ಸೋತರೂ ಕೆಲಸ ಮಾಡುತ್ತೇನೆ ಎಂದಿದ್ದ ಗಂಗಮ್ಮನಿಗೆ ಬಿದ್ದಿದ್ದು ಕೇವಲ ಆರು ಮತಗಳು!
ತುಮಕೂರು ಗ್ರಾಮಾಂತರ ತಾಲೂಕಿನ ಹೆಬ್ಬೂರು ಗ್ರಾಪಂನ ಕಲ್ಕರೆ ವಾರ್ಡ್ನಿಂದ ಗಂಗಮ್ಮ ಸ್ಪರ್ಧಿಸಿದ್ದರು. ಗೆದ್ದರೆ, ಗ್ರಾಮದಲ್ಲಿ ಅರಳಿ ಕಟ್ಟೆ ಕಟ್ಟಿಸುತ್ತೇನೆ, ಊರಿಗೆ ರಸ್ತೆ ಮಾಡಿಸುತ್ತೇನೆ ಎಂಬಿತ್ಯಾದಿ ಭರವಸೆ ನೀಡಿದ್ದರು.
ತುಮಕೂರು: ಗಂಗಮ್ಮ..! ಈ ಹೆಸರನ್ನು ನೀವು ವಾಟ್ಸಪ್-ಫೇಸ್ಬುಕ್ನಲ್ಲಿ ಓದಿರುತ್ತೀರಿ. ಏಕೆಂದರೆ, ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ನಿಂತು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದ್ದರು. ಇದಕ್ಕೆ ಕಾರಣ ಅವರು ನೀಡಿದ್ದ ಆಶ್ವಾಸನೆ. ಗೆಲುವಿನ ಜೊತೆ ಸೋತರೆ ಏನೆಲ್ಲ ಮಾಡುತ್ತೇನೆ ಎನ್ನುವ ಬಗ್ಗೆಯೂ ಗಂಗಮ್ಮ ಉಲ್ಲೇಖಿಸಿದ್ದರು. ಇದನ್ನು ಮತದಾರರು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತದೆ. ಗಂಗಮ್ಮ ಅವರನ್ನು ಸೋಲಿಸಿ ಬಿಟ್ಟಿದ್ದಾರೆ!
ತುಮಕೂರು ಗ್ರಾಮಾಂತರ ತಾಲೂಕಿನ ಹೆಬ್ಬೂರು ಗ್ರಾಪಂನ ಕಲ್ಕರೆ ವಾರ್ಡ್ನಿಂದ ಗಂಗಮ್ಮ ಸ್ಪರ್ಧಿಸಿದ್ದರು. ಗೆದ್ದರೆ, ಗ್ರಾಮದಲ್ಲಿ ಅರಳಿ ಕಟ್ಟೆ ಕಟ್ಟಿಸುತ್ತೇನೆ, ಊರಿಗೆ ರಸ್ತೆ ಮಾಡಿಸುತ್ತೇನೆ ಎಂಬಿತ್ಯಾದಿ ಭರವಸೆ ನೀಡಿದ್ದರು. ಇಷ್ಟೇ ಆಗಿದ್ದರೆ, ಅವರು ಹಂಚಿದ್ದ ಪಾಂಪ್ಲೆಟ್ ವೈರಲ್ ಆಗುತ್ತಿರಲಿಲ್ಲವೇನೋ. ಗೆಲುವಿನ ಜೊತೆ ಸೋತರೆ ಏನು ಮಾಡುತ್ತೇನೆ ಎನ್ನುವ ಬಗ್ಗೆಯೂ ಗಂಗಮ್ಮ ಉಲ್ಲೇಖಿಸಿದ್ದರು. ಅನರ್ಹವಾಗಿ ಪಡೆದಿರುವ 25 ಕುಟುಂಬಗಳ ಪಡಿತರ ಚೀಟಿ ರದ್ದು ಮಾಡುತ್ತೇನೆ, ಸರ್ವೇ ನಂಬರ್ 86ರಲ್ಲಿ ಹಳೇ ದಾಖಲೆಯಂತೆ ಸ್ಮಶಾನ ಮಾಡಿಸುವುದು ಸೇರಿ ಹಲವು ಭರವಸೆಗಳನ್ನು ನೀಡಿದ್ದರು.
ಆನೆ ಇದ್ದರೂ ಸಾವಿರ, ಸೋತರೂ ಸಾವಿರ ಎಂಬಂತಿತ್ತು ಇವರು ಕೊಟ್ಟ ಭರವಸೆಗಳು! ಹೀಗಾಗಿ, ಗಂಗಮ್ಮ ಸೋಲಲಿ-ಗೆಲ್ಲಲಿ ಅವರು ಕೆಲಸ ಮಾಡಿಯೇ ಮಾಡುತ್ತಾರೆ ಎಂದು ಜನರು ನಿರ್ಧರಿಸಿದಂತಿದೆ. ಇದೇ ಕಾರಣಕ್ಕೆ ಅವರಿಗೆ ಕೇವಲ ಆರೇ ಮತ ನೀಡಿದ್ದಾರೆ.
ಮತ್ತೊಂದು ವಿಚಿತ್ರ ಎಂದರೆ, ಮತದಾನದ ದಿನ ಗಂಗಮ್ಮ ಅವರು ವೋಟ್ ಮಾಡಲು ಬಂದಿರಲಿಲ್ಲ! ಮತದಾನದ ದಿನ ಗಂಗಮ್ಮ ತಮಗೆ ತಾವೇ ಮತದಾನ ಮಾಡಿಕೊಳ್ಳದೆ ಮತದಾನದಿಂದ ದೂರ ಉಳಿದಿದ್ದರು. ಈಗ ಸೋಲು ಕಂಡಿದ್ದಾರೆ. ಈಗ ಸೋತರೂ ಮಾಡುವುದಾಗಿ ನೀಡಿರುವ ಭರವಸೆಯನ್ನು ಅವರು ಈಡೇರಿಸುತ್ತಾರಾ ಎನ್ನುವ ಕುತೂಹಲ ಜನರದ್ದು.
ಚುನಾವಣೆಯಲ್ಲಿ ಗೆದ್ದ ತಕ್ಷಣವೇ ಮದ್ಯ ಸೇವನೆ ಮಾಡಿ.. ಚುನಾವಣಾಧಿಕಾರಿ ಎದುರು ಬಂದ ನೂತನ ಸದಸ್ಯ!
Published On - 7:48 pm, Wed, 30 December 20