ದೇವನಹಳ್ಳಿ: ಮುಂದಿನ ಚುನಾವಣೆಗೆ ಈಗಿನಿಂದಲೇ ಭರದ ಸಿದ್ದತೆ ಮಾಡಿಕೊಳ್ಳುತ್ತಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಪ್ರಮುಖ 5 ಅಂಶಗಳನ್ನಿಟ್ಟುಕೊಂಡು ಜನರ ಬಳಿ ಮತ ಕೇಳುತ್ತೇನೆ ಎಂದು ಹೇಳಿದ್ದಾರೆ.
ನನಗೆ ಮತ್ತೆ ಅಧಿಕಾರ ಬೇಕಿಲ್ಲ..
ನಾನು ಸಿಎಂ ಆಗಿದ್ದಾಗ ಇಂಗ್ಲೀಷ್ ಮತ್ತು ಕನ್ನಡ ಶಾಲೆಗಳಿಗಾಗಿ ಪಬ್ಲಿಕ್ ಶಾಲೆಗಳನ್ನ ಮಾಡಿದ್ದೆ. ಆದ್ರೆ ಇಂದು ಶಾಲೆ ಶುಲ್ಕ ಕಟ್ಟಿಲ್ಲ ಅಂತ ಪೋಷಕರು ಕಣ್ಣೀರು ಹಾಕಿದರೂ ಸರ್ಕಾರ ಅದಕ್ಕೆ ಗಮನ ಕೊಡ್ತಿಲ್ಲ. ಈಗಾಗಲೆ 2 ಬಾರಿ ಮುಖ್ಯಮಂತ್ರಿಯಾಗಿದ್ದೀನಿ ನಾನು.
ವಿಧಾನ ಸೌಧದ ಸಚಿವ ಸಂಪುಟ ಸಭಾಂಗಣದಲ್ಲಿ ಈಗಾಗಲೆ ನನ್ನ ಪೋಟೋ ಹಾಕಿದ್ದಾರೆ. ನನಗೆ ಮತ್ತೆ ಅಧಿಕಾರ ಬೇಕಿಲ್ಲ. ಐದು ಕಾರ್ಯಕ್ರಮಗಳನ್ನಿಟ್ಟುಕೊಂಡು ನಾನು ರಾಜ್ಯದ ಜನರ ಮುಂದೆ ಹೊರಟಿದ್ದೇನೆ. ಮನೆ, ಆರೋಗ್ಯ, ಶಿಕ್ಷಣ, ಬೆಳೆಗೆ ಬೆಂಬಲ ಬೆಲೆ, ಯುವಕರಿಗೆ ಉದ್ಯೋಗ.. ಈ ಐದು ಅಂಶಗಳನ್ನಿಟ್ಟುಕೊಂಡು ಮುಂದಿನ ಚುನಾವಣೆಯಲ್ಲಿ ಸಂಪೂರ್ಣ ಬೆಂಬಲ ಕೊಡುವಂತೆ ಜನರ ಮುಂದೆ ಹೋಗ್ತೀದ್ದಿನಿ ಎಂದರು.
ಸುಸಜ್ಜಿತ ಕಟ್ಟಡಗಳ 5,700 ಶಾಲೆಗಳ ನಿರ್ಮಾಣ..
ಕೊರೊನಾ ಸಮಯದಲ್ಲಿ ದ್ರಾಕ್ಷಿ, ಹೂ ಬೆಳೆಗಳೆಲ್ಲ ನಾಶವಾಯಿತು. ಅದಕ್ಕೆ ಬೆಲೆ ಕಟ್ಟಿ ಕೊಟ್ಟಿತಾ ಈ ಸರ್ಕಾರ? ನಗರ ಪ್ರದೇಶದಿಂದ ನನ್ನ ಪಕ್ಷ ಉಳಿದಿಲ್ಲ.. ಗ್ರಾಮೀಣ ಪ್ರದೇಶದ ರೈತರು, ಯುವಕರಿಂದ ಇಂದು ನಮ್ಮ ಪಕ್ಷ ಉಳಿದುಕೊಂಡಿದೆ. ಇದು ನನ್ನ ಕೊನೆಯ ಹೋರಾಟ. ಮುಂದಿನ ಭಾರಿ ನಮಗೆ ಅಧಿಕಾರ ನೀಡಲು ಜನರ ಮುಂದೆ ಮನವಿ ಮಾಡ್ತೀದ್ದೀನಿ. ಸರ್ಕಾರಿ ಶಾಲೆಯಲ್ಲಿ ಈಜುಕೊಳ, ಆಟದ ಮೈದಾನ, ಸುಸಜ್ಜಿತ ಕಟ್ಟಡಗಳ 5,700 ಶಾಲೆಗಳನ್ನ ಒಂದೇ ವರ್ಷದಲ್ಲಿ ನಿರ್ಮಾಣ ಮಾಡಿ ಖಾಸಗಿ ಶಿಕ್ಷಣಕ್ಕಿಂತ ಉತ್ತಮ ಶಿಕ್ಷಣ ಕೊಡುವಂತೆ ನಾನು ಮಾಡ್ತೀನಿ.
ಪಂಚ ರತ್ನ ಕಾರ್ಯಕ್ರಮಗಳು..
ಐದು ವರ್ಷದಲ್ಲಿ ಐದು ಪಂಚ ರತ್ನ ಕಾರ್ಯಕ್ರಮಗಳನ್ನ ಮಾಡಲು ನಾನು ತೀರ್ಮಾನಿಸಿದ್ದೀನಿ. ರಾಜ್ಯದ ಅಭಿವೃದ್ದಿಯಾಗಬೇಕಾದ್ರೆ ಒಂದೊಂದು ವರ್ಷಕ್ಕೆ ಒಂದೊಂದು ಕಾರ್ಯಕ್ರಮ ಅನುಷ್ಠಾನ ಮಾಡಿದ್ರೆ ಹಣ ಹೊಡೆಯುವುದಕ್ಕೂ ಬ್ರೇಕ್ ಬೀಳಲಿದೆ. ನಾನು ಹೇಳ್ತಿರೂದನ್ನ ಯಾರೂ ಲಘುವಾಗಿ ತೆಗೆದುಕೊಳ್ಳಬೇಡಿ. 2.5 ಲಕ್ಷ ಕೋಟಿ ಬಜೆಟ್ ಮಂಡಿಸುವ ತಾಕತ್ತು ನೀವು ಕೊಟ್ಟಿದ್ದೀರಿ ಅಂದ್ರೆ ಸರಿಯಾಗಿ ಅದನ್ನ ಬಳಕೆ ಮಾಡ್ತಿಲ್ಲ.
ನೂರು ರೂಪಾಯಿಯಲ್ಲಿ 60 ರೂಪಾಯಿ ತಿಂತಿದ್ದಾರೆ. ಇಂದು ನರೇಂದ್ರ ಮೋದಿ ಅವರ ಕಚೇರಿಯಿಂದ ನೇರವಾಗಿ ಲಸಿಕೆ ಕೊಡಿಸಿದ ಹಾಗೆ ಮೋದಿ ಭಾಷಣ ಮಾಡ್ತಾರೆ. ಅದನ್ನ ಎಲ್ಲಾ ಮಾಧ್ಯಮಗಳಲ್ಲಿಯೂ ತೋರಿಸ್ತಿದ್ದಾರೆ. ನರೇಂದ್ರ ಮೋದಿ ದೇಶಕ್ಕೆ ಏನೋ ಮಾಡ್ತಾರೆ ಮಾಡ್ತಾರೆ ಅಂತ ಹೇಳ್ತಿದ್ದಾರೆ. ಬಿಟ್ಟು ಬಿಡಿ ಅವರ ಬಗ್ಗೆ ಮಾತನಾಡೋದು ಬೇಡ. ಇನ್ನೆರಡು-ಮೂರು ವರ್ಷಗಳಲ್ಲಿ ಗೊತ್ತಾಗುತ್ತೆ ಅವರ ಬಂಡವಾಳ. ನೀವೆ ನಮ್ಮ ಪಕ್ಷದ ಆಸ್ತಿ, ನಿಮ್ಮಿಂದ ನಮ್ಮ ಪಕ್ಷ ಉಳಿಬೇಕು. ಹೀಗಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಎಂದು ಜನರನ್ನು ಹೆಚ್ಡಿಕೆ ಮನವಿ ಮಾಡಿದರು.
Published On - 3:30 pm, Sat, 16 January 21