ಸ್ವಚ್ಛತೆಯಲ್ಲಿ ಖಾಸಗಿ ಆಸ್ಪತ್ರೆಗಿಂತ ಲಕಲಕ ಅನ್ನುತ್ತಿದೆ ಹಾಸನ ಜಿಲ್ಲೆಯ ಸರ್ಕಾರಿ ದವಾಖಾನೆ!
ಹಾಸನ ಜಿಲ್ಲೆಯ ಈ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದೊರೆಯುವ ಉತ್ತಮ ಗುಣಮಟ್ಟದ ಚಿಕಿತ್ಸೆ, ಆಸ್ಪತ್ರೆ ಸ್ವಚ್ಛತೆ, ನಿರ್ವಹಣೆ, ವಾತಾವರಣವನ್ನು ಗಮನಿಸಿ ರಾಜ್ಯ ಸರ್ಕಾರ 2019-20 ನೇ ಸಾಲಿನ ಕಾಯಕಲ್ಪ ಪ್ರಶಸ್ತಿ ನೀಡಿ ಗೌರವಿಸಿದೆ.

ಹಾಸನ: ಜಿಲ್ಲೆಯಿಂದ15 ಕಿ.ಮೀ ದೂರದಲ್ಲಿರುವ ಮೊಸಳೆಹೊಸಹಳ್ಳಿ ಗ್ರಾಮದ ಸಮುದಾಯ ಆರೋಗ್ಯ ಕೇಂದ್ರ ಎಲ್ಲಾ ಸೌಲಭ್ಯಗಳನ್ನು ಒಳಗೊಂಡಿದ್ದು, ಖಾಸಗಿ ಆಸ್ಪತ್ರೆಗಳಿಗೆ ಪೈಪೋಟಿ ನೀಡುತ್ತಿದೆ. ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ.ತೇಜಸ್ವಿ ಗೌಡ ಹಾಗೂ ಡಾ. ಚೈತ್ರ ತೇಜಸ್ವಿ ಗೌಡ ದಂಪತಿಗಳ ಸೇವಾ ಮನೋಭಾವ, ಸಿಬ್ಬಂದಿಯ ಶ್ರಮ ಹಾಗೂ ಉತ್ತಮ ಚಿಕಿತ್ಸಾ ಸೇವೆ ಸುತ್ತಮುತ್ತಲಿನ 40 ಹಳ್ಳಿಯ ಬಡಜನರ ಮೆಚ್ಚುಗೆಗೆ ಪಾತ್ರವಾಗಿದೆ.
30 ಹಾಸಿಗೆಯುಳ್ಳ ಈ ಆರೋಗ್ಯ ಕೇಂದ್ರದಲ್ಲಿ 35 ಮಂದಿ ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ. ಪ್ರತಿದಿನ ಹೊರ ರೋಗಿ ವಿಭಾಗಕ್ಕೆ 150 ರಿಂದ 200 ಮಂದಿ ರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಶುಚಿತ್ವಕ್ಕೆ ಹೆಚ್ಚಿನ ಪ್ರಾಮುಖ್ಯತೆ ಕೊಟ್ಟಿರುವ ಆಸ್ಪತ್ರೆಯಲ್ಲಿ ಶೇ. 90ರಷ್ಟು ನಾರ್ಮಲ್ ಡೆಲಿವರಿ ಮಾಡಲಾಗುತ್ತಿದೆ. ಒಂದು ತಿಂಗಳಲ್ಲಿ ಸುಮಾರು 35 ರಿಂದ 40 ಹೆರಿಗೆ ಮಾಡುತ್ತಿದ್ದು ಗರ್ಭಿಣಿಯರು, ಬಾಣಂತಿಯರ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಇದರಿಂದಲೇ ಜಿಲ್ಲಾಸ್ಪತ್ರೆ ಹತ್ತಿರವಿದ್ದರೂ ಕೂಡ ಹೆರಿಗಾಗಿ ಈ ಆಸ್ಪತ್ರೆಗೆ ಬರುವವರ ಸಂಖ್ಯೆ ಹೆಚ್ಚುತ್ತಿದೆ.
ಸ್ವಚ್ಛಂದ ವಾತಾವರಣ: ಈ ಆರೋಗ್ಯ ಕೇಂದ್ರದಲ್ಲಿ ಸ್ವಚ್ಛತೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದ್ದು, ಇಡೀ ಆಸ್ಪತ್ರೆಯನ್ನು ಒಮ್ಮೆ ಕಣ್ಣಾಡಿಸಿದರೆ ಎಲ್ಲಿಯೂ ಕಸ-ಕಡ್ಡಿ, ಧೂಳು, ಕಣ್ಣಿಗೆ ಕಾಣುವುದಿಲ್ಲ, ದುರ್ನಾತ ಮೂಗಿಗೆ ರಾಚುವುದಿಲ್ಲ. ಆಸ್ಪತ್ರೆಯ ಆವರಣದಲ್ಲಿ ಕಸದ ಡಬ್ಬಿಗಳನ್ನು ಇಡಲಾಗಿದ್ದು, ವಾರ್ಡ್ ನಲ್ಲಿ ಒಳ ರೋಗಿಗಳು ಉಪಯೋಗಿಸಿ ಬಿಡುವ ಊಟದ ಪದಾರ್ಥಗಳನ್ನು ಟಬ್‌ನಲ್ಲಿ ಹಾಕಲು ಸೂಚಿಸಲಾಗಿದೆ. ಎಲ್ಲೆಡೆ ಸ್ವಚ್ಛತೆ ಇರುವುದರಿಂದ ಯಾವುದೇ ಐಶಾರಾಮಿ, ಹೈಟೆಕ್ ಖಾಸಗಿ ಆಸ್ಪತ್ರೆಗಳಲ್ಲೂ ಕಾಣದ ಸುಂದರ ಸ್ವಚ್ಛ ವಾತಾವರಣ ರೋಗಿಗಳ ಮನಸ್ಸಿಗೆ ಮುದ ನೀಡುತ್ತಿದೆ.

ಮಾದರಿಯಾದ ಸರ್ಕಾರಿ ಆಸ್ಪತ್ರೆ
ಮಿನಿ ಗಾರ್ಡನ್ ನಿರ್ಮಾಣ: ಆಸ್ಪತ್ರೆ ಮುಂಭಾಗ ಹುಲ್ಲುಹಾಸಿನ ಮಿನಿ ಗಾರ್ಡನ್ ನಿರ್ಮಿಸಿದ್ದು, ವಿವಿಧ ಜಾತಿಯ ಮರ ಗಿಡಗಳನ್ನು ಬೆಳೆಸಲಾಗಿದೆ. ಆಸ್ಪತ್ರೆಯ ಒಳಾಂಗಣದಲ್ಲಿ ರಾಕ್ ಗಾರ್ಡನ್ ಹಾಗೂ ಹರ್ಬಲ್ ಗಾರ್ಡ್‌ನ್ ನಿರ್ಮಿಸಿ ಸುಮಾರು 20 ಕ್ಕೂ ಹೆಚ್ಚು ವಿಧದ ಆಯುರ್ವೇದ ಗಿಡ, 45 ಕ್ಕೂ ಹೆಚ್ಚು ವಿವಿಧ ಹೂವಿನ ಗಿಡಗಳನ್ನು ನೆಡಲಾಗಿದೆ. ಅಲ್ಲದೆ ಆಸ್ಪತ್ರೆ ಹೊರಭಾಗದ ಖಾಲಿ ಜಾಗವನ್ನು ಸದುಪಯೋಗ ಪಡಿಸಿಕೊಂಡಿರುವ ವೈದ್ಯರು ಬಾಳೆ, ಮಾವು, ಹಲಸು, ಸೀಬೆ ಸೇರಿದಂತೆ ಹತ್ತಾರು ಬಗೆಯ ಹಣ್ಣುಗಳು ಟೊಮ್ಯಾಟೋ, ಬದನೆಕಾಯಿ, ಮೂಲಂಗಿ, ಕ್ಯಾರೇಟ್, ಬಾಳೆ ಸೇರಿದಂತೆ ತರಕಾರಿ -ಸೊಪ್ಪು ಬೆಳೆದು ಇಲ್ಲಿಗೆ ಬರುವ ಬಡ ಬಾಣಂತಿಯರಿಗೆ ನೀಡಲಾಗುತ್ತಿದೆ. ಜೊತೆಗೆ ಆಸ್ಪತ್ರೆಯ ಒಳ ರೋಗಿಗಳ ಊಟಕ್ಕೆ ಬಳಸಲಾಗುತ್ತಿದೆ.

ಆಸ್ಪತ್ರೆಯಲ್ಲಿ ಹರ್ಬಲ್ ಗಾರ್ಡ್‌ನ್ ನಿರ್ಮಾಣ
ದಿನದ 24 ಗಂಟೆಯೂ ಸೇವೆ ಲಭ್ಯ: ದಿನದ 24 ಗಂಟೆಯೂ ಆರೋಗ್ಯ ಕೇಂದ್ರದಲ್ಲಿ ತುರ್ತು ಚಿಕಿತ್ಸಾ ಸೇವೆಗಳು ಲಭ್ಯವಿದೆ. ಲ್ಯಾಬ್ ಕೂಡ ಉತ್ತಮವಾಗಿದ್ದು, ಎಲ್ಲಾ ರೀತಿಯ ರಕ್ತ ಪರೀಕ್ಷೆ ಲಭ್ಯವಿದೆ. ಆಸ್ಪತ್ರೆಗೆ ಸುತ್ತಲಿನ 40 ಹಳ್ಳಿಯ ಬಡ ಜನರೇ ಬರುವುದರಿಂದ ವೈದ್ಯರು ಹೊರಗಡೆಗೆ ಔಷಧಿ, ಮಾತ್ರೆಗೆ ಬರೆಯುವುದಿಲ್ಲ. ಶೇ. 95 ರಷ್ಟು ಔಷಧಿಗಳು ಆಸ್ಪತ್ರೆಯಲ್ಲೇ ಲಭ್ಯವಿದೆ. ಇನ್ನೂ ಒಳರೋಗಿಗಳ ಸ್ನಾನಕ್ಕೆ ಸೋಲರ್ ವ್ಯವಸ್ಥೆ ಕೂಡ ಮಾಡಲಾಗಿದೆ ಎನ್ನುವುದು ಈ ವಿಶೇಷ.

ಆಸ್ಪತ್ರೆ ಮುಂಭಾಗ ಹುಲ್ಲುಹಾಸಿನ ಮಿನಿ ಗಾರ್ಡನ್
ಈ ಆಸ್ಪತ್ರೆಯಲ್ಲಿ ಆಪರೇಷನ್ ಥಿಯೇಟರ್ ಕೂಡ ಇದ್ದು, ಹಲವು ಶಸ್ತ್ರ ಚಿಕಿತ್ಸೆಗಳು ಕೂಡ ಇಲ್ಲಿಯೇ ನಡೆಯುವುದರಿಂದ ಸುತ್ತಮುತ್ತಲ ಹಳ್ಳಿಗಳ ಪಾಳಿಗೆ ಉಚಿತವಾಗಿ ಸಿಗುವ ಹೈಟೆಕ್ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಟ್ಟಿನಲ್ಲಿ ವೈದ್ಯರು ಮನಸ್ಸು ಮಾಡಿದರೆ ಉತ್ತಮ ಚಿಕಿತ್ಸೆ ನೀಡುವ ಜೊತೆಗೆ ಆಸ್ಪತ್ರೆಯಲ್ಲಿ ಉತ್ತಮ ವಾತಾವರಣದ ನಿರ್ಮಾಣ ಮಾಡಬಹುದು ಎಂಬುವುದಕ್ಕೆ ಮೊಸಳೆಹೊಸಹಳ್ಳಿ ಆಸ್ಪತ್ರೆ ಉತ್ತಮ ನಿದರ್ಶನವಾಗಿದೆ.

ಆಸ್ಪತ್ರೆ ಸಿಬ್ಬಂದಿಗಳು
ಕಾಯುಕಲ್ಪ ಪ್ರಶಸ್ತಿ ಪ್ರದಾನ : ಹಾಸನ ಜಿಲ್ಲೆಯ ಈ ಸಮುದಾಯ ಆರೋಗ್ಯ ಕೇಂದ್ರದಲ್ಲಿ ದೊರೆಯುವ ಉತ್ತಮ ಗುಣಮಟ್ಟದ ಚಿಕಿತ್ಸೆ, ಆಸ್ಪತ್ರೆ ಸ್ವಚ್ಛತೆ, ನಿರ್ವಹಣೆ, ವಾತಾವರಣವನ್ನು ಗಮನಿಸಿ ರಾಜ್ಯ ಸರ್ಕಾರ 2019-20 ನೇ ಸಾಲಿನ ಕಾಯಕಲ್ಪ ಪ್ರಶಸ್ತಿ ನೀಡಿ ಗೌರವಿಸಿದೆ. ರಾಜ್ಯ ಸರ್ಕಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಹಲವು ಮಾನದಂಡ ಆಧರಿಸಿ ಪ್ರತಿವರ್ಷವೂ ಕಾಯಕಲ್ಪ ಪ್ರಶಸ್ತಿ ನೀಡುತ್ತಿದ್ದು, ಉತ್ತಮ ವೈದ್ಯಕೀಯ ಸೇವೆಯ ಜೊತೆಗೆ ಸ್ವಚ್ಛತೆಗೆ ಆದ್ಯತೆ ನೀಡಿರುವ ಆರೋಗ್ಯ ಕೇಂದ್ರ ಇಲಾಖೆಯ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಪ್ರಶಸ್ತಿಯು 1 ಲಕ್ಷ ರೂಪಾಯಿ ಹಾಗೂ ಪ್ರಶಸ್ತಿ ಫಲಕ ಒಳಗೊಂಡಿದೆ. ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆಯೊಂದಿಗೆ ಕೊರೊನಾ ಸಮಯದಲ್ಲಿಯೂ ಗರ್ಭಿಣಿಯರಿಗೆ ಯಶಸ್ವಿಯಾಗಿ ಹೆರಿಗೆ ಮಾಡಿಸುವ ಮೂಲಕ ತಾಯಿ ಮತ್ತು ಮಕ್ಕಳ ಆರೋಗ್ಯ ಕಾಪಾಡುವಲ್ಲಿ ಆರೋಗ್ಯ ಕೇಂದ್ರ ಯಶಸ್ಸು ಕಂಡಿದೆ.

ಸಮುದಾಯ ಸರ್ಕಾರಿ ಆಸ್ಪತ್ರೆ
ಕಾಯಕಲ್ಪ ಪ್ರಶಸ್ತಿ ಎಂದರೇನು? ಆರೋಗ್ಯ ಕೇಂದ್ರಗಳನ್ನು ನಾನಾ ಮಾನದಂಡಗಳಡಿ ಪರಿಶೀಲಿಸಿ, ಪ್ರಶಸ್ತಿ ನೀಡಿ ಉತ್ತೇಜಿಸುವುದು ಕಾಯಕಲ್ಪ ಪ್ರಶಸ್ತಿಯ ಮುಖ್ಯ ಉದ್ದೇಶ. ಆಸ್ಪತ್ರೆಗಳ ಸುಧಾರಣೆ, ಮೂಲಭೂತ ಸೌಲಭ್ಯಕ್ಕೆ ಒತ್ತು ನೀಡಲು ಪ್ರಶಸ್ತಿಯ ಮೂಲಕ ಅಗತ್ಯ ಪ್ರೋತ್ಸಾಹ ನೀಡಲಾಗುತ್ತದೆ. ಆಸ್ಪತ್ರೆಯಲ್ಲಿ ಸ್ವಚ್ಛತೆ ಕಾಪಾಡಲು ಕೈಗೊಂಡ ಕ್ರಮ, ಸಿಬ್ಬಂದಿಯ ಕೌಶಲ್ಯ, ದಾಖಲೆಗಳ ಸಂಗ್ರಹ, ತ್ಯಾಜ್ಯ ವಿಲೇವಾರಿ ಸೇರಿದಂತೆ ನಾನಾ ಮಾನದಂಡಗಳಿಗೆ ಈ ಪ್ರಶಸ್ತಿಯನ್ನು ಶಿಫಾರಸ್ಸು ಮಾಡಲಾಗುತ್ತದೆ.
ನಾನು ಆಸ್ಪತ್ರೆಗೆ ಬಂದ ನಂತರ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ಜೊತೆಗೆ ಉತ್ತಮ ವಾತಾವರಣ ನಿರ್ಮಿಸಬೇಕು ಎಂಬ ಕನಸಿತ್ತು. ಅದರಂತೆ ಆಸ್ಪತ್ರೆಯಲ್ಲಿ ಶುಚಿತ್ವದ ಜೊತೆಗೆ ಸಿಬ್ಬಂದಿಯೊಂದಿಗೆ ಶ್ರಮವಹಿಸಿ ಉತ್ತಮ ಪರಿಸರವನ್ನು ನಿರ್ಮಿಸಲಾಗಿದ್ದು ಆಸ್ಪತ್ರೆಯ ಶುಚಿತ್ವ ಹಾಗೂ ಗುಣಮಟ್ಟದ ಚಿಕಿತ್ಸೆಯನ್ನು ಗಮನಿಸಿ ರಾಜ್ಯ ಸರ್ಕಾರ ಕಾಯಕಲ್ಪ ಪ್ರಶಸ್ತಿ ನೀಡಿರುವುದು ಖುಷಿ ತಂದಿದೆ. ಮುಂದೆಯೂ ಆಸ್ಪತ್ರೆಯನ್ನು ಇದೇ ರೀತಿ ನಿರ್ವಹಣೆ ಮಾಡಲಾಗುವುದು ಎಂದು ಆಸ್ಪತ್ರೆ ವೈದ್ಯಾದಿಕಾರಿ ಡಾ. ತೇಜಸ್ವಿಗೌಡ ಹೇಳಿದ್ದಾರೆ.
ಇದನ್ನೂ ಓದಿ: ಗಣಿನಾಡಲ್ಲಿ ನಿರ್ವಹಣೆ ಇಲ್ಲದೆ ಕೆಟ್ಟುನಿಂತ ಶುದ್ದ ನೀರಿನ ಘಟಕಗಳು, ಜನರಿಗೆ ಪ್ಲೋರೈಡ್ ನೀರೇ ಗತಿ..!
Published On - 1:19 pm, Mon, 15 February 21