ಬೆಂಗಳೂರು: ಧಾರ್ಮಿಕ ಕಟ್ಟಡಗಳ ಸಂರಕ್ಷಣೆ ತಿದ್ದುಪಡಿ ವಿಧೇಯಕಕ್ಕೆ ಮಂಗಳವಾರ ಕರ್ನಾಟಕ ವಿಧಾನಸಭೆಯು ಧ್ವನಿಮತದ ಮೂಲಕ ಅಂಗೀಕಾರ ನೀಡಿತು. ಇದಕ್ಕೂ ಮುನ್ನ ವಿಧೇಯಕದ ಮೇಲೆ ಬಿಸಿಬಿಸಿ ಚರ್ಚೆ ನಡೆಯಿತು. ಚರ್ಚೆಯ ವೇಳೆ ಮಾಧುಸ್ವಾಮಿ ಆಡಿದ ಮಾತಿನ ಬಗ್ಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ನಂಜನಗೂಡು ದೇವಾಲಯವನ್ನು ತೆರವು ಮಾಡುವ ಸಂಗತಿ, ಕಾರ್ಯಾಚರಣೆ ನಡೆಸುವ ಮೊದಲು ಸರ್ಕಾರದ ಗಮನಕ್ಕೆ ಬಂದಿರಲಿಲ್ಲ ಎಂದು ವಿಧಾನಸಭೆಯಲ್ಲಿ ಕಾನೂನು ಸಚಿವ ಮಾಧುಸ್ವಾಮಿ ಹೇಳಿದರು. ಈ ಹೇಳಿಕೆಯನ್ನು ಪ್ರತಿಪಕ್ಷ ಕಾಂಗ್ರೆಸ್ ಒಪ್ಪಲಿಲ್ಲ. ಸರ್ಕಾರದ ಗಮನಕ್ಕೆ ತರದೇ ದೇವಸ್ಥಾನ ಒಡೆದಿದ್ದರೆ ಆ ಅಧಿಕಾರಿ ಮೇಲೆ ಕ್ರಮ ತೆಗೆದುಕೊಳ್ಳಿ ಎಂದು ಸಿದ್ದರಾಮಯ್ಯ ಆಗ್ರಹಿಸಿದರು.
‘ಈ ವಿಷಯವನ್ನು ಅಲ್ಲಿನ ಅಧಿಕಾರಿಗಳು ಸರ್ಕಾರದ ಗಮನಕ್ಕೆ ತಂದಿಲ್ಲ ಎಂದಾದರೆ ನೀವೇಕೆ ಮಂತ್ರಿಯಾಗಿದ್ದೀರಿ? ಸರ್ಕಾರ ಯಾಕಿದೆ? ನಿಮಗೆ ಗೊತ್ತಿಲ್ದೇ ದೇವಸ್ಥಾನ ಹೇಗೆ ಒಡೆದು ಹಾಕಲು ಸಾಧ್ಯ’ ಎಂದು ಸಿದ್ದರಾಮಯ್ಯ ಏರಿದ ದನಿಯಲ್ಲಿ ಪ್ರಶ್ನಿಸಿದರು. ಮಧ್ಯಪ್ರವೇಶಿಸಿ ಮಾತನಾಡಿದ ಕಂದಾಯ ಸಚಿವ ಆರ್.ಅಶೋಕ್, ಇದು ಡಿಸಿಯವರ ಓವರ್ ಆಕ್ಟಿಂಗ್ ಎಂದರು. ಈ ಉತ್ತರವನ್ನೂ ಸಿದ್ದರಾಮಯ್ಯ ಒಪ್ಪಲ್ಲಿ. ಓವರ್ ಆಕ್ಟಿಂಗ್ ಅಂದ್ರೇನು ಎಂದು ಪ್ರಶ್ನಿಸಿದರು.
ಸುಪ್ರೀಂಕೋರ್ಟ್ ಆದೇಶದಂತೆ ಜಿಲ್ಲಾಧಿಕಾರಿ ನಡೆದುಕೊಂಡಿದ್ದಾರೆ. ಅವರ ವಿರುದ್ಧ ಕ್ರಮ ಜರುಗಿಸಲು ಅವಕಾಶವಿಲ್ಲ ಎಂದು ಸಚಿವ ಮಾಧುಸ್ವಾಮಿ ಸ್ಪಷ್ಟಪಡಿಸಿದರು. ಮಾಧುಸ್ವಾಮಿ ಹೇಳಿಕೆಯನ್ನು ಪ್ರತಿಪಕ್ಷಗಳು ಒಪ್ಪಲಿಲ್ಲ. ಗದ್ದಲದ ನಡುವೆ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು.
ಹಿಂದೂ ಜಾಗರಣ ವೇದಿಕೆ ಒತ್ತಡಕ್ಕೆ ಮಣಿದ ಸರ್ಕಾರ
ನಂಜನಗೂಡಿನಲ್ಲಿ ದೇವಸ್ಥಾನ ಒಡೆದಿದ್ದಕ್ಕೆ ಹಿಂದೂ ಜಾಗರಣ ವೇದಿಕೆ ಪ್ರತಿಭಟನೆ ಮಾಡಿತು. ಸರ್ಕಾರದ ಮೇಲೆ ಕಟುಪದಗಳಿಂದ ದಾಳಿ ಮಾಡಿತು. ಹೀಗಾಗಿ ಹಿಂದೂ ಜಾಗರಣ ವೇದಿಕೆಯ ಒತ್ತಡಕ್ಕೆ ಸರ್ಕಾರ ಮಣಿದು ಈ ವಿಧೇಯಕ ತಂದಿದೆ ಎಂದು ಸಿದ್ದರಾಮಯ್ಯ ನೇರ ಆರೋಪ ಮಾಡಿದರು.
ನಂಜನಗೂಡಿನಲ್ಲಿ ನಿಮ್ಮ ಸರ್ಕಾರ ಒಂದು ದೇವಸ್ಥಾನ ಒಡೆದಿದೆ. ಸರ್ಕಾರದ ಗಮನಕ್ಕೆ ತಾರದಂತೆ ಜಿಲ್ಲಾಧಿಕಾರಿ ಹೇಗೆ ದೇವಸ್ಥಾನ ಒಡೆಯುತ್ತಾರೆ. ಸರ್ಕಾರದ ಗಮನಕ್ಕೆ ಬಂದಿರಲೇ ಬೇಕು, ಬರದೇ ಇರೋಕ್ಕೆ ಸಾಧ್ಯವೇ ಇಲ್ಲ. ನೀವೇ ದೇಗುಲ ಒಡೆಸಿ ಹಾಕಿ, ಈಗ ರಕ್ಷಣೆಗೆ ಮುಂದಾಗಿದ್ದೀರಿ. 12 ವರ್ಷಗಳ ಹಿಂದೆಯೇ ಸುಪ್ರೀಂಕೋರ್ಟ್ ಆದೇಶ ಬಂದಿತ್ತು. ಹಿಂದೆಯೂ ಹಲವು ದೇವಸ್ಥಾನಗಳನ್ನು ಒಡೆದಿದ್ದಾರೆ. ಆ ದೇವಸ್ಥಾನಗಳ ಬಗ್ಗೆ ಏನು ನಿರ್ಧಾರ ಮಾಡ್ತೀರಿ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಪ್ರತಿಕ್ರಿಯೆ
ದೇಗುಲ ಸಂರಕ್ಷಣಾ ವಿಧೇಯಕದ ಮೇಲಿನ ಚರ್ಚೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಈ ಸಂಬಂಧ 2009ರಲ್ಲಿಯೇ ಕೋರ್ಟ್ ತೀರ್ಪು ಬಂದಿತ್ತು. 2009ರ ಬಳಿಕ ಅನಧಿಕೃತ ಮಂದಿರಗಳು ನಿರ್ಮಾಣ ಆಗಬಾರದು ಎನ್ನುವುದು ಸುಪ್ರೀಂಕೋರ್ಟ್ ಆದೇಶದ ತಿರುಳು. ಆದರೆ 2009ರ ಬಳಿಕವೂ ಅನೇಕ ಅನಧಿಕೃತ ದೇಗುಲಗಳು ನಿರ್ಮಾಣ ಆಗಿವೆ. ಸುಪ್ರೀಂಕೋರ್ಟ್ ಆದೇಶವನ್ನು ಹೇಗೆ ಜಾರಿ ಮಾಡೋದು ಎನ್ನುವುದು ಈಗ ನಮ್ಮೆದುರು ಇರುವ ಮೂಲ ಪ್ರಶ್ನೆ. ಅದಕ್ಕಾಗಿ ನಾವು ಈ ವಿಧೇಯಕ ಮೂಲಕ ಪರಿಹಾರ ಕಂಡುಕೊಂಡಿದ್ದೇವೆ. ಕೊರತೆ ನೀಗಿಸುವ ಸಲುವಾಗಿ ವಿಧೇಯಕ ತಂದಿದ್ದೇವೆ ಎಂದು ವಿಧೇಯಕವನ್ನು ಸಮರ್ಥಿಸಿಕೊಂಡರು.
ಪ್ರತಿಮೆಗಳಿಗೂ ರಕ್ಷಣೆ ಕೊಡಿ: ಕಾಶೆಂಪೂರ್
ವಿಧೇಯಕದ ಮೇಲಿನ ಚರ್ಚೆಯಲ್ಲಿ ಮಾತನಾಡಿದ ಜೆಡಿಎಸ್ ಶಾಸಕ ಬಂಡೆಪ್ಪ ಕಾಶಂಪೂರ್, ಉತ್ತರ ಕರ್ನಾಟಕ ಕಡೆ ಮಹಾತ್ಮರು, ಗಣ್ಯರ ಪ್ರತಿಮೆಗಳನ್ನು ತೆರವು ಮಾಡಲಾಗುತ್ತಿದೆ. ರಸ್ತೆಗಳಲ್ಲಿರುವ ಪ್ರತಿಮೆಗಳನ್ನು ತೆರವು ಮಾಡಲು ಯಾರು ಹೇಳಿದ್ದು? ಪ್ರಾರ್ಥನಾ ಮಂದಿರಗಳನ್ನು ರಕ್ಷಣೆ ಮಾಡಿ. ಈ ಹಿಂದೆ ತೆರವು ಮಾಡಿರುವ ಪ್ರಾರ್ಥನಾ ಮಂದಿರಗಳನ್ನು ಮರು ನಿರ್ಮಾಣ ಮಾಡಬೇಕು.
ಇದನ್ನೂ ಓದಿ: ಧಾರ್ಮಿಕ ಕೇಂದ್ರಗಳ ತೆರವಿಗೆ ಹೊಸ ನಿಯಮಾವಳಿ ರೂಪಿಸಲು ಸರ್ಕಾರ ನಿರ್ಧಾರ; ವಿಧೇಯಕ ಮಂಡನೆ
ಇದನ್ನೂ ಓದಿ: ಬೆಲೆ ಏರಿಕೆ ಪ್ರಸ್ತಾಪಿಸಿ ಕೇಂದ್ರ-ರಾಜ್ಯ ಬಿಜೆಪಿ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ
(Govt Doesn’t know about temple demolished in Nanjangud says minister Madhuswamy Congress Leader Siddaramaiah Rejects)
Published On - 8:16 pm, Tue, 21 September 21