AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದು-ಡಿಕೆಶಿ ಪ್ರತ್ಯೇಕ ಬಸ್​ ಯಾತ್ರಗೆ ಬ್ರೇಕ್, ಸಿಎಂ ಅಭ್ಯರ್ಥಿ ವಿಚಾರಕ್ಕೂ ಮಾನ್ಯತೆ ನೀಡದ ‘ಕೈ’ ಹೈಕಮಾಂಡ್

ಈ ಮೊದಲು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಪ್ರತ್ಯೇಕ ಬಸ್​ ರ್ಯಾಲಿ ಅನುಮತಿ ನೀಡಿದ್ದ ಕಾಂಗ್ರೆಸ್‌ ಹೈಕಮಾಂಡ್, ಬ್ರೇಕ್‌ ಹಾಕಿದೆ. ಅಲ್ಲದೇ ಸಿಎಂ ಅಭ್ಯರ್ಥಿ ವಿಚಾರಕ್ಕೂ ಮಾನ್ಯತೆ ನೀಡಿಲ್ಲ.

ಸಿದ್ದು-ಡಿಕೆಶಿ ಪ್ರತ್ಯೇಕ ಬಸ್​ ಯಾತ್ರಗೆ ಬ್ರೇಕ್, ಸಿಎಂ ಅಭ್ಯರ್ಥಿ ವಿಚಾರಕ್ಕೂ ಮಾನ್ಯತೆ ನೀಡದ ‘ಕೈ’ ಹೈಕಮಾಂಡ್
Siddu And DK Shivakuamar
TV9 Web
| Edited By: |

Updated on: Dec 12, 2022 | 9:04 PM

Share

ನವದೆಹಲಿ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ (Siddaramaiah) ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರ ಪ್ರತ್ಯೇಕ ಬಸ್ ಯಾತ್ರೆಗೆ ಕಾಂಗ್ರೆಸ್ ಹೈಕಮಾಂಡ್ ಬ್ರೇಕ್ ಹಾಕಿದೆ. ಅಲ್ಲದೇ ಸಿಎಂ ಅಭ್ಯರ್ಥಿ ವಿಚಾರಕ್ಕೂ ವರಿಷ್ಠರು ಸಭೆಯಲ್ಲಿ ಮಾನ್ಯತೆ ನೀಡಿಲ್ಲ. ಕರ್ನಾಟಕದ 15 ಕಾಂಗ್ರೆಸ್​ ನಾಯಕರ ಸಭೆ ಬಳಿಕ ಹೈಕಮಾಂಡ್ , ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್​ ಜೊತೆ ಪ್ರತ್ಯೇಕ ಸಭೆ ಮಾಡಿದ್ದು, ಈ ಸಭೆಯಲ್ಲಿ ಒಗ್ಗಟ್ಟಿನಿಂದ ಚುನಾವಣೆಗೆ ಹೋಗಬೇಕೆಂದು ಖಡಕ್ ಸೂಚನೆ ಕೊಟ್ಟಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಖರ್ಗೆ ನೇತೃತ್ವದ ಸಭೆ ಅಂತ್ಯ: ಬೊಮ್ಮಾಯಿ ಸರ್ಕಾರ ವಿರುದ್ಧ ಹೋರಾಟ, ಯಾತ್ರೆ, ಸಮಾವೇಶ ನಡೆಸಲು ತೀರ್ಮಾನ

ಇಂದು (ಡಿಸೆಂಬರ್ 12) ನವದೆಹಲಿಯಲ್ಲಿ ನಡೆದ ಕರ್ನಾಟಕ ನಾಯಕರದೊಂದಿಗೆ ಸಭೆಯಲ್ಲಿ ಸಿದ್ದು ಹಾಗೂ ಡಿಕೆಶಿ ಪ್ರತ್ಯೇಕ ಬಸ್ ಯಾತ್ರೆಗೆ ಹೈಕಮಾಂಡ್ ಅನುಮತಿ ನಿರಾಕರಿಸಿದ್ದು, ಒಗ್ಗಟ್ಟಾಗಿ ಒಂದೇ ತಂಡದಲ್ಲಿ ಬಸ್ ಯಾತ್ರೆ ಕೈಗೊಳ್ಳುವಂತೆ ಹೈಕಮಾಂಡ್ ಸೂಚನೆ ನೀಡಿದೆ.

ಪ್ರತ್ಯೇಕ ಬಸ್ ಯಾತ್ರೆಯಿಂದ ತಪ್ಪು ಸಂದೇಶ ರವಾನೆಯಾಗುತ್ತೆ. ಇದರಿಂದ ಪಕ್ಷದಲ್ಲಿ ಭಿನ್ನಮತವಿದೆ ಎಂದು ಮೆಸೇಜ್ ಪಾಸ್ ಆಗುತ್ತೆ. ಒಗ್ಗಟ್ಟಾಗಿ ಬಸ್ ಯಾತ್ರೆ ಕೈಗೊಳ್ಳುವಂತೆ ಸೂಚಿಸಿದ್ದು, ಒಂದೇ ತಂಡದಲ್ಲಿ ಮೊದಲು 150 ಕ್ಷೇತ್ರಗಳಲ್ಲಿ ಯಾತ್ರೆ ಮಾಡುವಂತೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ವರಿಷ್ಠರು ತಿಳಿಸಿದ್ದಾರೆ.

ಈಗಾಗಲೇ ಸಿದ್ದರಾಮಯ್ಯ ಅವರು ಬೀದರ್​ನಿಂದ ಜನವರಿ 3ರಿಂದ ಬಸ್ ಯಾತ್ರೆ ಶುರು ಮಾಡಲು ತೀರ್ಮಾನಿಸಿದ್ದರು. ಇತ್ತ ಡಿಕೆ ಶಿವಕುಮಾರ್ ಸಹ ಮೈಸೂರು ಭಾಗದ ಕಡೆ ಯಾತ್ರೆ ಮಾಡಲು ಬಸ್ ಸಿದ್ಧಪಡಿಸಿದ್ದರು. ಆದ್ರೆ, ಇದೀಗ  ಪ್ರತ್ಯೇಕ ಬಸ್ ಯಾತ್ರೆಗೆ ಹೈಕಮಾಂಡ್ ಬ್ರೇಕ್ ಹಾಕಿದೆ.

ಸಿಎಂ ಅಭ್ಯರ್ಥಿ ವಿಚಾರಕ್ಕೂ ಮಾನ್ಯತೆ ನೀಡದ ‘ಕೈ’ ಹೈಕಮಾಂಡ್

ಹೌದು…ಮುಂದಿನ ಸಿಎಂ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಮಧ್ಯೆ ದೊಡ್ಡ ಕಾಳಗ ನಡೆಯುತ್ತಿದ್ದು, ಇದಕ್ಕೆ ಹೈಕಮಾಂಡ್ ಫುಲ್ ಸ್ಟಾಪ್ ಇಟ್ಟಿದೆ.

ಯಾರನ್ನೂ ಕೂಡ ಮುಖ್ಯಮಂತ್ರಿ ಅಭ್ಯರ್ಥಿ ಘೋಷಣೆ ಇಲ್ಲ. ಸಾಮೂಹಿಕ ನಾಯಕತ್ವದಲ್ಲೇ ಚುನಾವಣೆ ಎದುರಿಸಿ ಗೆಲ್ಲುತ್ತೇವೆ. ಚುನಾವಣೆ ಬಳಿಕವೇ ಸಿಎಂ ಅಭ್ಯರ್ಥಿ ಹೆಸರು ಘೋಷಿಸುತ್ತೇವೆ. ಅಲ್ಲಿವರೆಗೆ ಸಿಎಂ ವಿಚಾರವೇ ಅಪ್ರಸ್ತುತ ಎಂದ ‘ಕೈ’ ಹೈಕಮಾಂಡ್​ ಕರ್ನಾಟಕ ನಾಯಕರಿಗೆ ಸಭೆಯಲ್ಲಿ ಸ್ಪಷ್ಟವಾಗಿ ಹೇಳಿದೆ. ಈ ಮೂಲಕ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ ನಡುವಿನ ಸಿಎಂ ಗುದ್ದಾಟಕ್ಕೆ ಬ್ರೇಕ್ ಹಾಕಿದ್ದು, ಒಗ್ಗಟ್ಟಾಗಿ ಕಾರ್ಯನಿರ್ವಹಿಸುವಂತೆ ಖಡಕ್ ಸೂಚನೆ ಕೊಟ್ಟಿದೆ.

ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ