ಶಿಕ್ಷಕರಿಗಾಗಿ ನಿರ್ಮಿಸಿದ ವಸತಿ ಕಟ್ಟಡವಾಯ್ತು ಜೂಜು ಅಡ್ಡೆ, ಅನೈತಿಕೆ ಚಟುವಟಿಕೆಗಳ ತಾಣ

ಶಿಕ್ಷಣ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಸುಸಜ್ಜಿತ ಕಟ್ಟಡವೊಂದು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಕೋಟಿಗಟ್ಟಲೇ ಹಣ ಖರ್ಚು ಮಾಡಿ ನಿರ್ಮಿಸಿದ ಈ ಕಟ್ಟಡ ಈ ರೀತಿ ಅನಾಥವಾಗಿ ಬಿದ್ದಿರೋದು ಶಿಕ್ಷಕರಲ್ಲಿ ಆಕ್ರೊಶ ಮೂಡಿಸಿದೆ.

ಶಿಕ್ಷಕರಿಗಾಗಿ ನಿರ್ಮಿಸಿದ ವಸತಿ ಕಟ್ಟಡವಾಯ್ತು ಜೂಜು ಅಡ್ಡೆ, ಅನೈತಿಕೆ ಚಟುವಟಿಕೆಗಳ ತಾಣ
Updated By: KUSHAL V

Updated on: Dec 10, 2020 | 5:54 PM

ರಾಯಚೂರು ಅಂದ್ರೆ ಸಾಕು ಮೊದಲು ನೆನಪಾಗೋದು ಕೆಂಡದಂತಹ ಬಿಸಿಲು. ಹೀಗಾಗಿ, ಸರ್ಕಾರಿ ನೌಕರರ ವಲಯದಲ್ಲಿ ಜಿಲ್ಲೆ ಇವತ್ತಿಗೂ ಪನಿಶ್ಮೆಂಟ್ ಏರಿಯಾ ಅನ್ನೋ ಅಣಕು ಮಾತು ಚಾಲ್ತಿಯಲ್ಲಿದೆ. ಹಾಗಾಗಿ, ಈ ಜಿಲ್ಲೆಗೆ ವರ್ಗಾವಣೆ ಆಗಿ ಬರೋಕೆ ಬಹುತೇಕ ಸರ್ಕಾರಿ ನೌಕರರು ಹಿಂದೇಟು ಹಾಕುತ್ತಾರೆ.

ಅಂತಹದ್ದರಲ್ಲಿ, ಜಿಲ್ಲೆಗೆ ವರ್ಗಾವಣೆಯಾಗಿ ಬರುವ ಸರ್ಕಾರಿ ನೌಕರರಿಗೆ ವಸತಿ ಸೌಕರ್ಯ ಕಲ್ಪಿಸಬೇಕಿದ್ದ ಭವನಗಳು ಇವತ್ತು ಜೂಜು ಅಡ್ಡೆ ಮತ್ತು ಇತರ ಅನೈತಿಕ ಚಟುವಟಿಕೆಗಳ ತಾಣಗಳಾಗಿ ಮಾರ್ಪಟ್ಟಿದೆ. ಇದರಿಂದ, ಸರ್ಕಾರಿ ನೌಕರರು ಬಾಡಿಗೆ ಮನೆಗಳಲ್ಲೇ ವಾಸಿಸಬೇಕಾದಂತಹ ಸ್ಥಿತಿ ಎದುರಾಗಿದೆ.

ಜಿಲ್ಲೆಯ ಮಾನ್ವಿ ತಾಲೂಕಿನ ಪೊತ್ನಾಳ ಗ್ರಾಮದ ಸರ್ಕಾರಿ ಶಾಲೆಗೆ ಸೇರಿದ 8 ಎಕರೆ ಪ್ರದೇಶದಲ್ಲಿ ಶಿಕ್ಷಕರ ಭವನವೊಂದನ್ನು ನಿರ್ಮಿಸಲಾಗಿದೆ . ಸರ್ಕಾರಿ ಶಾಲೆಯ ಶಿಕ್ಷಕರ ಕುಟುಂಬಗಳು ನೆಲಸಲು ಅವಕಾಶ ಕಲ್ಲಿಸುವ ಸದುದ್ದೇಶದಿಂದ ಈ ಅಚ್ಚುಕಟ್ಟಾದ ಭವನವನ್ನು ನಿರ್ಮಿಸಲಾಗಿತ್ತು. ಎಂಟು ಕುಟುಂಬಗಳು ಇಲ್ಲಿ ಹಾಯಾಗಿ ವಾಸಿಸುವಂತಹ ಸೌಕರ್ಯವನ್ನು ಸಹ ಒದಗಿಸಲಾಗಿದೆ. ಡಬಲ್ ಬೆಡ್​ ರೂಮ್, ಅಡುಗೆ ಕೋಣೆ, ಹಾಲ್ ಹೀಗೆ ಅತ್ಯಾಧುನಿಕ ಶೈಲಿಯಲ್ಲೇ ಈ ಕಟ್ಟಡವನ್ನು ನಿರ್ಮಿಸಲಾಗಿದೆ.

ಶಿಕ್ಷಕರ ವಸತಿಭವನ ಆಯ್ತು ಅನೈತಿಕ ಚಟುವಟಿಕೆಯ ಆಗರ
ಆದ್ರೆ, ಕಟ್ಟಡ ಉದ್ಘಾಟನೆಗೂ ಮುನ್ನವೇ ಹಾಳಾಗಿದೆ. ಹೌದು, ರಾತ್ರಿ ಹೊತ್ತು ಕಿಡಿಗೇಡಿಗಳು ಕಟ್ಟಡಕ್ಕೆ ನುಗ್ಗಿ ಕೆಲ ಗೋಡೆಗಳನ್ನ ಧ್ವಂಸಗೊಳಿಸಿದ್ದಾರೆ. ಇನ್ನು, ಕೆಲವರು ಇದನ್ನ ಜೂಜು ಅಡ್ಡೆಯನ್ನಾಗಿ ಮಾಡಿಕೊಂಡಿದ್ಧಾರೆ. ಎರಡು ಅಂತಸ್ತಿನ ಈ ಕಟ್ಟಡ ಸೂಕ್ತ ನಿರ್ವಹಣೆ ಇಲ್ಲದೆ ಹಾಳು ಕೊಂಪೆಯಾಗಿದ್ದಲ್ಲದೆ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಈ ಕಟ್ಟಡದ ದುಃಸ್ಥಿತಿ ನೋಡಿ ಶಿಕ್ಷಕರು ಭಾರಿ ನಿರಾಸೆ ವ್ಯಕ್ತಪಡಿಸ್ತಿದ್ಧಾರೆ.

ಸುಸಜ್ಜಿತ ವಸತಿ ಕಟ್ಟಡವಿದ್ರೂ ಬಾಡಿಗೆ ಮನೆಗಳಲ್ಲಿ ಶಿಕ್ಷಕರ ವಾಸ
ಇನ್ನು, ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಯ ದಿವ್ಯ ನಿರ್ಲಕ್ಷ್ಯದಿಂದಾಗಿ ಈ ಕಟ್ಟಡ ಸಂಪೂರ್ಣವಾಗಿ ಹಾಳಾಗಿದೆ. ಪೋತ್ನಾಳ ಹೋಬಳಿ ವ್ಯಾಪ್ತಿಯಲ್ಲಿ 40ಕ್ಕೂ ಹೆಚ್ಚು ಸರ್ಕಾರಿ ಶಾಲೆಗಳಿವೆ. ಬಹುತೇಕ ಶಿಕ್ಷಕರು ರಾಜ್ಯದ ವಿವಿಧ ಜಿಲ್ಲೆಗಳಿಂದ ವರ್ಗಾವಣೆಯಾಗಿ ಬಂದವರು. ಈ ಎಲ್ಲಾ ಶಿಕ್ಷಕರು ಪೋತ್ನಾಳ ಗ್ರಾಮದಲ್ಲಿ ಬಾಡಿಗೆ ಮನೆಗಳಲ್ಲಿ ವಾಸವಾಗಿದ್ದಾರೆ.

ಪ್ರತಿ ತಿಂಗಳು 3 ರಿಂದ 4 ಸಾವಿರ ರೂಪಾಯಿ ಬಾಡಿಗೆ ಪಾವತಿಸುತ್ತಿದ್ದಾರೆ. ಶಿಕ್ಷಕರು ಈ ರೀತಿ ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರೋದ್ರಿಂದ ಹತ್ತಾರು ಸಂಕಷ್ಟಗಳನ್ನ ಅನುಭವಿಸುವಂತಾಗಿದೆ. ಇನ್ನು ಸುಸಜ್ಜಿತ ವಸತಿ ಕಟ್ಟಡವಿದ್ರೂ ಸರ್ಕಾರಿ ಶಾಲೆಯ ಶಿಕ್ಷಕರು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರೋದು ನಿಜಕ್ಕೂ ವಿಷಾದನೀಯ.

ಅದೇನೆ ಇರಲಿ, ಶಿಕ್ಷಣ ಇಲಾಖೆಯ ಅಧಿಕಾರಿಗಳ ಬೇಜವಾಬ್ದಾರಿತನದಿಂದಾಗಿ ಸುಸಜ್ಜಿತ ಕಟ್ಟಡವೊಂದು ಅನೈತಿಕ ಚಟುವಟಿಕೆಗಳ ತಾಣವಾಗಿ ಮಾರ್ಪಟ್ಟಿದೆ. ಕೋಟಿಗಟ್ಟಲೇ ಹಣ ಖರ್ಚು ಮಾಡಿ ನಿರ್ಮಿಸಿದ ಈ ಕಟ್ಟಡ ಈ ರೀತಿ ಅನಾಥವಾಗಿ ಬಿದ್ದಿರೋದು ಶಿಕ್ಷಕರಲ್ಲಿ ಆಕ್ರೊಶ ಮೂಡಿಸಿದೆ. ಇನ್ನಾದ್ರೂ ಸಂಬಂಧಪಟ್ಟ ಅಧಿಕಾರಿಗಳು ಎಚ್ಚೆತ್ತುಕೊಂಡು ಈ ಶಿಕ್ಷಕರ ಭವನವನ್ನು ಶಿಕ್ಷಕರಿಗೆ ಸಮರ್ಪಿಸುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುತ್ತಾ ಅನ್ನೋದನ್ನ ಕಾದು ನೋಡಬೇಕಷ್ಟೆ.
-ಸಿದ್ದು ಬಿರಾದಾರ್

ಶಿಕ್ಷಕರಿಗೋಸ್ಕರ ಸರ್ಕಾರ ಕೋಟಿಗಟ್ಟಲೇ ಖರ್ಚು ಮಾಡಿ ನಿರ್ಮಿಸಿರುವ ಈ ವಸತಿ ಗೃಹಗಳು ಇಲ್ಲಿ ಅನಾಥವಾಗಿ ಬಿದ್ದಿರೋದು ನಿಜಕ್ಕೂ ಬೇಸರ ಮೂಡಿಸುವಂತಹ ಸಂಗತಿ. ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಕೂಡಲೇ ಇದನ್ನ ದುರಸ್ಥಿಪಡಿಸುವ ಮೂಲಕ ಶಿಕ್ಷಕರಿಗೆ ವಾಸಿಸಲು ಅಗತ್ಯ ಸೌಕರ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕಿದೆ.
– ಶರ್ಫುದ್ದೀನ್, ಶಿಕ್ಷಣ ಪ್ರೇಮಿ

https://tv9kannada.com/in-vijayapura-mother-and-her-son-doing-tough-job-for-living

Published On - 5:45 pm, Thu, 10 December 20