ಹಾವೇರಿ: ಹಾನಗಲ್ ಕ್ಷೇತ್ರದ ಕಾಂಗ್ರೆಸ್ ಟಿಕೆಟ್‌ಗಾಗಿ ಫೈಟ್ ಶುರುವಾಗಿದೆ. ಸಿ.ಎಂ.ಉದಾಸಿ ನಿಧನದಿಂದ ತೆರವಾಗಿರುವ ಹಾನಗಲ್ ಕ್ಷೇತ್ರದ ಬೈಎಲೆಕ್ಷನ್ ದಿನಾಂಕ ಘೋಷಣೆಗೂ ಮುನ್ನವೇ ಟಿಕೆಟ್ ಸಮರ ಶುರುವಾಗಿದೆ. ಮಾಜಿ ಸಚಿವ ಮನೋಹರ ತಹಶೀಲ್ದಾರ್ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ನಡುವೆ ನಿನ್ನೆ ನಡೆದ ಸಭೆಯಲ್ಲಿ ಕಾಂಗ್ರೆಸ್ ಟಿಕೆಟ್ ಸಂಬಂಧ ಗಂಭೀರ ಚರ್ಚೆ ನಡೆದಿದೆ.
ಸಭೆಯಲ್ಲಿ ಹಾನಗಲ್‌ನವರಿಗೆ ಮಾತ್ರ ಟಿಕೆಟ್ ನೀಡಬೇಕೆಂಬ ಒತ್ತಾಯ ಕೇಳಿ ಬಂದಿದೆ. ಹಾಗೂ ವಿಧಾನ ಪರಿಷತ್ ಸದಸ್ಯ ಶ್ರೀನಿವಾಸ ಮಾನೆಗೆ ಪಕ್ಷದ ಟಿಕೆಟ್ ನೀಡದಂತೆ ಪರೋಕ್ಷವಾಗಿ ಒತ್ತಾಯಿಸಿದ್ದಾರೆ. ಹೊರಗಿನವರಿಗೆ ಟಿಕೆಟ್ ನೀಡಿದರೆ ಕ್ಷೇತ್ರದ ಪ್ರತಿ ಗ್ರಾಮದಲ್ಲೂ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಿ ಆಗೋ ಪ್ರಶ್ನೆಯೇ ಇಲ್ಲ ಅಂತಾ ಹೈಕಮಾಂಡ್ ಗೆ ಮಾಜಿ ಸಚಿವ, ಮನೋಹರ ತಹಶೀಲ್ದಾರ್ ಎಚ್ಚರಿಕೆ ನೀಡಿದ್ದಾರೆ.
ಕಳೆದ ವಿಧಾನಸಭಾ ಚುನಾವಣೆ ವೇಳೆ ಮನೋಹರ ತಹಶೀಲ್ದಾರ್ಗೆ ಟಿಕೆಟ್ ಕೈ ತಪ್ಪಿತ್ತು. ಇನ್ನು ಕಳೆದ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಶ್ರಿನಿವಾಸ ಮಾನೆ, ಸೋತರೂ ಕ್ಷೇತ್ರ ಬಿಟ್ಟು ಹೋಗದೆ ಕೆಲಸ ಮಾಡುತ್ತಿದ್ದರು. ಕ್ಷೇತ್ರದಲ್ಲಿಯೇ ಮನೆ ಮಾಡಿಕೊಂಡು ಕೆಲಸ ಮಾಡುತ್ತಿದ್ದರು. ಹೀಗಾಗಿ ಕ್ಷೇತ್ರದಲ್ಲಿ ಕಾಂಗ್ರೆಸ್ ಟಿಕೆಟ್‌ಗಾಗಿ ಫೈಟ್ ಶುರುವಾಗಿದೆ. ಮನೋಹರ ತಹಶೀಲ್ದಾರ್ ಮತ್ತು ಶ್ರೀನಿವಾಸ ಮಾನೆ ಮಧ್ಯೆ ಫೈಟ್ ಜೋರಾಗಿದೆ.
ಮಾಜಿ ಸಚಿವ, ಶಾಸಕ ಸಿ.ಎಂ.ಉದಾಸಿ ಅಲ್ಪಕಾಲದ ಅನಾರೋಗ್ಯದಿಂದ ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಜೂನ್ 8 ರಂದು ಮಧ್ಯಾಹ್ನ ನಿಧನರಾಗಿದ್ದರು. 85 ವರ್ಷದ ಅವರು ಇತ್ತೀಚಿಗಷ್ಟೇ ಆಸ್ಪತ್ರೆಗೆ ದಾಖಲಾಗಿದ್ದರು. ಜನತಾ ಪರಿವಾರ ಹಿನ್ನೆಲೆಯ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದರು. ಹಾವೇರಿ ಜಿಲ್ಲೆಯ ಹಾನಗಲ್ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಅವರು ಹಲವು ಬಾರಿ ಆಯ್ಕೆಯಾಗಿದ್ದರು. ಸದ್ಯ ರಾಜ್ಯದ ಹಿರಿಯ ರಾಜಕಾರಣಿಗಳಲ್ಲಿ ಸಿ ಎಂ ಉದಾಸಿ ಅವರೂ ಒಬ್ಬರಾಗಿದ್ದರು.
ಸಿ.ಎಂ.ಉದಾಸಿ ಒಟ್ಟು ಆರು ಬಾರಿ ಶಾಸಕರಾಗಿದ್ದರು. 1974ರಲ್ಲಿ ಹಾನಗಲ್ ಪುರಸಭೆ ಚುನಾವಣೆಗೆ ಸ್ಪರ್ಧಿಸಿ ಆಯ್ಕೆಯಾಗಿದ್ದರು. 1974ರಿಂದ 1980ರವರೆಗೆ ಪುರಸಭೆ ಅಧ್ಯಕ್ಷರಾಗಿ ಕೆಲಸ ಮಾಡಿದ್ದರು. 1983ರಲ್ಲಿ ಹಾನಗಲ್ ವಿಧಾನಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು. 1985ರಲ್ಲಿ ಜನತಾ ಪಕ್ಷದಿಂದ ಸ್ಪರ್ಧಿಸಿ ಎರಡನೆ ಬಾರಿಗೆ ಶಾಸಕರಾಗಿ ಆಯ್ಕೆ ಆಗಿದ್ದರು. 1989ರಲ್ಲಿ ಜನತಾದಳದಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. 1994ರಲ್ಲಿ ಜನತಾದಳದಿಂದ ಸ್ಪರ್ಧಿಸಿ ಮೂರನೆ ಬಾರಿಗೆ ಶಾಸಕರಾಗಿದ್ದರು. 1999ರಲ್ಲಿ ಜೆಡಿಯುನಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. 2004 ಮತ್ತು 2008ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. 2013ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಸೋಲು ಕಂಡಿದ್ದರು. ಬಳಿಕ, 2018ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಆರನೆ ಬಾರಿಗೆ ಗೆಲುವು ಸಾಧಿಸಿದ್ದರು.
ಇದನ್ನೂ ಓದಿ: ಸಿ ಎಂ ಉದಾಸಿ ನಿಧನದಿಂದ ತೆರವಾದ ಹಾನಗಲ್ ಕ್ಷೇತ್ರ; ಚುನಾವಣೆ ನಿಗದಿಗೂ ಮುನ್ನವೇ ಅಭ್ಯರ್ಥಿ ಹೆಸರು ಘೋಷಿಸಿದ ಜೆಡಿಎಸ್