ಬೆಲೆ ಏರಿಕೆ ಪ್ರಸ್ತಾಪಿಸಿ ಕೇಂದ್ರ-ರಾಜ್ಯ ಬಿಜೆಪಿ ಸರ್ಕಾರಗಳನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ
ಏಕಕಾಲಕ್ಕೆ ಕೇಂದ್ರ-ರಾಜ್ಯ ಸರ್ಕಾರಗಳ ಬಗ್ಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನೂ ಸಿದ್ದರಾಮಯ್ಯ ಪ್ರಸ್ತಾಪಿಸಿದರು.
ಬೆಂಗಳೂರು: ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ವಿಧಾನಸಭೆಯಲ್ಲಿ ಸೋಮವಾರ ಬಿಸಿಬಿಸಿ ಚರ್ಚೆ ನಡೆಯಿತು. ಅಂಕಿಅಂಶಗಳ ಸಹಿತ ಸಿದ್ಧತೆ ಮಾಡಿಕೊಂಡು ಬಂದಿದ್ದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು. ಏಕಕಾಲಕ್ಕೆ ಕೇಂದ್ರ-ರಾಜ್ಯ ಸರ್ಕಾರಗಳ ಬಗ್ಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಕಾರ್ಯವೈಖರಿಯನ್ನೂ ಸಿದ್ದರಾಮಯ್ಯ ಪ್ರಸ್ತಾಪಿಸಿದರು. ಮೋದಿ ಅವರ ಬಗ್ಗೆ ಮಾತನಾಡುವಾಗ ಸಿದ್ದರಾಮಯ್ಯ ಬಳಸಿದ ಪದವನ್ನು ಕಡತದಿಂದ ತೆಗೆದುಹಾಕಲು ಸ್ಪೀಕರ್ ಸ್ಥಾನದಲ್ಲಿದ್ದ ಕುಮಾರ್ ಬಂಗಾರಪ್ಪ ಸೂಚಿಸಿದರು.
ಡಾ.ಮನಮೋಹನ್ ಸಿಂಗ್ ಅವರ ಅವಧಿಯಲ್ಲಿ ಜನರ ಮೇಲೆ ಶೇ 53ರಷ್ಟು ತೆರಿಗೆಯಿದ್ದರೆ ಕಾರ್ಪೊರೇಟ್ ಸಂಸ್ಥೆಗಳ ಮೇಲೆ ಶೇ 48ರಷ್ಟು ತೆರಿಗೆ ಇತ್ತು. ಆದರೆ ನರೇಂದ್ರ ಮೋದಿ ಅವರು ಪ್ರಧಾನಿ ಆದ ಮೇಲೆ ಜನರ ಮೇಲೆ ಶೇ 75ರಷ್ಟು ತೆರಿಗೆ ಬಿದ್ದಿದ್ದರೆ, ಕಾರ್ಪೊರೇಟ್ ಸಂಸ್ಥೆಗಳ ಮೇಲೆ ಶೇ 25ರಷ್ಟು ತೆರಿಗೆ ಇದೆ. ಯಾರು ಜನಪರವಾಗಿದ್ದಾರೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ದೋಸೆ ಬೆಲೆ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ ಹೇಳಿಕೆಯನ್ನು ಸಿದ್ದರಾಮಯ್ಯ ಆಕ್ಷೇಪಿಸಿದರು. ಒಂದು ದೋಸೆ ಬೆಲೆ 100 ರೂಪಾಯಿ ಆಗಿದೆ ಎಂದು ಹೇಳಿದರು. 7 ವರ್ಷದಲ್ಲಿ ಡೀಸೆಲ್ ಮೇಲಿನ ತೆರಿಗೆ 9 ಪಟ್ಟು ಹೆಚ್ಚಾಗಿದೆ. ಇದರಿಂದಾಗಿ ಎಲ್ಲ ಅಗತ್ಯವಸ್ತುಗಳ ಬೆಲೆ ಏರಿಕೆಯಾಗಿದೆ. ಕಚ್ಚಾತೈಲ ಆಮದು ಕಡಿಮೆ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದಾರೆ. ಆದರೆ ಮೋದಿ 7 ವರ್ಷದ ಅವಧಿಯಲ್ಲಿ ಏನು ಮಾಡಿದರು? ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆ ಕಡಿಮೆ ಮಾಡಿ ಜನರ ಮೇಲಿನ ಹೊರೆ ಇಳಿಸಬೇಕು ಎಂದು ಒತ್ತಾಯಿಸಿದರು.
ಬೆಲೆ ಏರಿಕೆಯ ದುಷ್ಪರಿಣಾಮಗಳ ಬಗ್ಗೆ ಈ ಹಿಂದೆಯೂ ಪ್ರಸ್ತಾಪಿಸಿದ್ದೆ. ಬೆಲೆ ಏರಿಕೆ ಆಗಿರುವುದನ್ನು ಬೊಮ್ಮಾಯಿ ಸಹ ಒಪ್ಪಿದ್ದಾರೆ. ಈ ಹಿಂದೆ ಒಂದು ಲೀಟರ್ ಡೀಸೆಲ್ ಬೆಲೆ ₹ 46 ಇತ್ತು. ಆದರೆ ಈಗ ಡೀಸೆಲ್ ಬೆಲೆ ₹ 96 ಆಗಿದೆ. 7 ವರ್ಷಗಳಲ್ಲಿ ₹ 60 ಹೆಚ್ಚಾಗಿದೆ. ಇದು ಜನಜೀವನದ ಮೇಲೆಯೂ ಪರಿಣಾಮ ಬೀರಿದೆ ಎಂದು ತಿಳಿಸಿದರು.
ಬಿಜೆಪಿಯವರು ಕಾರಣವನ್ನೇ ನೀಡದೆ ಯಡಿಯೂರಪ್ಪ ಅವರನ್ನು ತೆಗೆದುಹಾಕಿದ್ದರು. ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತಂದಿದ್ದು ಯಡಿಯೂರಪ್ಪ. ಆದರೆ ಈಗ ನೀವು ಅಧಿಕಾರ ಮಾಡುತ್ತಿದ್ದೀರಿ ಎಂದು ಸಿದ್ದರಾಮಯ್ಯ ಹೇಳಿದರು. ಈ ವೇಳೆ ಮಧ್ಯಪ್ರವೇಶ ಮಾಡಿದ ಯಡಿಯೂರಪ್ಪ, ನನ್ನ ರಾಜೀನಾಮೆ ವೇಳೆಯೇ ಬಹಳ ಸ್ಪಷ್ಟವಾಗಿ ಹೇಳಿದ್ದೇನೆ. ಯಾವುದೇ ಒತ್ತಡದಿಂದ ನಾನು ರಾಜೀನಾಮೆ ನೀಡಲಿಲ್ಲ. ಬೇರೆಯವರಿಗೆ ಅವಕಾಶ ಸಿಗಲು ರಾಜೀನಾಮೆ ನೀಡಿದ್ದೆ. ಮುಂದೆಯೂ ಬೊಮ್ಮಾಯಿ ಅವರೇ ಮುಖ್ಯಮಂತ್ರಿಯಾಗುತ್ತಾರೆ ಎಂದರು.
ಯಡಿಯೂರಪ್ಪ ಮಾತಿಗೆ ನಿಂತಾಗಲೇ ಮಧ್ಯಪ್ರವೇಶಿಸಿದ ವಿಪಕ್ಷ ಸದಸ್ಯರು, ರಾಜೀನಾಮೆ ವೇಳೆ ಕಣ್ಣೀರು ಹಾಕಿದ್ದಿರಿ ಎಂದರು. ಕೆಲವರು ಅದನ್ನು ಆನಂದಬಾಷ್ಪ ಎನ್ನುತ್ತಾರೆ. ಕೆಲವರು ಅದನ್ನ ಕಣ್ಣೀರು ಎನ್ನುತ್ತಾರೆ ಎಂದು ಸಿದ್ದರಾಮಯ್ಯ ನುಡಿದರು. ನೀವು ಏನು ಬೇಕಾದರೂ ಹೇಳಬಹುದು. ನಿಜ ಏನು ಎಂಬುದು ಜನರಿಗೆ ಗೊತ್ತಿದೆ ಎಂದು ಸಿದ್ದರಾಮಯ್ಯ ಹೇಳಿದರು.
ಈ ವೇಳೆ ಬೊಮ್ಮಾಯಿ ಅವರು, ಪಂಜಾಬ್ ವಿಚಾರವನ್ನು ಪ್ರಸ್ತಾಪಿಸಿದರು. ‘ಆಯ್ತಪ್ಪ ನಮ್ಮದು ನೀವು ಹೇಳಿದಂತೆ ಆಗಿರಬಹುದು. ಆದರೆ ನಿಮ್ಮದು ಅದೇ ರೀತಿ ಆಗಿದ್ಯಾ’ ಎಂದು ಸಿದ್ದರಾಮಯ್ಯ ವ್ಯಂಗ್ಯದ ನಗೆ ಬೀರಿದರು. ವೀರೇಂದ್ರ ಪಾಟೀಲ್ ಅವರನ್ನು ಕರಿಬೇವು ತೆಗೆದಂತೆ ತೆಗೆದ್ರು ಎಂದು ಮುಖ್ಯಮಂತ್ರಿ ಹೇಳಿದಾಗ ಆರ್.ವಿ.ದೇಶಪಾಂಡೆ ಮಧ್ಯಪ್ರವೇಶಿಸಿ, ಎಸ್.ಆರ್.ಬೊಮ್ಮಾಯಿ ಹೇಗೆ ಹೋದರೆಂದು ಪ್ರಶ್ನಿಸಿದರು. ಬೇರೆ ವಿಚಾರಗಳು ಬೇಡ ಬೆಲೆ ವಿಚಾರ ಚರ್ಚೆ ಮಾಡಿ ಎಂದು ಸ್ಪೀಕರ್ ಸೂಚಿಸಿದರು.
ಇದನ್ನೂ ಓದಿ: ಕುಮಾರವ್ಯಾಸನ ಪದ್ಯ ಓದಿ ಸಿದ್ದರಾಮಯ್ಯಗೆ ಟಾಂಗ್; ಮೋದಿ ಪ್ರಧಾನಿ ಆದ್ಮೇಲೆ ದೇಶದ ಬೆಲೆ ಹೆಚ್ಚಾಗಿದೆ
ಇದನ್ನೂ ಓದಿ: ಶಾಸಕರ ಗಮನಕ್ಕೆ ತಾರದೆ ಸಂಸದರು ಸಭೆ ಕರೆಯಬಹುದೇ? ಕಾರ್ಯವ್ಯಾಪ್ತಿ ಸ್ಪಷ್ಟಪಡಿಸಲು ಎಚ್ಡಿಕೆ ಪ್ರಸ್ತಾಪ
(Congress Leader Siddaramaiah Criticise Karnataka Govt over Price Hike)