ಚಿತ್ರದುರ್ಗದಲ್ಲಿ ದೇವರಿಗೆ ಶ್ರಾವಣ ಸಿಂಗಾರ; ವಿಶಿಷ್ಟ ಅಲಂಕಾರಕ್ಕೆ ಮನಸೋತ ಭಕ್ತರು
ರಾಜಮಾತೆ ಉಚ್ಛಂಗಿ ಯಲ್ಲಮ್ಮ, ಏಕನಾಥೇಶ್ವರಿ, ಬರಗೇರಮ್ಮ ಸೇರಿದಂತೆ ನವದುರ್ಗಿಯರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಬೆಲಗೂರು ವೀರ ಪ್ರತಾಪ ಆಂಜನೇಯಸ್ವಾಮಿ ದೇಗುಲಗಳಲ್ಲಿ ಕೂಡ ವಿಶೇಷ ಪೂಜೆ, ದೇವರ ಅಲಂಕಾರಗಳು ಗಮನ ಸೆಳೆಯುತ್ತವೆ.
ಚಿತ್ರದುರ್ಗ: ಬುಡಕಟ್ಟು ಸಂಸ್ಕೃತಿಯ ತವರಾದ ಐತಿಹಾಸಿಕ ಕೋಟೆನಾಡು ಚಿತ್ರದುರ್ಗ ಜಿಲ್ಲೆಯಲ್ಲಿ ಶ್ರಾವಣ ಮಾಸ ವಿಶೇಷವಾಗಿ ಆಚರಿಸಲ್ಪಡುತ್ತದೆ. ತಿಂಗಳು ಪೂರ್ತಿ ಇಲ್ಲಿನ ಜನರೆಲ್ಲ ಶ್ರದ್ಧೆ, ಭಕ್ತಿಯಿಂದ ಪೂಜೆ, ಪುನಸ್ಕಾರಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಪ್ರತಿ ದಿನವೂ ಇಷ್ಟ ದೇವರುಗಳಿಗೆ ಭಕ್ತರು ತೆರಳಿ, ಭಕ್ತಿ ಸಮರ್ಪಿಸುವ ಮೂಲಕ ವಿಶಿಷ್ಟವಾಗಿ ಶ್ರಾವಣ ಮಾಸವನ್ನು ಆಚರಿಸುತ್ತಾರೆ.
ಶ್ರಾವಣ ಮಾಸದ ಸಂದರ್ಭದಲ್ಲಿ ಬಹುತೇಕ ದೇಗುಲಗಳು ಭಕ್ತರಿಂದ ತುಂಬಿ ತುಳುಕುತ್ತವೆ. ವಿಶೇಷ ಪೂಜೆ, ಪುನಸ್ಕಾರಗಳು ದೇವಸ್ಥಾನಗಳಲ್ಲಿ ನಡೆಯುತ್ತವೆ. ಅಂತೆಯೇ ಅರ್ಚಕರು ದೇವರ ಮೂರ್ತಿ, ಗರ್ಭಗುಡಿಯನ್ನು ವಿಶೇಷ ಅಲಂಕಾರ ಮಾಡುವ ಮೂಲಕ ಜನಮನದ ಗಮನ ಸೆಳೆಯುತ್ತಾರೆ.
ದೇವರಿಗೆ ವಿವಿಧ ಬಗೆಯ ಅಲಂಕಾರ ಹಣ್ಣಿನ ಅಲಂಕಾರ, ತರಕಾರಿ ಅಲಂಕಾರ, ಹೂವಿನ ಅಲಂಕಾರ, ಒಡವೆ ಅಲಂಕಾರ, ವೀಣೆ ಅಲಂಕಾರ, ಬಣ್ಣದ ಅಲಂಕಾರ, ಭಸ್ಮ ಅಲಂಕಾರ, ಬಳೆ ಅಲಂಕಾರ, ನಿಂಬೆ ಅಲಂಕಾರ, ತಿನಿಸುಗಳ ಅಲಂಕಾರ, ವೀಳ್ಯದೆಲೆ ಅಲಂಕಾರ ಸೇರಿದಂತೆ ವಿವಿಧ ವಿಶೇಷ ಅಲಂಕಾರಗಳ ಮೂಲಕ ಭಕ್ತರ ಗಮನ ಸೆಳೆಯಲಾಗುತ್ತದೆ.
ಕೋಟೆನಾಡಿನ ನವದುರ್ಗಿಯರು ಶ್ರಾವಣ ಮಾಸದಲ್ಲಿ ವಿಶೇಷ ಅಲಂಕಾರದ ಮೂಲಕ ಭಕ್ತರ ಕಣ್ಮನ ಸೆಳೆಯುತ್ತಾರೆ. ಭಕ್ತಿ, ನಿಷ್ಠೆಯಿಂದ ಪೂಜೆಗೈಯುವ ಭಕ್ತಾದಿಗಳಿಗೆ ಬೇಡಿದ ವರ ನೀಡಿ ಸಲಹುತ್ತಾರೆ ಎಂಬ ನಂಬಿಕೆ ಈ ಭಾಗದ ಭಕ್ತಾದಿಗಳಲ್ಲಿ ಮನೆ ಮಾಡಿದೆ. ಶ್ರಾವಣ ಮಾಸದಿ ಪ್ರತಿದಿನ ತಪ್ಪದೆ ದೇಗುಲಗಳಿಗೆ ಭೇಟಿ ನೀಡುವ ಜನರು ಬೆಳಗ್ಗೆ ಮತ್ತು ಸಂಜೆ ಕಾಲದಲ್ಲಿ ನೆರವೇರುವ ವಿಶೇಷ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ.
ಶ್ರಾವಣ ಮಾಸದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇಗುಲಗಳಿಗೆ ಬರುತ್ತಾರೆ. ವಿಶೇಷ ಪೂಜೆ, ಅರ್ಚನೆಗಳನ್ನು ಮಾಡಿಸುತ್ತಾರೆ. ಶ್ರಾವಣ ಮಾಸದಿ ವಿಶೇಷ ಅಲಂಕಾರ ಮಾಡುವ ಪದ್ಧತಿ ಈ ಮೊದಲಿನಿಂದಲೂ ನಡೆದುಕೊಂಡು ಬಂದಿದೆ ಎಂದು ಅರ್ಚಕರಾದ ಗಂಗಾಧರ ಹೇಳಿದ್ದಾರೆ.
ರಾಜಮಾತೆ ಉಚ್ಛಂಗಿ ಯಲ್ಲಮ್ಮ, ಏಕನಾಥೇಶ್ವರಿ, ಬರಗೇರಮ್ಮ ಸೇರಿದಂತೆ ನವದುರ್ಗಿಯರಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ನೀಲ ಕಂಠೇಶ್ವರ, ನಾಯಕನಹಟ್ಟಿ ತಿಪ್ಪೇರುದ್ರಸ್ವಾಮಿ, ಹಾಲುರಾಮೇಶ್ವರ, ಬೆಲಗೂರು ವೀರ ಪ್ರತಾಪ ಆಂಜನೇಯಸ್ವಾಮಿ ಸೇರಿದಂತೆ ವಿವಿಧ ದೇಗುಲಗಳಲ್ಲಿ ವಿಶೇಷ ಪೂಜೆಗಳು, ದೇವರ ಅಲಂಕಾರಗಳು ಗಮನ ಸೆಳೆಯುತ್ತವೆ.
ಕೆಲ ಭಕ್ತರು ಆರಾಧ್ಯ ದೇವರ ಅಲಂಕಾರಿಕ ಪೂಜೆ ಬಗ್ಗೆ ಹರಕೆ ಹೊತ್ತಿರುತ್ತಾರೆ. ವೀಳ್ಯದೆಲೆ ಪೂಜೆ, ಬಳೆ ಪೂಜೆ, ನಿಂಬೆ ಹಣ್ಣಿನ ಪೂಜೆ, ಹಣ್ಣು, ಹೂವಿನ ಅಲಂಕಾರ ಹೀಗೆ ವಿವಿಧ ರೀತಿಯಲ್ಲಿ ಭಕ್ತರು ಹರಕೆ ಹೊತ್ತಿರುತ್ತಾರೆ. ದೇವರ ಆಶೀರ್ವಾದದಿಂದ ಮನೋಕಾಮನೆಗಳು ಈಡೇರಿದಾಗ ಪೂಜೆ ಸಲ್ಲಿಸುತ್ತಾರೆ. ಭಕ್ತರ ಇಚ್ಛೆಯಂತೆ ಅರ್ಚಕರು ಕೂಡ ದೇವರ ಅಲಂಕಾರ ಮಾಡಿ ಪೂಜಿಸುತ್ತಾರೆ.
ವರ್ಷವಿಡೀ ನಮ್ಮ ಆರಾಧ್ಯ ದೇವರು, ಮನೆ ದೇವರುಗಳಿಗೆ ನಾವು ತಪ್ಪದೇ ಹೋಗುತ್ತೇವೆ. ಆಗಾಗ ವಿಶೇಷ ಪೂಜೆಗಳನ್ನು ಸಲ್ಲಿಸುತ್ತೇವೆ. ಆದರೆ, ಶ್ರಾವಣ ಮಾಸ ಅಂದರೆ ಹೆಚ್ಚು ಪವಿತ್ರ ಭಾವನೆ ಮೂಡುತ್ತದೆ. ನಮ್ಮ ಪುರಾತನರ ಕಾಲದಿಂದಲೂ ಶ್ರಾವಣ ವಿಶಿಷ್ಟ ಸ್ಥಾನ ಪಡೆದಿದ್ದು, ಬೇಡಿದ ವರ ಪಡೆಯುವ ಅನುಭೂತಿ ನಮ್ಮದಾಗುತ್ತದೆ ಎಂಬ ನಂಬಿಕೆ ಇದೆ ಎಂದು ಭಕ್ತರಾದ ಚಂದ್ರಶೇಖರ ಹೇಳಿದ್ದಾರೆ.
ವರದಿ : ಬಸವರಾಜ ಮುದನೂರ್
ಇದನ್ನೂ ಓದಿ: Shravana Masa 2021: ಶ್ರಾವಣ ಶನಿವಾರದಂದು ಶನಿ ದೇವರನ್ನು ಪೂಜಿಸಿದರೆ ದೋಷ ಪರಿಹಾರವಾಗುತ್ತೆ
ಶ್ರಾವಣ ಮಾಸದಲ್ಲಿ ರಾಜಸ್ತಾನದ ಪರಶುರಾಮ್ ಮಹಾದೇವ್ ದೇವಸ್ಥಾನದಲ್ಲಿ ಭಕ್ತರಿಂದ ವಿಶಿಷ್ಟ ರೀತಿಯ ಪೂಜೆ