ಕುಮಾರವ್ಯಾಸನ ಪದ್ಯ ಓದಿ ಸಿದ್ದರಾಮಯ್ಯಗೆ ಟಾಂಗ್; ಮೋದಿ ಪ್ರಧಾನಿ ಆದ್ಮೇಲೆ ದೇಶದ ಬೆಲೆ ಹೆಚ್ಚಾಗಿದೆ: ಸಿಎಂ ಬೊಮ್ಮಾಯಿ
Basavaraj Bommai: ನಾನು ಓಪನ್ ಆಗಿ ಒಪ್ಪಿಕೊಳ್ಳುತ್ತಿದ್ದೇನೆ. ಅಷ್ಟು ಜ್ಞಾನ ನಮಗಿಲ್ಲ, ನಾನು ನಮ್ಮ ಅಧಿಕಾರಿಗೆ ಹೇಳಿದೆ ನನಗೂ ಕುಮಾರವ್ಯಾಸನ ಪದ್ಯ ಬೇಕು ಅಂತ. ನಮ್ಮ ಸ್ನೇಹಿತರು ಈ ಒಂದು ಪದ್ಯ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಬೆಂಗಳೂರು: ಬೆಲೆ ಏರಿಕೆ ಬಗ್ಗೆ ವಿಧಾನ ಸಭೆ ಕಲಾಪದಲ್ಲಿ ನಡೆದ ಚರ್ಚೆಗೆ, ವಿಪಕ್ಷಗಳ ಪ್ರಶ್ನೆಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉತ್ತರ ನೀಡಿದ್ದಾರೆ. ಪೆಟ್ರೋಲಿಯಂ ಉತ್ಪನ್ನ ಆಮದು ಕಡಿಮೆ ಮಾಡಬೇಕು. ಆಗ ದರ ಏರಿಕೆಗೆ ಕಡಿವಾಣ ಹಾಕಬಹುದು. ಅದಕ್ಕಾಗಿ ನವೀಕರಿಸಬಹುದಾದ ಇಂಧನ ಉತ್ಪಾದನೆಗೆ ಹೆಚ್ಚು ಆದ್ಯತೆ ನೀಡಬೇಕು. ಎನ್‌ಡಿಎ ಸರ್ಕಾರ ಬಂದ ಮೇಲೆ ಆ ನಿಟ್ಟಿನಲ್ಲಿ ಕ್ರಮ ಕೈಗೊಂಡಿದೆ. ಎಥೆನಾಲ್ ಪ್ರಮಾಣ ಹೆಚ್ಚಿಸಲು ಆಯಿಲ್ ಲಾಬಿ ಬಿಡ್ತಿಲ್ಲ ಅನ್ನೋದು ಗೊತ್ತಾಗಿದೆ. ಮುಂದಿನ ದಿನಗಳಲ್ಲಿ ಸಕ್ಕರೆ ಕಾರ್ಖಾನೆಯಲ್ಲಿ ವಿದ್ಯುತ್ ಉತ್ಪಾದನೆ ಬದಲು ಎಥೆನಾಲ್ ಹೆಚ್ಚಳಕ್ಕೆ ಕ್ರಮ ಕೈಗೊಳ್ಳಲಾಗುವುದು. ಕಬ್ಬಿನಿಂದ ಮಾತ್ರವಲ್ಲ ಜೋಳ, ಭತ್ತದಿಂದಲೂ ಎಥೆನಾಲ್ ಉತ್ಪಾದನೆಗೆ ಕ್ರಮವಹಿಸಲಾಗಿದೆ. ಎಥೆನಾಲ್ ಬಳಕೆ ಹೆಚ್ಚಾದ್ರೆ ಪೆಟ್ರೋಲಿಯಂ ಉತ್ಪನ್ನದ ಬಳಕೆ ಕಡಿಮೆ ಆಗುತ್ತದೆ ಎಂದು ತಿಳಿಸಿದ್ದಾರೆ.
ಎಲ್‌ಪಿಜಿ ಕೂಡ ಹೆಚ್ಚಾಗಿ ಉತ್ಪಾದನೆ ಮಾಡಬೇಕಿದೆ. ಸಿಲಿಂಡರ್ ಮೂಲಕ ಗ್ಯಾಸ್ ಕೊಡುವುದರಿಂದ ಸಮಸ್ಯೆ ಆಗಿದೆ. ಹೀಗಾಗಿ ಪೈಪ್‌ಲೈನ್ ಮೂಲಕ ಗ್ಯಾಸ್ ಪೂರೈಕೆಗೆ ತೀರ್ಮಾನ ಮಾಡಲಾಗಿದೆ. ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಗೆ ಕ್ರಮ ಕೈಗೊಳ್ಳುತ್ತೇವೆ. ಆಯಿಲ್ ಬಾಂಡ್ ಬಗ್ಗೆಯೂ ಬಹಳ ಪ್ರಶ್ನೆಗಳು ಬಂದಿವೆ. ಆಯಿಲ್ ಬಾಂಡ್ ರೀಪೇಮೆಂಟ್ ಸರ್ಕಾರದ ಜವಾಬ್ದಾರಿ ಆಗಿದೆ. ಅದು ಆಯಾ ಸರ್ಕಾರದ ಜವಾಬ್ದಾರಿಯಾಗಿರುತ್ತೆ. ಜವಾಬ್ದಾರಿಯುತ ಸರ್ಕಾರದಿಂದ ಜವಾಬ್ದಾರಿಯುತ ಅರ್ಥಿಕತೆ ನೀಡಲಾಗುತ್ತದೆ. 60 ವರ್ಷದಲ್ಲಿ 13 ಕೋಟಿ ಅಡುಗೆ ಅನಿಲ ಸಂಪರ್ಕ ಕೊಡಿಸಲಾಗಿದೆ. ಕಳೆದ 7 ವರ್ಷದಲ್ಲಿ 16.11 ಕೋಟಿ ಅಡುಗೆ ಅನಿಲ ಸಂಪರ್ಕ ನೀಡಲಾಗಿದೆ. 8 ಕೋಟಿ ಸಂಪರ್ಕ ಉಜ್ವಲ ಯೋಜನೆಯಡಿ ನೀಡಿದ್ದೇವೆ. ಮೊದಲು ನಾವು ಸಬ್ಸಿಡಿ ಕೊಡುವುದಾಗಿ ಹೇಳಿದ್ದೆವು. ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಹೆಚ್ಚು ಜನರಿಗೆ ತಲುಪಬೇಕು. ಹೆಣ್ಣು ಮಕ್ಕಳಿಗೆ ಉತ್ತಮ ವಾತಾವರಣ ನಿರ್ಮಿಸಬೇಕು. ಹೀಗಾಗಿ ಉಜ್ವಲ ಯೋಜನೆಯನ್ನು ಜಾರಿ ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಸಬ್ಸಿಡಿಯನ್ನು ಹಂತ ಹಂತವಾಗಿ ಕಡಿಮೆ ಮಾಡಲು ಹೇಳಿದ್ದರು. ಡಾ.ಮನಮೋಹನ್ ಸಿಂಗ್ ಸಬ್ಸಿಡಿ ಬಗ್ಗೆ ಹೇಳಿಕೆ ನೀಡಿದ್ದರು. ನಾವು ರಾಜಕಾರಣಿಗಳು ಅದನ್ನು ಮರೆಮಾಚಬಹುದು. ಇಲ್ಲಿ ಹಲವರು ಆಡಳಿತ ಮಾಡಿದವರು ಕೂಡ ಇದ್ದಾರೆ. ಕೆಲವು ಕಠಿಣ ನಿರ್ಧಾರಗಳನ್ನು ಕೂಡ ತೆಗೆದುಕೊಂಡಿದ್ದಾರೆ. ಪ್ರತಿ ಬಾರಿ ಯೋಜನೆ ಸೈಜ್ ಕಡಿಮೆ ಮಾಡುವುದು ವಾಡಿಕೆ. ಆದರೆ ಸಿದ್ದರಾಮಯ್ಯ ಯೋಜನೆ ಸೈಜ್ ಕಡಿಮೆ ಮಾಡಿದ್ದರು. ಆರ್ಥಿಕತೆ ಸುಧಾರಿಸುವ ಕಾರಣದಿಂದ ಕಠಿಣ ನಿರ್ಧಾರ ಕೈಗೊಂಡಿದ್ದರು. ಈಗಲೂ ಪ್ರಧಾನಿ ಮೋದಿ ಕಠಿಣ ನಿರ್ಧಾರ ತೆಗೆದುಕೊಳ್ತಿದ್ದಾರೆ. ಅದನ್ನು ವಿಪಕ್ಷಗಳು ಸ್ವೀಕಾರ ಮಾಡಬೇಕು ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.
ಎಲ್ಲವೂ 7 ವರ್ಷದಲ್ಲಿ ಒಂದೇ ಬಾರಿಗೆ ಏರಿಕೆಯಾಗಿಲ್ಲ. ಹಂತ ಹಂತವಾಗಿ ಎಲ್ಲವೂ ಏರಿಕೆಯಾಗಿದೆ. ಬೆಲೆ ಏರಿಕೆ ತಡೆಯಲು ನಾವು ಪ್ರಯತ್ನ ಮಾಡುತ್ತಿದ್ದೇವೆ. ತೆರಿಗೆಯನ್ನು ಸರಿಯಾಗಿ ಸದ್ಬಳಕೆ ಮಾಡಿಕೊಳ್ಳಬೇಕಾಗಿದೆ. ಒಬ್ಬ ಆಡಳಿತಗಾರನಿಗೆ ಕೆಲವೊಂದು ರಾಜನೀತಿಗಳು ಇವೆ. ತೆರಿಗೆ ಇಲ್ಲದ ಅಭಿವೃದ್ಧಿ ಮಾಡುವುದಕ್ಕೆ ಸಾಧ್ಯವಾಗುವುದಿಲ್ಲ. ದುಡ್ಡಿಲ್ಲದೆ ನಾವು ಅಭಿವೃದ್ಧಿ ಮಾಡುವುದಕ್ಕೆ ಸಾಧ್ಯವಿಲ್ಲ ಎಂದು ಬೆಲೆ ಏರಿಕೆ ಕುರಿತ ಚರ್ಚೆಗೆ ಸಿಎಂ ಬೊಮ್ಮಾಯಿ ಉತ್ತರ ನೀಡಿದ್ದಾರೆ.
ನರೇಂದ್ರ ಮೋದಿ ಪ್ರಧಾನಿ ಆದ ಬಳಿಕ ದೇಶದ ಬೆಲೆ ಹೆಚ್ಚಾಗಿದೆ ಪ್ರಧಾನಿ ಮೋದಿ ಪಿಎಂ ಆದ ಬಳಿಕ ದೇಶದ ಬೆಲೆ ಹೆಚ್ಚಾಗಿದೆ. ಇದನ್ನು ಹೇಳಿದರೂ ವಿಪಕ್ಷ ನಾಯಕರು ಒಪ್ಪುವುದಕ್ಕೆ ಆಗಲ್ಲ. ಮೋದಿ ಹತ್ತಿರಕ್ಕೂ ಯಾವ ನಾಯಕರು ಇಲ್ಲ ಎಂದು ಸಿಎಂ ಹೇಳಿದ್ದಾರೆ. ಸಿಎಂ ಬೊಮ್ಮಯಿ ಹೇಳಿಕೆಗೆ ವಿಪಕ್ಷ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದೇಶದ ಭದ್ರತೆ ಬಗ್ಗೆ ನಮಗೆ ಗೊತ್ತಿದೆ. ಇವರು ಚೀನಾದವರು ಬಂದ್ರೆ ಭಾಯಿ ಭಾಯಿ ಅಂತಿದ್ರು. ನಮ್ಮ ಕಾಲದಲ್ಲಿ ಎದುರು ನಿಂತು ಹಿಮ್ಮೆಟ್ಟಿಸುವ ಕೆಲಸ ಆಗ್ತಿದೆ. ಕೊರೊನಾ ಸಮಯದಲ್ಲಿ ಸಾಕಷ್ಟು ಸಮಸ್ಯೆಯಾಗಿದೆ. ಸಂಕಷ್ಟದ ಸಮಯದಲ್ಲಿ ಜನರಿಗೆ ಸರ್ಕಾರ ನೆರವಾಗಿದೆ. ಜನರು ಹಸಿವಿನಿಂದ ನರಳಬಾರದೆಂದು ಸಹಾಯ ಮಾಡಿದ್ದೇವೆ. ಕೊರೊನಾವನ್ನು ಭಾರತ ಉತ್ತಮವಾಗಿ ನಿರ್ವಹಣೆ ಮಾಡಿದೆ. ವಿಶ್ವ ಆರೋಗ್ಯ ಸಂಸ್ಥೆಯೇ ಈ ಮಾತು ಹೇಳಿದೆ ಎಂದು ಸಿಎಂ ತಿಳಿಸಿದ್ದಾರೆ.
ಲಸಿಕೆ ನೀಡಿಕೆ, ಕೊವಿಡ್ ನಿರ್ವಹಣೆಯಲ್ಲಿ ಉತ್ತಮವಾಗಿದೆ ಎಂಬ ಸಿಎಂ ಹೇಳಿಕೆಗೆ ಆಡಳಿತ ಪಕ್ಷದ ಸದಸ್ಯರ ಆಕ್ಷೇಪ ವ್ಯಕ್ತವಾಗಿದೆ. ಕೊರೊನಾದಿಂದ ಎಷ್ಟು ಜನ ಸತ್ತರು ಎಂಬ ಮಾಹಿತಿ ನೀಡಲಿ. ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಮಾಹಿತಿ ನೀಡಬೇಕು ಎಂದು ಹೇಳಿದ್ದಾರೆ. ಕಾಂಗ್ರೆಸ್ ಕಾಲದಲ್ಲಿ ಅಗತ್ಯವಸ್ತುಗಳ ಬೆಲೆ ಗಗನಕ್ಕೇರಿತ್ತು. ಕಾಂಗ್ರೆಸ್ ಅವಧಿಯಲ್ಲಿ ಶೇ.16ರಷ್ಟು ಹಣದುಬ್ಬರ ಆಗಿತ್ತು. ಹೀಗಾಗಿ ಜನರು ನಿಮ್ಮನ್ನ ಮನೆಗೆ ಕಳಿಸಿರುವುದು. ಈಗ ಬೆಲೆ ಏರಿಕೆ ಬಗ್ಗೆ ಮಾತನಾಡುಲು ಬರುತ್ತಿದ್ದೀರಿ. ಶೇ.16ರಷ್ಟು ಹಣದುಬ್ಬರ ಆಗಿದ್ದಾಗ ಏನು ಮಾಡ್ತಿದ್ರು ಎಂದು ಮಾತನಾಡಿದ್ದಾರೆ.
ಕುಮಾರವ್ಯಾಸನ ಪದ್ಯ ಓದಿ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಬೊಮ್ಮಾಯಿ ಈ ಮೊದಲು ಸಿದ್ದರಾಮಯ್ಯ ಬಜೆಟ್ ಮೇಲಿನ ಚರ್ಚೆ ವೇಳೆ ಕುಮಾರವ್ಯಾಸನ ಭಾಮಿನಿ ಷಟ್ಪದಿ ಉಲ್ಲೇಖ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಇಂದು ಉತ್ತರ ನೀಡುವ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕುಮಾರವ್ಯಾಸನ ಪದ್ಯ ಉಲ್ಲೇಖ ಮಾಡಿದ್ದಾರೆ. ಸಿದ್ದರಾಮಯ್ಯ ಕಾಲೆಳೆದಿದ್ದಾರೆ. ಸಿದ್ದರಾಮಯ್ಯ ಕನ್ನಡದಲ್ಲಿ ಬಹಳ ಪಂಡಿತರಿದ್ದಾರೆ. ಮೊನ್ನೆ ಪದ್ಯ ಹೇಳಿದ್ದಾರೆ, ಷಟ್ಪದಿ ವಿವರಣೆ ನೀಡಿದ್ದಾರೆ. ನಾನು ಓಪನ್ ಆಗಿ ಒಪ್ಪಿಕೊಳ್ಳುತ್ತಿದ್ದೇನೆ. ಅಷ್ಟು ಜ್ಞಾನ ನಮಗಿಲ್ಲ, ನಾನು ನಮ್ಮ ಅಧಿಕಾರಿಗೆ ಹೇಳಿದೆ ನನಗೂ ಕುಮಾರವ್ಯಾಸನ ಪದ್ಯ ಬೇಕು ಅಂತ. ನಮ್ಮ ಸ್ನೇಹಿತರು ಈ ಒಂದು ಪದ್ಯ ಕೊಟ್ಟಿದ್ದಾರೆ ಎಂದು ಹೇಳಿದ್ದಾರೆ.
ಕುಮಾರವ್ಯಾಸನ ಪದ್ಯದ ಮೂಲಕವೇ ಸಿಎಂ ತಿರುಗೇಟು ನೀಡಿದ್ದಾರೆ. ರಾಜನಾದವನು ಹೇಗೆ ರಾಜ್ಯ ಆಳಬೇಕೆಂಬ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಹೂವಾಡಿಗ ಹೂವು ಬಿಡಿಸಿ, ಗಿಡವನ್ನು ರಕ್ಷಿಸುತ್ತಾನೋ. ದುಂಬಿ ಹೂವಿಗೆ ತೊಂದರೆ ಕೊಡದೆ ರಸವನ್ನು ಹೀರುತ್ತದೆ. ಪಶುಪಾಲಕ ಗೋವು ರಕ್ಷಿಸಿ ಹಾಲು ಕರೆಯುತ್ತಾರೆ. ನಾವು ಕೂಡ ಅದೇ ರೀತಿ ಸರ್ಕಾರ ಮಾಡುತ್ತಿದ್ದೇವೆ ಎಂದು ಹೇಳಿ ವಿಪಕ್ಷ ನಾಯಕ ಸಿದ್ದರಾಮಯ್ಯಗೆ ಸಿಎಂ ತಿರುಗೇಟು ನೀಡಿದ್ದಾರೆ.
ಇದನ್ನೂ ಓದಿ: ಅಗತ್ಯ ವಸ್ತುಗಳ ಬೆಲೆ ಏರಿಕೆ ಪ್ರಸ್ತಾಪಿಸಿದ ಸಿದ್ದರಾಮಯ್ಯ; ಕಲಾಪದಲ್ಲಿ ಕಲಹ ಕೋಲಾಹಲ
ಇದನ್ನೂ ಓದಿ: ರೋಡ್ ಹಂಪ್‌ಗಳ ಬಗ್ಗೆ ಸದನದಲ್ಲಿ ವ್ಯಗ್ರರಾದ ಶಾಸಕ ರಮೇಶ್ ಕುಮಾರ್; ಬೇಜವಾಬ್ದಾರಿ ಅಧಿಕಾರಿಗಳ ಸಸ್ಪೆಂಡ್ ಮಾಡಿ ಅಂದರು
Published On - 5:51 pm, Mon, 20 September 21