ಹಾಸನ: ನಗರದ ಕೆ.ಆರ್.ಪುರಂ ಬಡಾವಣೆಯ ಡಿಟಿಡಿಸಿ ಕೊರಿಯರ್ ಶಾಪ್ನಲ್ಲಿ ನಡೆದಿದ್ದ ಮಿಕ್ಸರ್ ಸ್ಫೋಟ (Mixer Blast) ಪ್ರಕರಣಕ್ಕೆ (Blast Case) ತಿರುವು ದೊರೆತಿದ್ದು, ಮದುವೆ ನಿರಾಕರಿಸಿದ್ದಕ್ಕೆ ಮಹಿಳೆಯ ಹತ್ಯೆಗೆ ಸಂಚು ರೂಪಿಸಿದ ಪ್ರಕರಣ ಎಂಬುದು ಬೆಳಕಿಗೆ ಬಂದಿದೆ. ಬೆಂಗಳೂರಿನ ಅನೂಪ್ ಕುಮಾರ್ ಎಂಬಾತ ಮಹಿಳೆಯ ಹತ್ಯೆಗೆ ಸಂಚು ರೂಪಿಸಿ ಮಿಕ್ಸರ್ನಲ್ಲಿ ಸ್ಫೋಟಕ ಇಟ್ಟು ಕಳುಹಿಸಿದ್ದ ಎಂಬುದನ್ನು ಪೊಲೀಸರು ಬಯಲಿಗೆಳೆದಿದ್ದಾರೆ. ಮಂಗಳೂರಿನ ಕುಕ್ಕರ್ ಸ್ಫೋಟದ ಕಹಿ ನೆನೆಪು ಮಾಸುವ ಬೆನ್ನಲ್ಲೇ ಹಾಸನದಲ್ಲಿ ಡಿಸೆಂಬರ್ 26ರಂದು ಸಂಜೆ ಕೊರಿಯರ್ ಮೂಲಕ ಬಂದಿದ್ದ ಮಿಕ್ಸರ್ ಸ್ಫೋಟಗೊಂಡಿತ್ತು. ಪ್ರಕರಣದ ಜಾಡು ಹಿಡಿದ ಪೊಲೀಸರಿಗೆ ಇದೊಂದು ಪ್ರೇಮ ವೈಫಲ್ಯ ಪ್ರಕರಣವೆಂಬುದು ಗೊತ್ತಾಗಿದೆ. ಇದೀಗ ಆರೋಪಿಯನ್ನು ಬಂಧಿಸಲಾಗಿದೆ.
ಹಾಸನದ ಮಹಿಳೆಯೊಬ್ಬರು ವಿವಾಹ ವಿಚ್ಛೇದನದ ನಂತರ ಮ್ಯಾಟ್ರಿಮೋನಿಯಲ್ಲಿ ತನ್ನ ಫೋಟೋ ಅಪ್‌ಲೋಡ್ ಮಾಡಿದ್ದರು. ಮಹಿಳೆಯ ಅಂದಕ್ಕೆ ಮಾರುಹೋಗಿ ಬೆಂಗಳೂರು ಮೂಲದ ಅನೂಪ್ ಮದುವೆ ಪ್ರಸ್ತಾಪ ಮಾಡಿದ್ದರು. ಇದನ್ನು ಒಪ್ಪಿಕೊಂಡಿದ್ದ ಮಹಿಳೆ ಅನೂಪ್ ಜತೆ ಸುತ್ತಾಡಿದ್ದರು. ಅನೂಪ್‌ಕುಮಾರ್ ವಿಶ್ವಾಸ ಗಳಿಸಿ ಆತನಿಂದ ಲಕ್ಷಾಂತರ ರೂ ಹಣ ಸಾಲ ಪಡೆದಿದ್ದರು ಎನ್ನಲಾಗಿದೆ.
ಕೊಟ್ಟ ಹಣ ವಾಪಸ್ ನೀಡದೆ, ಮದುವೆಗೂ ಒಪ್ಪದೆ ಮಹಿಳೆ ಅನೂಪ್ನಿಂದ ಅಂತರ ಕಾಯ್ದುಕೊಂಡಿದ್ದರು. ಇದರಿಂದ ತೀವ್ರ ನಿರಾಸೆಗೆ ಒಳಗಾದ ಆರೋಪಿ, ಒಂದೋ ಮದುವೆಯಾಗಬೇಕು ಇಲ್ಲವೇ ಹಣ ವಾಪಾಸ್ ನೀಡಬೇಕು ಎಂದು ಮಹಿಳೆಗೆ ತಿಳಿಸಿದ್ದ. ಈ ಮಧ್ಯೆ, ಒಂದೆರಡು ಬಾರಿ ಹಾಸನಕ್ಕೆ ಬಂದು ಮಹಿಳೆ ಮನೆ ಎದುರು ಗಲಾಟೆ ಮಾಡಿದ್ದ. ಇದರ ಬೆನ್ನಲ್ಲೇ, ಅನೂಪ್ ವಿರುದ್ಧ ಪೊಲೀಸರು ಮತ್ತು ರಾಜ್ಯ ಮಹಿಳಾ ಆಯೋಗಕ್ಕೆ ಮಹಿಳೆ ದೂರು ನೀಡಿದ್ದರು.
ತನಗೆ ಮೋಸವಾಗಿದೆ ಎಂದು ಮಹಿಳೆ ವಿರುದ್ಧ ಕೆರಳಿದ ಅನೂಪ್ ಮೊದಲು ಸೀರೆ, ನಂತರ ಸೀರಿಯಲ್ ಸೆಟ್ ಪಾರ್ಸೆಲ್ ಕಳುಹಿಸಿದ್ದ. ಇದನ್ನು ನಿರಾಕರಿಸಿದ್ದ ಮಹಿಳೆ ಸೀರೆಯನ್ನು ವಾಪಾಸ್ ಕಳುಹಿಸಿ ನಿಂದಿಸಿದ್ದರು. ಹೀಗಾಗಿ ಮೂರನೇ ಬಾರಿ ಮಿಕ್ಸಿಯಲ್ಲಿ ಡಿಟೋನೇಟರ್ ಇಟ್ಟು ಕಳುಹಿಸಿದ್ದಾನೆ. ಮೋಸ ಮಾಡಿದವಳ ಮುಖ ವಿಕಾರವಾಗಬೇಕು ಅಥವಾ ಆಕೆ ಸಾಯಬೇಕು ಎಂಬ ಉದ್ದೇಶದಿಂದ ಆರೋಪಿ ಈ ಕೃತ್ಯ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: Hassan Mixer Blast: ಕೊರಿಯರ್ ಮೂಲಕ ಬಂದಿದ್ದ ಹೊಸ ಮಿಕ್ಸರ್ ನಿಗೂಢ ಸ್ಫೋಟ; ಸ್ಥಳಕ್ಕೆ ಎಸ್ಪಿ ಭೇಟಿ
ಕೊರಿಯರ್ ಮೂಲಕ ಬಂದ ಮಿಕ್ಸರ್ ಅನ್ನು ಡಿಸೆಂಬರ್ 17ರಂದೇ ಕೊರಿಯರ್ ಮಾಲೀಕ ಶಶಿ ಡೆಲಿವರಿ ಮಾಡಿಸಿದ್ದರು. ಆದರೆ ಅದನ್ನು ನಿರಾಕರಿಸಿದ್ದ ಮಹಿಳೆ ವಾಪಸ್ ಕಳುಹಿಸುವಂತೆ ಕೊರಿಯರ್ನವರಿಗೆ ತಿಳಿಸಿದ್ದರು. ಕೊರಿಯರ್ ಮಾಡಿದವರ ಪೂರ್ಣ ವಿಳಾಸ ಇಲ್ಲದ ಕಾರಣ ಅದನ್ನು ವಾಪಸ್ ಕಳಿಸಲು 350 ರೂ. ಶುಲ್ಕ ನೀಡಬೇಕೆಂದು ಕೊರಿಯರ್ ಮಾಲೀಕ ಕೇಳಿದ್ದರು. ಆದರೆ ಹಣ ನೀಡದೆ ಮಹಿಳೆ ವಾಪಸಾಗಿದ್ದರು. ವಾಪಸ್ ಕಳುಹಿಸಲು ಸೂಕ್ತ ವಿಳಾಸ ಇಲ್ಲದ ಕಾರಣ ಕೊರಿಯರ್ ಅಂಗಡಿ ಮಾಲೀಕ ಅದನ್ನು ಬಿಚ್ಚಿ ಪರಿಶೀಲನೆ ಮಾಡಿದ್ದರು. ಈ ವೇಳೆ ಸ್ಫೋಟ ಸಂಭವಿಸಿತ್ತು.
Published On - 8:49 am, Wed, 28 December 22