ಮಣಿಪಾಲ್ ಹೆರಿಟೇಜ್ ವಿಲೇಜ್: ಇಲ್ಲಿನ ಪ್ರತಿಯೊಂದು ವಸ್ತು ಕರ್ನಾಟಕದ ಒಂದೊಂದು ಕಥೆ ಹೇಳುತ್ತದೆ
ನೀವು ಮಣಿಪಾಲದ ಹಸ್ತಶಿಲ್ಪ ಹೆರಿಟೇಜ್ ವಿಲೇಜ್ ಬಗ್ಗೆ ಕೇಳಿರಬಹುದು! ಆದರೆ ಎಂದಾದರೂ ಅಲ್ಲಿಗೆ ಹೋಗುವ ಮನಸ್ಸು ಮಾಡಿದ್ದೀರಾ? ಮಾಡದಿದ್ದರೆ ಈ ವಾರದ ಕೊನೆಯಲ್ಲಿ ಬಿಡುವು ಮಾಡಿಕೊಂಡು ಹೋಗಿ ಬನ್ನಿ. ಏಕೆಂದರೆ ಇಲ್ಲಿನ ಪ್ರತಿಯೊಂದು ವಸ್ತುಗಳು ಕೂಡ ಒಂದೊಂದು ಕಥೆಯನ್ನು ಹೇಳುತ್ತದೆ. ಅಲ್ಲದೆ ಈ ಸ್ಥಳವು ಭಾರತದ ಐತಿಹಾಸಿಕ ಸಂಸ್ಕೃತಿ, ಕರಕುಶಲತೆ, ಭವ್ಯವಾದ ಕೈಚಳಕದ ಕೆತ್ತನೆ ನೋಡಿ ನೀವು ನಿಬ್ಬೆರಗಾಗುವಂತೆ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ.
ಇತ್ತೀಚಿನ ದಿನಗಳಲ್ಲಿ ಹಳೆ ಕಾಲದ ವಸ್ತುಗಳು, ಆಗಿನ ಜೀವನಶೈಲಿ ಎಲ್ಲವೂ ಕಣ್ಣಮರೆಯಾಗುತ್ತಿದೆ. ಆದರೆ ಇಂತಹ ಕಾಲಘಟ್ಟದಲ್ಲಿಯೂ ನಮ್ಮ ಸಂಸ್ಕೃತಿ, ಪರಂಪರೆಗಳನ್ನು ಮುಂದಿನ ಪೀಳಿಗೆಗೆ ತಿಳಿಸಲು ಸಂರಕ್ಷಣೆ ಮಾಡುವುದು ಸುಲಭದ ಮಾತಲ್ಲ. ಅದು ಒಂದು ರೀತಿಯ ಸವಾಲೇ ಸರಿ. ಇಷ್ಟೆಲ್ಲಾ ಪೀಠಿಕೆ ಹಾಕಿದ ಮೇಲೆ ವಿಷಯ ಯಾವುದರ ಬಗ್ಗೆ ಎಂಬುದು ಅರಿವಿಗೆ ಬಂದಿರಬಹುದು. ನೀವು ಮಣಿಪಾಲದ ಹಸ್ತಶಿಲ್ಪ ಹೆರಿಟೇಜ್ ವಿಲೇಜ್ (Manipal Heritage Village) ಬಗ್ಗೆ ಕೇಳಿರಬಹುದು! ಆದರೆ ಎಂದಾದರೂ ಅಲ್ಲಿಗೆ ಹೋಗುವ ಮನಸ್ಸು ಮಾಡಿದ್ದೀರಾ? ಮಾಡದಿದ್ದರೆ ಈ ವಾರದ ಕೊನೆಯಲ್ಲಿ ಬಿಡುವು ಮಾಡಿಕೊಂಡು ಹೋಗಿ ಬನ್ನಿ. ಏಕೆಂದರೆ ಇಲ್ಲಿ ಯುವ ಜನಾಂಗದವರು ನೋಡುವಂತಹ ವಸ್ತುಗಳು ತುಂಬಾ ಇದೆ.
ಮಣಿಪಾಲದಲ್ಲಿರುವ ಹಸ್ತಶಿಲ್ಪ ಹೆರಿಟೇಜ್ ವಿಲೇಜ್ ಉಡುಪಿಯಿಂದ ಸುಮಾರು ಐದಾರು ಕಿ.ಮೀ. ದೂರದಲ್ಲಿದೆ. 1997ರಲ್ಲಿ ಆರಂಭವಾದ ಈ ಮ್ಯೂಸಿಯಂನ ರೂವಾರಿ ವಿಜಯನಾಥ ಶೆಣೈ. ಆಗ ಒಂದು ಹೆರಿಟೇಜ್ ಹೌಸ್ ನಿರ್ಮಿಸಲು ಹೋಗಿ ಮ್ಯೂಸಿಯಂ ಆಗಿರುವ ಈ ಹೆರಿಟೇಜ್ ವಿಲೇಜ್ ನಿಮ್ಮ ಕಣ್ಣಮನ ತಣಿಸುವುದರಲ್ಲಿ ಎರಡು ಮಾತಿಲ್ಲ. ಇಲ್ಲಿನ ಪ್ರತಿಯೊಂದು ವಸ್ತುಗಳು ಕೂಡ ಒಂದೊಂದು ಕಥೆಯನ್ನು ಹೇಳುತ್ತದೆ. ಅಲ್ಲದೆ ಈ ಸ್ಥಳವು ಭಾರತದ ಐತಿಹಾಸಿಕ ಸಂಸ್ಕೃತಿ, ಕರಕುಶಲತೆ, ಭವ್ಯವಾದ ಕೈಚಳಕದ ಕೆತ್ತನೆ ನೋಡಿ ನೀವು ನಿಬ್ಬೆರಗಾಗುವಂತೆ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ.
ಹಸ್ತಶಿಲ್ಪ ಹೆರಿಟೇಜ್ ವಿಲೇಜ್ ನಲ್ಲಿ ಹಳೆಯ ಸಾಂಪ್ರದಾಯಿಕ ಮತ್ತು ಐತಿಹಾಸಿಕ ಕಟ್ಟಡಗಳನ್ನು ಮಲೆನಾಡು, ದಕ್ಷಿಣ ಮತ್ತು ಉತ್ತರ ಕನ್ನಡ ಹಾಗೂ ಉತ್ತರ ಕರ್ನಾಟಕದ ವಿವಿಧ ಭಾಗಗಳಿಂದ ಸಂಗ್ರಹಿಸಿ, ಇಲ್ಲಿನ ಐದಾರು ಎಕರೆ ಜಾಗದಲ್ಲಿ ಪುನರ್ ನಿರ್ಮಾಣ ಮಾಡಲಾಗಿದೆ. ಜೊತೆಗೆ ಅವಶೇಷಗಳು, ಕರಕುಶಲ ವಸ್ತುಗಳು, ವಿವಿಧ ಶೈಲಿಯ ಉಪಕರಣಗಳನ್ನು ಇಲ್ಲಿ ಸಂಗ್ರಹಿಸಿಡಲಾಗಿದೆ. ಮುಂದಿನ ತಲೆಮಾರಿನವರಿಗೂ ಕೂಡ ಪರಿಚಯಿಸುವ ದೃಷ್ಟಿಯಿಂದ ಇಲ್ಲಿರುವ ಎಲ್ಲಾ ವಸ್ತುಗಳನ್ನು ಜತನವಾಗಿರಿಸಿದ್ದಾರೆ.
ವಿಡಿಯೋ ಇಲ್ಲಿದೆ ನೋಡಿ:
View this post on Instagram
ಕರ್ನಾಟಕದ ಸಾಂಪ್ರದಾಯಿಕ ದೇವಾಲಯಗಳು, ವಿಶೇಷವಾಗಿ 13 ನೇ ಶತಮಾನದ ಹರಿಹರ ಮಂದಿರವು ವಿಶೇಷವಾಗಿ ಗಮನಿಸಬೇಕಾದ ಸಂಗತಿಯಾಗಿದೆ. ದಕ್ಷಿಣ ಕೆನರಾದ ಜಾನಪದ ದೇವತೆಗಳು ಮತ್ತು ಬುಡಕಟ್ಟು ಕಲೆಗಳ ಭವ್ಯವಾದ ಸಂಗ್ರಹವು ಇಲ್ಲಿನ ಕೇಂದ್ರ ಬಿಂದುವಾಗಿದೆ. ವಿಜಯನಾಥ ಶೆಣೈ ಅವರು ಬ್ಯಾಂಕ್ ಉದ್ಯೋಗಿಯಾಗಿದ್ದರೂ ಕೂಡ ಈ ಪ್ರದೇಶದ ಪರಂಪರೆಯ ಬಗ್ಗೆ ಜಾಗೃತಿ ಮೂಡಿಸಲು ಬಯಸಿದ್ದು, ಹಿಂದಿನ ಯುಗಗಳ ಸುಂದರವಾದ ಕಲಾಕೃತಿಗಳು, ಕರಕುಶಲ ಕಲೆ, ಶತಮಾನಗಳಷ್ಟು ಹಳೆಯ ರಚನೆಗಳ ಸಂರಕ್ಷಣೆಯ ಬಗ್ಗೆ ತೀವ್ರ ಕಾಳಜಿ ಹೊಂದಿದ್ದ ಅವರು ಈ ಯೋಜನೆಯನ್ನು ರೂಪಿಸಿದ್ದಾರೆ ಎನ್ನಲಾಗುತ್ತದೆ.
1341ರ ಕುಕನೂರಿನ ಕಮಲ್ ಮಹಲ್, 18ನೇ ಶತಮಾನದ ವಿಷ್ಣುಮಂದಿರ, 16ನೇ ಶತಮಾನದ ವೀರಶೈವ ಜಂಗಮ ಮಠ, 1856ರ ಮಿಯಾರು ಮನೆ ಹಾಗೂ ಶೃಂಗೇರಿ ಮನೆ, 1816ರ ಮುಧೋಳ ಪ್ಯಾಲೇಸ್ ದರ್ಬಾರ್ ಹಾಲ್ ಹಾಗೂ ಕುಂಜೂರು ಚೌಕಿ ಮನೆ, ಸೇರಿದಂತೆ ಒಟ್ಟು 24 ಕಟ್ಟಡಗಳು ಇಲ್ಲಿ ನೋಡಲು ಸಿಗುತ್ತದೆ. ಅದರಲ್ಲಿ ದೈವಗಳ ಗುಡಿಗಳು, ಗತಕಾಲದ ಬೀದಿಯ ಮರುಸೃಷ್ಟಿ, ಅಂಗಡಿ ಮುಂಗಟ್ಟುಗಳು, ಸಾಂಸ್ಕೃತಿಕ ಕಲಾಕೃತಿಗಳು, ಅಲ್ಲಿರುವ ಕೆತ್ತನೆಗಳು, ಶಿಲ್ಪಗಳು, ಕಂಬಗಳು ಆಕರ್ಷಣೀಯವಾಗಿದೆ. ಹಾಗೆಯೇ ನೋಡುತ್ತಾ ಹೋದರೆ ಅಲ್ಲಿನ ಸೌಂದರ್ಯ ಸವಿಯಲು ನಿಮಗೆ ಒಂದು ದಿನವೂ ಸಾಲುವುದಿಲ್ಲ.
ಇದನ್ನೂ ಓದಿ: ಭಾರತದ ಈ ತಾಣಗಳಿಗೆ ಜನವರಿಯಲ್ಲಿ ಭೇಟಿ ನೀಡಿ, ಪ್ರಕೃತಿಯ ಸೊಬಗನ್ನು ಕಣ್ತುಂಬಿಕೊಳ್ಳಿ
ಮಣಿಪಾಲ್ ಹೆರಿಟೇಜ್ ವಿಲೇಜ್ ನ ಅಂದ ಚೆಂದವನ್ನು ಸಂಪೂರ್ಣವಾಗಿ ಚಿತ್ರಿಸಿದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿ ಮಾಡಿದ್ದೂ ಅಲ್ಲದೆ ಹೆರಿಟೇಜ್ ವಿಲೇಜ್ ಬಗೆಗಿನ ಕುತೂಹಲವನ್ನು ಇನ್ನಷ್ಟು ಹೆಚ್ಚು ಮಾಡಿದೆ. coastal_360_ ಎಂಬ ಇನ್ಸ್ಟಾ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು ನಿಮಗೆ ಇಲ್ಲಿನ ಸೊಬಗನ್ನು ಸವಿಯಲು ಅನುವು ಮಾಡಿಕೊಡುತ್ತದೆ. ಈ ಮಾಹಿತಿ ಬಳಸಿಕೊಂಡು ನೀವು ಕೂಡ ಹೆರಿಟೇಜ್ ವಿಲೇಜ್ ಗೆ ಭೇಟಿ ಕೊಡಬಹುದಾಗಿದೆ.
ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ