ಭಾರತಿ ಶೆಟ್ಟಿಗೆ ‘ಸುಂದರಿ’ ಎಂದ ಹೆಚ್.ವಿಶ್ವನಾಥ್: ವಿಧಾನ ಪರಿಷತ್‌ನಲ್ಲಿ ತಮಾಷೆಯ ಪ್ರಸಂಗ
ವಿಶ್ವನಾಥ್ ಮಾತಿಗೆ ನಗೆಗಡಲಲ್ಲಿ ಇಡೀ ಸದನವೇ ಒಂದು ಕ್ಷಣ ತೇಲಾಡಿತು. ಇನ್ನು ವಿಶ್ವನಾಥ್ ಮಾತಿಗೆ ಹಾಸ್ಯವಾಗಿ ಕಾಲೆಳೆದ ಭಾರತಿ ಶೆಟ್ಟಿ ನೀವು ಮೊದಲು ಈ ಸುಂದರಿಗೆ ಮಾರಿ ಹೋದ್ರಾ ಎಂದು ಹೇಳಿದ್ದಾರೆ.

ಬೆಂಗಳೂರು: ಹಿಂದೆ 30 ದಿನದ ಅಧಿವೇಶನ ಎಂದರೆ ಪ್ರತಿ ಇಲಾಖೆ ಮೇಲೆ ಚರ್ಚೆ ನಡೆಸುವುದು ಮತ್ತು ಕೇಳಿದ ಪ್ರಶ್ನೆಗೆ ಅದೇ ಇಲಾಖೆ ಸಚಿವರು ಉತ್ತರ ಕೊಡುತ್ತಿದ್ದರು. ಆದರೆ 2 ದಶಕಗಳಿಂದ ಈ ವ್ಯವಸ್ಥೆ ಬದಲಾಗಿದೆ. ಕೇವಲ ರಾಜಕೀಯದ ಚರ್ಚೆ ಆಗುತ್ತಿದೆ ಅಷ್ಟೇ ಎಂದು ಅಧಿವೇಶನ ನಡೆಯುವ ವ್ಯವಸ್ಥೆ ಬಗ್ಗೆ ಬಿಜೆಪಿ ಸದಸ್ಯ ಹೆಚ್. ವಿಶ್ವನಾಥ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಬಜೆಟ್ ಮೇಲೆ ವಿಧಾನ ಪರಿಷತ್‌ನಲ್ಲಿ ಚರ್ಚೆ ನಡೆದಿದ್ದು, ಈ ವೇಳೆ ತಮ್ಮ ಹಳ್ಳಿ ಹಕ್ಕಿ ಪುಸ್ತಕದ ಬಗ್ಗೆ ಪ್ರಸ್ತಾಪ ಮಾಡಿದ ವಿಶ್ವನಾಥ್. ವಿಧಾನಸೌಧ ನಿತ್ಯ ಸುಂದರಿ ಇದ್ದ ಹಾಗೆ. ಇದಕ್ಕೆ ಮಾರು ಹೋಗದವರೇ ಇಲ್ಲ ಎಂದು ಹೇಳಿದ್ದಾರೆ. ಎಷ್ಟೋ ಜನ ಮನೆ ಮಠ ಮಾರಿ ಇಲ್ಲಿ ಬರಲು ಆಗದೆ ಪಿಚಾಚಿಗಳಾಗಿದ್ದಾರೆ. ಈ ವೇಳೆ ‘ಸುಂದರನಾ ಅಥವಾ ಸುಂದಿರಿನಾ’ ಎಂದ ಭಾರತಿ ಶೆಟ್ಟಿಗೆ ವಿಶ್ವನಾಥ್ ಉತ್ತರಿಸಿದ್ದು, ವಿಧಾನಸೌಧ ನಿಮಗಿಂತ ಸುಂದರಿ ಅಲ್ಲ ಬಿಡಿ ಎಂದು ಹಾಸ್ಯ ಮಾಡಿದ್ದಾರೆ. ವಿಶ್ವನಾಥ್ ಮಾತಿಗೆ ನಗೆಗಡಲಲ್ಲಿ ಇಡೀ ಸದನವೇ ಒಂದು ಕ್ಷಣ ತೇಲಾಡಿತು. ಇನ್ನು ವಿಶ್ವನಾಥ್ ಮಾತಿಗೆ ಹಾಸ್ಯವಾಗಿ ಕಾಲೆಳೆದ ಭಾರತಿ ಶೆಟ್ಟಿ ನೀವು ಮೊದಲು ಈ ಸುಂದರಿಗೆ ಮಾರಿ ಹೋದ್ರಾ ಎಂದು ಹೇಳಿದ್ದಾರೆ.
ಹೀಗೆ ವಿಧಾನ ಪರಿಷತ್ ಸದನದಲ್ಲಿ ತಮಾಷೆಯಾಗಿ ಮಾತನಾಡಿದ ನಂತರ ಎಚ್. ವಿಶ್ವನಾಥ್ ಗಂಭೀರವಾದ ಚರ್ಚೆಗೆ ಮುಂದಾಗಿದ್ದು, ನಮ್ಮ ಬಜೆಟ್ ಎಷ್ಟು, ನಮ್ಮ ಆದಾಯ ಎಷ್ಟು? ಖರ್ಚು ಹೆಚ್ಚಾಗಿದೆ. ಎಷ್ಟು ಅಂತ ಸಾಲ ಮಾಡುತ್ತೀರಾ ಈಗಾಗಲೇ 4 ಲಕ್ಷ ಕೋಟಿ ರಾಜ್ಯದ ಸಾಲ ತಲುಪಿದೆ. ಈ ಬಾರಿ 63 ಸಾವಿರ ಕೋಟಿ ಕಡಿಮೆ ಆದಾಯ ಬಂದಿದ್ದೆ. ಇದನ್ನ ಹೇಗೆ ಕ್ರೋಢೀಕರಣ ಮಾಡಬೇಕು. ಇದಕ್ಕಾಗಿಯೇ ಪ್ರತ್ಯೇಕ ಹಣಕಾಸು ಮಂತ್ರ ಇರಬೇಕು. ಇದೆಲ್ಲವನ್ನು ಆ ಮಂತ್ರಿ ತಾಳ್ಮೆಯಿಂದ ನೋಡುತ್ತಾರೆ. ನಾವು ಚುನಾವಣೆಗೆ ಕೂಡ ಖರ್ಚು ಮಾಡಬೇಕು. ಚುನಾವಣೆಯಲ್ಲಿ ಗೆದ್ದು ಬಂದ ನಂತರವೂ ಖರ್ಚು ಮಾಡಬೇಕು. ಪ್ರತಿ ನಿತ್ಯ ಮನೆ ಬಳಿ ಅನೇಕ ಜನ ಬರುತ್ತಾರೆ ಎಂದು ಬಜೆಟ್ ವಿಷಯವಾಗಿ ಚರ್ಚೆ ನಡೆಸಿದ್ದಾರೆ.
ಸರ್ಕಾರಿ ಅಧಿಕಾರಿಗಳ, ನೌಕರರ ಸಂಬಳ ಪೂರ್ತಿ ಕೊಡಲಾಗುತ್ತಿದೆ. ಆದರೆ ಪರಿಷತ್ ಸದಸ್ಯರ ವೇತನದಲ್ಲಿ ಮಾತ್ರ ಶೇಕಡಾ 30ರಷ್ಟು ಕಡಿತ ಮಾಡಲಾಗಿದೆ. ನೌಕರರು ಒಮ್ಮೆ ಕೆಲಸಕ್ಕೆ ಸೇರಿದರೆ ನಂತರ ಯಾರಿಗೂ ಖರ್ಚು ಮಾಡಬೇಕಿಲ್ಲ. ಆದರೆ ನಮ್ಮ ಪರಿಸ್ಥಿತಿ ಹಾಗಲ್ಲ. ಬಜೆಟ್ ಚರ್ಚೆ ವೇಳೆ ವೇತನ ಕಡಿತದ ವಿಚಾರ ಪ್ರಸ್ತಾಪ ಮಾಡಿದ ವಿಶ್ವನಾಥ್. ಕೊರೋನ ನೆಪದಲ್ಲಿ ನಮ್ಮ ವೇತನಕ್ಕೆ ಕತ್ತರಿ ಹಾಕಲಾಗಿದೆ ಎಂದು ಹೇಳಿದ್ದಾರೆ.
ಹಣ ಉಳಿತಾಯ ಮಾಡುವುದು ಹೇಗೆ? ಮೊದಲು ಆಡಳಿತಾತ್ಮಕ ವೆಚ್ಚ ಕಡಿತ ಮಾಡಬೇಕು. ಸಮಾಜಕಲ್ಯಾಣ ಇಲಾಖೆಯಲ್ಲಿ SC, ST, OBC, ಅಲ್ಪಸಂಖ್ಯಾತ ಇಲಾಖೆ ಎಂದು 4 ಪ್ರತ್ಯೇಕ ಇಲಾಖೆ ಇದೆ. ಈ ನಿಟ್ಟಿನಲ್ಲಿ ಪ್ರತ್ಯೇಕ ಅಧಿಕಾರಿಗಳು ಕೂಡ ಇದ್ದಾರೆ. ಯಾಕೆ ಇಷ್ಟು ಅಧಿಕಾರಿಗಳು? ಇದರಿಂದ ಹೆಚ್ಚು ಹಣ ಖರ್ಚು. ಇವರ ಕೆಲಸ ಹಾಸ್ಟೆಲ್ ನೋಡುವುದು ಅಷ್ಟೇ. ಆದರೆ ಆ ಹಾಸ್ಟೆಲ್ ಅನ್ನದಲ್ಲೂ ಹಣ ಲಪಟಾಯಿಸ್ತಾರೆ ಎಂದು ಸದಸ್ಯ ಹೆಚ್.ವಿಶ್ವನಾಥ್ ತಿಳಿಸಿದ್ದಾರೆ.
ಬಜೆಟ್ ಮೇಲಿನ ಚರ್ಚೆ ವೇಳೆ ಅಂಕಿ ಅಂಶಗಳ ಸಮೇತ ಮಾತನಾಡುತ್ತಿದ್ದ ಎಚ್. ವಿಶ್ವನಾಥ್ ಅವರನ್ನು ಇಷ್ಟೊಂದೆಲ್ಲಾ ತಿಳಿದುಕೊಂಡಿರುವ ನಿಮ್ಮನ್ನು ಮಂತ್ರಿ ಮಾಡದೇ ತಪ್ಪು ಮಾಡಿದ್ದಾರೆ ಎಂದು ಮರಿತಿಬ್ಬೇಗೌಡ ವ್ಯಂಗ್ಯ ಮಾಡಿದ್ದಾರೆ. ಇದಕ್ಕೆ ಉತ್ತರಿಸಿದ ವಿಶ್ವನಾಥ್ ನಾನು ಈಗಾಗಲೇ ಮಂತ್ರಿಯಾಗಿ ಹೆಜ್ಜೆ ಗುರುತು ಉಳಿಸಿದ್ದೇನೆ. ಈ ಹಿಂದೆ ಶಿಕ್ಷಣ ಸಚಿವನಾಗಿ ಕೆಲಸ ಮಾಡಿದ್ದೇನೆ. ಶಾಲಾ ಮಕ್ಕಳಿಗೆ ಬಿಸಿಯೂಟದಂತಹ ಯೋಜನೆ ತಂದಿದ್ದು, ನನ್ನ ಕಾಲದಲ್ಲಿಯೇ ಎಂದು ತಿಳಿಸಿದ್ದಾರೆ.
ಹೆಚ್.ಡಿ ಕುಮಾರಸ್ವಾಮಿ ವಿಚಾರ ಪ್ರಸ್ತಾಪ: ಹಣಕಾಸು ಇಲಾಖೆಯನ್ನು ದೇವರಾಜ ಅರಸು, ವೀರೇಂದ್ರ ಪಾಟೀಲರು ಬೇರೆಯವರಿಗೆ ಕೊಡುತ್ತಿದ್ದರು. ಹೀಗಾಗಿ ವಿತ್ತ ಇಲಾಖೆ ಬೇರೆಯವರಿಗೆ ಕೊಡಿ ಎಂದು ಹೆಚ್.ಡಿ.ಕುಮಾರಸ್ವಾಮಿ ಅವರಿಗೆ ಹೇಳಿದ್ದೆ. ಆದರೆ ಅವರು ನನಗೆ ಸಾಮರ್ಥ್ಯವಿಲ್ವಾ ಎಂದು ಮಾತನಾಡಿದ್ದರು. ಯಾವುದೇ ಮುಖ್ಯಮಂತ್ರಿಗಾದರೂ ಸಮಯ ಇರುವುದಿಲ್ಲ. ಕೆಲಸದ ಮಧ್ಯೆ ಇಲಾಖೆ ನೋಡಿಕೊಳ್ಳುವುದು ಕಷ್ಟವಾಗುತ್ತದೆ ಎಂದು ವಿಧಾನ ಪರಿಷತ್‌ನಲ್ಲಿ ಸದಸ್ಯ ಹೆಚ್.ವಿಶ್ವನಾಥ್ ಹೇಳಿಕೆ ನೀಡಿದ್ದಾರೆ.
ಯಾವುದೇ ಸಿಎಂಗೆ ಆದ್ರು ಸಮಯ ಇರೋದಿಲ್ಲ. ಕೆಲಸದ ಮಧ್ಯೆ ಇಲಾಖೆ ನೋಡುವುದು ಕಷ್ಟ. 33 ಇಲಾಖೆಗಳ ಪೈಕಿ ಡಿಪಿಆರ್, ಕಾನೂನು ಇಲಾಖೆ, ಹಣಕಾಸು ಇಲಾಖೆ ಅತ್ಯಂತ ಮಹತ್ವದ್ದು. ಉಳಿದ ಇಲಾಖೆಗಳು ಟಚ್ ಅಂಡ್ ಗೋ ಅಷ್ಟೆ. ವಿಪರ್ಯಾಸವೆಂದರೆ ಪ್ರಮುಖ 3 ಇಲಾಖೆಯಲ್ಲಿ 2 ಇಲಾಖೆ ಮುಖ್ಯಮಂತ್ರಿ ಬಳಿ ಇವೆ. ಸಿಎಂ ಆರ್ಥಿಕ ತಜ್ಞರು ಅಲ್ಲ. ಸಿದ್ದರಾಮಯ್ಯ 14 ಬಜೆಟ್ ಮಂಡಿಸಿದ್ದಾರೆ, ಕುಮಾರಸ್ವಾಮಿ 5 ಬಜೆಟ್ ಮಂಡಿಸಿದ್ದಾರೆ. ಆದರೆ ಅವೆಲ್ಲ ಟೇಬಲ್ ಮಾಡಿರುವುದಷ್ಟೇ ಎಂದು ಸದಸ್ಯ ಹೆಚ್.ವಿಶ್ವನಾಥ್ ತಿಳಿಸಿದ್ದಾರೆ.
ಇದನ್ನೂ ಓದಿ: ಇಂದೂ ವಿಧಾನ ಪರಿಷತ್‌ನಲ್ಲಿ ಮಂಡನೆಯಾಗದ ಗೋ ಹತ್ಯೆ ಪ್ರತಿಬಂಧಕ ವಿಧೇಯಕ