಷಕ್ಕೆ ಬರುತ್ತಾನೆ. ಅಶೋಕ್ ರೀತಿ ಹೇಳಲ್ಲ, ಮುಂದೆ ಸರ್ಪ್ರೈಸ್ ಕೊಡುತ್ತೇನೆ ನೋಡುತ್ತಿರಿ ಎಂದು ನುಡಿದರು.
ಸಿದ್ದರಾಮಯ್ಯ ದಲಿತ ವಿರೋಧಿ: ಛಲವಾದಿ ನಾರಾಯಣಸ್ವಾಮಿ
ಇನ್ನೂ ಸಿದ್ದರಾಮಯ್ಯ ಖಂಡನೆ ವಿಚಾರವಾಗಿ ಬಿಜೆಪಿ ಕಚೇರಿಯಲ್ಲಿ ಎಂಎಲ್ಸಿ ಛಲವಾದಿ ನಾರಾಯಣಸ್ವಾಮಿ ಸುದ್ದಿಗೋಷ್ಠಿ ನಡೆಸಿ ಪ್ರತಿಭಟನಾ ಸ್ಥಳಕ್ಕೆ ಸಿಎಂ ಬರಬೇಕೆಂದು ಆಗ್ರಹ ಮಾಡಿದ್ದು ತಪ್ಪಲ್ಲ. ನಿಜವಾದ ಪ್ರತಿಭಟನಾಕಾರರನ್ನು SDPI, ಕಾಂಗ್ರೆಸ್ ದಾರಿ ತಪ್ಪಿಸಿತು. ಪ್ರತಿಭಟನೆ ವೇಳೆ ಕೆಲ SDPI, ಕಾಂಗ್ರೆಸ್ನವರೂ ಸೇರಿಕೊಂಡಿದ್ದರು. ನಿನ್ನೆ ನಡೆದ ಘಟನೆಗೆ ಎಸ್ಡಿಪಿಐ ಹಾಗೂ ಕಾಂಗ್ರೆಸ್ ಪಕ್ಷ ಕಾರಣ ಎಂದು ಆರೋಪಿಸಿದರು.
ಮಾಜಿ ಸಿಎಂ ಸಿದ್ದರಾಮಯ್ಯ ಯಾವತ್ತೂ ಒಳಮೀಸಲಾತಿ ಪರ ಇಲ್ಲ. ಸಿದ್ದರಾಮಯ್ಯ ಸಿಎಂ ಆಗಿದ್ದ ವೇಳೆ ಯಾವುದೇ ಕ್ರಮ ಕೈಗೊಳ್ಳಲಿಲ್ಲ. ಈಗ ಅಧಿಕಾರಕ್ಕೆ ಬಂದರೆ ಒಳಮೀಸಲಾತಿ ಜಾರಿ ಮಾಡುತ್ತೇವೆ ಅಂತಿದ್ದಾರೆ. ಸಿದ್ದರಾಮಯ್ಯ ದಲಿತ ವಿರೋಧಿ ಎಂದು ವಾಗ್ದಾಳಿ ಮಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:25 pm, Mon, 12 December 22