ಆನೇಕಲ್: ಕೊವಿಡ್ ಎರಡನೇ ಅಲೆಯಿಂದ ಅದೆಷ್ಟೋ ಉದ್ಯಮಗಳು ನೆಲಕಚ್ಚಿದ್ದು, ಹಲವು ಕಾರ್ಮಿಕರ ಕುಟುಂಬವನ್ನ ಬೀದಿಗೆ ತಂದು ನಿಲ್ಲಿಸಿದೆ. ಅದರಲ್ಲೂ ಲಾಕ್ಡೌನ್ ಹೊಡೆತಕ್ಕೆ ರಾಜ್ಯದ ಸಾವಿರಾರು ಕೈಮಗ್ಗ ನೇಕಾರರು ತತ್ತರಿಸಿ ಹೋಗಿದ್ದು, ಚೆತರಿಸಿಕೊಳ್ಳಲಾಗದ ಸ್ಥಿತಿಗೆ ತಲುಪಿದ್ದಾರೆ. ರಾಜ್ಯ ಸರ್ಕಾರ ಈ ಬಾರಿಯೂ ಕೈಮಗ್ಗ ನೇಕಾರಿಗೆ ಯಾವುದೇ ಅನುದಾನ ನೀಡದೇ ಇರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಕೊವಿಡ್ ಎರಡನೇ ಅಲೆ ನೇಕಾರರ ಬಾಳಿಗೆ ಮುಳುವಾಗಿ ಪರಿಣಮಿಸಿದೆ. ಇದನ್ನೇ ನೆಚ್ಚಿಕೊಂಡು ಜೀವನ ಸಾಗಿಸುತ್ತಿದ್ದ ಸಾವಿರಾರು ಕುಟುಂಬವನ್ನು ಬೀದಿಗೆ ತಂದು ನಿಲ್ಲಿಸಿದೆ. ಇತ್ತೀಚಿನ ಕೆಲವು ವರ್ಷಗಳಿಂದ ನೇಕಾರಿಕೆ ಮಾಡಲು ಕೈಮಗ್ಗ ಅಭಿವೃದ್ದಿ ನಿಗಮದಿಂದ ಕಚ್ಚಾ ವಸ್ತುಗಳನ್ನು ಸರಿಯಾದ ರೀತಿಯಲ್ಲಿ ಪೂರೈಕೆ ಮಾಡಲಾಗುತ್ತಿರಲಿಲ್ಲ. ಹೀಗಾಗಿ ಕುಂಟುತ್ತಾ ಸಾಗುತ್ತಿದ್ದ ಕೈಮಗ್ಗ ಉದ್ಯಮಕ್ಕೆ ಈಗ ಕೊವಿಡ್ ಲಾಕ್ಡೌನ್ ಎಂಬ ಬರಸಿಡಿಲು ಬಡಿದು ಕಣ್ಣೀರು ಹಾಕುವ ಪರಿಸ್ಥಿತಿ ಎದುರಾಗಿದೆ.
ಇತ್ತೀಚೆಗೆ ಸರ್ಕಾರ ಘೋಷಣೆ ಮಾಡಿದ ಪ್ಯಾಕೆಜ್ನಲ್ಲೂ ಕೈಮಗ್ಗ ನೇಕಾರರಿಗೆ ಮತ್ತೆ ಅನ್ಯಾಯವಾಗಿದೆ. ಪವರ್ ಲೂಮ್ಸ್ ನೇಕಾರರಿಗೆ ಮಾತ್ರ ಅನುದಾನ ಘೋಷಣೆ ಮಾಡಿದ ರಾಜ್ಯ ಸರ್ಕಾರ ಕೈಮಗ್ಗ ನೇಕಾರರನ್ನ ಸಂಪೂರ್ಣವಾಗಿ ಕಡೆಗಣಿಸಿದೆ. ಎಂದು ಆನೇಕಲ್ ಪಟ್ಟಣದ ಕೆ.ಹೆಚ್.ಡಿ.ಸಿ ಕಾಲೋನಿ ಕೈಮಗ್ಗ ನೇಕಾರರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಅಲ್ಲದೇ ಕಳೆದ ಲಾಕ್ಡೌನ್ನಲ್ಲಿ ನೀಡಿದ ಅನುದಾನವೇ ಇಲ್ಲಿ ನೇಕಾರರ ಕೈ ಸೇರದೇ ಇರುವುದು ಸರ್ಕಾರದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಒಂದು ಕೈಮಗ್ಗ ಸೀರೆಯನ್ನು ನೇಯಲು ಕನಿಷ್ಠ ಇಬ್ಬರು, ಎರಡು ದಿನ ಕೆಲಸ ಮಾಡಬೇಕು. ವಾರ ಪೂರ್ತಿ ಕಷ್ಟ ಪಟ್ಟರೆ ಎರಡರಿಂದ ಮೂರು ಸೀರೆ ನೇಯಬಹುದು. ಇದರಿಂದ ಬರುವ ಕೂಲಿ ಎರಡು ಹೊತ್ತಿನ ಊಟಕ್ಕೆ ಸಾಲದಂತಾಗಿದೆ. ಇದರ ಜೊತೆಗೆ ವಿದ್ಯುತ್ ಮಗ್ಗಗಳ ಪೈಪೋಟಿಯನ್ನು ಎದುರಿಸಲಾಗದೇ ಕೈಮಗ್ಗ ನೇಕಾರರ ಬದುಕು ಸೂತ್ರ ಹರಿದ ಗಾಳಿಪಟದಂತಾಗಿದೆ.
ಮಹಿಳೆಯರಿಗೆ ಬಣ್ಣದ ಬಣ್ಣದ ಸೀರೆಗಳನ್ನ ನೇಯ್ದು ಕೊಡುತ್ತಿದ್ದ ಕೈಮಗ್ಗ ನೇಕಾರರ ಬಾಳು ಈಗ ಕತ್ತಲು ಕವಿದಂತಾಗಿದೆ. ಇತ್ತ ಕೆಲಸವೂ ಇಲ್ಲದೇ, ಅತ್ತ ಬೇರೆ ಕೆಲಸದ ಕಡೆ ಹೋಗದೇ ನೇಕಾರರ ಬದುಕು ಡೋಲಾಯಮಾನವಾಗಿದೆ.
ಇದನ್ನೂ ಓದಿ
Karnataka Weather: ದಕ್ಷಿಣ ಕನ್ನಡ, ಉಡುಪಿಯಲ್ಲಿ ಶುಕ್ರವಾರದಿಂದ 3 ದಿನ ಭಾರೀ ಮಳೆ; ಆರೆಂಜ್ ಅಲರ್ಟ್ ಘೋಷಣೆ
(handloom weavers are suffering from Corona lockdown)
Published On - 10:18 am, Thu, 10 June 21