ಅಯೋಧ್ಯೆ ಹೋರಾಟ ವಿಚಾರವಾಗಿ ದಾಖಲಾದ ಪ್ರಕರಣವನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು: ಜಗದೀಶ್ ಶೆಟ್ಟರ್ ಒತ್ತಾಯ

ಅಯೋಧ್ಯೆಯಲ್ಲಿ ರಾಮಲಲ್ಲಾನ ವಿಗ್ರಹ ಪ್ರತಿಷ್ಠಾಪನೆಗೆ ದಿನಗಣನೆ ಶುರವಾದಾಗ 30 ವರ್ಷಗಳ ಹಳೆಯ ಪ್ರಕರಣವನ್ನು ರೀಓಪನ್ ಮಾಡಿ ಹುಬ್ಬಳ್ಳಿಯಲ್ಲಿ ರಾಮ ಜನ್ಮಭೂಮಿಗಾಗಿ ಹೋರಾಟ ನಡೆಸಿದ ಶ್ರೀಕಾಂತ್ ಪೂಜಾರಿಯನ್ನು ಬಂಧಿಸಲಾಗಿದೆ. ಇದು ಹಿಂದೂ ಸಂಘಟನೆಗಳು ಹಾಗೂ ವಿಪಕ್ಷ ಬಿಜೆಪಿ ಆಕ್ರೋಶಕ್ಕೆ ಕಾರಣವಾಗಿದೆ. ಆದರೆ, ಕಾಂಗ್ರೆಸ್ ನಾಯಕರು ಬಂಧನವನ್ನು ಸಮರ್ಥಿಸಿಕೊಂಡರೆ, ಸ್ವಪಕ್ಷದ ಎಂಎಲ್​ಸಿ ಜಗದೀಶ್ ಶೆಟ್ಟರ್, ಸರ್ಕಾರ ಕೂಡಲೇ ಪ್ರಕರಣವನ್ನು ಹಿಂಪಡೆಯುವಂತೆ ಒತ್ತಾಯಿಸಿದ್ದಾರೆ.

ಅಯೋಧ್ಯೆ ಹೋರಾಟ ವಿಚಾರವಾಗಿ ದಾಖಲಾದ ಪ್ರಕರಣವನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು: ಜಗದೀಶ್ ಶೆಟ್ಟರ್ ಒತ್ತಾಯ
ಜಗದೀಶ್ ಶೆಟ್ಟರ್
Edited By: Rakesh Nayak Manchi

Updated on: Jan 02, 2024 | 6:49 PM

ಬೆಂಗಳೂರು, ಜ.2: ಅಯೋಧ್ಯೆ (Ayodhya) ವಿಚಾರವಾಗಿ ದಾಖಲಾದ ಪ್ರಕರಣಗಳನ್ನು ವಾಪಸ್ ಪಡೆಯಬೇಕು ಎಂದು ಮಾಜಿ ಮುಖ್ಯಮಂತ್ರಿಯೂ ಆಗಿರುವ ಕಾಂಗ್ರೆಸ್ ಎಂಎಲ್​ಸಿ ಜಗದೀಶ್ ಶೆಟ್ಟರ್ (Jagadish Shettar) ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸರ್ಕಾರ ಕೂಡಲೇ ಪ್ರಕರಣವನ್ನು ಹಿಂಪಡೆಯಲಿ, ಇದರಲ್ಲಿ ರಾಜಕೀಯ ಬೇಡ ಎಂದಿದ್ದಾರೆ.

ಬಂಧನ ಮಾಡಿ ಅಂತಾ ಸರ್ಕಾರ ಹೇಳಿರುವುದಿಲ್ಲ. ಕೋರ್ಟ್ ಆದೇಶ ಆಗಿರಬಹುದು, ಪೊಲೀಸರೇ ನಿರ್ಧರಿಸಿರಬಹುದು. ಆದರೆ ಸರ್ಕಾರವೇ ಇದನ್ನು ಮಾಡಿಸಿದೆ ಅಂದರೆ ನಾನು ಒಪ್ಪುವುದಿಲ್ಲ. ಈ ವಿಚಾರದಲ್ಲಿ ಬಿಜೆಪಿ ‌ಪ್ರತಿಭಟನೆ ಮಾಡಿದರೆ ಮಾಡಲಿ. ಹಿಂದೆ ಬಿಜೆಪಿ ಸರ್ಕಾರವಿತ್ತು, ಆಗ ರದ್ದು ಮಾಡಿದ್ದರೆ ಮುಗಿದು ಹೋಗುತ್ತಿತ್ತು ಎಂದರು.

ಹಿಂದೆ ಅಯೋಧ್ಯೆ ವಿಚಾರದಲ್ಲಿ ಗಲಭೆಗಳಾದರೆ ರೌಡಿಶೀಟ್‌ ಓಪನ್‌ ಮಾಡುತ್ತಿದ್ದರು. ರೌಡಿಶೀಟ್‌ ಓಪನ್‌ ಆದವರ ಪೈಕಿ 50-60 ವರ್ಷದವರಿದ್ದಾರೆ. ವಯಸ್ಸಾದವರನ್ನು ರೌಡಿಶೀಟ್‌ನಿಂದ ತೆಗೆಯಿರಿ ಅಂತಾ ನನಗೆ ಶುಭಕೋರಲು ಬರುವ ಎಲ್ಲಾ ಕಮಿಷನರ್‌ಗಳಿಗೆ ಹೇಳುತ್ತಿದ್ದೆ. ಸಚಿವ ಸಂಪುಟಕ್ಕೆ ಈ ವಿಚಾರ ತಂದು ಪ್ರಕರಣ ವಾಪಸ್ ಮಾಡಿಸುವ ಪ್ರಯತ್ನ ಮಾಡಿದ್ದೇನೆ ಎಂದರು.

ಇದನ್ನೂ ಓದಿ: ರಾಮ ಮಂದಿರ ನಿರ್ಮಾಣ: ರಿವೇಂಜ್ ತೀರಿಸಿಕೊಳ್ಳಲು ಕಾಂಗ್ರೆಸ್​ ಹುಬ್ಬಳ್ಳಿಯಲ್ಲಿ ಹಳೇ ಕೇಸ್​ ಓಪನ್​ ಮಾಡಿಸಿದೆ- ಜೋಶಿ

ಹುಬ್ಬಳ್ಳಿಯಲ್ಲಿ ನಾನೇ ಇದರ ನೇತೃತ್ವವನ್ನು ವಹಿಸಿಕೊಂಡಿದ್ದೆ. ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಅಡ್ವಾಣಿ ಕೊಡುಗೆ ಅಪಾರವಾಗಿದೆ. ಮಾಧ್ಯಮಗಳಲ್ಲಿ ಬಂದ ಬಳಿಕ ಟ್ರಸ್ಟ್‌ನವರು ಹೋಗಿ ಅಡ್ವಾಣಿ ಅವರಿಗೆ ಆಹ್ವಾನ ನೀಡಿದ್ದಾರೆ. ನನಗಿರುವ ಮಾಹಿತಿ ಪ್ರಕಾರ ಎಲ್‌.ಕೆ.ಅಡ್ವಾಣಿರವರಿಗೆ ಆಹ್ವಾನ ಕೊಟ್ಟು ವಯಸ್ಸಾಗಿದೆ, ಮನೆಯಲ್ಲೇ ಕುಳಿತು ವೀಕ್ಷಿಸಿ ಅಂದಿದ್ದಾರಂತೆ. ಇದು ಕೊಟ್ಟಂತೆಯೂ ಆಗಬೇಕು, ಕೊಡದಂತೆಯೂ ಆಗಬೇಕು. ಆಹ್ವಾನ ಪತ್ರಿಕೆ ಕೊಟ್ಟು ಪರೋಕ್ಷವಾಗಿ ಬರಬೇಡಿ ಅಂದರೆ ಏನರ್ಥ ಎಂದು ಪ್ರಶ್ನಿಸಿದರು.

ರಾಮ ಮಂದಿರಕ್ಕೆ ನಾನೂ 2 ಕೋಟಿಯಷ್ಟು ಹಣ ಸಂಗ್ರಹ ಮಾಡಿಕೊಟ್ಟಿದ್ದೆ. ಪಕ್ಷ ಬದಲಿಸಿದ ಮೇಲೆ ನಾವು ರಾಮ ಭಕ್ತರೇ ಅಲ್ಲವೆಂದು ಹೇಳುತ್ತಾರೆ ಎಂದರು. ಸರ್ಕಾರದಿಂದ ಅಲ್ಪಸಂಖ್ಯಾತರ ಓಲೈಕೆ ಎಂದು ಬಿಜೆಪಿ ಆರೋಪ ವಿಚಾರವಾಗಿ ಮಾತನಾಡಿದ ಶೆಟ್ಟರ್, ಲೋಕಸಭೆ ‌ಚುನಾವಣೆ ಬರುತ್ತಿದೆ, ಅದಕ್ಕೆ ಹೀಗೆ ಆರೋಪ ಮಾಡುತ್ತಿದ್ದಾರೆ. ಅಭಿವೃದ್ಧಿ ಮೇಲೆ ಚುನಾವಣೆಗೆ ಹೋಗಬೇಕು, ಧರ್ಮ ವಿಚಾರ ಪ್ರಸ್ತಾಪ ಸರಿಯಲ್ಲ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Prasanna Gaonkar

ಹುಟ್ಟೂರು ಯಲ್ಲಾಪುರ, ಬೆಳೆದೂರು ದಾಂಡೇಲಿಯ ದಟ್ಟ ಕಾಡುಗಳ ನಡುವೆ. ರವಿ ಬೆಳಗೆರೆ ಎಂಬ ಅಕ್ಷರ ರಾಕ್ಷಸನ ಕಟ್ಟಾಭಿಮಾನದಿಂದ ಹಾಳಾಗಿ, ಸೈನ್ಸ್ ನಲ್ಲಿ ಡಿಗ್ರಿ ಪಡೆದು ಜರ್ನಲಿಸಂಗೆ ಹಿಂಬದಿ ಕಿಟಕಿಯಿಂದ ನುಸುಳಿದ್ದು 2010 ರ ಅಕ್ಟೋಬರ್ ನಲ್ಲಿ. ಉಡುಪಿಯಲ್ಲಿ ಮೊದಲ ಪತ್ರಿಕೋದ್ಯಮ ಕರ್ತವ್ಯ ಪ್ರಾರಂಭಿಸಿದ್ದು 2010 ರಲ್ಲಿಯೇ. ಜನಶ್ರೀ ನ್ಯೂಸ್ ಮೊದಲು ಅನ್ನ ನೀಡಿದ ಸಂಸ್ಥೆ. ಉಡುಪಿ ಜಿಲ್ಲಾ ವರದಿಗಾರನಾಗಿ ಮೂರು ವರ್ಷ ಕೆಲಸ ಮಾಡಿ 2013 ರ ಅಂತ್ಯಕ್ಕೆ ಸಮಯ ನ್ಯೂಸ್ ಮೂಲಕ ಬೆಂಗಳೂರಿಗೆ ಎಂಟ್ರಿ. ಬಿಗ್ ೩, ಬೆಂಗಳೂರ್ ಲೈವ್, ಸಮಯ ಸಕಾಲ ಕಾರ್ಯಕ್ರಮದಲ್ಲಿ ವರದಿಗಾರಿಕೆ ಮಾಡಿದ ಖುಷಿ. 2014 ರ ಡಿಸೆಂಬರ್ ನಿಂದ ಟಿವಿ9 ನಲ್ಲಿ ಕೆಲಸ ಪ್ರಾರಂಭ. ಟಿವಿ9 ನಲ್ಲಿ ಮೊದಲು ಮೆಟ್ರೋ ರಿಪೋರ್ಟಿಂಗ್ ಮೂಲಕ ಬೆಂಗಳೂರು ಸುತ್ತುವ ಅರಿಯುವ ರಾಜಧಾನಿಯ ನಾಡಿಮಿಡಿತ ಹುಡುಕುವ ಅವಕಾಶ. ಮೆಟ್ರೋ ಬ್ಯೂರೋ ದಲ್ಲಿ ಶೈಕ್ಷಣಿಕ ಹಾಗೂ ಬಿಬಿಎಂಪಿ ವರದಿಗಾರಿಕೆ. ಚಪ್ಪಲಿಯಿಂದ ಹಿಡಿದು ಚಾದರ್ ತನಕ ಸ್ಟೋರಿ ಮಾಡಿದ ಅನುಭವ. ಮೆಟ್ರೋ ಟೀಂ ನಿಂದ ರಾಜಕೀಯ ವರದಿಗಾರಿಕೆಗೆ ಶಿಫ್ಟ್ ಆದ ತಕ್ಷಣ- ಮುಂದುವರಿದಿದೆ ನಿರಂತರ ಪಯಣ. ಕಥೆ, ಕಾದಂಬರಿ, ಕವನ, ಸಿನಿಮಾ, ಸುತ್ತಾಟ, ಆಗಾಗ ಕಿತ್ತಾಟ, ಸ್ನೇಹಿತರೊಂದಿಗೆ ಒಡನಾಟ ಇವೆಲ್ಲ ಮಾಮೂಲಿ ದಿನಚರಿ. ಇವತ್ತಿಗೂ ಬರವಣಿಗೆಯೊಂದೇ ಖುಷಿ ಕೊಡುವ ಖರ್ಜೂರ. ಸ್ಟಾಕ್ ಮಾರ್ಕೆಟ್ ನಲ್ಲಿ 2019 ರಿಂದ ಆ್ಯಕ್ಟಿವ್.

Read More
Follow Us