ಈ ಸನ್ಮಾನ ನನಗಲ್ಲ.. ಗ್ರಾಮಸ್ಥರು ನೀಡಿದ ಚಿನ್ನದ ಕಿರೀಟ ಸರ್ಕಾರಕ್ಕೆ ನೀಡಿದ DCM ಗೋವಿಂದ ಕಾರಜೋಳ
ನನ್ನ ಹುಟ್ಟೂರು ಕಾರಜೋಳ ಗ್ರಾಮದ ಇಡೀ ಗ್ರಾಮಸ್ಥರು ಅತ್ಯಂತ ಪ್ರೀತಿ ಅಭಿಮಾನದಿಂದ 140 ಗ್ರಾಂ ಬಂಗಾರದ ಕಿರೀಟವನ್ನು ಅರ್ಪಿಸಿದ್ದರು. ಆದರೆ, ಈ ಗೌರವ ಸರ್ಕಾರಕ್ಕೆ ಸಮರ್ಪಣೆ ಆಗಬೇಕು ಎಂದು ಗೋವಿಂದ ಕಾರಜೋಳ ತಿಳಿಸಿದರು.
ಬೆಂಗಳೂರು : ವಿಜಯಪುರ ಜಿಲ್ಲೆಯ ಬಬಲೇಶ್ವರದ ಕಾರಜೋಳ ಗ್ರಾಮಸ್ಥರು ಉಪಮುಖ್ಯಮಂತ್ರಿ ಗೋವಿಂದ ಎಂ ಕಾರಜೋಳ ಅವರಿಗೆ ಕಳೆದ ತಿಂಗಳು ಬಂಗಾರದ ಕಿರೀಟವನ್ನು ಹಾಕಿ ಗೌರವಿಸಿದ್ದರು. ಗೋವಿಂದ ಕಾರಜೋಳ ಅವರು ಇಂದು ಈ ಕಿರೀಟವನ್ನು ವಿಧಾನಸೌಧದಲ್ಲಿ ಮುಖ್ಯ ಕಾರ್ಯದರ್ಶಿ ಮೂಲಕ ಸರ್ಕಾರಕ್ಕೆ ಒಪ್ಪಿಸಿದರು.
ಈ ವೇಳೆ ಮಾತನಾಡಿದ ಗೋವಿಂದ ಕಾರಜೋಳ, ನನ್ನ ಹುಟ್ಟೂರು ಕಾರಜೋಳ ಗ್ರಾಮದ ಇಡೀ ಗ್ರಾಮಸ್ಥರು ಅತ್ಯಂತ ಪ್ರೀತಿ ಅಭಿಮಾನದಿಂದ 140 ಗ್ರಾಂ ತೂಕದ ಬಂಗಾರದ ಕಿರೀಟವನ್ನು ಅರ್ಪಿಸಿದ್ದರು. ಈ ಗ್ರಾಮದ ಅಭಿವೃದ್ಧಿಗಾಗಿ ನಾನು ಸಲ್ಲಿಸಿದ ಗಣನೀಯ ಸೇವೆ ಪರಿಗಣಿಸಿ ಹಾಗೂ ತಮ್ಮ ಊರಿನ ವ್ಯಕ್ತಿ ಉಪ ಮುಖ್ಯಮಂತ್ರಿಯಾಗಿದ್ದಕ್ಕಾಗಿ ಈ ಬಂಗಾರದ ಕಿರೀಟವನ್ನು ನನಗೆ ನೀಡಿದ್ದರು ಎಂದು ಊರಿನವರು ತಮ್ಮ ಮೇಲಿಟ್ಟ ಪ್ರೀತಿ-ವಿಶ್ವಾಸದ ಬಗ್ಗೆ ಹೇಳಿದರು.
ಈ ಸನ್ಮಾನ ಸರ್ಕಾರಕ್ಕೆ ಸಲ್ಲಬೇಕು: ಕಳೆದ 6 ವರ್ಷಗಳಿಂದ ನನಗೆ ಸನ್ಮಾನ ಮಾಡಬೇಕೆಂಬುದು ಊರಿನವರ ಉದ್ದೇಶ ಆಗಿತ್ತು. ಆದರೆ, ಸಮಯ ಕೂಡಿ ಬಂದಿರಲಿಲ್ಲ. ನವೆಂಬರ್ 23 ರಂದು ನಡೆದ ಕಾರ್ಯಕ್ರಮದಲ್ಲಿ ನನಗೆ ಈ ಚಿನ್ನದ ಕಿರೀಟವನ್ನು ಸಮರ್ಪಿಸಲಾಗಿದೆ. ಈ ಸನ್ಮಾನ ನನಗಲ್ಲ ಸರ್ಕಾರಕ್ಕೆ ಸಲ್ಲುತ್ತದೆ. ಈ ಹಿನ್ನೆಲೆಯಲ್ಲಿ ಈ ಬಂಗಾರದ ಕಿರೀಟವನ್ನು ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್ ಅವರ ಮೂಲಕ ಸರ್ಕಾರಕ್ಕೆ ಒಪ್ಪಿಸಿರುವುದಾಗಿ ತಿಳಿಸಿದರು. ಜೊತೆಗೆ ಸನ್ಮಾನಿಸಿದ ಗ್ರಾಮಸ್ಥರಿಗೆ ಗೋವಿಂದ ಕಾರಜೋಳ ಕೃತಜ್ಞತೆ ಸಲ್ಲಿಸಿದರು.