
ಹಾಸನ,ಅಕ್ಟೋಬರ್ 27: ಹಾಸನದ ಲೇಡೀಸ್ ಡ್ರೆಸ್ ಟೇಲರ್ (Ladies Dress Tailor) ಹೇಮಾವತಿ ವಿರುದ್ಧ ಮಹಿಳೆಯರ ನಂಬಿಕೆಯನ್ನು ದುರುಪಯೋಗ ಪಡಿಸಿಕೊಂಡು ಕೋಟ್ಯಂತರ ರೂಪಾಯಿ ವಂಚಿಸಿದ ಆರೋಪ ಕೇಳಿಬಂದಿದೆ. ನಡು ರಸ್ತೆಯಲ್ಲಿ ಮಹಿಳೆಯರು ಆಕ್ರೋಶದಿಂದ ಹೇಮಾವತಿಯನ್ನು ಹಿಡಿದು ಎಳೆದಾಡಿದ ವೀಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಿಗ್ಗಾಮುಗ್ಗಾ ಥಳಿಸಿರುವ ಮಹಿಳೆಯರ ವಿರುದ್ಧವೇ ಟೇಲರ್ ದೂರು ದಾಖಲಿಸಿದ್ದು, ಸತ್ಯಾಂಶ ತಿಳಿಯಲು ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಹೇಮಾವತಿ ಹಾಸನದ ಅರಳಿಪೇಟೆ ರಸ್ತೆಯಲ್ಲಿದ್ದ ಜ್ಯೋತಿ ಡ್ರೆಸ್ ಮೇಕರ್ಸ್ ಅಂಗಡಿ ನಡೆಸುತ್ತಿದ್ದಳು. ಇದೀಗ ಟೈಲರಿಂಗ್ ಕೆಲಸದ ಹೆಸರಿನಲ್ಲಿ ಹಾಗೂ ವೈಯಕ್ತಿಕ ಪರಿಚಯದ ಆಧಾರದಲ್ಲಿ ಮಹಿಳೆಯರಿಂದ ಸಾಲ ಪಡೆದು 3 ಕೋಟಿ ರೂ.ಗಿಂತ ಅಧಿಕ ಹಣ ವಂಚನೆ ಮಾಡಿದ್ದಾಳೆಂದು ಆರೋಪಿಸಲಾಗಿದೆ. ಹೇಮಾವತಿ ತನ್ನ ಮಗಳನ್ನು ವಿದೇಶದಲ್ಲಿ ಎಮ್ ಎಸ್ ಓದಿಸಬೇಕೆಂದೂ, ಕೋಟಿ ರೂ.ಗಳ ಮನೆ ಖರೀದಿಸಿದ್ದೇನೆಂದು ಹೇಳಿ ಹಣ ಕೇಳುತ್ತಿದ್ದಳು. ತಾನು ಕೊಡಚಾದ್ರಿ ಚಿಟ್ಸ್ನಲ್ಲಿ 1 ಕೋಟಿ ರೂ.ಗಳಿಗೂ ಅಧಿಕ ಚೀಟಿ ಹಾಕಿದ್ದೇನೆ, ಇದರಿಂದ ಕೆಲವೇ ತಿಂಗಳುಗಳಲ್ಲಿ ದುಪ್ಪಟ್ಟು ಹಣ ಬರಲಿದೆ ಎಂದು ನಕಲಿ ಸ್ಲಿಪ್ ತೋರಿಸಿ ಪರಿಚಯದ ಮಹಿಳೆಯರ ಬಳಿ ಸಾಲ ಕೇಳುತ್ತಿದ್ದಳು.
ಹೇಮಾವತಿಯ ಮಾತಿಗೆ ಮರುಳಾಗಿದ್ದ ಮಹಿಳೆಯರು ತಮ್ಮ ಚಿನ್ನವನ್ನು ಅಡವಿಟ್ಟು ಲಕ್ಷಾಂತರ ಹಣವನ್ನು ಆಕೆಗೆ ನೀಡಿದ್ದರು. ಹತ್ತಾರು ವರ್ಷಗಳಿಂದ ಡ್ರೆಸ್ ಶಾಪ್ ನಡೆಸುತ್ತಿದ್ದ ಹೇಮಾವತಿಯು ತನ್ನ ನಿತ್ಯ ಗ್ರಾಹಕರನ್ನೇ ಗುರಿಯಾಗಿಸಿಕೊಂಡು, ಅವರಿಂದ 45 ಲಕ್ಷ ರೂಪಾಯಿವರೆಗೂ ಹಣ ಪಡೆದು ವಂಚನೆ ಮಾಡಿದ್ದಾಳೆಂದು ಹಾಸನ ನಗರ ಠಾಣೆ, ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಹೇಮಾವತಿಯ ಮೋಸದ ಜಾಲಕ್ಕೆ ಸಿಲುಕಿ ನೊಂದ ಮಹಿಳೆಯರು ಹೇಮಾವತಿ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದು, ಈ ದೃಶ್ಯಗಳು ವೈರಲ್ ಆಗಿವೆ. ಪೊಲೀಸರು ಘಟನೆಯ ಕುರಿತು ಪೆನ್ಷನ್ ಮೊಹಲ್ಲಾ ಪೊಲೀಸ್ ಠಾಣೆ ಹಾಗೂ ಹಾಸನ ನಗರ ಠಾಣೆಯಲ್ಲಿ ದೂರುಗಳನ್ನು ದಾಖಲಿಸಿದ್ದಾರೆ.ವವಂಚನೆಗೆ ಹೇಮಾವತಿಯ ಪತಿ ವಿರೂಪಾಕ್ಷಪ್ಪ ಸಹಭಾಗಿಯಾಗಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ. ಪೊಲೀಸರು ಇಬ್ಬರನ್ನೂ ವಿಚಾರಣೆಗಾಗಿ ಕರೆದಿದ್ದು, ನೊಂದ ಮಹಿಳೆಯರು ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.