ಬೆಂಗಳೂರು: ಖ್ಯಾತ ವೈದ್ಯ ಸಾಹಿತಿ, ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞೆ ಡಾ.ಎಚ್.ಗಿರಿಜಮ್ಮ (70) ಬುಧವಾರ ಮುಂಜಾನೆ ದಾವಣಗೆರೆಯಲ್ಲಿ ಹೃದಯಾಘಾತದಿಂದ ನಿಧನರಾದರು. ಸರಳ ಕನ್ನಡದಲ್ಲಿ ವೈದ್ಯಕೀಯ ಮಾಹಿತಿಯನ್ನು ಒದಗಿಸಬೇಕು ಎನ್ನುವ ಧ್ಯೇಯದಿಂದ ಹತ್ತಾರು ಕೃತಿಗಳನ್ನು ರಚಿಸಿದ್ದ ಡಾ.ಗಿರಿಜಮ್ಮ ವೈದ್ಯಕೀಯ ಸಾಹಿತಿಯಾಗಿ ಜನಪ್ರಿಯರಾಗಿದ್ದರು. ಬೆಂಗಳೂರಿನಲ್ಲಿ 20 ವರ್ಷಗಳ ಸುದೀರ್ಘ ಅವಧಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸಿದ್ದರು.
ಜನಪ್ರಿಯ ವೈದ್ಯರಾಗಿದ್ದ ಗಿರಿಜಮ್ಮ ಕೆಲ ಧಾರಾವಾಹಿ ಹಾಗೂ ಕಿರುಚಿತ್ರಗಳಲ್ಲೂ ಅಭಿನಯಿಸಿದ್ದರು. ವೈದ್ಯಕೀಯ ಕ್ಷೇತ್ರ ಮತ್ತು ವೈದ್ಯಕೀಯ ಸಾಹಿತ್ಯ ಕ್ಷೇತ್ರಕ್ಕೆ ಅವರು ಸಲ್ಲಿಸಿದ್ದ ಸೇವೆಯನ್ನು ಗುರುತಿಸಿ ಕರ್ನಾಟಕ ಸರ್ಕಾರವು ರಾಜ್ಯೋತ್ಸವ ಪುರಸ್ಕಾರ ನೀಡಿ ಗೌರವಿಸಿತ್ತು. ಕನ್ನಡ ಸಾಹಿತ್ಯ ಪರಿಷತ್ ಬಿ.ಸರೋಜಾದೇವಿ ಸಾಹಿತ್ಯ ದತ್ತಿ ಪ್ರಶಸ್ತಿ ನೀಡಿತ್ತು. ಕನ್ನಡ ಲೇಖಕಿಯರ ಸಂಘದ ಅನುಪಮಾ ಪ್ರಶಸ್ತಿ ಸೇರಿದಂತೆ ಹತ್ತಾರು ಗೌರವ ಪುರಸ್ಕಾರಗಳಿಗೆ ಗಿರಿಜಮ್ಮ ಪಾತ್ರರಾಗಿದ್ದರು.
ಪಿಯುಸಿವರೆಗೆ ದಾವಣಗೆರೆಯಲ್ಲಿ ಓದಿದ್ದ ಗಿರಿಜಮ್ಮ, ನಂತರ ಮೈಸೂರು ವೈದ್ಯಕೀಯ ಕಾಲೇಜಿನಲ್ಲಿ ವೈದ್ಯಕೀಯ ಶಿಕ್ಷಣ ಪಡೆದುಕೊಂಡರು. ಗಿರಿಜಮ್ಮ ವೈದ್ಯರಾಗಬೇಕು ಎನ್ನುವುದು ಅವರ ತಾಯಿಯ ಆಸೆಯಾಗಿತ್ತು. ಕಾದಂಬರಿಗಾರ್ತಿ ತ್ರಿವೇಣಿ ಅವರ ಬರಹಗಳಿಂದ ಪ್ರೇರಣೆ ಪಡೆದು ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡರು. ಅವರ ಮೊದಲ ಕತೆ ‘ಹೂಬಳ್ಳಿಗೆ ಈ ಆಸರೆ’.
ಚಂದಮಾಮ, ತಮಸೋಮ ಜ್ಯೋತಿರ್ಗಮಯ, ಅಂಬರತಾರೆ, ಸೇರಿದಂತೆ ಒಟ್ಟು 27 ಕಾದಂಬರಿಗಳನ್ನು ಬರೆದಿದ್ದಾರೆ. ಅರ್ಧಾಂಗಿ, ಸಂಜೆಮಲ್ಲಿಗೆ, ಅನಾವರಣ ಸೇರಿದಂತೆ ಹಲವು ನೀಳ್ಗತೆಗಳೂ ಸೇರಿ ಒಟ್ಟು 50 ಕತೆಗಳನ್ನು ಬರೆದಿದ್ದಾರೆ. ಗಿರಿಜಮ್ಮ ಅವರ ಐದು ಕಥಾಸಂಗ್ರಹಗಳು ಪ್ರಕಟವಾಗಿವೆ.
ನಿಮ್ಮ ಮಗು, ಸ್ತ್ರೀದೇಹ, ಬಸಿರು, ಬಂಜೆತನ ಮತ್ತು ಪರಿಹಾರೋಪಾಯಗಳು, ಮಕ್ಕಳು ಮನಸ್ಸು ಮತ್ತು ಬೆಳವಣಿಗೆ ಗಿರಿಜಮ್ಮ ಅವರ ಜನಪ್ರಿಯ ಕೃತಿಗಳಲ್ಲಿ ಕೆಲವು. ಸುಧಾ, ಮಯೂರ ಸೇರಿದಂತೆ ಹಲವು ನಿಯತಕಾಲಿಕೆಗಳಲ್ಲಿ ಅವರ ಕಥೆ, ಲೇಖನ, ನೀಳ್ಗತೆಗಳು ಪ್ರಕಟವಾಗಿವೆ.
(Gynecologist Health Writer Dr Girijamma Died)
ಇದನ್ನೂ ಓದಿ: ಸಾಹಿತ್ಯಪ್ರಿಯರಿಗೆ ‘ದೇಸಾಯಿ ಕಥನ’ ಉಡುಗೊರೆ
ಇದನ್ನೂ ಓದಿ: ಕವಲಕ್ಕಿ ಮೇಲ್; ವೈದ್ಯವೃತ್ತಿಯೆಂದರೆ ತನ್ನ ರೋಗಿಗಳೊಂದಿಗೆ ನಿರಂತರ ಬಾಂಧವ್ಯವನ್ನೂ ಉಳಿಸಿಕೊಳ್ಳುವುದು
Published On - 2:38 pm, Tue, 17 August 21