ಭೂಮಿ ಮಂಜೂರು ಮಾಡದ ಹಿನ್ನೆಲೆ ಸರ್ಕಾರಿ ಗೋಮಾಳ ಜಾಗದಲ್ಲಿ ರಾತ್ರೋರಾತ್ರಿ ತಲೆ ಎತ್ತಿದ ಗುಡಿಸಲುಗಳು
ಸರ್ವೆ ನಂ.22 ರಲ್ಲಿರುವ 1 ಎಕರೆ 20 ಗುಂಟೆ ಸರ್ಕಾರಿ ಗೋಮಾಳದ ಪಕ್ಕದಲ್ಲಿ ವಿ.ಆರ್.ವೆಂಚರ್ಸ್ ಲೇಔಟ್ ನಿರ್ಮಾಣ ಮಾಡಿ ಒತ್ತುವರಿಗೆ ಯತ್ನಿಸಿರುವ ಆರೋಪವಿದೆ. ಹೀಗಾಗಿ ಸ್ಥಳೀಯರು ರಾತ್ರೋರಾತ್ರಿ ಗೋಮಾಳದಲ್ಲಿ ಗುಡಿಸಲು ನಿರ್ಮಾಣ ಮಾಡಿದ್ದಾರೆ.
ಕೋಲಾರ: ರಾತ್ರೋರಾತ್ರಿ ಸರ್ಕಾರಿ ಜಮೀನಿನಲ್ಲಿ ಗುಡಿಸಲು ನಿರ್ಮಾಣ ಮಾಡಿರುವ ಘಟನೆ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ಹನುಮಂತಪುರ ಬಳಿ ನಡೆದಿದೆ. ನಿವೇಶನರಹಿತರಿಗೆ ಭೂಮಿ ಮಂಜೂರು ಮಾಡದ ಹಿನ್ನೆಲೆಯಲ್ಲಿ ಹನುಮಂತಪುರ ಬಳಿಯ ಗೋಮಾಳ ಜಾಗದಲ್ಲಿ ಸ್ಥಳೀಯರು 10ಕ್ಕೂ ಹೆಚ್ಚು ಗುಡಿಸಲು ನಿರ್ಮಾಣ ಮಾಡಿದ್ದಾರೆ.
ಹನುಮಂತಪುರ ಗ್ರಾಮದ ಸರ್ವೆ ನಂ.22 ರಲ್ಲಿರುವ 1 ಎಕರೆ 20 ಗುಂಟೆ ಸರ್ಕಾರಿ ಗೋಮಾಳವಿದ್ದು ಅದರ ಪಕ್ಕದಲ್ಲೇ, ವಿ.ಅರ್.ವೆಂಚರ್ಸ್ ಲೇಔಟ್ ನಿರ್ಮಾಣ ಮಾಡುತ್ತಿದ್ದು ಅವರು ಸರ್ಕಾರಿ ಗೋಮಾಳ ಜಮೀನನ್ನು ಒತ್ತುವರಿ ಮಾಡಿಕೊಂಡು ಭೂಮಿ ಲಪಟಾಯಿಸಲು ಮುಂದಾಗಿದ್ದಾರೆ ಎಂದು ಆರೋಪಿಸಿರುವ ನಿವೇಶನ ರಹಿತ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರು, ಈ ಕೂಡಲೇ ನಮಗೆ ನಿವೇಶನ ಮಂಜೂರು ಮಾಡುವಂತೆ ಪಟ್ಟು ಹಿಡಿದಿದ್ದಾರೆ, ಇನ್ನು ವಿ.ಆರ್.ವೆಂಚರ್ಸ್ ಲೇಔಟ್ ಸುಮಾರು120 ಎಕರೆಯಲ್ಲಿ ಬಡಾವಣೆ ನಿರ್ಮಾಣ ಮಾಡುತ್ತಿದ್ದಾರೆ. ಈ ವೇಳೆ ಜಮೀನಿನ ಅಕ್ಕ ಪಕ್ಕದಲ್ಲಿರುವ ಸರ್ಕಾರಿ ಗೋಮಾಳ ಜಮೀನನ್ನು ಲಪಟಾಯಿಸಲು ಪ್ಲಾನ್ ಮಾಡಿದ್ದಾರೆ, ಹಾಗಾಗಿ ಹಣವಂತರಿಗೆ ಸರ್ಕಾರಿ ಭೂಮಿಯನ್ನು ಅಕ್ರಮವಾಗಿ ನೀಡುವ ಬದಲು, ಹತ್ತಾರು ವರ್ಷಗಳಿಂದ ನಿವೇಶನ ಇಲ್ಲದೆ ಇರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರಿಗೆ ನಿವೇಶನ ಹಂಚಿಕೆ ಮಾಡಿ ಮಂಜೂರು ಮಾಡುವಂತೆ ಆಗ್ರಹಿಸಿದ್ದಾರೆ.
ರಾತ್ರೋ ರಾತ್ರಿ ಗೋಮಾಳ ಭೂಮಿಯಲ್ಲಿ ಗುಡಿಸಲುಗಳ ನಿರ್ಮಾಣ ಮಾಡಿ ಅಂಬೇಡ್ಕರ್ ಭಾವಚಿತ್ರವಿಟ್ಟು ಪಟ್ಟು ಹಿಡಿದಿದ್ದಾರೆ. ಹುಣಸನಹಳ್ಳಿಯ ಹತ್ತಾರು ದಲಿತ ಕುಟುಂಬಗಳು, ನಿವೇಶನಕ್ಕಾಗಿ ಆಗ್ರಹಿಸಿ ಪ್ರತಿಭಟನೆ ಮಾಡುತ್ತಿದ್ದು, ಸ್ಥಳಕ್ಕೆ ಬಂಗಾರಪೇಟೆ ಪೊಲೀಸರು ಹಾಗೂ ತಹಶೀಲ್ದಾರ್ ದಯಾನಂದ್ ಭೇಟಿನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಅಲ್ಲದೆ ಸರ್ಕಾರಿ ಭೂಮಿಯನ್ನು ಸರ್ಕಾರಕ್ಕೆ ಉಳಿಸಿಕೊಳ್ಳುವ ಸಲುವಾಗಿ ನಿವೇಶನ ರಹಿತ ಪ್ರತಿಭಟನಾ ನಿರತರ ಮನವೊಲಿಸುವ ಪ್ರಯತ್ನ ಮಾಡಲಾಗುತ್ತಿದೆ.
ಇದನ್ನೂ ಓದಿ: Shabana Azmi: ಆಲ್ಕೋಹಾಲ್ ಆರ್ಡರ್ ಮಾಡಿದ ಶಬಾನಾ ಆಜ್ಮಿಗೆ ಮೋಸ; ಪೊಲೀಸರ ಮೊರೆ ಹೋದ ಖ್ಯಾತ ನಟಿ