ಹಿಜಾಬ್ (Hijab) ವಿವಾದ ಬಳಿಕ ರಾಜ್ಯದಲ್ಲಿ ಎರಡು ಸಮುದಾಯದ ನಡುವೆ ಒಂದೊಂದೆ ಸಂಘರ್ಷ ಶುರುವಾಗಿದೆ. ಇಂದು ಯುಗಾದಿ ಹೊಸತೊಡಕು. ಈ ಹಿನ್ನೆಲೆ ಹಿಂದೂ ಸಮುದಾಯದ ಸಂಘಟನೆಗಳು ಹಲಾಲ್ ಕಟ್ (Halal Cut) ಮಾಂಸವನ್ನು ಸ್ವೀಕರಿಸದಂತೆ ಅಭಿಯಾನ ಶುರುಮಾಡಿವೆ. ಹಲಾಲ್ ಕಟ್ ಹಿಂದೂ ಧರ್ಮಕ್ಕೆ ಅನ್ವಯಿಸಲ್ಲ. ಜಟ್ಕಾ ಕಟ್ (Jatka Cut) ಮಾಂಸವನ್ನು ಖರೀದಿಸುವಂತೆ ಹಿಂದೂ ಸಮುದಾಯದ ಸಂಘಟನೆಗಳು ಮನವಿ ಮಾಡಿವೆ. ಈಗಾಗಲೇ ಮಾಂಸದಂಗಡಿ ಬಳಿ ಗ್ರಾಹಕರು ಆಗಮಿಸುತ್ತಿದ್ದಾರೆ. ಕೆಲ ಮುಸ್ಲಿಂ ಅಂಗಡಿಗಳಿಗೆ ವ್ಯಾಪಾರವೇ ಇಲ್ಲದಂತಾಗಿದೆ. ಇನ್ನು ಕೆಲ ಕಡೆ ಸಾಧಾರಣ ಮಟ್ಟಿಗೆ ವ್ಯಾಪಾರ ನಡೆಯುತ್ತಿದೆ.
ಯುಗಾದಿ ಹೊಸತಡಕಿಗೆ ಶ್ರೀರಾಂಪುರದಲ್ಲಿ ಭರ್ಜರಿ ಮಾಂಸ ಮಾರಾಟವಾಗಿದೆ. ಎವರ್ ಗ್ರೀನ್ ಮಟನ್ ಸ್ಟಾಲ್ ಮುಂದೆ ಸಾಲು ನಿಂತಿದೆ. ಟಿವಿ9ಗೆ ಮಟನ್ ಸ್ಟಾಲ್ ಮಾಲೀಕ ಆಯೂಬ್ ಹೇಳಿಕೆ ನೀಡಿದ್ದಾರೆ. ಪ್ರತಿ ವರ್ಷ 1300 ಕೆಜಿ ಮಾಂಸ ಯುಗಾದಿ ಸಮಯದಲ್ಲಿ ಮಾರಾಟ ಮಾಡ್ತಿದ್ವಿ. ಈ ವರ್ಷ 1500 ಕೆಜಿ ಮಾಂಸ ಮಾರಾಟ ಮಾಡಲಾಗಿದೆ. ಹಿಂದಿಗಿಂತ ಈ ಬಾರಿಯೇ ಹೆಚ್ಚು ಮಾರಾಟವಾಗಿದೆ. ಜಟ್ಕಾ ಕಟ್ ಅಭಿಯಾನದಿಂದ ನಮ್ಮ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಜನ ಒಳ್ಳೆಯ ಮಟನ್ ಬೇಕು ಅಂತಾರೆ. ಹಲಾಲ್ ಕಟ್, ಜಟ್ಕಾ ಕಟ್ ಅಂತಾ ಕೇಳಲ್ಲ ಎಂದು ತಿಳಿಸಿದ್ದಾರೆ.
ಕುಮಾರಸ್ವಾಮಿ ವಿರುದ್ಧ ಪ್ರಶಾಂತ್ ಸಂಬರಗಿ ವಾಗ್ದಾಳಿ ನಡೆಸಿದ್ದಾರೆ. ವೋಟ್ ಬ್ಯಾಂಕ್ಗೋಸ್ಕರ ಹಿಂದೂಗಳನ್ನ ಡಿವೈಡ್ ಮಾಡಬೇಡಿ. ಹೆಚ್.ಡಿ ಕುಮಾರಸ್ವಾಮಿ ಮನೆ ದೇವರಾಣೆ ಮಾಡಿ ಹೇಳಲಿ ಅವರ ಮನೆಗೆ ಎಲ್ಲಿಂದ ಆಹಾರ ಬರುತ್ತೆ ಎಂದು. ನನಗೆ 35 ರಿಂದ 40 ಸೀಟ್ ಬರುತ್ತೆ ನಾನು ಕಿಂಗ್ ಮೇಕರ್ ಆಗ್ತೀನಿ ಎಂದು ಹಿಂದೂಗಳನ್ನ ಡಿವೈಡ್ ಮಾಡ್ಬೇಡಿ ಎಂದು ಪ್ರಶಾಂತ್ ಸಂಬರಗಿ ಆರೋಪಿಸಿದ್ದಾರೆ.
ದಾಸರಹಳ್ಳಿ ಮತ್ತು ಉಳ್ಳಾಲ ಎರಡು ಹಿಂದವೀ ಮಾರ್ಟ್ ನಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿದೆ. ಬೆಳಿಗ್ಗೆಯಿಂದ ಹನ್ನೊಂದು ಗಂಟೆಯವರೆಗೆ ಬರೋಬ್ಬರಿ ವ್ಯಾಪಾರ ಆಗಿದ್ದು 3900 ಕೆಜಿ ಮಾಂಸ ಮಾರಾಟವಾಗಿದೆ. 2700 ಕೆಜಿ ಮಟನ್, 950 ಕೆಜಿ ಚಿಕನ್ ಹಾಗೂ 250 ಮೀನು ಮಾರಾಟವಾಗಿದೆ.
ಚಿಕನ್ ಕೆಜಿಗೆ- 170 ರೂಪಾಯಿ
ಬಾಯ್ಲರ್ – 170 ರೂಪಾಯಿ
ಫಾರ್ಮ್ -110 ರೂಪಾಯಿ
ನಾಟಿ – 300 ರೂಪಾಯಿ
ಮಟನ್ ಕೆಜಿಗೆ – 650 ರಿಂದ 700 ರುಪಾಯಿ
ಮೀನು – ಟೂನಾ- 270 ರೂಪಾಯಿ, ಅರ್ನೆ- 250 ರೂಪಾಯಿ ಅಂಜಲ್- 980 ರೂಪಾಯಿ ಹಾಗೂ ಬಾಂಗಡ- 240 ರೂಪಾಯಿ ಇದೆ.
ಅಂದಾಜು – 18 ಲಕ್ಷ ರೂಪಾಯಿ ವ್ಯಾಪಾರವಾಗಿದೆ.
ಮುಸ್ಲಿಮರ ಅಂಗಡಿಗಳಲ್ಲಿ ಮಾಂಸ ಖರೀದಿಸುವಂತೆ ಮನವಿ ಮಾಡಿ, ಮೈಸೂರಿನಲ್ಲಿ ಡಿಎಸ್ಎಸ್, ರೈತ ಸಂಘದಿಂದ ಅಭಿಯಾನ ಮಾಡಲಾಗಿದೆ. ಕರಪತ್ರ ಹಂಚಿದ ದಲಿತ ಸಂಘರ್ಷ ಸಮಿತಿ, ರೈತ ಸಂಘದಿಂದ ಅಭಿಯಾನ ನಡೆಸಲಾಗಿದೆ. ಹಲಾಲ್, ಜಟ್ಕಾ ಕಟ್ ಮಾಂಸ ಖರೀದಿ ವಿವಾದ ವಿಚಾರವಾಗಿ ಮೈಸೂರಿನಲ್ಲಿ ಕೆಲ ಸಾಹಿತಿಗಳು ಹಲಾಲ್ ಪರ ಧ್ವನಿ ಎತ್ತಿದ್ದಾರೆ. ಮುಸ್ಲಿಂ ಅಂಗಡಿಯಲ್ಲಿ ಸಾಮೂಹಿಕವಾಗಿ ಮಾಂಸ ಖರೀದಿ ಮಾಡಿದ್ದಾರೆ. ಶಾಂತಿನಗರದ ಮಟನ್ ಅಂಗಡಿಗಳಲ್ಲಿ ಮಾಂಸ ಖರೀದಿಸಿದ್ದಾರೆ. ಸಾಹಿತಿ ದೇವನೂರು ಮಹದೇವ, ರಾಜ್ಯ ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾಂಸ ಖರೀದಿ ಮಾಡಿದ್ದಾರೆ.
ಪ್ರತಿ ವರ್ಷದಂತೆ ಈ ಬಾರಿಯೂ 100 ಕುರಿ ತರಿಸಿದ್ವಿ. ಎಲ್ಲಿ ಜನ ಬರೊಲ್ವೊ ಅಂತ ಭಯ ಆಗಿತ್ತು. ಆದ್ರೆ ಇವತ್ತಿನ ಕ್ರೌಡ್ ನೋಡಿ ನೆಮ್ಮದಿ ಆಯ್ತು. ಶೇ.10 ರಷ್ಟು ವ್ಯಾಪಾರ ಕಡಿಮೆ ಆಗಿದೆ ಅಷ್ಟೆ. ಜಟ್ಕಾ ಕಟ್ ಅಭಿಯಾನದಿಂದ ಸ್ವಲ್ಪ ಲಾಸ್ ಆಗಿದೆ. ಕೆಲವರು ಆನ್ ಲೈನ್ ಪೇಮೆಂಟ್ ಮಾಡಿರ್ತಾರೆ. ಹೀಗಾಗಿ ಸಂಜೆ ವೇಳೆಗೆ ಆದಾಯದ ಮಾಹಿತಿ ನೋಡ್ತೀವಿ. ಜನರಿಗೆ ಯಾವುದು ಬೇಕೊ ಅದನ್ನ ಖರೀದಿ ಮಾಡ್ತಾರೆ. ಬಾಯ್ಕಾಟ್ ಮಾಡ್ಬೇಕಂದ್ರೆ ಬಿಗ್ ಬಜಾರ್, ಕೆಎಫ್ಸಿ ಬೇಕಿದ್ರೆ ಮಾಡ್ಲಿ. ಇಲ್ಲಿ ಮಾಡಿದ್ರೆ ನಮ್ಮಂತಹ ಸಣ್ಣ ಪುಟ್ಟ ಅಂಗಡಿಗಳಿಗೆ ಪ್ರಾಬ್ಲಂ ಆಗುತ್ತೆ. ನಾವು ಜನರ ಆಯ್ಕೆಗೆ ಬಿಡೋಣ, ಯಾಕೆ ಸುಮ್ನೆ ಈ ಅಭಿಯಾನ? ಜನ ಸರ್ಕಾರನಲವನ್ನ ಹೇಗೆ ಆಯ್ಕೆ ಮಾಡ್ತಾರೊ ಹಾಗೆಯೇ ಇದನ್ನೂ ಆಯ್ಕೆ ಮಾಡಲಿ. ತಿನ್ನೋ ವಿಚಾರದ ಆಯ್ಕೆಯನ್ನ ಜನರಿಗೆ ಬಿಡೋಣ ಎಂದು HTM ಮಟನ್ ಸ್ಟಾಲ್ ಕ್ಯಾಶಿಯರ್ ಪಾಷಾ ಹೇಳಿದ್ದಾರೆ.
ಒಂದು ಸಮುದಾಯವನ್ನು ಗುರಿಯಾಗಿಸಿ ರಾಜಕೀಯ ಮಾಡ್ತಿದ್ದಾರೆ. ಹಿಜಾಬ್ ವಿಚಾರ, ಹಿಂದೂಯೇತರರಿಗೆ ವ್ಯಾಪಾರ ನಿರ್ಬಂಧ, ಇದೀಗ ಹಲಾಲ್, ಜಟ್ಕಾ ಕಟ್ ಮಾಂಸ ವಿವಾದ ಶುರುವಾಗಿದೆ. ರಾಜ್ಯದಲ್ಲಿ ಕಳೆದ 3 ತಿಂಗಳಿನಿಂದ ಕುತಂತ್ರ ನಡೆಸುತ್ತಿದ್ದಾರೆ. ಬಿಜೆಪಿಯ ವಿವಾದಗಳಿಂದ ನಮ್ಮ ಸಮಾಜ ಜಾಗೃತವಾಗಿದೆ. ಈ ವಿವಾದಗಳನ್ನು ನಾವು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತಿದ್ದೇವೆ. ರಾಜ್ಯದ ಕರಾವಳಿ ಭಾಗದಲ್ಲಿ ಮಾತ್ರ ಹೆಚ್ಚು ವಿವಾದವಾಗುತ್ತಿದೆ. ಅಲ್ಲಿರುವ ಕೆಲ ಸಂಘಟನೆಗಳು ಬಿಜೆಪಿ ಬಿ ಟೀಮ್ ಆಗಿವೆ. ಇವರು ಬಿಜೆಪಿಯವರಿಗೆ ಇಂಥಾ ವಿವಾದದ ಸರಕು ನೀಡ್ತಿದ್ದಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಅಂಜುಮನ್ ಇಸ್ಲಾಂ ಮಾಜಿ ಅಧ್ಯಕ್ಷ ಇಸ್ಮಾಯಿಲ್ ತಮಟಗಾರ ಆರೋಪ ಮಾಡಿದ್ದಾರೆ.
ಹಲಾಲ್ ಕಟ್ ಮಾಂಸ ಖರೀದಿಸದಂತೆ ಅಭಿಯಾನ ಹಿನ್ನೆಲೆ ಹಲಾಲ್ ಮಾಂಸದ ಮೇಲೆ ಪ್ರಭಾವ ಬೀರಿದೆ. ನಮ್ಮ ಬಳಿ ಕೇವಲ ರೆಗ್ಯುಲರ್ ಕಸ್ಟಮರ್ಸ್ ಮಾತ್ರ ಬರ್ತಿದ್ದಾರೆ. ಹಲಾಲ್ ಮಾಂಸ ಖರೀದಿಗೆ ಎಲ್ಲಾ ಗ್ರಾಹಕರು ಬರುತ್ತಿಲ್ಲ ಎಂದು ಟಿವಿ9ಗೆ ಮಟನ್ ಸ್ಟಾಲ್ ಮಾಲೀಕ ಮೊಹಮ್ಮದ್ ಹೇಳಿಕೆ ನೀಡಿದ್ದಾರೆ. ಹಲಾಲ್ V/S ಜಟ್ಕಾ ಕಟ್ ವಿವಾದ ಹಿನ್ನೆಲೆ ವ್ಯಾಪಾರ ಡಲ್ ಆಗಿದೆ. ಕೆಲ ಮುಸ್ಲಿಂ ವ್ಯಾಪಾರಿಗಳ ಅಂಗಡಿಗಳಲ್ಲಿ ವ್ಯಾಪಾರ ಡಲ್ ಎಂದು ಮಂಡ್ಯದಲ್ಲಿ ಮುಸ್ಲಿಂ ವ್ಯಾಪಾರಿ ಇನಾಯತ್ ಹೇಳಿದ್ದಾರೆ. ಈ ಬಾರಿ ಶೇಕಡಾ 30ರಷ್ಟು ಗ್ರಾಹಕರು ಕಡಿಮೆಯಾಗಿದ್ದಾರೆ. ಕಳೆದ ವರ್ಷ 30-35 ಮರಿಗಳನ್ನ ಮಾರಾಟ ಮಾಡಿದ್ದೆವು. ಈ ವರ್ಷ 18 ಮರಿ ಮಾಂಸ ಮಾತ್ರ ಮಾರಾಟ ಆಗಿದೆ. ಈ ವಿವಾದದ ಬಳಿಕ ವ್ಯಾಪಾರ ಬಹಳಷ್ಟು ಕಡಿಮೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಮುಸ್ಲಿಮರ ಅಂಗಡಿಗಳಲ್ಲಿ ಮಾಂಸ ಖರೀದಿಸುವಂತೆ ಪ್ರಗತಿಪರ ಒಕ್ಕೂಟಗಳ ಅಧ್ಯಕ್ಷ ಶಿವರಾಮ್ ಮನವಿ ಮಾಡಿದ್ದಾರೆ. ಮೈಸೂರಿನಲ್ಲಿ ಬೇವು ಬೆಲ್ಲ ಹಂಚಿ ಮನವಿ ಮಾಡಿದ ಪ್ರಗತಿಪರ ಸಂಘಟನೆಗಳು, ಅಭಿಯಾನ ನಡೆಸುತ್ತಿದೆ.
ರಾಯಚೂರಿನಲ್ಲಿ ಹೊಸತೊಡಕಿಗೆ ಹಲಾಲ್ ಕಟ್, ಜಟ್ಕಾ ಕಟ್ ವಿವಾದ ತೊಡಕಾಗಿದೆ. ಸಾಮಾನ್ಯವಾಗಿ ಮಾಂಸ ಖರೀದಿ ಭರಾಟೆ ನಡೆಯುತ್ತಿದೆ.
ಇಂದು ಯುಗಾದಿ ಹೊಸತೊಡಕು ಹಿನ್ನೆಲೆ ಗದಗದಲ್ಲಿ ನಾನ್ ವೆಜ್ ಮಾರ್ಕೆಟ್ನಲ್ಲಿ ಭರ್ಜರಿ ವ್ಯಾಪಾರ ನಡೆಯುತ್ತಿದೆ. ಜವಳ ಗಲ್ಲಿಯ ಮಟನ್ ಮಾರ್ಕೆಟ್ನಲ್ಲಿ ಮಟನ್, ಚಿಕನ್ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ನಾವು 60 ವರ್ಷಗಳಿಂದ ಮಟನ್, ಚಿಕನ್ ಇಲ್ಲೇ ಖರೀದಿ ಮಾಡ್ತೀವಿ ನಮಗೇನೂ ಆಗಿಲ್ಲ. ಈಗ ಎರಡ್ಮೂರು ದಿನಗಳಿಂದ ಜಟ್ಕಾ ಕಟ್ ಅಂತ ಕೇಳ್ತಾಯಿದ್ದೀವಿ. ನಾವೂ ಯಾವಾಗಲೂ ಹಲಾಲ್ ಕಟ್ ಮಟನ್ನೇ ತಿನ್ನೋದು ಇದೇ ಖರೀದಿ ಮಾಡಿದ್ದೇವೆ ಅಂತ ಖರೀದಿದಾರರು ಹೇಳಿದರು.
ಬೆಂಗಳೂರಿನ ಯಶವಂತಪುರ ಫಿಶ್ ಮಾರ್ಕೆಟ್ನಲ್ಲಿ ಜನರು ಮೀನು ಖರೀದಿಗೆ ಮುಗಿಬಿದ್ದಿದ್ದಾರೆ. ಕಾಲಿಡಲು ಜಾಗವಿಲ್ಲದೆ ಫಿಶ್ ಮಾರ್ಕೆಟ್ ತುಂಬಿ ತುಳುಕುತ್ತಿದೆ.
ಆನೇಕಲ್ ಹೆಬ್ಬಗೋಡಿಯ ಮಟನ್ ಶಾಪ್ನಲ್ಲಿ ಮಟನ್ ಮಾರಾಟ ನಡೆಯುತ್ತಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.40 ಕಡಿಮೆ ವ್ಯಾಪಾರ ನಡೆಯುತ್ತಿದೆ. ಹಲಾಲ್ ಕಟ್, ಜಟ್ಕಾ ಕಟ್ ವಿವಾದ ಕಾರಣ ಹಿಂದೂ ಗ್ರಾಹಕರು ಆಗಮಿಸುತ್ತಿಲ್ಲ.
ಹೊಸತಡಕು ಹಿನ್ನೆಲೆ ಜನರು ಗುಡ್ಡೆ ಮಾಂಸಕ್ಕೆ ಮುಗಿಬಿದ್ದಿದ್ದಾರೆ. ಬೆಂಗಳೂರಿನ ಸಂಜಯನಗರದ ಗೆದ್ದಲಹಳ್ಳಿಯಲ್ಲಿ ಖರೀದಿ ಮಾಡುತ್ತಿದ್ದಾರೆ. ಚೀಟಿ ದುಡ್ಡಿನಲ್ಲಿ ಜನರು ಗುಡ್ಡೆ ಮಾಂಸ ಖರೀದಿಸುತ್ತಿದ್ದಾರೆ.
ತುಮಕೂರಿನ ಮೀನು ಮಾರುಕಟ್ಟೆಯಲ್ಲಿ ವ್ಯಾಪಾರ ಕುಸಿತಗೊಂಡಿದೆ. ಮಟನ್ ಹಾಗೂ ಚಿಕನ್ ವ್ಯಾಪಾರ ಜೋರಾಗಿದೆ. ಆದರೆ ಮೀನಿನ ವ್ಯಾಪಾರ ಡಲ್ ಆಗಿದೆ. ಇಂದು ಹೊಸತೊಡಕು ಹಿನ್ನೆಲೆ ಮೀನು ವ್ಯಾಪಾರ ಜೋರಾಗಿ ನಡೆಯಬೇಕಿತ್ತು. ಆದರೆ ಮೀನು ಕೇಳೊರಿಲ್ಲದಂತಾಗಿದೆ.
ಸುಮಾರು 15 ಕ್ಕೂ ಹೆಚ್ಚು ಮೀನು ಅಂಗಡಿಗಳಲ್ಲಿ ವ್ಯಾಪಾರ ಡಲ್ ಆಗಿದೆ.
ತುಮಕೂರಿನಲ್ಲಿ ಹಿಂದೂ ಮೀಟ್ ಮಾರ್ಟ್ಗಳಲ್ಲಿ ವ್ಯಾಪಾರ ಜೋರಾಗಿದೆ. ಮುಸ್ಲಿಂ ಅಂಗಡಿ ಮಾಂಸ ವ್ಯಾಪಾರ ಡಲ್ ಆಗಿದೆ. ಬೆರಳೆಣಿಕೆಯಷ್ಟು ಮಾತ್ರ ಮುಸ್ಲಿಂ ಅಂಗಡಿಗಳಲ್ಲಿ ಮಟನ್ ತೆಗೆದುಕೊಳ್ಳುತ್ತಿದ್ದಾರೆ. ಇನ್ನುಳಿದಂತೆ ಹಿಂದೂಗಳ ಮಟನ್ ಸ್ಟಾಲ್ ಗಳಲ್ಲಿ ಮುಗಿಬಿದ್ದು ಮಟನ್ ಖರೀದಿಸುತ್ತಿದ್ದಾರೆ. ತುಮಕೂರಿನ ಶಿರಾಗೇಟ್ ಬಳಿಯಿರುವ ಮುಸ್ಲಿಂ ಅಂಗಡಿಗಳಿಗೆ ವ್ಯಾಪಾರ ಕಡಿಮೆ ಇದೆ.
ಹಲಾಲ್, ಜಟ್ಕಾ ಕಟ್ ವಿವಾದದಿಂದ ಯಾವುದೇ ಸಮಸ್ಯೆ ಆಗಿಲ್ಲ ಎಂದು ಶಿವಾಜಿನಗರದ ಮಾಂಸದ ಅಂಗಡಿ ಮಾಲೀಕ ಹೇಳಿದರು. ಕಳೆದ ವರ್ಷಕ್ಕಿಂತಲೂ ಈ ವರ್ಷ ಒಳ್ಳೆಯ ವ್ಯಾಪಾರ ಆಗುತ್ತಿದೆ. ನಮ್ಮ ಅಂಗಡಿಯಲ್ಲಿ ಹಲಾಲ್ ಕಟ್ ಮಾಂಸವನ್ನೇ ಮಾರುತ್ತಿದ್ದೇವೆ. ನಮ್ಮಲ್ಲಿ ಹಿಂದೂ ಗ್ರಾಹಕರೇ ಹೆಚ್ಚಿನ ಸಂಖ್ಯೆಯಲ್ಲಿ ಖರೀದಿಸ್ತಿದ್ದಾರೆ. ಗ್ರಾಹಕರು ಹಲಾಲ್, ಜಟ್ಕಾ ವಿಚಾರದ ಬಗ್ಗೆ ಮಾತಾಡುತ್ತಿಲ್ಲ. ಒಳ್ಳೆಯ ಮಾಂಸ ಕೊಡಿ ಎಂದಷ್ಟೇ ಗ್ರಾಹಕರು ಕೇಳುತ್ತಿದ್ದಾರೆ ಎಂದರು.
ಯುಗಾದಿ ಹೊಸತೊಡಕು ಹಿನ್ನೆಲೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ಪಟ್ಟಣದಲ್ಲಿ ಟೆಕ್ಕಿಗಳು ಬಿರಿಯಾನಿಗೆ ಮುಗಿಬಿದ್ದರು.
ನಮ್ಮ ಬಳಿ ಯಾರೂ ಕೂಡ ಹಲಾಲ್, ಜಟ್ಕಾ ಕಟ್ ಬಗ್ಗೆ ಕೇಳಿಲ್ಲ. ಗ್ರಾಹಕರು ಕೇಳಿದರೆ ಅವರಿಗೆ ಬೇಕಾದಂತೆ ಮಾಂಸ ಕೊಡುತ್ತೇವೆ ಅಂತ ಟಿವಿ9ಗೆ ಪಾಪಣ್ಣ ಮಟನ್ ಸ್ಟಾಲ್ ಮಾಲೀಕ ಮಾಹಿತಿ ನೀಡಿದರು. ಹಲಾಲ್, ಜಟ್ಕಾ ವಿಚಾರದ ಬಗ್ಗೆ ಗ್ರಾಹಕರ ಮುಂದೆ ಮಾತಾಡಲ್ಲ. ಗ್ರಾಹಕರಿಗೆ ಬೇಕಾದ ರೀತಿಯಲ್ಲಿ ಮಾಂಸ ಸಿದ್ಧ ಮಾಡಿಕೊಡ್ತೇವೆ. ರಾತ್ರಿ 2 ಗಂಟೆಯಿಂದಲೇ ನಾವು ಮಾಂಸ ಮಾರಾಟ ಮಾಡ್ತಿದ್ದೇವೆ. ಪ್ರತಿವರ್ಷಕ್ಕಿಂತ ಈ ವರ್ಷ ಹೆಚ್ಚು ಮಾಂಸ ಖರೀದಿಸುತ್ತಿದ್ದಾರೆ. ಕೆಜಿ ಮಾಂಸವನ್ನು 800 ರೂಪಾಯಿಯಂತೆ ಮಾರುತ್ತಿದ್ದೇವೆ ಎಂದರು.
ಬೆಂಗಳೂರಿನಲ್ಲಿ ಪಾಪಣ್ಣ ಮಟನ್ ಸ್ಟಾಲ್‌ನಲ್ಲಿ ಜನರು ರಾತ್ರಿ 2 ಗಂಟೆಯಿಂದಲೇ ಮಾಂಸ ಖರೀದಿಸುತ್ತಿದ್ದಾರೆ.
ಹಾಸನದಲ್ಲಿ ಗುಡ್ಡೆ ಬಾಡು ಹಂಚಿಕೆಯಲ್ಲಿ ಜನ ಬ್ಯುಸಿಯಾಗಿದ್ದಾರೆ. ಹೊಸತೊಡಕು ಹಿನ್ನೆಲೆಯಲ್ಲಿ ಭರ್ಜರಿ ಬಡೂಟಕ್ಕೆ ಜನ ರೆಡಿಯಾಗಿದ್ದಾರೆ. ಹಲಾಲ್ ಕಟ್, ಜಟ್ಕಾ ಕಟ್ ವಿವಾದದ ನಡುವೆ ತಮ್ಮ ಪಾಡಿಗೆ ತಾವು ಮಾಂಸದೂಟ ಮಾಡಲು ಸಜ್ಜಾಗಿದ್ದಾರೆ. ಹಾಸನದ ಗವೇನಹಳ್ಳಿ ಗ್ರಾಮದಲ್ಲಿ ಜನ ಗುಡ್ಡೆ ಬಾಡಿಗೆ ಮೊರೆಹೋಗಿದ್ದಾರೆ.
ಕಂಠೀರವ ರಸ್ತೆಯ ಹೆಚ್.ಟಿ.ಎಂ. ಮಟಲ್ ಸ್ಟಾಲ್ ಬಳಿ ಜನವೋ ಜನ. ಕ್ಯೂನಲ್ಲಿ ನಿಂತು ಜನರು ಮಟನ್ ಖರೀದಿ ಮಾಡುತ್ತಿದ್ದಾರೆ. ಸಿಟಿ ಮಂದಿ ಹಲಾಲ್ ಮಾಡಿರುವ ಮಾಂಸ ಖರೀದಿ ಮಾಡುತ್ತಿದ್ದಾರೆ.
ಜಟ್ಕಾ ಕಟ್ ಮಾಂಸವನ್ನು ಬೆಂಗಳೂರಿನಲ್ಲಿ 1,400 ಮನೆಗಳಿಗೆ ಡೆಲಿವರಿ ಮಾಡಿದ್ದಾರೆ. ಈವರೆಗೆ ಹಿಂದವೀ ಮಾರ್ಟ್ನಲ್ಲಿ 1,800 ಜನರಿಂದ ಮಾಂಸಕ್ಕಾಗಿ ಆರ್ಡರ್ ಬಂದಿದೆ. ಗ್ರಾಹಕರಿಂದ ಮೀನಿಗೆ ಬೇಡಿಕೆ ಹೆಚ್ಚಾಗಿದೆ.
ಹಲಾಲ್ ಮಾಂಸ ಸೇವಿಸದಂತೆ ಪ್ರಶಾಂತ್ ಸಂಬರ್ಗಿಹೊಸ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಮಾತನಾಡದೇ ಸಂದೇಶ ತಲುಪಿಸಿದ್ದಾರೆ. ವಿಡಿಯೋ ಪ್ಲಕಾರ್ಡ್‌ಗಳಲ್ಲೇ ತನ್ನ ಸಂದೇಶ ರವಾನೆ ಮಾಡಿದ್ದಾರೆ. ಹಿಂದೂ ಸಹೋದರ ಹಾಗು ಸಹೋದರಿಯರಿಗೆ ಮನವಿ ಮಾಡಿರುವ ಅವರು, ಹಲಾಲ್ ಸೇವನೆ ದಯಮಾಡಿ ಬೇಡ. ಹಲಾಲ್ ಕಟ್‌ನಲ್ಲಿ ಪ್ರಾಣಿಯನ್ನು ವಧಿಸುವ ವ್ಯಕ್ತಿ, ಮೆಕ್ಕಾ ಕಡೆ ಮುಖ ಮಾಡಿರುತ್ತಾನೆ. ಮುಸಲ್ಮಾನ ವ್ಯಕ್ತಿಯೇ ಆಗಿರುತ್ತಾನೆ. ಖುರಾನ್‌ನ ಶ್ಲೋಕವೊಂದನ್ನು ಹೇಳಿ ಪ್ರಾಣಿಯನ್ನು ವಹಿಸುತ್ತಾನೆ ಎಂದು ಹೇಳಿದ್ದಾರೆ.
ಮಂಡ್ಯಲದಲ್ಲಿ ಹೊಸತೊಡಕು ಹಿನ್ನೆಲೆ ಮಾಂಸ ಖರೀದಿಗೆ ಜನರು ಮುಗಿಬಿದ್ದಿದ್ದಾರೆ. ಹಳ್ಳಿಗಳಲ್ಲಿ ಗುಡ್ಡೆ ಮಾಂಸಕ್ಕೆ ಜನರು ಮುಗಿಬಿದ್ದರೆ, ನಗರದಲ್ಲಿ ಮಟನ್ ಸ್ಟಾಲ್ ಮುಂದೆ ಕ್ಯೂ ನಿಂತಿದ್ದಾರೆ. ಜಟ್ಕಾ ಹಲಾಲ್ ಯಾವುದೇ ವಿವಾದ ನಮಗೆ ಗೊತ್ತಿಲ್ಲ. ಈ ಮಟನ್ ಸ್ಟಾಲ್‌ನಲ್ಲಿ ಮಾಂಸ ಫೇಮಸ್. ಇದಕ್ಕೆ ಖರೀದಿ ಮಾಡುತ್ತಿದ್ದೇವೆ ಅಂತ ಜನರು ಹೇಳುತ್ತಿದ್ಧಾರೆ.
ಹಲಾಲ್ ಕಟ್ ಮಾಂಸ ಖರೀದಿಸದಂತೆ ಅಭಿಯಾನ ನಡೆಸುತ್ತಿರುವ ಹಿನ್ನೆಲೆ ಹಲಾಲ್ ಕಟ್ ಮಾಂಸ ಖರೀದಿಗೆ ಯಾರೂ ಬರುತ್ತಿಲ್ಲ.
ಹಲಾಲ್ ಕಟ್ ಮಾಂಸ ಮಾರುತ್ತಿದ್ದ 23 ಅಂಗಡಿ ಖಾಲಿ ಇದೆ. ಸಾಮಾನ್ಯ ದಿನಗಳಲ್ಲೂ ನಮ್ಮ ಅಂಗಡಿಗಳಲ್ಲಿ ವ್ಯಾಪಾರವಾಗುತ್ತಿತ್ತು. ಆದರೆ ಈಗ ನಮ್ಮ ಬಳಿ ಮಾಂಸ ಖರೀದಿ ಯಾರೂ ಬರುತ್ತಿಲ್ಲ ಅಂತ ಬೆಂಗಳೂರಿನ ಮೈಸೂರು ರಸ್ತೆಯಲ್ಲಿರುವ ಹಲಾಲ್ ಕಟ್ ಮಾಂಸ ಮಾರಾಟ ಮಾಡುತ್ತಿದ್ದ ವ್ಯಾಪಾರಿ ಹೇಳಿದರು.
ಹಾಸನದಲ್ಲಿ ಹಲಾಲ್ ಕಟ್ ವಿವಾದದ ಎಫೆಕ್ಟ್ ಇಲ್ಲ. ಹಾಸನದಲ್ಲಿ ಎಂದಿನಂತೆ ಹಲಾಲ್ ಕಟ್ ಮಾಂಸ ಖರೀದಿ ಆಗುತ್ತಿದೆ.
ಕೋಲಾರದಲ್ಲಿ ಚಿಕನ್, ಮಟನ್ ಖರೀದಿಗೆ ಜನ ಮುಗಿ ಬಿದ್ದಿದ್ದಾರೆ. ಕೋಲಾರ ನಗರದ ಅಮ್ಮವಾರಿ ಪೇಟೆ ವೃತ್ತದ ಸಮೀಪವಿರುವ ಮಟನ್ ಮಾರುಕಟ್ಟೆ ಇದೆ. ಮಟನ್ ಮಾರುಕಟ್ಟೆಯಲ್ಲಿ ಚಿಕನ್ ಮಟನ್ ಖರೀದಿಗೆ ಜನ ಮುಗಿ ಬಿದ್ದಿದ್ದಾರೆ. ನಾಟಿ ಕೋಳಿಗೆ ಬೇಡಿಕೆ ಹೆಚ್ವಿದೆ.
ಹಲಾಲ್- ಜಟ್ಕಾ ಅಂತಾ ಕೇಳದೆ ಬೆಂಗಳೂರಿನಲ್ಲಿ ಜನ ಮಾಂಸ ಖರೀದಿ ಮಾಡುತ್ತಿದ್ದಾರೆ. ಒಳ್ಳೆ ಮಟನ್ ಸಿಕ್ಕರೆ ಸಾಕು ಅಂತಾ ಕ್ಯೂನಲ್ಲಿ ಜನ ನಿಂತಿದ್ದಾರೆ.
ಚಿತ್ರದುರ್ಗದಲ್ಲಿ ಬಹುತೇಕ ಮಾಂಸದಂಗಡಿ ಖಾಲಿ ಖಾಲಿಯಾಗಿವೆ. ಎರಡು ದಿನಕಾಲ ಯುಗಾದಿ ಹಬ್ಬ ಆಚರಣೆ ಹಿನ್ನೆಲೆ ಮಾಂಸದಂಗಡಿಯತ್ತ ಗ್ರಾಹಕರು ಆಗಮಿಸುತ್ತಿಲ್ಲ. ಯುಗಾದಿ ಪ್ರಯುಕ್ತ ಇಂದು ಚಂದ್ರ ನೋಡುವ ಆಚರಣೆ. ಹೀಗಾಗಿ ಮಂಗಳವಾರ ಮಾಂಸ ಖರೀದಿಗೆ ಮುಗಿ ಬೀಳುವ ಸಾಧ್ಯತೆಯಿದೆ. ನಮ್ಮ ದುರ್ಗದಲ್ಲಿ ಹಲಾಲ್ ಮಾಡಿದ ಮಾಂಸವನ್ನೆ ಜನರು ಸೇವಿಸುತ್ತಾರೆ. ಹಲಾಲ್ ಮಾಡಿದ ಮಾಂಸವನ್ನೇ ನಾವು ಮಾರಾಟ ಮಾಡುತ್ತೇವೆ. 2 ದಿನ ಹಬ್ಬ ಆಚರಣೆ ಹಿನ್ನೆಲೆ ಮಂಗಳವಾರ ಮಾಂಸ ಖರೀದಿಸುತ್ತಾರೆ. ಚಿತ್ರದುರ್ಗದಲ್ಲಿ ಜಟ್ಕಾ ಕಟ್ ಬಗ್ಗೆ ಯಾರು ಕೇಳಲ್ಲ ಎಂದು ಟಿವಿ9ಗೆ ಮಾಂಸದಂಗಡಿ ಮಾಲೀಕ ರೆಹಮತ್ ಉಲ್ಲಾಖಾನ್ ಹೇಳಿಕೆ ನೀಡಿದ್ದಾರೆ.
ಹೊಸತಡುಕು ಹಬ್ಬದ ವಿಶೇಷ ಹಿನ್ನೆಲೆ ನೆಲಮಂಗಲ ನಗರದಲ್ಲಿ ಬೆಳ್ಳಂಬೆಳಗ್ಗೆ ಬಾರ್ ಓಪನ್ ಮಾಡಿದ್ದಾರೆ. ಮಾಲೀಕರು ರಾಜಾರೋಷವಾಗಿ ಬಾರ್‌ಗಳನ್ನ ತೆರೆದಿದ್ದಾರೆ. ಕ್ಯಾಮೆರಾ ನೋಡುತ್ತಿದ್ದಾಗೆ ಬಾಗಿಲು ಬಂದ್ ಮಾಡಿದ್ದಾರೆ. ಕಂಡು ಕಾಣದಂತೆ ವರ್ತನೆ ತೋರುತ್ತಿರುವ ಪೊಲೀಸರ ವಿರುದ್ಧ ಸ್ಥಳೀಯರು ಕಿಡಿಕಾರಿದ್ದಾರೆ.
ಇಂದು ಯುಗಾದಿ ಹೊಸತೊಡಕು ಹಿನ್ನೆಲೆ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಾಂಸ ಖರೀದಿಗೆ ಜನ ಮುಗಿಬಿದ್ದಿದ್ದು, ಸರದಿ ಸಾಲಿನಲ್ಲಿ ನಿಂತು ಮಾಂಸ ಖರೀದಿ ಮಾಡುತ್ತಿದ್ದಾರೆ. ಇನ್ನೂ ಜಟ್ಕಾ ಕಟ್, ಹಲಾಲ್ ಕಟ್ ಅಂತ ಯಾವುದೇ ಭೇದ ಇಲ್ಲದೆ ಗ್ರಾಹಕರು ತಮಗೆ ಬೇಕಾದ ಕಡೆ ಮಾಂಸ ಖರೀದಿ ಮಾಡುತ್ತಿದ್ದಾರೆ.
ಒಂದು ಮೈಸೂರಿನಲ್ಲಿ ಯುಗಾದಿ ಹೊಸತಡುಕಿಗೆ ಭರ್ಜರಿ ಮಾಂಸ ಖರೀದಿ ಆಗುತ್ತಿದೆ. ಮತ್ತೊಂದು ಕಡೆ ಶಾಂತಿ ಸಂದೇಶದ ಜಾಗೃತಿ ಸಾರುತ್ತಿದ್ದಾರೆ. ಪ್ರಾಣಿ ಹಿಂಸೆ ಬೇಡ ಅಂತ ಯುವಕ ಯುವತಿಯರು ಜಾಗೃತಿ ಅಭಿಯಾನ ನಡೆಸುತ್ತಿದ್ದಾರೆ. ಚಾಮುಂಡಿಬೆಟ್ಟದ ತಪ್ಪಲಿನಲ್ಲಿ ಭಿತ್ತಿಚಿತ್ರ ಹಿಡಿದು ಅಭಿಯಾನ ಜಾಗೃತಿ ಮೂಡಿಸುತ್ತಿದ್ದಾರೆ.
ಯಾವುದೇ ಬಿಸಿನೆಸ್ ಕಡಿಮೆ ಆಗಿಲ್ಲ. ನಮ್ಮ ಕಸ್ಟಮರ್ ನಮ್ಮ ಬಳಿಯೇ ಬರುತ್ತಾರೆ. ನಮ್ಮ ವ್ಯಾಪಾರ ನಮಗೆ ಆಗುತ್ತಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದ ಆಜಾದ್ ಪಾಷ ಸಮೀರ್ ಮಟನ್ ಸ್ಟಾಲ್ ಮಾಲೀಕ ಹೇಳಿದ್ದಾರೆ.
ಹಲಾಲ್, ಜಟ್ಕಾ ಕಟ್ ಮಾಂಸ ವಿವಾದ ಹಿನ್ನೆಲೆ ಹಲಾಲ್ ಕಟ್ ಮಾಂಸಕ್ಕೆ ಬೇಡಿಕೆ ಕಡಿಮೆಯಾಗಿದೆ. ಕೇವಲ ಶೇ.25ರಷ್ಟು ಮಾತ್ರ ಹಲಾಲ್ ಮಾಂಸ ಖರೀದಿಸುತ್ತಿದ್ದಾರೆ. ನೆಲಮಂಗಲದಲ್ಲಿ ಹಲಾಲ್ ಮಾಂಸಕ್ಕೆ ಬೇಡಿಕೆ ಕುಸಿದಿದೆ. ಹಲಾಲ್ ಮಾಂಸ ಖರೀದಿಗೆ ಜನ ಬರ್ತಿಲ್ಲವೆಂದು ಹಲಾಲ್ ಕಟ್ ಮಾಂಸ ಮಾರಾಟಗಾರನು ಅಳಲು ತೋಡಿಕೊಂಡಿದ್ದಾರೆ.
Published On - 8:23 am, Sun, 3 April 22