Hampi Utsav 2022: ಅದ್ಧೂರಿ ಹಂಪಿ ಉತ್ಸವಕ್ಕೆ ಸಜ್ಜಾಗುತ್ತಿದೆ ವಿಜಯನಗರ
ಈ ಬಾರಿ ಎರಡು ದಿನಗಳ ಹಂಪಿ ಉತ್ಸವವನ್ನು ಅದ್ಧೂರಿಯಾಗಿ ಮಾಡಲು ಜಿಲ್ಲಾಡಳಿತ, ಸಚಿವರು ಮತ್ತು ಸ್ಥಳೀಯ ಶಾಸಕ ಆನಂದ್ ಸಿಂಗ್ ಉತ್ಸುಕರಾಗಿದ್ದಾರೆ. ಉತ್ಸವದ ದಿನಾಂಕವನ್ನು ಡಿಸೆಂಬರ್ 5 ರಂದು ನಡೆಯುವ ಸಭೆಯಲ್ಲಿ ಅಂತಿಮಗೊಳಿಸಲಾಗುತ್ತಿದೆ.

ಹೊಸಪೇಟೆ: ಮಹಾಮಾರಿ ಕೊರೋನಾ ಸೋಂಕಿನ ನಂತರ ಈ ಬಾರಿ ಎರಡು ದಿನಗಳ ಕಾಲ ನಡೆಯುವ ಹಂಪಿ ಉತ್ಸವ (Hampi Utsav 2022)ವನ್ನು ಅದ್ಧೂರಿಯಾಗಿ ನಡೆಸಲು ಜಿಲ್ಲಾಡಳಿತ, ಸಚಿವರು ಹಾಗೂ ಸ್ಥಳೀಯ ಶಾಸಕರು ನಿರ್ಧರಿಸಿದ್ದಾರೆ. ಈ ಮೊದಲು 2023ರ ಜನವರಿ 6 ರಂದು ಹಾವೇರಿಯಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದ ದಿನದಂದೇ ಹಂಪಿ ಉತ್ಸವವನ್ನು ಉದ್ಘಾಟನೆ ಮಾಡಲು ಯೋಜಿಸಲಾಗಿತ್ತು. ಆದರೆ ಈಗ ದಿನಾಂಕದಲ್ಲಿ ಬಲದಾವಣೆ ಮಾಡಲು ನಿರ್ಧರಿಸಲಾಗಿದ್ದು, ಜನವರಿ ಮಧ್ಯದಲ್ಲಿ ಹಂಪಿ ಉತ್ಸವ ನಡೆಸುವ ಸಾಧ್ಯತೆ ಇದೆ. ಇದರ ಅಂತಿಮ ದಿನಾಂಕ (Hampi Utsav Date) ಮೂರ್ನಾಲ್ಕು ದಿನಗಳಲ್ಲಿ ಪ್ರಕಟಗೊಳ್ಳುವ ಸಾಧ್ಯತೆ ಇದೆ. ಹಂಪಿ ಉತ್ಸವ ಹಿನ್ನೆಲೆ ಮಂಗಳವಾರ ವಿಜಯನಗರ ಜಿಲ್ಲಾಧಿಕಾರಿ ವೆಂಕಟೇಶ್ ಟಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್ ಅವರು ಪ್ರತಿ ವರ್ಷ ಹಂಪಿ ಉತ್ಸವ ಆಯೋಜಿಸುವ ಪ್ರದೇಶಗಳನ್ನು ಪರಿಶೀಲಿಸಿದರು. ಜಲಕ್ರೀಡಾ ಪ್ರದೇಶ, ಮುಖ್ಯ ವೇದಿಕೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಇತರ ಸ್ಥಳಗಳನ್ನು ಪರಿಶೀಲಿಸಲಾಯಿತು.
1980ರಲ್ಲಿ ಮಾಜಿ ಉಪಮುಖ್ಯಮಂತ್ರಿ ಎಂ.ಪಿ.ಪ್ರಕಾಶ್ ಅವರು ಮೊದಲ ಬಾರಿ ಆರಂಭಿಸಿದ ಈ ಹಂಪಿ ಉತ್ಸವ ರಾಜ್ಯ ಸರ್ಕಾರದ ಪ್ರಮುಖ ಕಾರ್ಯಕ್ರಮಗಳಲ್ಲಿ ಒಂದಾಗಿದ್ದು, ಅಂದಿನಿಂದ ಇಂದಿನವರೆಗೆ ಕೋವಿಡ್ ಸಂದರ್ಭವನ್ನು ಹೊರತುಪಡಿಸಿ ಅದ್ಧೂರಿ ಉತ್ಸವವನ್ನು ಆಚರಿಸುತ್ತಾ ಬರಲಾಗುತ್ತಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದ ಹಿನ್ನೆಲೆ ಹಂಪಿಯ ತುಂಗಭದ್ರಾ ನದಿಯ ದಡದಲ್ಲಿ ಸಾಂಕೇತಿಕವಾಗಿ ಉತ್ಸವವನ್ನು ಆಚರಿಸಲಾಗಿತ್ತು. ಆದರೆ ಈ ಬಾರಿ ಎರಡು ದಿನಗಳ ಉತ್ಸವವನ್ನು ಅದ್ಧೂರಿಯಾಗಿ ಮಾಡಲು ಆಡಳಿತ ಮತ್ತು ಸಚಿವರು ಮತ್ತು ಸ್ಥಳೀಯ ಶಾಸಕ ಆನಂದ್ ಸಿಂಗ್ ಉತ್ಸುಕರಾಗಿದ್ದು, ಹಂಪಿ ಉತ್ಸವದ ಅಂತಿಮ ದಿನಾಂಕ ಡಿ.5ರಂದು ನಡೆಯುವ ಸಭೆಯಲ್ಲಿ ನಿರ್ಧರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಹೇಳಿರುವುದಾಗಿ ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಇದನ್ನೂ ಓದಿ: Breaking News: ವಕ್ಫ್ ಬೋರ್ಡ್ನ 10 ಮಹಿಳಾ ಕಾಲೇಜು ಆರಂಭ ಪ್ರಸ್ತಾವಕ್ಕೆ ಸಿಎಂ ಬೊಮ್ಮಾಯಿ ತಿರಸ್ಕಾರ
“ಜಿಲ್ಲಾ ಸಚಿವೆ ಶಶಿಕಲಾ ಜೊಲ್ಲೆ ಅವರೊಂದಿಗೆ ಚರ್ಚಿಸಿದ್ದೇವೆ. ಡಿಸೆಂಬರ್ 5 ರಂದು ನಡೆಯುವ ಸಭೆಯಲ್ಲಿ ಹಂಪಿ ಉತ್ಸವದ ಅಂತಿಮ ದಿನಾಂಕ ನಿಗದಿಗೊಳಿಸಲಾಗುವುದು. ಉತ್ಸವವನ್ನು ಮೂರು ದಿನಗಳಿಗೆ ಹೆಚ್ಚಿಸಬೇಕೆಂಬ ಬೇಡಿಕೆಯಿದೆ. ಸಚಿವರ ನೇತೃತ್ವದಲ್ಲಿ ಎಲ್ಲ ಪಾಲುದಾರರ ಸಭೆ ನಡೆಯಲಿದೆ. ಉತ್ಸವವನ್ನು ಅದ್ಧೂರಿಯಾಗಿ ನಡೆಸುವುದು ನಮ್ಮ ಮುಖ್ಯ ಉದ್ದೇಶವಾಗಿದೆ. ಡಿಸೆಂಬರ್ ಮೂರನೇ ವಾರದಿಂದ ಕಾರ್ಯಕ್ರಮಕ್ಕೆ ಸಿದ್ಧತೆ ಆರಂಭಿಸುತ್ತೇವೆ” ಎಂದು ವಿಜಯನಗರ ಜಿಲ್ಲಾಧಿಕಾರಿ ವೆಂಕಟೇಶ್ ಅವರು ಹೇಳಿದ್ದಾರೆ.
ಸಾಮಾನ್ಯ ಕಾರ್ಯಕ್ರಮಗಳಾದ ತುಂಗಾ ಆರತಿ, ಸಾಂಸ್ಕೃತಿಕ ಸಂಜೆ, ಹಂಪಿ ಬೈ ಸ್ಕೈ, ಹೆಲಿಕಾಪ್ಟರ್ ರೈಡ್, ಲೈಟ್ ಆ್ಯಂಡ್ ಸೌಂಡ್ ಶೋ, ಗ್ರಾಮೀಣ ಕ್ರೀಡೆಗಳ ಜೊತೆಗೆ ತುಂಗಭದ್ರಾ ನದಿಯಲ್ಲಿ ಜಲಕ್ರೀಡೆ ನಡೆಸಲು ಆಡಳಿತ ಮಂಡಳಿ ಮುಂದಾಗಿದೆ. ಹಿಂದಿನ ಆವೃತ್ತಿಗಳಲ್ಲಿ ಕಮಲಾಪುರ ಕೆರೆಯಲ್ಲಿ ಜಲಕ್ರೀಡೆ ನಡೆಯುತ್ತಿತ್ತು.
ಮತ್ತಷ್ಟು ರಾಜ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:27 am, Thu, 1 December 22




