Swamiji Suicide: ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ಬಸವಸಿದ್ಧಲಿಂಗ ಸ್ವಾಮೀಜಿ ಆತ್ಮಹತ್ಯೆ
ಸ್ವಾಮೀಜಿ ಸಾವಿನ ನಿಖರ ಕಾರಣ ತಿಳಿದುಬಂದಿಲ್ಲ. ಬೈಲಹೊಂಗಲ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಬೆಳಗಾವಿ: ಬೈಲಹೊಂಗಲ ತಾಲೂಕಿನ ನೇಗಿನಹಾಳ ಗ್ರಾಮದಲ್ಲಿರುವ ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ಬಸವಸಿದ್ಧಲಿಂಗ ಸ್ವಾಮೀಜಿ ಮಠದಲ್ಲಿಯೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತೀಚೆಗೆ ವೈರಲ್ ಆದ ಆಡಿಯೊದಲ್ಲಿ ಅವರ ಹೆಸರು ಉಲ್ಲೇಖವಾಗಿತ್ತು. ಇದರಿಂದ ಶ್ರೀಗಳು ನೊಂದಿದ್ದರು. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗಿದೆ. ಆದರೆ ನಿಖರ ಕಾರಣ ತಿಳಿದುಬಂದಿಲ್ಲ. ಬೈಲಹೊಂಗಲ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಸ್ವಾಮೀಜಿ ಬಂಧನದ ನಂತರ ಇಬ್ಬರು ಮಹಿಳೆಯರು ಫೋನ್ನಲ್ಲಿ ಸ್ವಾಮೀಜಿಗಳ ಲಂಪಟತನ ಕುರಿತು ಮಾತನಾಡಿಕೊಂಡಿದ್ದ ಆಡಿಯೊ ವೈರಲ್ ಆಗಿತ್ತು. ಆ ಸಂಭಾಷಣೆಯ ನಡುವೆ ಒಬ್ಬ ಮಹಿಳೆಯು ಬಸವಸಿದ್ಧಲಿಂಗ ಸ್ವಾಮೀಜಿ ಹೆಸರನ್ನು ಮಹಿಳೆ ಉಲ್ಲೇಖಿಸಿದ್ದರು. ಇದರಿಂದ ನೊಂದುಕೊಂಡಿದ್ದ ಸ್ವಾಮೀಜಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಹೇಳಲಾಗಿದೆ.
ಆತ್ಮಹತ್ಯೆಗೆ ಮೊದಲು ಅವರು ಡೆತ್ನೋಟ್ ಬರೆದಿಟ್ಟಿರಬಹುದು ಎಂದು ಹೇಳಲಾಗಿದ್ದು, ಅದರಲ್ಲಿ ಯಾವ ಕಾರಣ ನೀಡಿದ್ದಾರೆ ಎಂಬ ಬಗ್ಗೆ ಪೊಲೀಸರು ಮಾಹಿತಿ ಬಹಿರಂಗಪಡಿಸಿಲ್ಲ. ವೈರಲ್ ಆಗಿರುವ ಆಡಿಯೊದಲ್ಲಿರುವ ಮಹಿಳೆಯರು ಯಾರು ಎನ್ನುವ ಬಗ್ಗೆ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ. ಈ ಬಗ್ಗೆ ಪೊಲೀಸರಿಗೆ ದೂರು ದಾಖಲಾದ ಬಗ್ಗೆಯೂ ಎಲ್ಲಿಯೂ ಮಾಹಿತಿ ಬಹಿರಂಗಗೊಂಡಿಲ್ಲ.
ಡೆತ್ನೋಟ್ನಲ್ಲಿ ವೈರಲ್ ಆಡಿಯೊ ಉಲ್ಲೇಖ
ನೇಣಿಗೆ ಶರಣಾಗಿರುವ ಗುರು ಮಡಿವಾಳೇಶ್ವರ ಮಠದ ಪೀಠಾಧಿಪತಿ ಬಸವಸಿದ್ಧಲಿಂಗ ಸ್ವಾಮೀಜಿ ಡೆತ್ನೋಟ್ ಬರೆದಿಟ್ಟಿದ್ದಾರೆ. ಸಲ್ಲದ ಮಾತುಗಳನ್ನು ಆಡಿರುವ ಸತ್ಯಕ್ಕ, ರುದ್ರಮ್ಮ ಎಂಬುವವರ ವಿರುದ್ಧ ಕಾನೂನು ಕ್ರಮಕ್ಕೆ ಸ್ವಾಮೀಜಿ ಒತ್ತಾಯಿಸಿದ್ದಾರೆ. ಸಮಾಜ ಬೀದಿಗಿಳಿದು ಹೋರಾಟ ಮಾಡುವ ಇವರು ವಿರುದ್ಧ ಕ್ರಮ ಕೈಗೊಳ್ಳಬೇಕು. ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಶ್ರೀಗಳನ್ನು ಗುರಿಯಾಗಿಸಿಕೊಂಡು ಇಲ್ಲದ ಸಲ್ಲದ ಆರೋಪ ಮಾಡಿ ಅವಾಚ್ಯವಾಗಿ ನಿಂದಿಸುತ್ತಿದ್ದಾರೆ. ಮಠಾಧೀಶರಿಗೆ ಧಕ್ಕೆಯಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದಾರೆ ಎಂದು ಅವರು ಬರೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆಘಾತಗೊಂಡ ಭಕ್ತರು, ಮಠದತ್ತ ದೌಡು
ಮಡಿವಾಳೇಶ್ವರ ಮಠದ ಬಸವಸಿದ್ಧಲಿಂಗ ಸ್ವಾಮೀಜಿ ಆತ್ಮಹತ್ಯೆ ಸುದ್ದಿ ತಿಳಿದ ಭಕ್ತರು ಆಘಾತಕ್ಕೆ ಒಳಗಾದರು. ಮಠದತ್ತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಧಾವಿಸುತ್ತಿದ್ದಾರೆ. ಬಸವಸಿದ್ಧಲಿಂಗ ಸ್ವಾಮೀಜಿ 2007ರಲ್ಲಿ ಮಡಿವಾಳೇಶ್ವರ ಪೀಠ ಅಲಂಕರಿಸಿ, 15 ವರ್ಷಗಳಿಂದ ಭಕ್ತರಿಗೆ ಮಾರ್ಗದರ್ಶನ ಮಾಡಿದ್ದರು. ನಿನ್ನೆ ತಡರಾತ್ರಿವರೆಗೂ ಭಕ್ತರ ಜೊತೆಗೆ ಸ್ವಾಮೀಜಿ ಮಾತುಕತೆ ನಡೆಸಿದ್ದರು. ಈ ವೇಳೆ ವೈರಲ್ ಆಗಿರುವ ಆಡಿಯೊ ಕುರಿತು ಕೆಲ ಭಕ್ತರು ಪ್ರಸ್ತಾಪಿಸಿದ್ದರು. ಆಡಿಯೋದಿಂದ ನನಗೆ ತುಂಬಾ ನೋವಾಗಿದೆ. ಬದುಕಿದ್ದೂ ಎನು ಪ್ರಯೋಜನ ಎನ್ನುವಂತಾಗಿದೆ ಎಂದು ಸ್ವಾಮೀಜಿ ಬೇಸರ ವ್ಯಕ್ತಪಡಿಸಿದ್ದರು. ಎಂದಿನಂತೆ ಸಹಜವಾಗಿದ್ದ ಸ್ವಾಮೀಜಿ ನಂತರ ದಿಢೀರನೇ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸೇವಕರು ಮುಂಜಾನೆ ಸ್ವಾಮೀಜಿ ಕೋಣೆಗೆ ಹೋದಾಗ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ. ನೆಗಿನಹಾಳ ಗ್ರಾಮದಲ್ಲೀಗ ಸ್ಮಶಾನ ಮೌನ ಆವರಿಸಿದೆ. ಸ್ಥಳಕ್ಕೆ ಬೈಲಹೊಂಗಲ ಡಿವೈಎಸ್‌ಪಿ ಶಿವಾನಂದ ಕಟಗಿ ಭೇಟಿ ನೀಡಿ ತನಿಖೆಗೆ ಮಾರ್ಗದರ್ಶನ ಮಾಡಿದರು.
Published On - 12:18 pm, Mon, 5 September 22