ಕೊಳವೆ ಬಾವಿ ಹೆಸರಲ್ಲಿ 969 ಕೋಟಿ ರೂ. ಅವ್ಯವಹಾರ; ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಇ.ಡಿ. ನೋಟಿಸ್
ED Notice to BBMP Commissioner; ಕೊಳವೆ ಬಾವಿ ಕೊರೆಸುವ ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಹೆಸರಲ್ಲಿ 969 ಕೋಟಿ ರೂ. ಅವ್ಯವಹಾರ ನಡೆಸಿರುವ ಆರೋಪಕ್ಕೆ ಸಂಬಂಧಿಸಿ ಬಿಬಿಎಂಪಿ ಮುಖ್ಯ ತುಷಾರ್ ಗಿರಿನಾಥ್ಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ನೋಟಿಸ್ ನೀಡಿದ್ದಾರೆ.
ಬೆಂಗಳೂರು: ಕೊಳವೆ ಬಾವಿ ಕೊರೆಸುವ ಮತ್ತು ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆ ಹೆಸರಲ್ಲಿ 969 ಕೋಟಿ ರೂ. ಅವ್ಯವಹಾರ ನಡೆಸಿರುವ ಆರೋಪಕ್ಕೆ ಸಂಬಂಧಿಸಿ ಬಿಬಿಎಂಪಿ (BBMP) ಮುಖ್ಯ ತುಷಾರ್ ಗಿರಿನಾಥ್ಗೆ (Tushar Giri Nath) ಜಾರಿ ನಿರ್ದೇಶನಾಲಯ (ED) ಅಧಿಕಾರಿಗಳು ನೋಟಿಸ್ ನೀಡಿದ್ದಾರೆ. 198 ವಾರ್ಡ್ಗಳಲ್ಲಿ ಕೊಳವೆ ಬಾವಿ ಕೊರೆಸುವ ಮತ್ತು ಆರ್ಒ ಘಟಕಗಳ ಸ್ಥಾಪನೆ ಹೆಸರಿನಲ್ಲಿ 2016ರಿಂದ 2018ರ ವರೆಗೆ ನಡೆದಿರುವ ಕಾಮಗಾರಿಗಳಲ್ಲಿ ಅಕ್ರಮ ಎಸಗಲಾಗಿದೆ ಎಂದು ಬೆಂಗಳೂರು ದಕ್ಷಿಣ ಜಿಲ್ಲೆ ಬಿಜೆಪಿ ಘಟಕ ಅಧ್ಯಕ್ಷ ಎನ್.ಆರ್.ರಮೇಶ್ ದೂರು ನೀಡಿದ್ದರು. ಅಕ್ರಮ ಹಣಕಾಸು ವರ್ಗಾವಣೆ ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ.
ಒಟ್ಟು 969 ಕೋಟಿ ರೂ. ವೆಚ್ಚದಲ್ಲಿ 9,588 ಕೊಳವೆ ಬಾವಿ ಕೊರೆಸಲಾಗಿದೆ. 976 ಆರ್ಒ ಘಟಕಗಳನ್ನು ಸ್ಥಾಪನೆ ಮಾಡಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದರು. ಇದರಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿದ್ದ ರಮೇಶ್, 2019ರ ಮೇ ತಿಂಗಳಲ್ಲಿ ಭರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ದೂರು ನೀಡಿದ್ದರು. 2016ರಿಂದ 2018ವರೆಗೆ ಆಯುಕ್ತರಾಗಿದ್ದವರ ವಿರುದ್ಧ, 5 ಜನ ಜಂಟಿ ಆಯುಕ್ತರು, 5 ಮುಖ್ಯ ಅಭಿಯಂತರರು ಸೇರಿದಂತೆ 40 ಅಧಿಕ ಅಧಿಕಾರಿಗಳ ವಿರುದ್ಧ ದೂರು ನೀಡಲಾಗಿತ್ತು. ಎಸಿಬಿ ರದ್ದಾದ ಬಳಿಕ ಪ್ರಕರಣದ ತನಿಖೆಯನ್ನು ಜಾರಿ ನಿರ್ದೇಶನಾಲಯಕ್ಕೆ ವಹಿಸಲಾಗಿತ್ತು. ಬೃಹತ್ ಮೊತ್ತದ ಪ್ರಕರಣವಾದ್ದರಿಂದ ಅಕ್ರಮ ಹಣಕಾಸು ವರ್ಗಾವಣೆ ತಡೆ ಕಾಯ್ದೆ ಅಡಿ ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಮತದಾರರ ಪಟ್ಟಿ ಅಕ್ರಮ: ಮನೆ ಮನೆಗೆ ತೆರಳಿ ವೋಟರ್ ಐಡಿ ಪರಿಶೀಲಿಸಿದ BBMP ಮುಖ್ಯ ಆಯುಕ್ತ ತುಷಾರ್ ಗಿರಿನಾಥ್
ಬೆಂಗಳೂರಿನಲ್ಲಿ ಎಲ್ಲೆಲ್ಲಿ ಕೊಳವೆ ಬಾವಿ ಕೊರೆಸಲಾಗಿದೆ, ಆರ್ಒ ಘಟಕಗಳು ಎಲ್ಲೆಲ್ಲಿವೆ ಎಂದು ಜಾರಿ ನಿರ್ದೇಶನಾಲಯ ಮಾಹಿತಿ ಕಲೆ ಹಾಕುತ್ತಿದೆ.
ಬಿಬಿಎಂಪಿ ಅಧಿಕಾರಿಗಳಿಗೆ ಆತಂಕ
ಜಾರಿ ನಿರ್ದೇಶನಾಲಯ ನೋಟಿಸ್ ಹಿನ್ನೆಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಆಂತರಿಕ ಸಭೆ ನಡೆಸಿದ್ದಾರೆ. 2016ರಿಂದ 18ರ ಅವಧಿಯಲ್ಲಿ ಎಲ್ಲೆಲ್ಲಿ ಕೊಳವೆ ಬಾವಿ ಕೊರೆಸಲಾಗಿದೆ, ಎಲ್ಲೆಲ್ಲಿ ಆರ್ಒ ಘಟಕಗಳನ್ನು ಸ್ಥಾಪಿಸಲಾಗಿದೆ ಎಂಬ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದಾರೆ. ವಾರ್ಡ್ ಮಟ್ಟದ ಇಂಜಿನಿಯರ್ಗಳಿಂದ ಮಾಹಿತಿ ಕಲೆ ಹಾಕಿದ್ದಾರೆ. ಆದರೆ, ಈ ವೇಳೆ 9,588 ಕೊಳವೆ ಬಾವಿಗಳು ಮತ್ತು ಆರ್ಒ ಘಟಕಗಳ ಬಗ್ಗೆ ಸೂಕ್ತ ಲೆಕ್ಕ ಸಿಕ್ಕಿಲ್ಲ ಎನ್ನಲಾಗಿದೆ.