Shabana Azmi: ಆಲ್ಕೋಹಾಲ್ ಆರ್ಡರ್ ಮಾಡಿದ ಶಬಾನಾ ಆಜ್ಮಿಗೆ ಮೋಸ; ಪೊಲೀಸರ ಮೊರೆ ಹೋದ ಖ್ಯಾತ ನಟಿ
ನಿಜವಾದ ಮೋಸಗಾರರು ಬೇರೆ ಯಾರೋ ಇದ್ದಾರೆ ಎಂಬುದು ಗೊತ್ತಾದ ಬಳಿಕ ಶಬಾನಾ ಆಜ್ಮಿ ಆ ಬಗ್ಗೆ ಅಪ್ಡೇಟ್ ನೀಡಿದ್ದಾರೆ. ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಮುಂಬೈ ಪೊಲೀಸರು ಮತ್ತು ಸೈಬರ್ ಪೊಲೀಸರನ್ನು ಅವರು ಒತ್ತಾಯಿಸಿದ್ದಾರೆ.
ಹಲವು ಬಾರಿ ರಾಷ್ಟ್ರ ಪ್ರಶಸ್ತಿ ಪಡೆದ ಪ್ರತಿಭಾವಂತ ಕಲಾವಿದೆ ಶಬಾನಾ ಆಜ್ಮಿ. ತಮ್ಮ ನಟನೆಯಿಂದಾಗಿ ಅವರು ವಿಶ್ವಾದ್ಯಂತ ಹೆಸರು ಮಾಡಿದ್ದಾರೆ. ಸಿನಿಮಾಗಳ ಆಯ್ಕೆಯಲ್ಲಿ ಮೊದಲಿನಿಂದಲೂ ಹೆಚ್ಚು ಚ್ಯೂಸಿ ಆಗಿರುವ ಅವರು ಪ್ಯಾರಲಲ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದೇ ಹೆಚ್ಚು. ಈಗ ಸಿನಿಮಾ ಹೊರತಾದ ಒಂದು ಕಾರಣಕ್ಕಾಗಿ ಶಬಾನಾ ಆಜ್ಮಿ ಸುದ್ದಿ ಆಗಿದ್ದಾರೆ. ಆನ್ಲೈನ್ ಮದ್ಯ ಮಾರಾಟಗಾರರಿಂದ ಅವರಿಗೆ ಮೋಸ ಆಗಿದೆ. ಆ ಬಗ್ಗೆ ಅವರು ವಿವರವಾಗಿ ತಿಳಿಸಿದ್ದಾರೆ. ಪೊಲೀಸರಿಗೆ ದೂರು ಕೂಡ ನೀಡಿದ್ದಾರೆ.
ಇತ್ತೀಚೆಗೆ ಶಬಾನಾ ಆಜ್ಮಿ ಅವರು ಆನ್ಲೈನ್ನಲ್ಲಿ ಆಲ್ಕೋಹಾಲ್ ಆರ್ಡರ್ ಮಾಡಿದ್ದಾರೆ. ಅದಕ್ಕಾಗಿ ಒಂದು ಪೋರ್ಟಲ್ ಮೂಲಕ ಮುಂಗಡ ಹಣವನ್ನೂ ಪಾವತಿ ಮಾಡಿದ್ದಾರೆ. ಆದರೆ ಎಷ್ಟು ಹೊತ್ತು ಕಳೆದರೂ ಮನೆಗೆ ಆಲ್ಕೋಹಾಲ್ ಬಂದಿಲ್ಲ. ಯಾಕೆ ತಡವಾಗುತ್ತಿದೆ ಎಂದು ವಿಚಾರಿಸಲು ಆ ಪೋರ್ಟಲ್ನಲ್ಲಿ ಇದ್ದ ಫೋನ್ ನಂಬರ್ಗೆ ಕರೆ ಮಾಡಿದರೆ ಯಾರೂ ಕರೆ ಸ್ವೀಕರಿಸಲಿಲ್ಲ. ಆಗಲೇ ಶಬಾನಾ ಆಜ್ಮಿ ಅವರಿಗೆ ತಾವು ಮೋಸ ಹೋಗಿರುವುದು ಗೊತ್ತಾಗಿದೆ.
ಈ ಬಗ್ಗೆ ಅವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ‘ಎಚ್ಚರಿಕೆ.. ನಾನು ಇವರಿಂದ ಮೋಸ ಹೋಗಿದ್ದೇನೆ’ ಎಂದು ಟ್ವೀಟ್ ಮಾಡಿರುವ ಅವರು ‘ಲಿವಿಂಗ್ ಲಿಕ್ವಿಡ್ಸ್’ ಎಂಬ ಲಿಕ್ಕರ್ ಮಾರಾಟ ಕಂಪನಿಯ ವಿರುದ್ಧ ಆರೋಪ ಮಾಡಿದ್ದಾರೆ. ಆದರೆ ನಂತರದಲ್ಲಿ ಇನ್ನಷ್ಟು ಆಳವಾಗಿ ವಿಚಾರಿಸಿದಾಗ ಗೊತ್ತದ ಸತ್ಯವೇ ಬೇರೆ. ಲಿವಿಂಗ್ ಲಿಕ್ವಿಡ್ಸ್ ಹೆಸರು ಹೇಳಿಕೊಂಡು ಬೇರೆ ಯಾರೋ ಖದೀಮರು ಶಬಾನಾಗೆ ಮೋಸ ಮಾಡಿದ್ದಾರೆ.
Finally traced the owners of @living_liquidz & it turns out that the people who cheated me are fraudsters who have nothing to do with Living Liquidz! I urge @mumbaipolice and @cybercrime to take action to stop these crooks from using names of legitimate businesses & scamming us https://t.co/AUobsRg0on
— Azmi Shabana (@AzmiShabana) June 24, 2021
ನಿಜವಾದ ಮೋಸಗಾರರು ಬೇರೆ ಯಾರೋ ಇದ್ದಾರೆ ಎಂಬುದು ಗೊತ್ತಾದ ಬಳಿಕ ಶಬಾನಾ ಅಜ್ಮಿ ಆ ಬಗ್ಗೆಯೂ ಅಪ್ಡೇಟ್ ನೀಡಿದ್ದಾರೆ. ‘ಕೊನೆಗೂ ಲಿವಿಂಗ್ ಲಿಕ್ವಿಡ್ಸ್ ಮಾಲಿಕರನ್ನು ಪತ್ತೆ ಮಾಡಿದೆ. ಆಗ ಗೊತ್ತಾಗಿದ್ದೇನೆಂದರೆ ನನಗೆ ಮೋಸ ಮಾಡಿದವರಿಗೂ ಈ ಲಿವಿಂಗ್ ಲಿಕ್ವಿಡ್ಸ್ ಮಾಲಿಕರಿಗೂ ಸಂಬಂಧವೇ ಇಲ್ಲ. ಪ್ರತಿಷ್ಠಿತ ಕಂಪನಿಗಳ ಹೆಸರು ಬಳಸಿ ಜನರಿಗೆ ಮೋಸ ಮಾಡುತ್ತಿರುವ ಕಿಡಿಗೇಡಿಗಳ ವಿರುದ್ಧ ಮುಂಬೈ ಪೊಲೀಸರು ಮತ್ತು ಸೈಬರ್ ಪೊಲೀಸರು ಕ್ರಮ ಕೈಗೊಳ್ಳಬೇಕು’ ಎಂದು ಶಬಾನಾ ಆಜ್ಮಿ ಟ್ವೀಟ್ ಮಾಡಿದ್ದಾರೆ.
ಈ ಬಗ್ಗೆ ಅವರ ಅಭಿಮಾನಿಗಳು ಕಮೆಂಟ್ಗಳ ಮೂಲಕ ತಮ್ಮ ಅಭಿಪ್ರಾಯ ಮತ್ತು ತಮಗಾದ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ:
ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಅರ್ಜುನ್ ಜನ್ಯ ಎಚ್ಚರಿಕೆ! ಸೈಬರ್ ಠಾಣೆಗೆ ದೂರು
Sonu Sood: ಸೋನು ಸೂದ್ ಹೆಸರಲ್ಲಿ ಮಹಾಮೋಸ; ಕೊರೊನಾ ಕಾಲದಲ್ಲೂ ದುಡ್ಡು ಕಬಳಿಸಿದ ಕಿಡಿಗೇಡಿಗಳು
Published On - 8:54 am, Fri, 25 June 21